ದುಬೈ: ಶ್ರೀಲಂಕಾ(INDW vs SLW) ವಿರುದ್ಧ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ. ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ದಾಖಲೆಯೊಂದನ್ನು ಬರೆದಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಬುಧವಾರ ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಲಂಕಾ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮಂಧಾನ 38 ಎಸೆತಗಳಿಂದ ಸೊಗಸಾದ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ಭರ್ತಿ 50 ರನ್ ಬಾರಿಸಿದರು. ಈ ವೇಳೆ ಅವರು ಹಾಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಋತುವಿನಲ್ಲಿ ಅತೀ ಹೆಚ್ಚು ಅರ್ಧಶತಕ ಗಳಿಸಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲ್ಯಾಂಡ್ ತಂಡದ ನ್ಯೂಜಿಲೆಂಡ್ ತಂಡದ ಆಟಗಾರ್ತಿಯರಾದ ಸುಜಿ ಬೇಟ್ಸ್ ಮತ್ತು ಸೋಫಿ ಡಿವೈನ್ ಹೆಸರಿನಲ್ಲಿತ್ತು. ಉಭಯ ಆಟಗಾರ್ತಿಯರು ತಲಾ 6 ಅರ್ಧ ಶತಕ ಸಿಡಿಸಿದ್ದರು. ಮಂಧಾನ 7 ಅರ್ಧಶತಕ ಬಾರಿಸುವ ಮೂಲಕ ದಾಖಲೆ ತಮ್ಮ ಹೆಸರಿಗೆ ಬರೆದಿದ್ದಾರೆ.
ಇದನ್ನೂ ಓದಿ IND vs BAN : ಭಾರತಕ್ಕೆ86 ರನ್‌ಗಳ ಭರ್ಜರಿ ಜಯ; ಟಿ20 ಸರಣಿ ಕೈವಶ
ಜತೆಯಾಟದಲ್ಲಿಯೂ ದಾಖಲೆ
ಮಂಧನಾ ಮತ್ತು ಶಫಾಲಿ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕವೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆರಂಭಿಕ ವಿಕೆಟ್‌ಗೆ 98 ರನ್ ರಾಶಿ ಹಾಕಿದ ಈ ಜೋಡಿ ಹಾಲಿ ವರ್ಷದ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಜತೆಯಾಟದ ರನ್ ಗಳಿಕೆಯನ್ನು 825ರನ್ ಗಳಿಕೆ ಏರಿಕೆ ಮಾಡಿಕೊಂಡರು. ಇದೇ ವೇಳೆ ಮಹಿಳಾ ಟಿ20ಯಲ್ಲಿ ಜೋಡಿಯೊಂದು ಗಳಿಸಿದ ಗರಿಷ್ಠ ಜತೆಯಾಟದ ಮೊತ್ತವನ್ನು ದಾಖಲಿಸಿದರು. ಇದಕ್ಕೂ ಮೊದಲು 2019ರಲ್ಲಿ ಥಾಯ್ಲೆಂಡ್‌ನ ನರುಯೆಮೊಳ್ ಚೈವೈ ಮತ್ತು ನಟ್ಠಕಾನ್ ಚಂತಂ ಜೋಡಿ 723 ರನ್ ಗಳಿಸಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಮಂಧನಾ(50) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್(ಅಜೇಯ 52) ಬಾರಿಸಿದ ಅರ್ಧಶತಕದ ನೆರವಿನಿಂದ 3 ವಿಕೆಟ್‌ಗೆ 172 ರನ್ ಬಾರಿಸಿತು. ಬೃಹತ್ ಮೊತ್ತ ಕಂಡು ಆರಂಭದಲ್ಲೇ ಕುಸಿತ ಕಂಡ ಶ್ರೀಲಂಕಾ ಕೇವಲ 90 ರನ್‌ಗೆ ಸರ್ವಪತನ ಕಂಡಿತು. 82 ರನ್ ಗಳ ಭರ್ಜರಿ ಜಯ ದಾಖಲಿಸಿದ ಭಾರತ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವು ದಾಖಲಿಸಿತು.