ನವರಾತ್ರಿ(Navaratri 2024) ವೇಳೆ ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗಾಗಿ ನವರಾತ್ರಿಯ ಒಂಬತ್ತು ದಿನಗಳು ಕೂಡ ಬಹಳ ಶುಭ ದಿನವೇ ಎಂದು ಹೇಳಲಾಗುತ್ತದೆ. ನವರಾತ್ರಿಗಳಲ್ಲಿ ಪಾರ್ವತಿ ದೇವಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಹೀಗೆ ಒಂಭತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಿದೆ. ಇದೀಗ ನವರಾತ್ರಿಯ ಒಂಭತ್ತನೇ ದಿನದಂದು (ಶುಕ್ರವಾರ) ಸಿದ್ಧಿಧಾತ್ರಿಯನ್ನು ಪೂಜಿಸಿ. ಹಾಗೇ ಆಕೆ ಯಾರು? ಆಕೆಯ ಮಹತ್ವ ಮತ್ತು ಪೂಜಾ ವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಸಿದ್ಧಿಧಾತ್ರಿ ಯಾರು? ಆಕೆಯ ಮಹತ್ವ ತಿಳಿಯಿರಿ:
ನವರಾತ್ರಿಯ ಒಂಬತ್ತನೇ ದಿನ ಸಿದ್ಧಿಧಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮಾಂಡವು ಪ್ರಾರಂಭವಾದಾಗ ರುದ್ರನು ಶಕ್ತಿಯ ಸರ್ವೋಚ್ಚ ದೇವತೆಯಾದ ಆದಿ-ಪರಾಶಕ್ತಿಯನ್ನು ಪೂಜಿಸಿದನು. ಅವಳಿಗೆ ಯಾವುದೇ ರೂಪವಿಲ್ಲದ ಕಾರಣ, ಆದಿ-ಪರಾಶಕ್ತಿಯು ಶಿವನ ಎಡಭಾಗದಿಂದ ಸಿದ್ಧಿಧಾತ್ರಿ ದೇವಿಯ ರೂಪದಲ್ಲಿ ಕಾಣಿಸಿಕೊಂಡಳು. ಇದರಿಂದಾಗಿ ಶಿವನನ್ನು ಅರ್ಧನಾರೇಶ್ವರ ಎಂದು ಕರೆಯಲಾಯಿತು.
ತಾಯಿ ಸಿದ್ಧಿಧಾತ್ರಿಯು ಕೇತು ಗ್ರಹವನ್ನು ಆಳುತ್ತಾಳೆ. ಅವಳು ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಗಳನ್ನು (ಸಾಧನೆಗಳನ್ನು) ನೀಡುವ ದೇವತೆಯಾಗಿದ್ದಾಳೆ. ಅವಳು ತನ್ನ ಭಕ್ತರಿಂದ ಅಜ್ಞಾನವನ್ನು ತೆಗೆದುಹಾಕುತ್ತಾಳೆ ಮತ್ತು ಅವರಿಗೆ ಜ್ಞಾನವನ್ನು ನೀಡುತ್ತಾಳೆ. ಶಿವನು ಸಹ ಸಿದ್ಧಿಧಾತ್ರಿ ದೇವಿಯ ಕೃಪೆಯಿಂದ ತನ್ನ ಎಲ್ಲಾ ಸಿದ್ಧಿಗಳನ್ನು ಪಡೆದುಕೊಂಡನು ಎನ್ನಲಾಗುತ್ತದೆ. ತಾಯಿ ಸಿದ್ಧಿಧಾತ್ರಿ ಕಮಲದ ಮೇಲೆ ಕುಳಿತು ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಅವಳು ನಾಲ್ಕು ತೋಳುಗಳನ್ನು ಹೊಂದಿದ್ದಾಳೆ. ಅವಳು ತನ್ನ ಬಲಗೈಯಲ್ಲಿ ಗದೆ ಮತ್ತು ಸುದರ್ಶನ ಚಕ್ರ ಮತ್ತು ಎಡಗೈಯಲ್ಲಿ ಕಮಲ ಮತ್ತು ಶಂಖವನ್ನು ಹಿಡಿದಿದ್ದಾಳೆ.
ನವರಾತ್ರಿಯ 9ನೇ ದಿನದ ಪೂಜಾ ವಿಧಾನಗಳು ಮತ್ತು ಆಚರಣೆ
ಭಕ್ತರು ನವಮಿ ತಿಥಿಯಂದು ಬೇಗನೆ ಎದ್ದು ಸ್ನಾನಾದಿಗಳನ್ನು ಮಾಡಿ ಹೊಸ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ಗಂಗಾ ಜಲದಿಂದ ತಾಯಿ ಸಿದ್ಧಿಧಾತ್ರಿಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಿಸಬೇಕು. ದೇವಿಗೆ ಬಿಳಿ ಬಟ್ಟೆಗಳನ್ನು ಅರ್ಪಿಸಿ, ಜೊತೆಗೆ ಸಿಹಿತಿಂಡಿಗಳು, ಒಣ ಹಣ್ಣುಗಳು, ಹಣ್ಣುಗಳು ಮತ್ತು ಬಿಳಿ ಹೂವುಗಳನ್ನು ಅರ್ಪಿಸಿ. ಸಿದ್ಧಿಧಾತ್ರಿ ಹಣ್ಣುಗಳು, ಖೀರ್, ಕಡಲೆ, ತೆಂಗಿನಕಾಯಿ ಮತ್ತು ಹಲ್ವಾವನ್ನು ಇಷ್ಟಪಡುತ್ತಾರೆ. ಹಾಗಾಗಿ ದೇವಿಯನ್ನು ಮೆಚ್ಚಿಸಲು ಈ ವಸ್ತುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.
ಇದನ್ನೂ ಓದಿ:ಮನೆಯಲ್ಲಿ ಸಿರಿ ಸಂಪತ್ತು ತುಂಬಲು ಮಹಾಗೌರಿಯನ್ನು ಈ ರೀತಿ ಪೂಜಿಸಿ
ಈ ರೀತಿಯಲ್ಲಿ ಸಿದ್ಧಿಧಾತ್ರಿಯ ಮಹತ್ವದ ಬಗ್ಗೆ ಹಾಗೂ ಆಕೆಯನ್ನು ಪೂಜಿಸುವ ವಿಧಾನವನ್ನು ತಿಳಿದುಕೊಂಡು ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಜೀವನದಲ್ಲಿ ಅಜ್ಞಾನ ದೂರವಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ.