Saturday, 23rd November 2024

Ravi Hanz Column: ತಲೆಮಾಸಿದ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆ !

ಬಸವ ಮಂಟಪ‌ (ಭಾಗ-2)

ರವಿ ಹಂಜ್

ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದು ಗುಂಪಿನವರು ಪ್ರಬಲರಾಗಿ ಸಮಾಜವಾದಿ ಸಮ್ಮೋಹನ ಕ್ಕೊಳಗಾಗಿ ಕಟ್ಟಿದ ಇಂಥ ಸೃಜನಶೀಲ ಸುಸ್ವಪ್ನ ಸಂಕಥನಗಳು ಅನೇಕ. ಇಂಥ ಸುಸ್ವಪ್ನಸ್ಖಲನಕ್ಕೆ ತೊಟ್ಟಿಲು ಕಟ್ಟಿ ಜೋಗುಳ ಹಾಡಿದ್ದು ಮಾತ್ರ ಕರ್ನಾಟಕದ ಧೀಮಂತ ಸಮಾಜವಾದಿ ನಾಯಕರಲ್ಲದೆ ಬುದ್ಧಿಜೀವಿಗಳು, ಚಿಂತಕರು, ವಿರಕ್ತರು, ಪ್ರಗತಿಪರ ಮಹಿಳೆಯರು ಮತ್ತು ಅಸಂಖ್ಯಾತ ಮುಗ್ಧ ಸಾಮಾನ್ಯರು!

ದೇವದಾಸಿಯರ ಕುರಿತಾದ ಒಂದಷ್ಟು ವಿವರಗಳನ್ನು ಲೇಖನದ ಮೊದಲ ಭಾಗದಲ್ಲಿ ಅವಲೋಕಿಸಿದೆವಲ್ಲವೇ? ಇದೇ ಯಾದಿಯಲ್ಲಿ ಹಣ ಕೊಟ್ಟು ಪಡೆದುಕೊಂಡ ಮಹಿಳೆಯರನ್ನು ಪಣ್ಯಸೀ ಎನ್ನುತ್ತಿದ್ದರು. ‘ಪಣ್ಯ’ ಎನ್ನುವುದು ಅಪಭ್ರಂಶಗೊಂಡೋ ಅಥವಾ ಗೌರವದ ಹೊದಿಕೆಯನ್ನು ಹೊದಿಸಿಯೋ ‘ಪುಣ್ಯ’ ಎಂದಾಗಿದೆ. ಇಂದು ಕೆಲವು ಗುಡಿಗಳಲ್ಲಿರುವ ಲಜ್ಜಾಗೌರಿ ವಿಗ್ರಹಗಳಿಗೆ ಸೀರೆ ತೊಡಿಸಿದ್ದಾರಲ್ಲ, ಹಾಗೆ!

ಇದಿಷ್ಟು ಅಂದಿನ ಭಾರತೀಯ ವೇಶ್ಯೆಯರ ಗೌರವಯುತ ಬದುಕಿನ ಇತಿಹಾಸ. ಇಂಥ ಉದಾರ ಸಂಸ್ಕೃತಿಯ ಐತಿಹಾಸಿಕ ಭಾರತದಲ್ಲಿ ವೇಶ್ಯೆಯರಿಗೆ ಯಾವ ಶರಣನೂ ‘ಬಾಳು ಕೊಡುವ’ ಭಿಕ್ಷೆಯ ಹಂಗಿರಲಿಲ್ಲ. ಇದೇ ರೀತಿ ಕ್ಯೂಬಾ ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿಯಲ್ಲಿಯೂ ವೇಶ್ಯೆಯರನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯೇ ಹೊರತು ಭಾರತೀಯ ಚಿಂತಕರು ಚಿಂತಿಸುವಂತೆ, ‘ಬಾಳು ಕೊಡುವುದು’ ಎಂಬ ಪಟ್ಟು ಪೀತಾಂಬರ ದಲ್ಲಿ ಸುತ್ತಿಟ್ಟ ಚಿಂತನೆಯ ಜೀವನಭಿಕ್ಷೆ ಆಗಿರಲಿಲ್ಲ.

ಈಗ, ಫಿಡೆಲ್ ಕ್ಯಾಸ್ಟ್ರೋ ಕಟ್ಟಿದ ಧೀಮಂತ ರಾಷ್ಟ್ರದ ಆಡಳಿತದಲ್ಲಿ ಆದ ಅಕ್ರಮ, ಅನ್ಯಾಯ, ಜನಾಂಗೀಯ ಕಣ್ಮರೆ, ಮಾನವ ಹಕ್ಕುಗಳ ಹತ್ತಿಕ್ಕುವಿಕೆ, ಸಾಮಾನ್ಯ ಕ್ಯೂಬನ್ನರು ಸಮುದ್ರಕ್ಕೆ ಹಾರಿ ಅಮೆರಿಕೆಯ ಫ್ಲೋರಿಡಾ ತೀರವನ್ನು ಸೇರಲು ನಿತ್ಯವೂ ಪ್ರಯತ್ನಿಸಿ ಸಾಯುತ್ತಿರುವುದು ಮುಂತಾದ ಎಲ್ಲಾ ಧೀಮಂತ ವಿಚಾರಗಳನ್ನು ಬದಿಗಿಟ್ಟು ಕೇವಲ ಪುಣ್ಯಸೀಯರಿಗೆ ‘ಬಾಳು ಕೊಡುವ’ ಉದಾರತೆಯ ಕುರಿತು ನೋಡೋಣ.

“ಇತಿಹಾಸ ನನ್ನನ್ನು ನಿರಪರಾಧಿ ಎಂದು ದಾಖಲಿಸಲಿದೆ” ಎಂಬ 1953ರ ಕ್ಯಾಸ್ಟ್ರೋನ ವಿಖ್ಯಾತ ಭಾಷಣದಿಂದ ಹಿಡಿದು ಆತ ಸಾಯುವ ತನಕ ಮಾಡಿದ ಯಾವ ಭಾಷಣಗಳಲ್ಲಿಯೂ ವೇಶ್ಯೆಯರಿಗೆ ‘ಬಾಳು ಕೊಡಿ’ ಎಂದು ತನ್ನ ಬೆಂಬಲಿಗರಿಗೆ ಕರೆ ನೀಡಿದ ಸಾರ್ವಜನಿಕ ದಾಖಲೆಗಳಿಲ್ಲ. ಏಕೆಂದರೆ ‘ವೇಶ್ಯಾವಾಟಿಕೆ ಎನ್ನುವುದು ಅನೈತಿಕ’ ಎಂಬ ಪಾಪಪ್ರಜ್ಞೆ ಇರದ ಕ್ಯೂಬನ್ನರಿಗೆ ಇಂಥ ಕರೆಯ ಅಗತ್ಯವೇ ಇರಲಿಲ್ಲ. ಫಿಡೆಲ್ ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡ ಆರಂಭಶೂರತ್ವದಲ್ಲಿ ಜೂಜು, ವೇಶ್ಯಾವಾಟಿಕೆಗಳನ್ನು ರಾಜಕೀಯ ಕಾರಣಗಳಿಗಾಗಿ ನಿಲ್ಲಿಸಿದರೂ ಮುಂದೆ ಕಮ್ಯುನಿಸ್ಟ್ ಆಡಳಿತದ ಆರ್ಥಿಕ ಹೊಡೆತದ ತತ್ತರದಲ್ಲಿ ಇವೆಲ್ಲವೂ ಅಬ್ಬರದಿಂದ ಮರುಸ್ಥಾಪಿತವಾಗಿದ್ದವು ಎನ್ನುವುದು ಜಾಗತಿಕ ಸತ್ಯ!

ಕ್ಯಾಸ್ಟ್ರೋನ ಕ್ಯೂಬಾದಲ್ಲಿ ವೇಶ್ಯಾವಾಟಿಕೆ ಈಗಲೂ ಕಾನೂನುಬಾಹಿರವಲ್ಲ. ಅಲ್ಲಿ ತಲೆಹಿಡುಕತನ, ಪೋರ್ನೋ ಗ್ರಫಿ, ವೇಶ್ಯಾವಾಟಿಕೆಗೆ ಅಪ್ರಾಪ್ತರ ಬಳಕೆಗೆ ಕಾನೂನಿನ ನಿಯಂತ್ರಣ ಇದೆಯೇ ಹೊರತು ವೇಶ್ಯೆಯರು ನೇರವಾಗಿ ದಂಧೆ ಮಾಡಲು ಯಾವ ನಿಯಂತ್ರಣವೂ ಇರಲಿಲ್ಲ, ಈಗಲೂ ಇಲ್ಲ! ನಂಬಿಕೆ ಇರದವರು ಅಲ್ಲಿಗೆ ಪ್ರವಾಸ ಹೋಗಿ ಕಂಡುಕೊಳ್ಳಬಹುದು! ಮೇ ೧, ೨೦೦೧ರ ‘ರಾಯಿಟರ್ಸ್’ ವರದಿಯ ಪ್ರಕಾರ ಬ್ರೆಜಿಲ್ ದೇಶದ ಸಂದರ್ಶನ ವೊಂದರಲ್ಲಿ ಕೇಳಿದ, “ಕ್ಯೂಬಾದ ಕೆಲವು ಕಾಲೇಜು ತರುಣಿಯರು ಬೆಲೆವೆಣ್ಣುಗಳಾಗಿ ಕೆಲಸ ಮಾಡುತ್ತಾರಂತೆ, ಹೌದೆ?” ಎಂಬ ಪ್ರಶ್ನೆಗೆ ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಹೆಮ್ಮೆಯಿಂದ, “ನಮ್ಮ ದೇಶದ ಬೆಲೆವೆಣ್ಣುಗಳೂ ಅತ್ಯಂತ ಸುಶಿಕ್ಷಿತರಾಗಿರುತ್ತಾರೆ ಎಂಬುದಕ್ಕೆ, ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಗತಿಗೆ ನಿಮ್ಮ ಪ್ರಶ್ನೆಯೇ ಮಾಪಕ” ಎಂದು ಉತ್ತರಿಸಿದ್ದಾನೆ!

ಮುಂದೆ ೨೦೦೪ರಲ್ಲಿ ಜಾರ್ಜ್ ಬುಷ್, “ಜಗತ್ತಿನಲ್ಲಿ ಅತ್ಯಂತ ಸುಶಿಕ್ಷಿತ ವೇಶ್ಯೆಯರು ಇರುವುದು ನನ್ನ ಕ್ಯೂಬಾದಲ್ಲಿ ಎಂದು ಹೆಮ್ಮೆಯಿಂದ ಹೇಳಿದ ಕ್ಯಾಸ್ಟ್ರೋ ನೀತಿಗೆಟ್ಟವನು” ಎಂದದ್ದು, “ನಾನು ಹಾಗೆ ಹೇಳಿಯೇ ಇಲ್ಲ” ಎಂದು
ಕ್ಯಾಸ್ಟ್ರೋ ಅಲ್ಲಗಳೆದದ್ದು ಎಲ್ಲವೂ ಬಹುದೊಡ್ಡ ಸುದ್ದಿಯಾಗಿತ್ತು. ಜನಸಾಮಾನ್ಯರ ಸ್ವಾತಂತ್ರ್ಯವಲ್ಲದೆ ಎಲ್ಲ ಮೂಲಭೂತ ಹಕ್ಕುಗಳನ್ನು ನಿಗ್ರಹಿಸಿ ಸತತವಾಗಿ ಸರ್ವಾಧಿಕಾರ ನಡೆಸಿದ ವ್ಯಕ್ತಿ ಫಿಡೆಲ್ ಕ್ಯಾಸ್ಟ್ರೋ. ಆತನ ಆಡಳಿತದಲ್ಲಿ ಕೇವಲ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೂ, ಉದ್ಯೋಗಗಳಿಲ್ಲದೆ
ಕ್ಯೂಬನ್ನರು ಪಡೆದ ಶಿಕ್ಷಣ ವ್ಯರ್ಥವಾಗಿ ಸದಾ ಸುವ್ಯಕ್ತ ಭಯದ ವಾತಾವರಣದಲ್ಲಿ ಜೀವಿಸುತ್ತಿರುವಂತಾಗಿತ್ತು. ಸರಕಾರದ ನೀತಿಯ ಬಗ್ಗೆ ಯಾರಾದರೂ ಪಿಸುದನಿಯಲ್ಲಿ ಮಾತನಾಡಿದರೂ ಕಣ್ಮರೆಯಾಗುತ್ತಿದ್ದರು. ಇಷ್ಟೆ ಸರ್ವಾಧಿಕಾರ ಮೆರೆದ ಫಿಡೆಲ್ ಕಡೆಗೆ ಅಧಿಕಾರವನ್ನು ಹಸ್ತಾಂತರಿಸಿದ್ದು ತನ್ನ ತಮ್ಮ ರಾವುಲ್‌ನಿಗೇ
ಹೊರತು, ಸಮಾಜವಾದಿ ಸಂಕುಲದ ಇನ್ನಾವ ಹೋರಾಟಗಾರನಿಗಲ್ಲ! ಈ ಸಮಸಮಾಜವಾದಿಯ ಒಟ್ಟಾರೆ ವೈಯಕ್ತಿಕ ಆಸ್ತಿಯ ಮೊತ್ತ ಎಂಟೂವರೆ ಸಾವಿರ ಕೋಟಿ ರುಪಾಯಿಗಿಂತ ಅಧಿಕ.

ಈತ “ಬಾಳು ಕೊಡುವುದ”ರಲ್ಲಿ ಅತ್ಯಂತ ಸಮಾಜವಾದಿಯಾಗಿ ಅಗಣಿತ ಪುಣ್ಯಸ್ತ್ರೀಯರಿಗೆ ಬಾಳುಕೊಟ್ಟು ಕ್ಯೂಬಾ ದ ‘ಕಾಮದ ಲಾಂಛನ’ ಎಂಬ ಹೆಸರು ಗಳಿಸಿದ್ದ. ಈ ಎಲ್ಲಾ ವಿವರಗಳನ್ನು ಕ್ಯಾಸ್ಟ್ರೋನ ಅಂಗರಕ್ಷಕನಾಗಿದ್ದ ಯುವಾನ್ ರೆನಾಲ್ದೋ ಸಾಂಚೇಜ್ ಬರೆದಿರುವ ‘ದಿ ಡಬಲ್ ಲೈಫ್ ಆಫ್ ಫಿಡೆಲ್ ಕ್ಯಾಸ್ಟ್ರೋ’ ಕೃತಿಯಲ್ಲಿ ಓದಬಹುದು. ಇಂತಪ್ಪ ದಮನಕಾರಿ‌ ಕ್ಯಾಸ್ಟ್ರೋ ಅದ್ಯಾವ ಸ್ವರ್ಗಸದೃಶ ‘ಧೀಮಂತ ರಾಷ್ಟ್ರ’ ಕಟ್ಟಿದ್ದನೋ ಜಗತ್ತಂತೂ ಕಂಡಿಲ್ಲ. ಇದಿಷ್ಟು ಇಡೀ ಪ್ರಪಂಚ ಬಲ್ಲ ಕ್ಯೂಬಾ, ಕ್ಯಾಸ್ಟ್ರೋ, ಪಣ್ಯಸೀ, ಬಾಳು, ಗೋಳು!

ಇದೇ ರೀತಿ ಉತ್ತರ ಕೊರಿಯಾ, ಚೀನಾ, ರಷ್ಯಾದ ಕಮ್ಯುನಿಸ್ಟ್ ಆಡಳಿತದ ಸರ್ವಾಧಿಕಾರಿಗಳ ಇತಿಹಾಸವೂ ಇದೆ. ಹಿಂದೊಮ್ಮೆ ಸಂಯುಕ್ತ ಸಮಾಜವಾದಿ ಆಡಳಿತದಲ್ಲಿದ್ದ ಸೋವಿಯತ್ ರಾಷ್ಟ್ರಗಳ ಹೆಣ್ಣುಗಳು ಈಗ ಬೆಂಗಳೂರಿಗೂ ಬಂದು ಬೆಲೆವೆಣ್ಣುಗಳಾಗಿ ಚಟುವಟಿಕೆ ನಡೆಸುತ್ತಿರುವುದು ಆ ದೇಶಗಳ ಆರ್ಥಿಕತೆಯನ್ನು ಕಮ್ಯುನಿ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಡಿಸಿತ್ತು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ವಾಸ್ತವ ಹೀಗಿರುವಾಗ ಭಾರತೀಯ ಸಮಾಜವಾದಿ ಚಿಂತಕರ, ‘ಬಾಳು ಕೊಡುವುದು?!’ ಒಂದು ಸುಂದರ ಸೃಜನಶೀಲ ಪಣ್ಯವಿಲ್ಲದ ಸುಸ್ವಪ್ನಸ್ಖಲನ ಎನ್ನಬಹುದು.

ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದು ಗುಂಪಿನವರು ಪ್ರಬಲರಾಗಿ ಸಮಾಜವಾದಿ ಸಮ್ಮೋಹನಕ್ಕೊಳಗಾಗಿ ಕಟ್ಟಿದ ಇಂಥ ಸೃಜನಶೀಲ ಸುಸ್ವಪ್ನ ಸಂಕಥನಗಳು ಅನೇಕ. ಇಂಥ ಸುಸ್ವಪ್ನಸ್ಖಲನಕ್ಕೆ ತೊಟ್ಟಿಲು ಕಟ್ಟಿ ಜೋಗುಳ ಹಾಡಿದ್ದು ಮಾತ್ರ ಕರ್ನಾಟಕದ ಧೀಮಂತ ಸಮಾಜವಾದಿ ನಾಯಕರಲ್ಲದೆ ಬುದ್ಧಿಜೀವಿಗಳು, ಚಿಂತಕರು, ವಿರಕ್ತರು, ಪ್ರಗತಿಪರ ಮಹಿಳೆಯರು ಮತ್ತು ಅಸಂಖ್ಯಾತ ಮುಗ್ಧ ಸಾಮಾನ್ಯರು! ಸಂಶೋಧನಾ ಪಿತಾಮಹರ ಸಹಾಯ ದೊಂದಿಗೆ ಈ ಚಿಂತಕರ ಪ್ರಥಮ ಸಾಲಿನ ಮಹನೀಯರು ಕಟ್ಟಿದ ವಚನ ಚಳವಳಿಯ ಸಮಾಜವಾದಿ ಸಂಕಥನದ ಪರಿಧಿಯೊಳಗೆ ನನ್ನಂಥ ಒಬ್ಬ ಅತಿ ಸಾಮಾನ್ಯ ಅನಿವಾಸಿ, ಬಿಕನಾಸಿ, ಬೇವರ್ಸಿ ಕುತೂಹಲಿಯು ಹೊಕ್ಕು ಚಿಟಿಕೆ ಹೊಡೆದಷ್ಟು ಸುಲಭವಾಗಿ ಅವರ ಸಂಕಥನಗಳನ್ನು ಛಿದ್ರಗೊಳಿಸುತ್ತಾನೆ ಎಂದರೆ ಇವರ ಗುಂಪಿನ ಎರಡನೇ, ಮೂರನೇ… ಹತ್ತನೇ ಸಾಲಿನವರ ಉಳಿದ ಸಂಕಥನಗಳು ಎಷ್ಟು ಗಟ್ಟಿ ಇದ್ದಾವು? ಹೀಗೆ ಒಂದು ಬಹುಮಹತ್ವದ ಪಂಥವನ್ನು ವ್ಯವಸ್ಥಿತವಾಗಿ ವಿಭಜಿಸಿ ಸರಕಾರಿ ಅನುದಾನದ ಸಂಪನ್ಮೂಲಗಳನ್ನು ಬಳಸಿಕೊಂಡು ವಚನ ಚಳವಳಿಯನ್ನು ತಿರುಚಿ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ವ್ಯಾಖ್ಯಾನಿಸಿರುವ ಈ ಗುಂಪಿಗೆ, ‘ಬೇರೆಯವರು ವಚನಗಳನ್ನು ವ್ಯಾಖ್ಯಾನಿಸಬೇಡಿ’ ಎನ್ನುವ ಯಾವ ನೈತಿಕ ಹಕ್ಕಿದೆ?! ಈ ಗುಂಪಿನ ಹಿರಿಕಿರಿಯ ಚಿಂತಕರ ವಚನ-ಸಮಾಜವಾದ ಸಮೀಕರಣದ ಅನೇಕ ಲೇಖನಗಳನ್ನು ಪ್ರಜಾವಾಣಿಯ ಹಳೆಯೊಟ್ಟಿನಲ್ಲಿ (ಆರ್ಕೈವ್‌ನಲ್ಲಿ) ಮಾತ್ರವಲ್ಲದೆ ನಾಡಿನ ಎ ದಿನಪತ್ರಿಕೆ, ಸಾಪ್ತಾಹಿಕ, ಮಾಸಪತ್ರಿಕೆಗಳ ಹಳೆಯೊಟ್ಟುಗಳಲ್ಲಿ ಆಸಕ್ತರು ಹುಡುಕಿ ಓದಬಹುದು.

ದುಡಿಯುವ ಕಾರ್ಮಿಕ ಶಕ್ತಿಯನ್ನು ಬಳಸಿಕೊಂಡು ಅಧಿಕಾರ ಪಡೆದು ಸ್ಟಾಲಿನ್ ಸೃಷ್ಟಿಸಿದ ‘ಹಾಲೋಡಮಾರ್’ ಅಂಥ ನರಮೇಧದಲ್ಲಿ ಸತ್ತವರು ಮೂರೂವರೆ ಕೋಟಿಯಿಂದ ಐದು ಕೋಟಿ. ಈ ನರಮೇಧದ ಸಮಯದಲ್ಲಿ ಹಸಿವಿನಿಂದ ಜನ ಒಬ್ಬರನೊಬ್ಬರು ಕೊಂದು ತಿಂದ ನರಭಕ್ಷಕ ಘಟನೆಗಳ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ಕಮ್ಯುನಿಸ್ಟ್ ಮಾವೋ ನಡೆಸಿದ ಸಂಸ್ಕೃತಿ ಕ್ರಾಂತಿಯಲ್ಲಿ ನಾಲ್ಕೂವರೆ ಕೋಟಿಯಿಂದ ಏಳೂವರೆ ಕೋಟಿ ಅಸಹಜ ಸಾವುಗಳಾಗಿವೆ. ಆದರೆ ಫ್ಯಾಸಿಸ್ಟ್ ಗೋಬೆಲ್ಸ್, ನರಮೇಧ ಸ್ಟಾಲಿನ್, ಲೆನಿನ್ ಅವರ ಹೆಸರನ್ನು ತಮ್ಮ ಮಕ್ಕಳಿಗೆ
ಇಟ್ಟ ಭಾರತೀಯ ಕಮ್ಯುನಿಸ್ಟರು ಇಂದು ಇಟ್ಟಿಗೆ ಹೊರುವ, ಗುದ್ದಲಿ ಹಿಡಿದ, ಸುತ್ತಿಗೆ ಎತ್ತಿದ ಕಾರ್ಮಿಕರ ಫೋಟೋ ಹಾಕಿ ಕಾಲರ್ ಎತ್ತಿ ಸಂಭ್ರಮಿಸುತ್ತಾರೆಯೇ ಹೊರತು ಎಂದಾದರೂ ತಮ್ಮ ಆರಾಧ್ಯದೈವಗಳು ಮಾಡಿದ ನರಮೇಧದ ಬಗ್ಗೆ ಪಾಪಪ್ರಜ್ಞೆ ತೋರಿದ್ದಾರೆಯೇ?! ಮಾತೆತ್ತಿದರೆ ಬುದ್ಧ-ಬಸವ-ಅಂಬೇಡ್ಕರ್ ಎನ್ನುವ ಈ ಗುಂಪು ತಮ್ಮ ಸಿದ್ಧಾಂತದ ಮಾವೋ ನಡೆಸಿದ ಬೌದ್ಧ ಧರ್ಮೀಯರ ಹತ್ಯೆ ಬಗ್ಗೆ ಎಂದೂ ಆತ್ಮಸಾಕ್ಷಿಯಿಂದ ಮಾತನಾಡು ವುದಿಲ್ಲ. ಕೇಳಿದರೆ, ‘ನಮಗೆ ಆತ್ಮದಲ್ಲಿ ನಂಬಿಕೆಯಿಲ್ಲ’ ಎಂಬ ಸಮಾಜವಾದಿ ಉತ್ತರ ಕೊಡುತ್ತಾರೆ.

ಆತ್ಮದಲ್ಲಿ ನಂಬಿಕೆಯಿರದ ಇವರು ಮತ್ತೇಕೆ ಆತ್ಮಲಿಂಗದ ಬಸವಣ್ಣನನ್ನು ಜಪಿಸುತ್ತಾರೆ? ‘ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು, ಚಲನಶೀಲ ಬದಲಾವಣೆ ಜಗದ ನಿಯಮ’ ಎನ್ನುವ ಅಂಬೇಡ್ಕರ್ ತತ್ವವನ್ನು ಗಾಳಿಗೆ ತೂರಿ, ಸಂವಿಧಾನ ಎಂಬುದು ತಿದ್ದಬಾರದ ಧಾರ್ಮಿಕ ಗ್ರಂಥ ಎಂಬಂತೆ ಬೌದ್ಧಿಕ ದಬ್ಬಾಳಿಕೆ ನಡೆಸುತ್ತಾರೆ. ಹೀಗೆ ತಮ್ಮ ಚಿಂತನೆಯಲ್ಲಿಯೇ ಸ್ಪಷ್ಟತೆ ಇರದ, ತಮ್ಮ ಆಪ್ತ ಅಫೀಮಿನ ನಶೆಯ ಕಮ್ಯುನಿ ಸಮಾಜ ವಾದದ ನೂರು ವರ್ಷಗಳ ಇತಿಹಾಸವನ್ನೇ ಸರಿಯಾಗಿ ಅರಿಯದ ಈ ಭಾರತದ ಮಂಚೂಣಿ ಸಮಾಜವಾದಿ ಚಿಂತಕರು ಹನ್ನೆರಡನೇ ಶತಮಾನದ ವಚನ ಚಳವಳಿಯ ಇತಿಹಾಸವನ್ನು ಅರಿಯಬಲ್ಲರೆ? ಭಾರತದ ಭವ್ಯ ಪರಂಪರೆ, ಇತಿಹಾಸ, ಉದಾರತೆಯನ್ನು ತಾವು ನಂಬಿದ ಸಿದ್ಧಾಂತಕ್ಕೆ ಅಥವಾ ತಮ್ಮ ಸೀಮಿತ ತಿಳಿವಳಿಕೆಗೆ
ಹೀಗೆ ವ್ಯವಸ್ಥಿತವಾಗಿ ತಿರುತಿರುಚಿ ಒಂದು ತಲೆಮಾರನ್ನೇ ತಲೆಮಾಸಿದವರನ್ನಾಗಿ ಮಾಡಲಾಗಿದೆ. ಇದನ್ನು ಸರಿಪಡಿಸ ಬೇಕಾದ ಇಡೀ ಶೈಕ್ಷಣಿಕ ವಲಯ ಇವರ ಪುಂಗಿಯ ನಾದಕ್ಕೆ ತಲೆದೂಗುತ್ತಿದೆ. ಲಿಂಗಾಯತ ಸಂಸ್ಕೃತಿಯನ್ನು ಕಾಪಾಡಲೆಂದೇ ಪಟ್ಟಗಟ್ಟಿದ ಮಠಾಧೀಶರು ಈ ಗುಂಪು ಕೊಡಮಾಡುವ ಬಿರುದು, ಪಾರಿತೋಷಕ, ಗೌರವ ಡಾಕ್ಟರೇಟುಗಳಿಗೆ, ವೈಚಾರಿಕ ಬೆಡಗಿಗೆ ಬಲಿಯಾಗಿ ಕರ್ತವ್ಯವಿಮುಖರಾಗಿ ‘ವೀರಶೈವ ಬೇರೆ,
ಲಿಂಗಾಯತ ಬೇರೆ’ ಎನ್ನುತ್ತಿದ್ದಾರೆ. ತತ್ವಜ್ಞಾನವನ್ನು ಬಿಟ್ಟು ಹುಸಿ ಸಮಾಜವಾದ ಜಪಿಸುತ್ತಿದ್ದಾರೆ.

‘ಬಸವಣ್ಣ ವಿಶ್ವದ ಮೊದಲ ಸಮಾಜವಾದಿ’ ಎನ್ನುವ ಎರವಲು ಹೇಳಿಕೆ ನೀಡುತ್ತ ಸಂಪತ್ತನ್ನು ಕ್ರೋಡೀಕರಿಸುತ್ತಾರೆ. ‘ಅನ್ಯರಿಗೆ ಅಸಹ್ಯ ಪಡಬೇಡ’ ಎನ್ನುತ್ತ ತಮ್ಮದೇ ಮೂಲದ ವೀರಶೈವಕ್ಕೆ ವಿಷಕಾರುತ್ತಾರೆ. ತಾವು ಕುಳಿತ
ಪೀಠದ ಮಠಗಳು ಒಂದೊಮ್ಮೆ ಕಾಳಾಮುಖ ವೀರಶೈವವೇ ಕಟ್ಟಿದ ಮಠಗಳಾಗಿದ್ದವು ಎಂಬ ತಮ್ಮ ಬುಡದ ಸತ್ಯವನ್ನೇ ಮರೆತಿರುವ ಇವರು ಅಲ್ಲಮ, ಚೆನ್ನಬಸವಣ್ಣ, ಮಹಾದೇವಿಯರ ಯೋಗಾಚಾರ ಸಾಧನೆಯಂತೆ ಒಬ್ಬರೇ ಒಬ್ಬ ಪೀಠಾಧೀಪತಿಗಳು ಶಿವಯೋಗದಲ್ಲಿ ಆಂತರಿಕ ಜಾಗೃತಿಯನ್ನು ಮೂಡಿಸಿಕೊಂಡಿರುವರೆ?! ಅಂದ ಹಾಗೆ, ಮಠಗಳ ಇತಿಹಾಸದ ಬಗ್ಗೆ ಅನುಮಾನವಿರುವವರು ಡೇವಿಡ್ ಲೊರೆಂಜನ್ ಅವರು ಸ್ಪಷ್ಟವಾಗಿ ಶಾಸನಗಳ ದಾಖಲೆ ಸಮೇತ ಪ್ರತಿಪಾದಿಸಿರುವ ‘ದಿ ಕಾಪಾಲಿಕಾಸ್ ಅಂಡ್ ಕಾಳಾಮುಖಾಸ್: ಟು ಲಾ ಶೈವೈಟ್ ಸೆಕ್ಟ್ಸ್’
ಕೃತಿಯನ್ನು ಪರಾಂಬರಿಸಬಹುದು.

ಒಟ್ಟಾರೆ, ಇಂಥ ಶಿಥಿಲ ಸಂಕಥನಕ್ಕೆ ಮಾರುಹೋಗಿ ರಾಜ್ಯದ ಓರ್ವ ಘನವೆತ್ತ ಮುಖ್ಯಮಂತ್ರಿ ‘ವೀರಶೈವ ಲಿಂಗಾಯತ ಬೇರೆ ಬೇರೆಯೇ’ ಎಂಬ ‘ಸತ್ಯ’ಶೋಧನೆ ಮಾಡಿ ಎಂದು ಸಮಿತಿ ರಚಿಸಿ ದ್ದರು. ಅದಕ್ಕೆ ಓರ್ವ ನಿವೃತ್ತ ನ್ಯಾಯಾಽಶರನ್ನು ಅಧ್ಯಕ್ಷರನ್ನಾಗಿ ಮಾಡಿ, ‘ಪುಣ್ಯಸೀ’ ಲೇಖನದ ಕರ್ತೃ ಎಸ್.ಜಿ.ಸಿದ್ದರಾಮಯ್ಯನವರನ್ನೂ ಒಳಗೊಂಡು ಹಲವಾರು ಸಂಶೋಧಕ, ಸಾಹಿತಿ, ಪ್ರೊಫೆಸರುಗಳು ಮತ್ತು ವೈಚಾರಿಕ ಪತ್ರಕರ್ತರನ್ನೊಳಗೊಂಡ ಸದಸ್ಯರನ್ನು ನೇಮಿಸಿದ್ದರು. ಈ ಎಲ್ಲಾ ಸದಸ್ಯರು ವೀರಶೈವ ಲಿಂಗಾಯತರಾಗಿರದೆ, ಸಿದ್ಧಾಂತ ಶಿಖಾಮಣಿ, ಕರಣ ಹಸುಗೆ, ಮಿಶ್ರಾರ್ಪಣ, ಮಂತ್ರಗೋಪ್ಯಗಳ ಎರಡು ಪುಟಗಳನ್ನೂ ಓದಿರದ ಮತ್ತದೇ ಕಮ್ಯುನಿಸ್ಟ್ ಪ್ರಣೀತರಾಗಿ ವಚನಗಳನ್ನು ‘ಕೆಂಪೀಕರಣ’ಗೊಳಿಸಿರುವ ಸಮಾಜವಾದಿಗಳೇ ಅಲ್ಲದೆ ಆ ಮುಖ್ಯಮಂತ್ರಿಗಳ ಖಾಸಗಿ ದರ್ಬಾರಿನ ಆಸ್ಥಾನ ಪಂಡಿತರೂ ಆಗಿದ್ದರು ಎಂಬುದು ‘ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ’ ಎನ್ನುವ ಜಾಣ್ಣುಡಿಗೆ ತಕ್ಕಂತಿತ್ತು.

ಇನ್ನು ಈ ಸಾಕ್ಷಿಪ್ರಜ್ಞೆ ಗುತ್ತಿಗೆದಾರರ ವಾದವನ್ನು ಪುರಾವೆ ಸಮೇತ ತಪ್ಪೆಂದು ಯಾರಾದರೂ ಪ್ರಶ್ನಿಸಿದರೆ ಇವರು ತಕ್ಷಣಕ್ಕೆ ಪ್ರತಿವಾದಿಯ ಜಾತಿಯನ್ನು ಸಂಶೋಧಿಸಿ, “ಇವ ಪಂಪೀ, ಇವ ಚಡ್ಡಿ, ಇವ ಮಜ್ಜಿಗೆಹುಳಿ, ಇವ ತಂಬುಳಿ, ಇವ ಹೋಳಿಗೆ, ಇವ ಹಿಂದೂವಾದಿ, ಇವ ಪದ್ಮಪ್ರಿಯ, ಬಂಡವಾಳಶಾಹಿ…” ಇತ್ಯಾದಿಯಾಗಿ ‘ಇವನಾರವ ಇವನಾರವ’ ಎಂದು ಬಡಬಡಿಸುತ್ತಾರೆ. ಅದರಲ್ಲೂ ಪ್ರತಿವಾದಿಯು ದಲಿತನಾಗಿದ್ದ ರಂತೂ, “ಸಃ ಬ್ರಾಹ್ಮಣ- ಪ್ರಸೂತ ದಲಿತಸ್ಯಹ!” ಎಂದು ಅವರದೇ ಸಂಸ್ಕೃತದಲ್ಲಿ ತೆಗಳುತ್ತ “ನಮ್ಮ ಸಮಾಜವಾದಿ ವಚನಗಳ ಬುಡವನ್ನು ಮುಟ್ಟಿ ಮೈಲಿಗೆ ಮಾಡಿಬಿಟ್ಟಿದ್ದಾನೆ” ಎಂದು ಅವನಿಂದ ಎಲ್ಲಾ ವಿಶ್ವವಿದ್ಯಾಲಯ, ಪ್ರಕಾಶನ, ಪತ್ರಿಕೆ, ಪ್ರಶಸ್ತಿಗಳ ಶುದ್ಧ ಮಡಿಯನ್ನು ಕಾಪಾಡಲು ಪಣತೊಟ್ಟು ಅವನನ್ನು ಬಹಿಷ್ಕರಿಸುತ್ತಾರೆಯೇ ಹೊರತು ತಾರ್ಕಿಕ ವಾದ ಮಂಡನೆಯನ್ನಲ್ಲ. ಈ ಸಂಕಥನಗಳನ್ನು ಈವರೆಗೆ ಯಾವುದೇ ವಿಶ್ವವಿದ್ಯಾಲಯದ ಸತ್ಯಶೋಧನಿರತ ಪ್ರೊಫೆಸರರು, ಸಂಶೋಧಕರು ಪ್ರಶ್ನಿಸದಂತೆ ಅವರ ದನಿಯನ್ನು ಉಡುಗಿಸಲಾಗಿದೆಯೋ, ಸಮ್ಮೋಹಗೊಳಿಸಲಾಗಿದೆಯೋ ಎಂಬುದು ಸಂಶೋಧನಾರ್ಹ.

ಇದಿಷ್ಟು ಇವರ ಸಿದ್ಧಮಾದರಿಯ ಜಾತ್ಯತೀತ ಉದಾರ ಸಿದ್ಧಾಂತ ಎಂಬುದು ‘ಒತ್ತುಕೊಟ್ಟು ಪ್ರಕಾಶಿಸುವಂತೆ ಮಾಡಿ’ ಗಮನದಲ್ಲಿರಿಸಿಕೊ ಳ್ಳಬೇಕಾದ ಪ್ರಮುಖ ಅಂಶ. ಸದಾ ಶುದ್ಧ ಶ್ವೇತ ಮತ್ತು ಕಾವಿ ಕೇಸರಿಯೇ ಇದ್ದ/ಇರುವ/ಇರಲಿರುವ ಇವರಿಂದ ‘ಕೆಂಪೀಕರಣ’ ಗೊಂಡಿರುವ ಲಿಂಗಾಯತಕ್ಕೆ ಯಾರಾದರೂ ಲಿಂಗಾಯತದ ಮೂಲಬಣ್ಣ ತೋರಿಸಿದಾಕ್ಷಣ ಈ ಚಿಂತಕ ಚೇತನರು ‘ಕೇಸರೀ ಕರಣ ಕೇಸರೀಕರಣ ಮುಟ್ಟುಗೋಲು ಮುಟ್ಟುಗೋಲು’ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ. ವಿಪರ್ಯಾ ಸವೆಂದರೆ ಇವರೊಂದಿಗೆ ಶುದ್ಧ ಶ್ವೇತಧಾರಿ ಶರಣೆಯರು, ಕಾವಿಧಾರಿ ವಿರಕ್ತರು ತಾವು ತೊಟ್ಟ ದಿರಿಸಿನ ಬಣ್ಣವನ್ನೇ ಮರೆತು ‘ಕೇಸರೀಕರಣ ಕೇಸರೀಕರಣ ಮುಟ್ಟುಗೋಲು ಮುಟ್ಟುಗೋಲು’ ಎಂದು ದನಿಗೂಡಿಸಿ ಕೋರಸ್ ಹಾಡುತ್ತಾರೆ!

ಹೀಗೆ ಭಾರತದ ತಲೆಮಾಸಿದ ಈ ನವ್ಯ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆಯನ್ನು ಕೇಳಿ,
ಘನತೆವೆತ್ತ ಪ್ರಜಾಪ್ರಭುತ್ವ ಸರಕಾರದ ಮುಖ್ಯಸ್ಥ ಮುಖ್ಯಮಂತ್ರಿಗಳೊಬ್ಬರು ಸಮಿತಿ ರಚಿಸಿದ್ದರು ಎಂಬ ಸುದ್ದಿ ಯನ್ನು ಓದಿ ಇಂದಿನ ಇಪ್ಪತ್ತೊಂದನೇ ಶತಮಾನದ ಬೆರಳ ತುದಿಯ ಮಾಹಿತಿ ತಂತ್ರಜ್ಞಾನದ ಜಾಗತಿಕ ಜಗತ್ತು ಅಂಡು ತಟ್ಟಿಕೊಂಡು ಕೇಕೆ ಹಾಕುತ್ತಾ ಮಾಡುತ್ತಿರುವ ನಾಡಿನ ಅಪಹಾಸ್ಯದ ಮೌಲ್ಯ, ಅತ್ಯಮೂಲ್ಯ!
Let’s separate the hype from the reality!!

(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)

ಇದನ್ನೂ ಓದಿ: Ravi Hunz Column: ಪ್ರತ್ಯೇಕ ಧರ್ಮ ಕೇಳುತ್ತೇವೆ ಎನ್ನುವುದು ಬಸವ ರಾಜಕಾರಣ !