Monday, 25th November 2024

Kiran Upadhyay Column: ವಾಹನಕ್ಕಿಂತ ಹಳತು ವೇಗದ ಮಿತಿ!

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyapaa@gmail.com

ಕೊಲ್ಲಿ ರಾಷ್ಟ್ರಗಳಲ್ಲಿ 3 ದಶಕಗಳಿಂದ ನೆಲೆಸಿರುವ ನನಗೆ ಅಕ್ಕಪಕ್ಕದ ದೇಶಗಳಿಗೆ ಹೋಗುವಾಗ ಕಾರಿನಲ್ಲಿ ಹೋಗು ವುದೇ ಇಷ್ಟ. ಸೌದಿ ಅರೇಬಿಯಾ, ಯುಎಇ, ಒಮಾನ್, ಕತಾರ್ ಹೀಗೆ ಎಲ್ಲಿಗೆ ಹೋಗುವುದಿದ್ದರೂ ಹೆಚ್ಚಾಗಿ ಕಾರನ್ನೇ ಬಳಸುತ್ತೇನೆ. ಈ ಎಲ್ಲ ದೇಶಗಳಿಗೂ ಸಾಕಷ್ಟು ವಿಮಾನದ ಸಂಪರ್ಕವಿದ್ದರೂ, ಕಾರಿನಲ್ಲಿ ಹೋಗುವುದೇ ಹೆಚ್ಚು ಖುಷಿ ಕೊಡುತ್ತದೆ. ಕೆಲವು ದೇಶಕ್ಕೆ ವಿಮಾನಕ್ಕಿಂತ ಕಾರಿನಲ್ಲಿ ಹೋಗುವುದು ಸುಲಭವೂ ಸಮಯದ ಉಳಿತಾಯವೂ ಹೌದು.

ಉದಾಹರಣೆಗೆ, ಬಹ್ರೈನ್ ರಾಜಧಾನಿ ಮನಾಮದಿಂದ ಸೌದಿ ಅರೇಬಿಯಾದ ದಮ್ಮಾಮ್ ನಗರಕ್ಕೆ ವಿಮಾನದಲ್ಲಿ
ಹೋಗಲು ೨೦ ನಿಮಿಷ ಸಾಕು. ಕಾರಿನಲ್ಲಿ ಒಂದೂವರೆಯಿಂದ ಒಂದೂ ಮುಕ್ಕಾಲು ಗಂಟೆ ಬೇಕು. ಅದರಲ್ಲಿಯೂ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಹೋಗಬೇಕು. ಅಲ್ಲಿಯೇ ಸುಮಾರು ಅರ್ಧ ಗಂಟೆ ಹಿಡಿಯುತ್ತದೆ. ಆದರೆ ವಿಮಾನದಲ್ಲಿ ಹೋಗುವುದಕ್ಕೆ ಏನಿಲ್ಲವೆಂದರೂ ೨ ಗಂಟೆ ಮೊದಲು ನಿಲ್ದಾಣಕ್ಕೆ ಹೋಗಬೇಕು. ಅಲ್ಲಿ ಬೋರ್ಡಿಂಗ್
ಪಾಸ್ ಪಡೆಯುವುದರಿಂದ ಹಿಡಿದು, ಎಮಿಗ್ರೇಷನ್, ಭದ್ರತೆ ತಪಾಸಣೆಯವರೆಗೆ ಸಾಕಷ್ಟು ಸಮಯ ಬೇಕು. ಅದರಲ್ಲೂ ತಪಾಸಣೆಯ ವೇಳೆ ಶೂ ಕಳಚಿ, ಬೆಲ್ಟ್ ಬಿಚ್ಚಿ, ಪರ್ಸ್ ತೆಗೆದು, ಮೊಬೈಲ್ ಇಟ್ಟು, ಅದನ್ನೆಲ್ಲ ಪುನಃ ಜೋಡಿಸಿಕೊಂಡು, ದ್ವಾರದ ಬಳಿ ಕಾದು ಕುಳಿತು, ನಂತರ ವಿಮಾನದ ಒಳಗೆ ಅರ್ಧ ಗಂಟೆ ಕುಳಿತು, ವಿಮಾನ ಹಾರುವಷ್ಟರಲ್ಲಿ ಜೀವ ಅರ್ಧ ಹಣ್ಣಾಗಿರುತ್ತದೆ.

ವಿಮಾನ ಇಳಿದ ನಂತರ, ಇಮಿಗ್ರೇಷನ್ ಮುಗಿಸಿ, ಲಗೇಜ್ ತೆಗೆದುಕೊಂಡು ಹೊರಗೆ ಬರಲು ಇನ್ನೊಂದು ಗಂಟೆ ಬೇಕು. ಪ್ರಯಾಣ ೨೦ ನಿಮಿಷದ್ದಾದರೂ ಒಟ್ಟೂ ಸಮಯ ಲೆಕ್ಕ ಹಾಕಿದರೆ, ಏನಿಲ್ಲವೆಂದರೂ ೪-೫ ಗಂಟೆ ಬೇಕು. ಬದಲಾಗಿ, ಕಾರಿನಲ್ಲಿ ಹೋದರೆ ಸುಮಾರು ೩ ಗಂಟೆ ಉಳಿಯುತ್ತದೆ. ಅದೇ ರೀತಿ ಮನಾಮಾದಿಂದ ಕತಾರ್‌ನ ದೋಹಾಕ್ಕೆ ಹೋಗುವುದಾದರೂ ಇದೇ ಸ್ಥಿತಿ. ಆದ್ದರಿಂದ ಈ ಪ್ರಾಂತ್ಯದಲ್ಲಿರುವವರು ಕಮ್ಮಿ ಅಂತರದ ಪ್ರಯಾಣಕ್ಕೆ ವಿಮಾನಕ್ಕಿಂತ ಕಾರಿನಲ್ಲಿ ಹೋಗುವುದನ್ನು ಇಷ್ಟಪಡುತ್ತಾರೆ. ಇತ್ತೀಚೆಗೆ ದುಬೈಗೆ ಹೋಗುವಾಗ ಪುನಃ ಕಾರಿನ ಪ್ರಯಾಣಿಸಿದ್ದೆ.

ಬಹ್ರೈನ್‌ನಿಂದ ದುಬೈಗೆ ಹೋಗುವಾಗ ಸೌದಿ ಅರೇಬಿಯಾ ದಾಟಿ ಹೋಗಬೇಕು. ಗಡಿ ದಾಟಿದ ನಂತರ ದುಬೈ‌ ವರೆಗೂ ಇರುವ ಹೆದ್ದಾರಿ ‘ಇ-೧೧’. ಇದರ ಕುರಿತು ಸುಮಾರು ೪ ವರ್ಷಗಳ ಹಿಂದೆ ಒಮ್ಮೆ ಬರೆದಿದ್ದೆ. ಇದು ಯುನೈಟೆ ಡ್ ಅರಬ್ ಎಮಿರೇಟ್ಸ್‌ನ ರಸ್ಸೆಲ್ ಕೈಮಾದಿಂದ ಸೌದಿ ಅರೇಬಿಯಾದ ಗಡಿಯಲ್ಲಿರುವವರೆಗೆ ಇದ್ದು ಸುಮಾರು ೫೫೦ ಕಿ.ಮೀ.ನಷ್ಟು ಉದ್ದವಿದೆ. ಯುಎಇಯ ಎರಡು, ಮೂರು ಮತ್ತು ನಾಲ್ಕನೆಯ ಸ್ಥಾನದಲ್ಲಿರುವ ಹೆದ್ದಾರಿಗಳ ಉದ್ದವನ್ನೆಲ್ಲ ಸೇರಿಸಿದರೂ ಈ ಒಂದು ಹೆದ್ದಾರಿಯಷ್ಟು ಉದ್ದವಾಗುವುದಿಲ್ಲ.

ಈ ಹೆದ್ದಾರಿಯಲ್ಲಿ ಕಳೆದ ೨೫ ವರ್ಷಗಳಿಂದ ಸಾಕಷ್ಟು ಬಾರಿ ತಿರುಗಾಡಿದ್ದೇನೆ. ಆಗ ಚತುಷ್ಪಥವಾಗಿದ್ದ ಈ ಹೆದ್ದಾರಿ, ನಂತರ ಷಟ್ಪಥವಾಗಿದ್ದನ್ನು ಕಂಡಿದ್ದೇನೆ. ಕೊಲ್ಲಿ ರಾಷ್ಟ್ರಗಳ ಈ ಹೆದ್ದಾ ಅತ್ಯಂತ ಪ್ರಮುಖವಾದ ಪಾತ್ರವಹಿಸುತ್ತದೆ ಎಂದರೆ ತಪ್ಪಲ್ಲ. ಸೌದಿ ಅರೇಬಿಯಾ, ಕತಾರ್, ಕುವೈತ್ ಮತ್ತು ಬಹ್ರೈನ್ ದೇಶದಿಂದ ಭೂಮಾರ್ಗವಾಗಿ ಅಬುಧಾಬಿ ಅಥವಾ ದುಬೈಗೆ ಹೋಗುವಾಗ ಈ ಮಾರ್ಗವಾಗಿಯೇ ಹೋಗಬೇಕೇ ವಿನಾ ಬೇರೆ ದಾರಿ ಇಲ್ಲ. ಅಷ್ಟೇ ಅಲ್ಲ, ಈ ರಾಷ್ಟ್ರಗಳಿಂದ ಒಮಾನ್ ದೇಶಕ್ಕೆ ಭೂಮಾರ್ಗವಾಗಿ ಹೋಗುವವರಿಗೂ ಇದರ ಹೊರತಾಗಿ ಬೇರೆ ಯಾವ ಮಾರ್ಗ ವೂ ಇಲ್ಲ. ಈ ದೇಶಗಳಿಂದ ಭೂ ಮಾರ್ಗದಲ್ಲಿ ಬರುವ ವಾಣಿಜ್ಯ ಸರಕುಗಳನ್ನು ಇತರ ಭಾಗಗಳಿಗೆ ತಲುಪಿ
ಸುವಲ್ಲಿ ಈ ಹೆzರಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರತಿನಿತ್ಯ ಸುಮಾರು ೨,೫೦೦ ಟ್ರಕ್ ಮತ್ತು ಟ್ರೇಲರ್‌ಗಳು ಸೌದಿ ಅರೇಬಿಯಾದ ಗಡಿ ಯನ್ನು ದಾಟುತ್ತವೆ. ದಿನಕ್ಕೆ ಸುಮಾರು ೧೦,೦೦೦ ಜನ ಈ ಹೆದ್ದಾರಿಯನ್ನು ಗಡಿಯ ಭಾಗದ ಬಳಸುತ್ತಾರೆ. ಸೌದಿ ಅರೇಬಿಯಾ ಒಂದಕ್ಕೇ ಪ್ರತಿ ವರ್ಷ ಸುಮಾರು ೨೦ ಬಿಲಿಯನ್ ದಿಹ್ರಾಮ್ ಮೌಲ್ಯದ ವಸ್ತುಗಳು ಈ ಹೆದ್ದಾರಿಯಿಂದ ರಫ್ತಾಗುತ್ತವೆ. ಇತರ ಬೃಹತ್ ನಗರಗಳಾದ ಅಲ್ ಐನ್ ಮತ್ತು ಶಾರ್ಜಾಗಳಿಗೂ ಈ ಹೆzರಿ ಕೊಂಡಿಯನ್ನು ಕಲ್ಪಿಸುತ್ತದೆ.

ಸೌದಿ ಅರೇಬಿಯಾದ ಗಡಿಯಿಂದ ಅಬುಧಾಬಿ ವರೆಗೆ ಸುಮಾರು ೩೫೦ ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ, ಒಂದು ಕಾಲದಲ್ಲಿ ಸುಮಾರು ೫೦ ಕಿ.ಮೀ.ಗೆ ಒಂದರಂತೆ, ೫-೬ ಪೆಟ್ರೋಲ್ ಬಂಕ್, ಮಸೀದಿ, ಸಣ್ಣಪುಟ್ಟ ಅಂಗಡಿಗಳು ಸಿಗುತ್ತಿದ್ದವು. ಆದರೆ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು ತಾನೆ? ಈ ಹೆದ್ದಾರಿ ಕೂಡ ಅನೇಕ ಬದಲಾವಣೆ
ಯನ್ನು ಕಂಡಿದೆ. ಇತ್ತೀಚೆಗೆ ಸುಮಾರು ಐದೂವರೆ ಬಿಲಿಯನ್ ದಿಹ್ರಾಂ, ಅಂದರೆ ಸುಮಾರು ೧೧,೦೦೦ ಕೋಟಿ ರುಪಾಯಿ ಖರ್ಚು ಮಾಡಿ ಅಬುಧಾಬಿಯಿಂದ ಸೌದಿ ಅರೇಬಿಯಾದ ಗಡಿಯವರೆಗಿನ ಹೆದ್ದಾರಿಯ ಭಾಗವನ್ನು ಪುನರುಜ್ಜೀವನಗೊಳಿಸಲಾಗಿದೆ. ಈಗ ಒಂದು ತಾಸಿಗೆ ಸುಮಾರು ೨,೫೦೦ ವಾಹನಗಳು ಸಂಚರಿಸುವಷ್ಟು ಸಾಮರ್ಥ್ಯ ವುಳ್ಳದ್ದಾಗಿದೆ. ಇನ್ನೂ ಒಂದು ವಿಷಯ ಹೇಳಬೇಕೆಂದರೆ, ಈ ಒಂದು ಭಾಗದ ಹೆದ್ದಾರಿಯಲ್ಲಿ ೮,೭೦೦ಕ್ಕೂ ಹೆಚ್ಚು ಕಂಬಗಳನ್ನು ಬಳಸಿ ೨೧,೦೦೦ಕ್ಕೂ ಹೆಚ್ಚು ಎಲ್ಇಡಿ ಬಲ್ಬ್‌ಗಳನ್ನು ಅಳವಡಿಸಿ ಗಿನ್ನಿಸ್ ದಾಖಲೆ ಬರೆಯಲಾಗಿದೆ. ಒಂದು ಕಾಲದಲ್ಲಿ ೧೦೦-೧೨೦‌ ಕಿ.ಮೀ. ವೇಗದ ಮಿತಿ ಇದ್ದ ಈ ಹೆದ್ದಾರಿಯಲ್ಲಿ ಕ್ರಮೇಣ ೧೪೦, ಈಗ ೧೬೦ ಕಿ.ಮೀ. ವೇಗದ ಮಿತಿ ಇದೆ.

ಪರಿಣಾಮವಾಗಿ, ಸೌದಿ ಅರೇಬಿಯಾದ ಗಡಿಯಿಂದ ಅಬುಧಾಬಿಗೆ ಮೊದಲು ಮೂರೂವರೆ ಗಂಟೆಯಲ್ಲಿ ತಲುಪ ಬಹುದಾಗಿದ್ದ ದೂರವನ್ನು ಈಗ ಎರಡೂವರೆ ಗಂಟೆಯಲ್ಲಿಯೇ ತಲುಪಬಹುದಾಗಿದೆ. ನಾನು ಮೊನ್ನೆ ಮೊನ್ನೆ ಯಷ್ಟೇ ಈ ಹೆದ್ದಾರಿಯಲ್ಲಿ ಹೋಗಿ ಬಂದಿದ್ದೇನೆ. ಸೌದಿ ಅರೇಬಿಯಾದ ಗಡಿಯಿಂದ ಅಬುಧಾಬಿಯವರೆಗೆ ೧೬೦ರ ವೇಗದಲ್ಲಿಯೇ ಕಾರು ಓಡಿಸಿದ್ದೇನೆ. ನಂಬಿ, ಒಳಗೆ ಕುಳಿತ ನನಗೆ ಆ ವೇಗದಲ್ಲಿ ಹೋಗುತ್ತಿದ್ದೇನೆ ಎನ್ನುವ ಅನುಭವವೇ ಆಗಲಿಲ್ಲ!

ಅಷ್ಟೊಂದು ವೇಗವಾಗಿ ವಾಹನ ನಡೆಸುವುದು ಸೂಕ್ತವೇ? ಬಹಳಷ್ಟು ಹೆದ್ದಾರಿಗಳಲ್ಲಿ speed kills ಎಂಬ ಸೂಚನಾ ಫಲಕ ಕಾಣುತ್ತಿರುತ್ತದೆ. Normal speed meets every need ಎಂಬ ಮಾತಿದೆ. ಹಾಗಿರುವಾಗ, ಹೆದ್ದಾರಿಯಲ್ಲಿ ವೇಗವಾಗಿ ವಾಹನ ಓಡಿಸುವುದು ಅಥವಾ ಅಷ್ಟು ವೇಗವಾಗಿ ಸಂಚರಿಸಲು ಪರವಾನಗಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಮೂಡುತ್ತದೆ. ಹಾಗೆಯೇ, There are no speed limits on the road to success ಎಂಬ ಮಾತೂ ಇದೆ. ಅದು ಜನರಲ್ಲಿ ಪ್ರೇರಣೆ ತುಂಬಲು ಹೇಳಿರುವ ಮಾತೇ ಆದರೂ, ‘ವೇಗ’ ಎನ್ನುವುದು ಅದಲ್ಲಿಯೂ ಇಣುಕುತ್ತದೆ. ಜೀವನದಲ್ಲಿ ಗುರಿ ತಲುಪುವುದಕ್ಕೆ ವೇಗದ ಮಿತಿ ಇಲ್ಲ ಎನ್ನುವ ಮಾತಿಗೆ ಒಪ್ಪಿಗೆ ಇದೆ ಎಂದಾದರೆ, ಭೌತಿಕವಾಗಿ ಗುರಿ ತಲು ಪುವಾಗ ಮಿತಿ ಇರಬೇಕು ಎನ್ನುವುದು ನಿಜವಾದರೂ, ನಿಧಾನವೇ ಪ್ರಧಾನವಾಗಬಾರದು.

ನಿಮಗೆ ತಿಳಿದಿರಬಹುದು, ಜರ್ಮನಿಯ ಕೆಲವು ಹೆದ್ದಾರಿ (ಆಟೋಬಾನ್)ಗಳಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಹೊರತುಪಡಿಸಿದರೆ ವೇಗಕ್ಕೆ ಮಿತಿಯೇ ಇಲ್ಲ. ಕಾರು ಎಷ್ಟು ವೇಗವಾಗಿ ಓಡುತ್ತದೆಯೋ ಅಷ್ಟು ವೇಗವಾಗಿ ಓಡಿಸ ಬಹುದು. ವಿಶ್ವದ ಬಹುತೇಕ ಕಡೆಗಳಲ್ಲಿ ವೇಗದ ಮಿತಿಯನ್ನು ದಾರಿ ಬದಿಯಲ್ಲಿ ನಮೂದಿಸಿರುತ್ತಾರೆ. ಅದನ್ನು ಕಾಲಕಾಲಕ್ಕೆ ಬದಲಾಯಿಸುತ್ತಲೂ ಇರುತ್ತಾರೆ.

ಹಾಗಾದರೆ ಅದನ್ನು ನಿರ್ಧರಿಸುವವರು ಯಾರು ಮತ್ತು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ವೇಗದ ಮಿತಿಯನ್ನು ನಿರ್ಧರಿಸುವವರು ಆಯಾ ಪ್ರದೇಶದಲ್ಲಿ ಆಡಳಿತ ನಡೆಸುವವರು. ರಾಷ್ಟ್ರೀಯ ಹೆದ್ದಾರಿಗಳಾದರೆ, ಕೇಂದ್ರ, ರಾಜ್ಯದ್ದಾದರೆ ರಾಜ್ಯ ಸಂಚಾರ ಇಲಾಖೆ ಹೀಗೆ. ಆದರೆ ಅವರು ತಮ್ಮ ಇಷ್ಟದಂತೆ ನಿರ್ಧರಿಸುವುದಿಲ್ಲ.
ಅದರಲ್ಲೇ ಒಂದು ಮಾಪನವಿದೆ. ಎಂಜಿನಿಯರಿಂಗ್ ಮೆಥಡ್ ಎನ್ನಿ, ಅಭಿಯಂತರುಗಳ ವಿಧಾನ ಎನ್ನಿ, ಅದರ ಪ್ರಕಾರ, ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸರಾಸರಿ ವೇಗವನ್ನು ಪರಿಗಣಿಸಲಾಗುತ್ತದೆ.

ಅಪಘಾತವಿಲ್ಲದೇ ಯಾವ ವೇಗದಲ್ಲಿ ಶೇ.85 ರಷ್ಟು ವಾಹನಗಳು ಆ ಮಾರ್ಗದಲ್ಲಿ ಸಂಚರಿಸುತ್ತವೆ ಎಂದು ಕಂಡುಹಿಡಿಯುತ್ತಾರೆ. ಜತೆಗೆ, ರಸ್ತೆ ಅಥವಾ ಲೇನ್‌ನ ಅಗಲ, ರಸ್ತೆಯ ಪಕ್ಕದ ಭುಜ (road shoulder) ಇತ್ಯಾದಿಗಳನ್ನು ಪರಿಗಣಿಸುತ್ತಾರೆ. ಅದಕ್ಕೆ ತಕ್ಕಂತೆ ವೇಗದ ಮಿತಿ ನಿಗದಿಯಾಗುತ್ತದೆ. ಆದ್ದರಿಂದಲೇ ಹಳೆಯ ರಸ್ತೆಗಳು ಪುನರು ಜ್ಜೀವನಗೊಂಡಾಗ ವೇಗದ ಮಿತಿಯೂ ಬದಲಾಗುತ್ತದೆ. ವಾಹನದ ವೇಗ ಹೆಚ್ಚಾದಂತೆ ಅಪಘಾತದ ಸಂಖ್ಯೆಯೂ ಹೆಚ್ಚುತ್ತದೆ ಎನ್ನುವುದು ಒಂದು ವಾದ. ಅಪಘಾತಕ್ಕೆ ವೇಗ ಒಂದೇ ಕಾರಣ ಅಲ್ಲ ಎನ್ನುವುದು ಸಂಚಾರ ಸುರಕ್ಷತಾ ತಜ್ಞರ ವಾದ.

ಏಕೆಂದರೆ ಎಲ್ಲ ಅಪಘಾತಗಳಿಗೂ ವೇಗವೇ ಕಾರಣವಲ್ಲ. ಹಾಗೇನಾದರೂ ಆಗಿದ್ದರೆ, ವೇಗವಾಗಿ ಚಲಿಸುವ ವಾಹನ ಗಳೆಲ್ಲವೂ ಅಪಘಾತಕ್ಕೆ ಒಳಪಡಬೇಕಾಗಿತ್ತು. ಕೆಲವೊಮ್ಮೆ ಮಾರ್ಗದಲ್ಲಿ ನಮೂದಿಸಿರುವ ವೇಗದ ಮಿತಿಯನ್ನೂ ಮೀರಿ ವಾಹನಗಳು ಸಂಚರಿಸುವುದಿದೆ. ಆ ವಾಹನಗಳೆಲ್ಲವೂ ಅಪಘಾತಕ್ಕೆ ಒಳಗಾಗುತ್ತವೆಯೇ? ಇಲ್ಲವಲ್ಲ? ಹಾಗಾದರೆ ಅದು ಸರಿಯೇ? ಖಂಡಿತ ಅಲ್ಲ. ಅದು ಅಲ್ಲಿಯ ನಿಯಮಕ್ಕೆ ಬಾಹಿರ. ಅದಕ್ಕೆ ತಕ್ಕ ದಂಡ ಕಟ್ಟಲೇಬೇಕು, ಶಿಕ್ಷೆ ಅನುಭವಿಸಲೇಬೇಕು.

ನನ್ನದೇ ಒಂದು ಉದಾಹರಣೆ ಹೇಳುತ್ತೇನೆ. ನಾನು ಹೆದ್ದಾರಿಯಲ್ಲಿ ಎರಡೂವರೆ ಗಂಟೆ ೧೬೦ರಲ್ಲಿ ಹೋದಾಗ ಯಾವ ದಂಡವೂ ಇರಲಿಲ್ಲ. ಅದೇ ನಗರ ಪ್ರದೇಶ ಸಮೀಪಿಸುತ್ತಿದ್ದಂತೆ, ಬದಲಾದ ವೇಗದ ಮಿತಿಯಲ್ಲಿ, ೮೦ರ ಬದಲಾಗಿ ೮೪, ೧೦೦ರ ಬದಲಾಗಿ ೧೧೩, ೧೨೦ರ ಬದಲಾಗಿ ೧೨೩ ಕಿ.ಮೀ. ವೇಗದಲ್ಲಿ ಹೋಗಿ ಒಟ್ಟೂ ೩ ತಪ್ಪು ಮಾಡಿದ್ದಕ್ಕೆ ೨೧,೦೦೦ ರುಪಾಯಿ ದಂಡ ತುಂಬಿದ್ದೇನೆ. ಹಾಗಾದರೆ ಇದರಿಂದ ಅಪಘಾತವಾಯಿತೇ ಎಂದು ವಾದಿಸುವಂತಿಲ್ಲ. ಅಲ್ಲಿ ನಮೂದಿಸಿದ್ದಕ್ಕಿಂತ ಕೇವಲ ೩ ಕಿ.ಮೀ. ಹೆಚ್ಚು ವೇಗದಲ್ಲಿದ್ದೆ ಎಂದು ವಾದ ಮಾಡುವಂತಿಲ್ಲ.

ಒಂದೇ ಒಂದು ಕಿ.ಮೀ. ಹೆಚ್ಚಿನ ವೇಗದಲ್ಲಿದ್ದರೂ ದಂಡ ತುಂಬಬೇಕು ಎನ್ನುವುದು ನಿಯಮ. ಹಾಗೆಯೇ, ಇದೇ ಹೆzರಿಯಲ್ಲಿ ‘ನಾನು ತೀರಾ ಸುರಕ್ಷಿತವಾಗಿ ವಾಹನ ಓಡಿಸುತ್ತೇನೆ’ ಎಂದು ೬೦ಕ್ಕಿಂತ ಕಮ್ಮಿ ವೇಗದಲ್ಲಿ ವಾಹನ ನಡೆಸಿದರೂ ದಂಡ ತೆರಬೇಕಾದೀತು! ಇದರರ್ಥ, ಚಾಲಕನಾದವನು ನಿಯಮ ಪಾಲಿಸಬೇಕು ಅಷ್ಟೇ. ಅಂದರೆ, ಅಪಘಾತವಾಗುವುದಕ್ಕೆ ವೇಗ ಮಾತ್ರ ಕಾರಣವಲ್ಲ, ಬದಲಾಗಿ ಚಾಲಕನ ಕಾಳಜಿ ಮುಖ್ಯವಾಗುತ್ತದೆ. ಅದರೊಂದಿಗೆ ವಾಹನದ ಸ್ಥಿತಿ ಮತ್ತು ವಾತಾವರಣವೂ ಪ್ರಮುಖ ಪಾತ್ರವಹಿಸುತ್ತವೆ. ಅದನ್ನು ಗ್ರಹಿಸಿ ಚಾಲಕನಾದವನು ವಾಹನ ನಡೆಸಬೇಕು. ಇಲ್ಲವಾದರೆ, ಇಂದಿಗೂ ಎಲ್ಲರೂ ೩೦-೪೦ರ ವೇಗದಲ್ಲಿಯೇ ವಾಹನ ನಡೆಸಬೇಕಾಗುತ್ತಿತ್ತು. ಆಗ ತಂತ್ರeನಕ್ಕೆ, ಸಮಯಕ್ಕೆ ಯಾವುದೇ ಬೆಲೆ ಇರುತ್ತಿರಲಿಲ್ಲ.

೧೮೮೫ರಲ್ಲಿ ಮೊದಲ ಬಾರಿಗೆ ಇಂಧನ ಬಳಸಿ ಚಲಿಸುವ ವಾಹನ ಕಂಡುಹಿಡಿದಾಗ ಗಂಟೆಗೆ ೧೩ ಮೈಲಿ ವೇಗದಲ್ಲಿ ಚಲಿಸುತ್ತಿತ್ತಂತೆ. ಆದರೆ ಈಗ? ಮೊದಲೆಲ್ಲ ರೈಲು ಸಂಚಾರದ ವೇಗ ಗಂಟೆಗೆ ೪೦-೫೦ ಕಿ.ಮೀ. ಇದ್ದದ್ದನ್ನು ನಾವೇ ಕಂಡಿದ್ದೇವೆ. ೬೦ ವರ್ಷದ ಹಿಂದೆ ಜಪಾನ್ ದೇಶದಲ್ಲಿ ಮೊದಲ ಬಾರಿ ವೇಗದ ರೈಲು ಸಂಚಾರ ಆರಂಭವಾದಾಗ
ಇಡೀ ದೇಶವೇ ಸಂಭ್ರಮಿಸಿತ್ತು. ಆ ಕಾಲದಲ್ಲಿ ಅಮೆರಿಕದ ರೈಲುಗಳು ಗಂಟೆಗೆ ೧೭೦ ಕಿ.ಮೀ. ವೇಗದಲ್ಲಿ ಓಡುತ್ತಿದ್ದವು. ಅದಕ್ಕಿಂತಲೂ ೧೫ ಕಿ. ಮೀ. ಹೆಚ್ಚು ವೇಗವಾಗಿ ಓಡುವ ರೈಲನ್ನು ಜಪಾನ್ ಸಿದ್ಧಪಡಿಸಿತ್ತು. ಇಂದು ಮ್ಯಾಗ್ಲೆವ್ ತಂತ್ರಜ್ಞಾನ ದಿಂದ ರೈಲಿನ ವೇಗ ಇನ್ನಷ್ಟು ಹೆಚ್ಚಿದೆ. ಚೀನಾದ ಶಂಘಾಯ್ ನಗರದಲ್ಲಿ ರೈಲು ಗಂಟೆಗೆ ೪೩೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಅಂದರೆ, ಬೆಂಗಳೂರಿನಿಂದ ಸುಮಾರು ೧,೦೦೦ ಕಿ.ಮೀ. ದೂರದಲ್ಲಿರುವ ಮುಂಬಯಿಗೆ ಹೋಗಲು ಎರಡೂವರೆ ಗಂಟೆ ಸಾಕು.

ಈ ಸಂದರ್ಭದಲ್ಲಿ ನಿಮಗೆ ಇನ್ನೊಂದು ಕುತೂಹಲಕಾರಿ ವಿಷಯ ಹೇಳಬೇಕು. ಮೊದಲ ಬಾರಿ ವೇಗದ ಮಿತಿ ನಿಗದಿಯಾದದ್ದು ಯಾವಾಗ ಗೊತ್ತೇ? ವಾಹನಗಳು ತಯಾರಾಗುವುದಕ್ಕೂ ೨೦೦ ವರ್ಷಗಳ ಮೊದಲು! ಕಾರಿನ ಕಲ್ಪನೆ ಮೊದಲು ಬಂದದ್ದು ೧೭ನೆಯ ಶತಮಾನದ ಮಧ್ಯದಲ್ಲಿ. ೨೦೧೪ರ ಅಕ್ಟೋಬರ್‌ನಲ್ಲಿ ಅಮೆರಿಕದ U.S.
Department of Transportation, Federal Highway Administration ನಡೆಸಿದ Methods and Practices for
Setting Speed Limits: An Informational Report ಹಾಗೂ ಜನವರಿ ೨೦೧೦ರಲ್ಲಿ California Association of
Bicycling Organizations ನಡೆಸಿದ Ask the traffic engineer: How are speed limits set? ಅಧ್ಯಯನದ ವರದಿಯ ಪ್ರಕಾರ, ಮೊದಲ ಕಾರು ತಯಾರಾಗುವುದಕ್ಕಿಂತ ೨೦೦ ವರ್ಷ ಮೊದಲೇ ವೇಗದ ಮಿತಿ ಜಾರಿಯಲ್ಲಿತ್ತಂತೆ.

ಆ ಕಾಲದಲ್ಲಿ ಕುದುರೆ ಗಾಡಿಗಳ ಚಕ್ರಕ್ಕೆ ಸಿಕ್ಕು ಜನ ಅಂಗಾಂಗ, ಪ್ರಾಣ ಕಳೆದುಕೊಳ್ಳುತ್ತಿ ದ್ದರಂತೆ. ರೋಡ್
ಐಲೆಂಡ್ ಪ್ರಾಂತ್ಯದ ನ್ಯೂಪೋರ್ಟ್‌ನಲ್ಲಿ ಪಾದಚಾರಿಗಳ ಸಾವು ತಡೆಗಟ್ಟಲು ಕುದುರೆ ಸವಾರಿ ಮತ್ತು ಕುದುರೆ ಗಾಡಿಗಳಿಗೆ ವೇಗದ ಮಿತಿ ಅಳವಡಿಸಲಾಯಿತಂತೆ. ಹಾಗೆಯೇ ಚರ್ಚ್‌ನಲ್ಲಿ ಪ್ರಾರ್ಥನೆಗೆ ಹೋಗುವ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾ ಗಲೆಂದು ಬಾಸ್ಟನ್ ಪ್ರದೇಶದಲ್ಲಿ ಕುದುರೆರಥ ಅಥವಾ ಟಾಂಗಾಗಳು ನಡಿಗೆಯ ವೇಗದಲ್ಲಿ ಚಲಿಸಬೇಕು ಎಂಬ ನಿರ್ಬಂಧ ಹೇರಲಾಯಿತಂತೆ!

ತಲುಪಬೇಕಾದ ಸ್ಥಳವನ್ನು ಸುರಕ್ಷಿತವಾಗಿ, ಬೇಗ ತಲುಪುವುದಾದರೆ ಯಾರಿಗೆ ಬೇಡ? ಯಾಕೆ ಬೇಡ? ವೇಗಮಯ ವಾದ ಇಂದಿನ ದಿನಗಳಲ್ಲಿ ಪ್ರತಿ ನಿಮಿಷವೂ ಮಹತ್ವದ್ದು ತಾನೆ? ಯಾಕೋ ಏನೋ, ೧೬೦ರ ವೇಗದಲ್ಲಿ ಇದೆಲ್ಲ ನೆನಪಾಯಿತು, ನಿಮಗೆ ತಿಳಿಸಬೇಕು ಅನ್ನಿಸಿತು.