Monday, 25th November 2024

Bengaluru Bulls: ಮಹಾಕಾಳಿಯ ದರ್ಶನ ಪಡೆದ ಬೆಂಗಳೂರು ಬುಲ್ಸ್‌ ತಂಡ

ಬೆಂಗಳೂರು: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌(pro kabaddi) ಅಕ್ಟೋಬರ್ 18ರಿಂದ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವು ಬೆಂಗಳೂರು ಬುಲ್ಸ್‌(Bengaluru Bulls) ತಂಡವನ್ನು ಎದುರಿಸಲಿದೆ. ಪಂದ್ಯಕ್ಕೆ ಭಾರೀ ಸಿದ್ಧತೆ ನಡೆಸುತ್ತಿರುವ ಬುಲ್ಸ್‌ ಆಟಗಾರರು ಹೈದರಾಬಾದ್‌ಗೆ ಪ್ರಯಾಣಿಸುವ ಮುನ್ನ ನಗರದ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಕೋಚ್‌ ರಣ್‌ದೀರ್‌ ಸಿಂಗ್‌(Randhir Singh Sehrawat) ಮತ್ತು ಆಟಗಾರರು ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೊವನ್ನು ಬುಲ್ಸ್‌ ತಂಡ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಅನುಭವಿಗಳು ಮತ್ತು ನವಪ್ರತಿಭೆಗಳನ್ನು ಒಳಗೊಂಡ ಬುಲ್ಸ್‌ ತಂಡವು ಈ ಬಾರಿ ಮೋಡಿ ಮಾಡಲಿದೆ ಎಂದು ತಂಡದ ಕೋಚ್‌ ರಣಧೀರ್ ಸಿಂಗ್ ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼಪ್ರದೀಪ್‌ ನರ್ವಾಲ್ ವಾಪಸ್‌ ಬಂದಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡವು ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆ ಫಲಿತಾಂಶದಿಂದ ನಾವು ಹತಾಶರಾಗಿಲ್ಲ. ಪಂದ್ಯಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನಿಂದಲೂ ಕಲಿಯುವುದು ಸಾಕಷ್ಟಿದೆ. ಈ ಬಾರಿಯ ಆವೃತ್ತಿಯಲ್ಲಿ ಎಲ್ಲಾ ವಿಭಾಗಗಳನ್ನೂ ಬಲಿಷ್ಠಗೊಳಿಸಲಾಗಿದೆ. ಗುಣಮಟ್ಟದ ಆಟವನ್ನಾಡುವ ಮೂಲಕ ಮತ್ತೊಂದು ಟ್ರೋಫಿ ಗೆಲ್ಲುವ ವಿಶ್ವಾಸವಿದೆʼ ಎಂದು ರಣ್‌ದೀರ್‌ ಸಿಂಗ್‌ ಹೇಳಿದ್ದಾರೆ.

ನಾಯಕ ಪ್ರದೀಪ್ ನರ್ವಾಲ್(Pardeep Narwal) ಕೂಡ ಈ ಬಾರಿ ಕಪ್‌ ನಮ್ದೇ ಎಂದು ಹೇಳಿದ್ದಾರೆ. ಸಂದರ್ಶವೊಂದರಲ್ಲಿ ಮಾತನಾಡಿದ ಪ್ರದೀಪ್‌, ʼಈ ಬಾರಿ ಯಾವುದೇ ಪಂದ್ಯ ಬೆಂಗಳೂರಿನಲ್ಲಿಲ್ಲ. ಆದರೆ ಅಭಿಮಾನಿಗಳು ನಮ್ಮ ಜತೆಗಿದ್ದಾರೆ. ನಾವು ಎಲ್ಲೇ ಆಡಿದರೂ ಅವರ ಬೆಂಬಲ ಸಿಗುತ್ತದೆ. ಇದನ್ನು ಈ ಹಿಂದಿನ ಆವೃತ್ತಿಗಳಲ್ಲೇ ನಾನು ನೋಡಿದ್ದೇನೆ. ಬುಲ್ಸ್‌ ಅಭಿಮಾನಿಗಳನ್ನು ಈ ಬಾರಿ ನಿರಾಸೆಗೊಳಿಸುವುದಿಲ್ಲ. ಟ್ರೋಫಿಯನ್ನು ನಾವೇ ಗೆದ್ದು ತರುತ್ತೇವೆʼ ಎಂದು ಅಭಿಮಾನಿಗಳಿಗೆ ಮಾತುಕೊಟ್ಟಿದ್ದಾರೆ. ಬುಲ್ಸ್ ತಂಡ ಕೊನೆಯದಾಗಿ ಟ್ರೋಫಿ ಗೆದ್ದಿದ್ದು 2018-19ರ ಆವೃತ್ತಿಯಲ್ಲಿ. ಇದಾದ ಬಳಿಕ ಟ್ರೋಫಿ ಗೆದ್ದಿಲ್ಲ.

ಇದನ್ನೂ ಓದಿ Pro Kabaddi 2024 : ಅಕ್ಟೋಬರ್‌ 18ರಿಂದ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ ಆರಂಭ

ಬೆಂಗಳೂರು ಬುಲ್ಸ್​ ತಂಡ

ಅಜಿಂಕ್ಯ ಪವಾರ್‌, ಪ್ರದೀಪ್‌ ನರ್ವಾಲ್‌, ಲಕ್ಕಿ ಕುಮಾರ್‌, ಮಂಜೀತ್‌, ಚಂದ್ರನಾಯ್ಕ ಎಂ., ಹಾಸುನ್‌ ತೊಂಕ್ರುಯಿಯ, ಪ್ರಮೋದ್‌ ಸಾಯಿಸಿಂಗ್‌, ನಿತಿನ್‌ ರಾವಲ್‌, ಜೈ ಭಗವಾನ್‌, ಜತಿನ್‌. ಉಳಿಸಿಕೊಳ್ಳಲಾಗಿದ್ದ ಆಟಗಾರರು: ಪೊನ್ಪರ್ತಿಬನ್‌ ಸುಬ್ರಮಣಿಯನ್‌, ಸುಶೀಲ್‌, ರೋಹಿತ್‌ ಕುಮಾರ್‌, ಸೌರಭ್‌ ನಂದಲ್‌, ಆದಿತ್ಯ ಪವಾರ್‌, ಅಕ್ಷಿತ್‌, ಅರುಲ್‌ನಂತಬಾಬು, ಪ್ರತೀಕ್‌.