Monday, 25th November 2024

Vinay Kulkarni: ಅತ್ಯಾಚಾರ ಆರೋಪ; ರೈತ ಮಹಿಳೆ ವಿರುದ್ಧ ಪ್ರತಿದೂರು ದಾಖಲಿಸಿದ ವಿನಯ್ ಕುಲಕರ್ಣಿ

Vinay Kulkarni

ಬೆಂಗಳೂರು: ರೈತ ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಅವರು ಸಂಜಯ್ ನಗರ ಪೊಲೀಸ್ ಠಾಣೆಗೆ ಪ್ರತಿದೂರು ದಾಖಲಿಸಿದ್ದಾರೆ. ಅನೇಕ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಸಂತ್ರಸ್ತೆ ಬ್ಲ್ಯಾಕ್ ಮೇಲ್​ ಮಾಡಿದ್ದಾಳೆ. ಸಂತ್ರಸ್ತೆ ಮೂಲಕ ನನ್ನ ವಿರುದ್ಧ ಸಂಚು ರೂಪಿಸಿ ಮಾನಹಾನಿ ಮಾಡಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ (Vinay Kulkarni) ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ವಿಡಿಯೋ ಹಾಗೂ ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ನೀಡಿದ ದೂರಿನ ಮೇರೆಗೆ ಖಾಸಗಿ ಸುದ್ದಿ ವಾಹಿನಿ ಮತ್ತು ಸಂತ್ರಸ್ತೆ ವಿರುದ್ಧ ಸಂಜಯ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನಾನು ಅವಳನ್ನು ಮುಟ್ಟಿದ್ದರೇ ನನ್ನ ತಾಯಿಯನ್ನು ಮುಟ್ಟಿದ ಹಾಗೆ. ನಿಮಗೆ ಇಷ್ಟೇ ಹೇಳುತ್ತೇನೆ. ವಿಡಿಯೊ ಕಾಲ್ ಮಾಡಿದ್ದರು. ಆ ವಿಡಿಯೊ ಕಾಲ್ ಇಟ್ಟುಕೊಂಡು ಇಷ್ಟೊಂದು ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ತಿಳಿಸಿದ್ದಾರೆ.

ಏನಿದು ಪ್ರಕರಣ?

ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ (Vinay Kulkarni) ವಿರುದ್ಧ ಅ.8ರಂದು ಅತ್ಯಾಚಾರ ಕೇಸ್‌ ದಾಖಲಾಗಿತ್ತು. ರೈತ ಮಹಿಳೆಯೊಬ್ಬರು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ನಗರದ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಶಾಸಕ ವಿನಯ್ ಕುಲಕರ್ಣಿ ಅವರು 2022 ರಿಂದ ನನಗೆ ಪರಿಚಯ. ಆಗಾಗ ವಿಡಿಯೊ ಕಾಲ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿಡಿಯೊ ಕಾಲ್‌ನಲ್ಲಿ ಬೆತ್ತಲಾಗಲು ಹೇಳುತ್ತಿದ್ದರು. ಅದೇ ರೀತಿ ಅವರು ಮನೆಗೆ ಕರೆಸಿಕೊಂಡಿದ್ದರು. 2022ರ ಆಗಸ್ಟ್‌ 24 ರಂದು ಸಂಜೆ 4 ಗಂಟೆಗೆ ಆಟೋದಲ್ಲಿ ಅವರ ಮನೆಗೆ ಹೋಗಿದ್ದೆ. ಈ ವೇಳೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಿದ್ದರು.

ತಮ್ಮ ಮನೆಯಿಂದ ಕಾರಿನಲ್ಲಿ ಹೊರಗೆ ಬಂದ ಬಂದ ವಿನಯ್‌ ಕುಲಕರ್ಣಿ ಒಳಗೆ ಕುಳಿತುಕೊಳ್ಳುವಂತೆ ಹೇಳಿದ್ದರು. ಬಳಿಕ ದೇವನಹಳ್ಳಿ ಸಮೀಪದ ಐವಿಸಿ ರೋಡ್‌ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಸಂಜೆಯಾದ ಬಳಿಕ ಹಿಂದಿನ ಸೀಟ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ಅಕ್ಟೋಬರ್‌ 2 ರಂದು ಗಾಂಧಿ ಜಯಂತಿಯಂದೂ ತಮ್ಮ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದರು ಎಂದು ಮಹಿಳೆ ದೂರಿದ್ದರು.

ಇದನ್ನೂ ಓದಿ: Relationship Tips: ನಿಮ್ಮ ಸಂಬಂಧವನ್ನು ಬಲಪಡಿಸಲು 2: 2: 2 ತಂತ್ರ ಬಳಸಿಕೊಳ್ಳಿ!

ಸಂತ್ರಸ್ತೆ ನೀಡಿದ ದೂರಿನ ಅನ್ವಯ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ, ಕಿರುಕಿಳ, ಜೀವ ಬೆದರಿಕೆ, , ವಂಚನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.