Friday, 22nd November 2024

Savitri Jindal: ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ ಸಾವಿತ್ರಿ ಜಿಂದಾಲ್‌ ಸಹಿತ ಮೂವರು ಸ್ವತಂತ್ರ ಅಭ್ಯರ್ಥಿಗಳು; ಸಂಖ್ಯಾಬಲ 51ಕ್ಕೆ ಏರಿಕೆ

Savitri Jindal

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆ (Haryana Assembly Elections 2024)ಯಲ್ಲಿ ಹಿಸಾರ್‌ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ ದೇಶದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ (Savitri Jindal) ಅವರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಸಮ್ಮತಿ ಸೂಚಿಸಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಜತೆ ಸಮಾಲೋಚನೆ ನಡೆಸಿದ ಬಳಿಕ 74 ವರ್ಷದ ಸಾವಿತ್ರಿ ಜಿಂದಾಲ್‌ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 51ಕ್ಕೆ ಏರಿದೆ. ಬಿಜೆಪಿಯೊಂದೇ 48 ಸ್ಥಾನಗಳನ್ನು ಗೆದ್ದುಕೊಂಡಿದೆ.

ಸ್ವತಂತ್ರ ಅಭ್ಯರ್ಥಿಗಳಾದ ದೇವೇಂದರ್‌ ಕಡ್ಯಾನ್‌ ಮತ್ತು ರಾಜೇಶ್‌ ಜೂನ್‌ ಬಿಜೆಪಿಗೆ ಬೆಂಬಲ ಸೂಚಿಸಿದ ಇತರ ಇಬ್ಬರು ಶಾಸಕರು. ಈ ಪೈಕಿ ಹಿಂದೆ ಬಿಜೆಪಿಯಲ್ಲಿದ್ದ ದೇವೇಂದರ್‌ ಕಡ್ಯಾನ್‌ ಪಕ್ಷ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೆ, ಕಾಂಗ್ರೆಸ್‌ ನಾಯಕ ರಾಜೇಶ್‌ ಜೂನ್‌ ಕೂಡ ಪಕ್ಷದ ವಿರುದ್ಧ ಬಂಡಾಯವೆದ್ದು ಕಣಕ್ಕೆ ಧುಮುಕಿದ್ದರು. ಸೋನಿಪತ್‌ನ ಗನೌರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಂದರ್‌ ಕಡ್ಯಾನ್‌ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕುಲ್‌ದೀಪ್‌ ಶರ್ಮಾ ಅವರನ್ನು 35,209 ವೋಟಿನಿಂದ ಸೋಲಿಸಿದರೆ, ಝಜ್ಜಾರ್‌ನ ಬಹದ್ದೂರ್‌ಗಢದಿಂದ ಕಣಕ್ಕಿಳಿದ ರಾಜೇಶ್‌ ಜೂನ್‌ ಬಿಜೆಪಿಯ ದಿನೇಶ್‌ ಕೌಶಿಕ್‌ ವಿರುದ್ದ ಜಯ ದಾಖಲಿಸಿದ್ದರು.

ಬಿಜೆಪಿಯಲ್ಲಿದ್ದ ಸಾವಿತ್ರಿ ಜಿಂದಾಲ್‌

ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸಾವಿತ್ರಿ ಜಿಂದಾಲ್‌ ಕೆಲವು ತಿಂಗಳ ಹಿಂದೆ ತಮ್ಮ ಪುತ್ರ ನವೀನ್‌ ಜಿಂದಾಲ್‌ ಜತೆ ಬಿಜೆಪಿ ಸೇರಿದ್ದರು. ಆದರೆ ಪಕ್ಷ ಟಿಕೆಟ್‌ ನಿರಾಕರಿಸಿದ ಹಿನ್ನಲೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಅವರು ಹಿಸಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಮ್‌ ನಿವಾಸ್‌ ರಾಣಾ ವಿರುದ್ಧ 18,941 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಸಾವಿತ್ರಿ ಜಿಂದಾಲ್‌ ಅವರ ಪುತ್ರ ನವೀನ್‌ ಲೋಕಸಭಾ ಕ್ಷೇತ್ರ ಕುರುಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2024ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು ಈ ಬಾರಿಯೂ ಜಯ ದಾಖಲಿಸಿದ್ದಾರೆ. ಸಾವಿತ್ರಿ ಜಿಂದಾಲ್ ಈ ಹಿಂದೆಯೂ ಹಿಸಾರ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು 2005ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಹಿಸಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2009ರಲ್ಲಿ ಮರು ಆಯ್ಕೆಯಾಗಿದ್ದರು ಮತ್ತು 2013ರಲ್ಲಿ ಸಚಿವೆಯಾಗಿದ್ದರು.

ಇನ್ನು ಸಾವಿತ್ರಿ ಅವರ ಪತಿ, ಉದ್ಯಮಿ ದಿವಂಗತ ಒ.ಪಿ. ಜಿಂದಾಲ್‌ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ಮೊದಲ ಚುನಾವಣೆ ಗೆದ್ದಿದ್ದರು. ಬಳಿಕ 2004ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಹಿಸಾರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ ಭೂಪಿಂದರ್‌ ಸಿಂಗ್‌ ಹೂಡಾ ಸರ್ಕಾರದಲ್ಲಿ ಸಚಿವರಾಗಿದ್ದರು. 2005ರಲ್ಲಿ ನಡೆದ ಹೆಲಿಕಾಫ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Haryana Polls: ಹರಿಯಾಣ ವಿಧಾನಸಭಾ ಚುನಾವಣೆ; ಕಣಕ್ಕಿಳಿದ ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌: ಯಾವ ಪಕ್ಷ?