Sunday, 17th November 2024

Actor Darshan: ದರ್ಶನ್‌ ಕ್ರೌರ್ಯದ ಇಂಚಿಂಚೂ ಬಹಿರಂಗಪಡಿಸಿದ ವಕೀಲರು; ಇಂದಾದ್ರೂ ಜಾಮೀನು ಸಿಗುತ್ತಾ?

actor darshan renukaswamy murder charge sheet

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder case) ಪ್ರಕರಣದಲ್ಲಿ ನಟ ದರ್ಶನ್ (Actor Darshan) ಯಾವ ಯಾವ ಬಗೆಯ ಕ್ರೌರ್ಯ ಮೆರೆದಿದ್ದ ಎಂಬುದನ್ನು ನ್ಯಾಯಾಲಯದಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇಂದು ದರ್ಶನ್‌ ಜಾಮೀನು ಅರ್ಜಿ (Bail Plea) ಭವಿಷ್ಯ ನಿರ್ಣಯವಾಗಲಿದೆ.

ಬೆಂಗಳೂರಿನ (Bangalore Crime news) 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್‌ ತಮ್ಮ ವಾದ ಮಂಡಿಸಿ ರೇಣುಕಾಸ್ವಾಮಿ ಹತ್ಯೆಗೆ ಹೇಗೆ ಸಂಚು ರೂಪಿಸಲಾಗಿತ್ತು ಹಾಗೂ ಹೇಗೆ ಹಲ್ಲೆ ನಡೆಸಲಾಗಿತ್ತು ಎನ್ನುವುದನ್ನು ವಿವರಿಸಿದರು. ಬಾಸ್‌ ಹೊಡೆದ ಜಾಗದಲ್ಲಿ ರಕ್ತ ಬಂದಿದೆ ಎಂದು ಒಬ್ಬ ಆರೋಪಿ ಹೇಳಿದ್ದಾನೆ. ರೇಣುಕಾಸ್ವಾಮಿ ಎದೆಮೇಲೆ ದರ್ಶನ್ ಕಾಲಿಟ್ಟಿರುವುದು ಸಾಬೀತಾಗಿದೆ. ಇದರಿಂದ ರೇಣುಕಾಸ್ವಾಮಿ ಎದೆಗೂಡಿನ ಮೂಳೆ ಮುರಿದಿದೆ. ರೇಣುಕಾಸ್ವಾಮಿ ದೇಹದ 17 ಭಾಗದಲ್ಲಿ ಮೂಳೆ ಮುರಿದಿದೆ ಎಂಬ ಭೀಕರ ಸತ್ಯವನ್ನು ನ್ಯಾಯಾಲಯದ ಮುಂದೆ ಬಿಚ್ಚಿಟ್ಟರು.

ದರ್ಶನ್‌, ಪವಿತ್ರಾಗೌಡ ಮೊದಲಾದ ಆರೋಪಿಗಳು ರೇಣುಕಾಸ್ವಾಮಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ತನಿಖೆಯಿಂದ ಸಾಬೀತಾಗಿದ್ದು, ಇವರಾರಿಗೂ ಜಾಮೀನು ನೀಡಬಾರದು. ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಪವಿತ್ರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಬ್ಲಾಕ್‌ ಮಾಡಿ ಪೊಲೀಸರಿಗೆ ದೂರು ನೀಡಬಹುದಾಗಿತ್ತು. ಆದರೆ ಅವರು ಕೊಲೆಗೆ ಸಂಚು ರೂಪಿಸಿದ್ದಾರೆ ಎಂದರು. ಹತ್ಯೆಗೂ ಮುನ್ನ ಮತ್ತು ನಂತರ ಆರೋಪಿಗಳು ಪರಸ್ಪರ ಮೊಬೈಲ್‌ ಮೂಲಕ ಚಾಟ್‌ ನಡೆಸಿದ್ದಾರೆ. ಕರೆಗಳ ಎಲ್ಲ ವಿವರಗಳೂ ಲಭ್ಯವಾಗಿವೆ. ಕೊಲೆ ನಡೆದ ದಿನ ಅಲ್ಲಿಯೇ ಎಲ್ಲ ಆರೋಪಿಗಳು ಹಾಜರಿದ್ದರು ಎನ್ನುವುದು ಸಾಬೀತಾಗಿದೆ ಎಂದರು.

ಆರೋಪಿಗಳು ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರುತ್ತಿರುವುದಕ್ಕೆ ಸಿಸಿಟಿವಿ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಜೂನ್‌ 8 ರಂದು 1.32ರ ಸಮಯಕ್ಕೆ ಆರೋಪಿಗಳು ರಾಜರಾಜೇಶ್ವರಿ ನಗರದ ಶೆಡ್​ನಲ್ಲಿ ರೇಣುಕಾಸ್ವಾಮಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆತನ ಪೋಟೊವನ್ನು ಸ್ಟೋನಿಬ್ರೂಕ್‌ ಬಾರ್​​ನಲ್ಲಿ ಪಾರ್ಟಿ ಮಾಡುತ್ತಿದ್ದವರಿಗೆ ಕಳುಹಿಸಲಾಗಿತ್ತು ಎಂದು ತಿಳಿಸಿದರು. ಆರೋಪಿ ನಂ.3ರ ಸೂಚನೆ ಮೇರೆಗೆ ಆರೋಪಿ ನಂ. 5 ಮತ್ತು 9 ಶೆಡ್​ಗೆ ಬರುತ್ತಾರೆ. ಆಗ ರೇಣುಕಾಸ್ವಾಮಿ ಮೇಲೆ ಎಲ್ಲರೂ ಹಲ್ಲೆ ನಡೆಸುತ್ತಾರೆ. ಪೊಲೀಸರು ಸಮರ್ಥವಾಗಿ ತನಿಖೆ ನಡೆಸಿದ್ದಾರೆ. ಎಲ್ಲಿಯೂ ಲೋಪವಾಗಿಲ್ಲ ಎಂದು ಸಮರ್ಥಿಸಿಕೊಂಡರು.

ರೇಣುಕಾಸ್ವಾಮಿ ಅಳುತ್ತಿರುವ ಮತ್ತು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿರುವ ಭಾವಚಿತ್ರಗಳು ಲಭ್ಯವಾಗಿವೆ. ಸ್ಟೋನಿಬ್ರೂಕ್​ನಲ್ಲಿ ಆರೋಪಿಗಳಾದ ನಂ. 2, 3,10, 11 ಇದ್ದರು. ನಂದೀಶ್‌ ಎಂಬ ಆರೋಪಿ ರೇಣುಕಾಸ್ವಾಮಿಯನ್ನು ನೆಲಕ್ಕೆ ಕುಕ್ಕಿದ್ದಾನೆ. ಧನರಾಜ್‌ ಎಂಬ ಆರೋಪಿ ಶಾಕ್‌ ಟ್ರೀಟ್​ಮೆಂಟ್‌ ನೀಡಿದ್ದಾನೆ. ಶೆಡ್​ಗೆ ದರ್ಶನ್‌ ಕಪ್ಪು ಬಣ್ಣದ ಕಾರಿನಲ್ಲಿ ಆಗಮಿಸಿರುವ ಸಿಸಿಟಿವಿ ದೃಶ್ಯಗಳು ಸಿಕ್ಕಿವೆ ಎಂದು ವಿವರಿಸಿದರು. ಧನರಾಜ್‌, ನಂದೀಶ್‌, ಪವನ್‌ ಕಟ್ಟಿಗೆಯಿಂದ ಹೊಡೆದಿದ್ದಾರೆ. ಮರ್ಮಾಂಗಕ್ಕೆ ಒದ್ದಿದ್ದಾರೆ.

ಈ ಹಿಂದೆ ದರ್ಶನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್ ಸುದೀರ್ಘ ವಾದ ಮಂಡಿಸಿ ಜಾಮೀನು ನೀಡುವಂತೆ ವಾದಿಸಿ ಪೊಲೀಸರ ತನಿಖೆ ಸರಿಯಾಗಿ ನಡೆದಿಲ್ಲ ಎಂದು ವಾದಿಸಿದ್ದರು. ದರ್ಶನ್ ಜಾಮೀನು ಅರ್ಜಿ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.

ಇದನ್ನೂ ಓದಿ: Actor Darshan: ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ