ನವರಾತ್ರಿ ದಿನ ಪಾರ್ವತಿ ದೇವಿಯ ಒಂಭತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ನವರಾತ್ರಿಯ ಒಂಭತ್ತು ದಿನಗಳು ಕೂಡ ಬಹಳ ಶುಭ ದಿನವೇ ಎಂದು ಹೇಳಬಹುದು. ನವರಾತ್ರಿಗಳಲ್ಲಿ ಪಾರ್ವತಿ ದೇವಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಹೀಗೆ ಒಂಭತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3ರಿಂದ ನವರಾತ್ರಿ (Navaratri 2024) ಆರಂಭವಾಗಿದೆ. ಇದೀಗ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಿ. ಹಾಗೆಯೇ ಆಕೆ ಯಾರು? ಆಕೆಯ ಮಹತ್ವ ಮತ್ತು ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.
ಮಹಾಗೌರಿ ಯಾರು? ಆಕೆಯ ಮಹತ್ವ ತಿಳಿಯಿರಿ:
ಹಿಂದೂಗಳು ಶಾರದಾ ನವರಾತ್ರಿಯ ಎಂಟನೇ ದಿನದಂದು ತಾಯಿ ಮಹಾಗೌರಿಯನ್ನು ಪೂಜಿಸುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ಶೈಲಪುತ್ರಿ ದೇವಿಯು ಅತ್ಯಂತ ಸುಂದರವಾಗಿದ್ದಳು ಮತ್ತು ಹದಿನಾರನೇ ವಯಸ್ಸಿನಲ್ಲಿ ಸುಂದರವಾದ ಮೈಬಣ್ಣ ಹೊಂದುವಂತೆ ಆಶೀರ್ವಾದ ಪಡೆದುಕೊಂಡಿದ್ದಳು. ಹಾಗಾಗಿ ಈ ರೂಪದಲ್ಲಿ, ಅವಳನ್ನು ಮಹಾಗೌರಿ ದೇವಿ ಎಂದು ಕರೆಯಲಾಗುತ್ತಿತ್ತು. ಅವಳು ಗೂಳಿಯನ್ನು ಏರಿ ಸವಾರಿ ಮಾಡುತ್ತಾಳೆ. ಅದಕ್ಕಾಗಿಯೇ ಆಕೆಯನ್ನು ವೃಷಭಾರೂಢ ಎಂದೂ ಕರೆಯಲ್ಪಡುತ್ತಾರೆ. ಮಹಾಗೌರಿಯು ಬಿಳಿ ಮೈಬಣ್ಣವನ್ನು ಹೊಂದಿರುವುದರಿಂದ ದೇವಿಯನ್ನು ಹೆಚ್ಚಾಗಿ ಶಂಖ, ಚಂದ್ರ ಮತ್ತು ಬಿಳಿ ಹೂವಿನೊಂದಿಗೆ ಹೋಲಿಸಲಾಗುತ್ತದೆ. ಹಾಗೇ ದೇವಿಯು ಯಾವಾಗಲೂ ಬಿಳಿ ಬಟ್ಟೆಗಳನ್ನು ಧರಿಸುವುದರಿಂದ ಅವಳನ್ನು ಶ್ವೇತಾಂಬರಧಾರ ಎಂದು ಕರೆಯಲಾಗುತ್ತದೆ.
ದೇವಿ ಮಹಾಗೌರಿಗೆ ನಾಲ್ಕು ಕೈಗಳಿವೆ – ಒಂದು ಕೈ ಬಲಭಾಗದಲ್ಲಿ ತ್ರಿಶೂಲವನ್ನು ಹಿಡಿದಿದ್ದರೆ ಇನ್ನೊಂದು ಕೈಯಲ್ಲಿ ಅಭಯ ಮುದ್ರೆಯನ್ನು ಹಿಡಿದಿರುತ್ತಾಳೆ. ಅವಳ ಒಂದು ಎಡಗೈಯಲ್ಲಿ ಡಮರುಗ ಹಿಡಿದಿದ್ದರೆ ಇನ್ನೊಂದು ಕೈಯನ್ನು ವರದಾ ಮುದ್ರೆಯಲ್ಲಿ ಹಿಡಿದುಕೊಂಡಿದ್ದಾಳೆ. ಅವಳು ಪರಿಶುದ್ಧತೆ, ಪ್ರಶಾಂತತೆ ಮತ್ತು ಶಾಂತಿಯನ್ನು ಸಂಕೇತಿಸುತ್ತಾಳೆ ಮತ್ತು ರಾಹು ಗ್ರಹವನ್ನು ಆಳುತ್ತಾಳೆ.
ಮಹಾಗೌರಿಯನ್ನು ಪೂಜಿಸುವುದರಿಂದ ಆಕೆ ತನ್ನ ಭಕ್ತರಿಗೆ ಸಂಪತ್ತು ಮತ್ತು ಶ್ರೀಮಂತಿಕೆಯನ್ನು ನೀಡುತ್ತಾಳೆ ಮತ್ತು ಅವರ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತಾಳೆ ಎಂಬ ನಂಬಿಕೆ ಇದೆ. ಅಷ್ಟಮಿಯಂದು ಉಪವಾಸ ವ್ರತಗಳನ್ನು ಮಾಡಿ ದುರ್ಗಾ ಮಾತೆಯನ್ನು ಪ್ರಾರ್ಥಿಸುವುದರಿಂದ ಅವರ ಎಲ್ಲಾ ಸಮಸ್ಯೆಗಳು ಮತ್ತು ಪಾಪಕರ್ಮಗಳು ನಿವಾರಣೆಯಾಗುತ್ತದೆ.
ನವರಾತ್ರಿಯ 7ನೇ ದಿನದ ಪೂಜೆ ಮತ್ತು ಆಚರಣೆಗಳು:
ಭಕ್ತರು ಅಷ್ಟಮಿ ತಿಥಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮಾಡಿ ಹೊಸ ಬಟ್ಟೆ ಧರಿಸಿ ನಂತರ, ಪೂಜಾ ಸ್ಥಳದಲ್ಲಿ ಒಂಬತ್ತು ಕಲಶಗಳನ್ನು ಸ್ಥಾಪಿಸಿ ಮತ್ತು ದುರ್ಗಾ ಮಾತೆಯ ಒಂಬತ್ತು ಶಕ್ತಿಗಳನ್ನು ಪ್ರಾರ್ಥಿಸಿ ಪೂಜಿಸುತ್ತಾರೆ. ಈ ದಿನ ನಡೆಯುವ ಮತ್ತೊಂದು ಆಚರಣೆಯೆಂದರೆ ಕನ್ಯಾ ಪೂಜೆ, ಇದಕ್ಕೆ ಒಂಬತ್ತು ಕನ್ಯೆಯರನ್ನು ತಮ್ಮ ಮನೆಗಳಿಗೆ ಆಹ್ವಾನಿಸುತ್ತಾರೆ ಮತ್ತು ಅವರನ್ನು ದುರ್ಗಾ ದೇವಿಯ ದೈವಿಕ ಅವತಾರಗಳು ಎಂದು ಪರಿಗಣಿಸಿ ಅವರನ್ನು ಪೂಜಿಸುತ್ತಾರೆ. ಅವರ ಪಾದಗಳನ್ನು ತೊಳೆದು, ಹಣೆಗೆ ತಿಲಕವನ್ನು ಹಾಕಿ, ಪುರಿ, ಹಲ್ವಾ ಮತ್ತು ಕಪ್ಪು ಕಾಳುಗಳನ್ನು ಒಳಗೊಂಡ ಪ್ರಸಾದವನ್ನು ಅರ್ಪಿಸುತ್ತಾರೆ.
ಅಷ್ಟಮಿಯಂದು ಭಕ್ತರು ಮಹಾಗೌರಿಗೆ ತೆಂಗಿನಕಾಯಿಯನ್ನು ವಿಶೇಷ ಭೋಗವಾಗಿ ಅರ್ಪಿಸುತ್ತಾರೆ. ಅಷ್ಟಮಿಯಂದು ಬ್ರಾಹ್ಮಣರಿಗೆ ತೆಂಗಿನಕಾಯಿಗಳನ್ನು ದಾನ ಮಾಡುವುದರಿಂದ ಸಮೃದ್ಧಿ ಮತ್ತು ಸಂತೋಷ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಭಕ್ತರು ಬೇಡಿದ್ದನ್ನು ಕರುಣಿಸುವ ಕಾಳರಾತ್ರಿ ದೇವಿಯ ಮಹತ್ವ, ಪೂಜೆಯ ಮಾಹಿತಿ ಹೀಗಿದೆ
ಈ ರೀತಿಯಲ್ಲಿ ಮಹಾಗೌರಿಯ ಮಹತ್ವದ ಬಗ್ಗೆ ಹಾಗೂ ಆಕೆಯನ್ನು ಪೂಜಿಸುವ ವಿಧಾನವನ್ನು ತಿಳಿದುಕೊಂಡು ನವರಾತ್ರಿಯ 8ನೇ ದಿನ ಮಹಾಗೌರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಜೀವನದಲ್ಲಿ ಎದುರಾದ ಸಮಸ್ಯೆಗಳು ನಿವಾರಣೆಯಾಗಿ ಸಿರಿ ಸಂಪತ್ತು ನಿಮ್ಮದಾಗುತ್ತದೆ.