– ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳೆದ ಆರೇಳು ವಾರಗಳಿಂದ ಅಡಿಕೆ ದರದಲ್ಲಿ ಉಂಟಾದ ಧಾರಣೆಯ ಕುಸಿತದ ಸಂಚಲನ ಮಲೆನಾಡು ಅಡಿಕೆ ಮಾರುಕಟ್ಟೆಯ ಸಹಕಾರಿ ಸಂಸ್ಥೆ ಮ್ಯಾಮ್‌ಕೋಸ್ (ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ) ಸೇರಿದಂತೆ ಎಪಿಎಂಸಿ (APMC) ಒಳಗಿನ ಸಹಕಾರಿ ಸಂಘಗಳ ಅಡಿಕೆಗೆ ಹೆಚ್ಚು ಬಾಧಿಸುತ್ತಿದೆ (MAMCOS).
ಕಳಪೆ ಅಡಿಕೆ ಮಿಶ್ರಣ, ಗೊರಬಲು ಫಾಲಿಶ್ ಯಂತ್ರದ ಗಟ್ಟಿ ಅಡಿಕೆ ಮಿಶ್ರಣ, ಚೇಣಿದಾರರು ಕ್ವಾಲಿಟಿ ಅಡಿಕೆ ಕೊಡ್ತಾ ಇಲ್ಲ, ಗುಟ್ಕಾ ಕಂಪನಿಯವರು ಅಡಿಕೆ ಕ್ವಾಲಿಟಿ ಸರಿ ಇಲ್ಲದೆ ಮ್ಯಾಮ್‌ಕೋಸ್, ಕ್ಯಾಂಪ್ಕೋ ಅಡಿಕೆಗಳ ಅನೇಕ ಲೋಡ್‌ಗಳನ್ನು ರಿಟರ್ನ್ಸ್ ಮಾಡಿದಾರೆ, ಅಡಿಕೆ ಬಿಡ್ ಮಾಡುವವರು ಮ್ಯಾಮ್‌ಕೋಸ್, ಸಹ್ಯಾದ್ರಿ, ಕ್ಯಾಂಪ್ಕೋಗಳಿಗೆ ಬರುವುದು ಕಮ್ಮಿಯಾಗಿದೆ, ಸ್ವತಃ ಮ್ಯಾಮ್‌ಕೋಸ್‌ನ ನೇರ ಖರೀದಿಗೂ ಆರ್ಡರ್‌ಗಳು ಕಮ್ಮಿ ಇವೆ, ಎಪಿಎಂಸಿ ಯಾರ್ಡ್‌ನಲ್ಲೇ ಅಡಿಕೆಗೆ ಬಣ್ಣ ಬಳಿದು ಗುಣಮಟ್ಟ ಕುಸಿಯುತ್ತಿರುವುದು, ಹೆಚ್ಚುತ್ತಿರುವ ವಿದೇಶಿ ಅಕ್ರಮ ಆಮದು ಅಡಿಕೆ…ಹೀಗೆ ಅನೇಕ ಕಾರಣಗಳು ಎಪಿಎಂಸಿ ಯಾರ್ಡ್‌ನಿಂದ ಒಂದೊಂದಾಗಿ ಹೊರಗೆ ಬರುತ್ತಿದ್ದಂತೆ ಅಡಿಕೆ ಧಾರಣೆ ಗಣನೀಯವಾಗಿ ಕುಸಿಯುತ್ತಿದೆ.
ಕಂಗಾಲಾದ ಬೆಳೆಗಾರರು
ಬಹುತೇಕ ಮ್ಯಾಮ್‌ಕೋಸ್ ಸದಸ್ಯ ರೈತರ ರಾಶಿ ಇಡಿ ಅಡಿಕೆಗೆ ₹ 35,000ದಿಂದ ₹ 45,000 ಟೆಂಡರ್ ಧಾರಣೆ ಬೀಳುತ್ತಿದ್ದು, ಕುಸಿತದ ಧಾರಣೆಯಲ್ಲಿ ಅಡಿಕೆ ಮಾರಲಾಗದೆ ಕಂಗಾಲಾಗಿದ್ದಾರೆ. ಒಂದೆರಡು ವಾರಗಳು ಮರು ಟೆಂಡರ್‌ಗೆ ಬಿಟ್ಟರೂ, ಕುಸಿದ ದರದ ಎಸ್‌ಎಂಎಸ್ ನೋಡಿ, ಬೇರೆ ದಾರಿ ಕಾಣದೆ ಮ್ಯಾಮ್‌ಕೋಸ್‌ನ ಸದಸ್ಯ ರೈತರು ತಮ್ಮ ರಾಶಿ ಇಡಿ ಅಡಿಕೆಯನ್ನು ಹಿಂಪಡೆದು ಓಪನ್ ಮಾರುಕಟ್ಟೆಯಲ್ಲಿ ಮಾರಲು ಮುಂದಾಗುತ್ತಿದ್ದಾರೆ.
ಮ್ಯಾಮ್‌ಕೋಸ್‌ನಲ್ಲಿ ₹ 35,000 ಧಾರಣೆ ಕಂಡ ರಾಶಿ ಇಡಿ ಅಡಿಕೆಗೆ ಹೊರಗಡೆ ರೈತರ ಮನೆ ಅಂಗಳದಲ್ಲಿ ₹ 48,000ಕ್ಕೆ ಮಾರಾಟ ಆಗುತ್ತಿದೆ. ಇಷ್ಟೆಲ್ಲ ಆಗುತ್ತಿದ್ದರೂ, ಮ್ಯಾಮ್‌ಕೋಸ್ ಮತ್ತಿತರ ಸಹಕಾರಿ ಸಂಸ್ಥೆಗಳು ಧಾರಣೆ ಕುಸಿಯುತ್ತಿಲ್ಲ ಎಂದು ತೋರಿಸಲು ಬೆರಳೆಣಿಕೆಯ ಕೆಲವು ಲಾಟ್‌ಗಳಿಗೆ ₹ 49,000 ಬೆಲೆ ಕಾಣಿಸಿ ಒಂದು ಬ್ಯಾಲೆನ್ಸ್ ಮಾಡುವ ಪ್ರಯತ್ನವೂ ನೆಡೆದಿದೆ! ಆದರೆ ದಿನ ಕಳೆದಂತೆ, ಮ್ಯಾಮ್‌ಕೋಸ್ ಮೂಲಕ ಅಡಿಕೆ ವ್ಯವಹಾರ ಮಾಡುವ ಬಹುತೇಕ ರೈತರು, ನಿಜವಾಗಿ ಧಾರಣೆ ಕುಸಿಯುತ್ತಿರುವುದರ ಪರಿಣಾಮದಿಂದ ಕಂಗಾಲಾಗಿದ್ದಾರೆ.
ಕಳಪೆ ಅಡಿಕೆ, ವಿದೇಶಿ ಅಡಿಕೆ, ಗಟ್ಟಿ ಅಡಿಕೆ, ಗೊರಬಲು ನಿಶ್ರಣದ ಅಡಿಕೆ ಎನ್ನುವ ಮೇಲಿನ ಹತ್ತಾರು ಕಾರಣಗಳಿಂದ ರಾಶಿ ಇಡಿ ಅಡಿಕೆಗೆ ಐದಾರು ವಾರಗಳ ಹಿಂದೆ ಇದ್ದ ಸುಮಾರು ₹ 50,000 ಧಾರಣೆ, ಈಗ ಕುಸಿದು ಬೆರಳೆಣಿಕೆಯ ಕೆಲವು ರಾಶಿ ಇಡಿ ಅಡಿಕೆ ಲಾಟ್‌ಗಳಿಗೆ ಮಾತ್ರ ₹ 49,000 ಬರುತ್ತಿದ್ದರೂ, ಉಳಿದ ಹೆಚ್ಚಿನ ರಾಶಿ ಇಡಿ ಲಾಟ್‌ಗಳಿಗೆ ಈಗ ₹ 35,000- ₹ 40,000 ಮಾತ್ರ. ಪರಿಣಾಮ, ಪ್ರತಿದಿನ ಅನೇಕ ರೈತರು ಮ್ಯಾಮ್‌ಕೋಸ್ ಸಹಕಾರಿ ಸಂಸ್ಥೆಯಿಂದ ತಮ್ಮ ಅಡಿಕೆಯನ್ನು ಬಿಡಿಸಿಕೊಂಡು ಹೋಗುತ್ತಿದ್ದಾರೆ.
ಹಿಂಪಡೆದ ಅಡಿಕೆಯನ್ನು ಮನೆಯ ಅಂಗಳಕ್ಕೇ ಬರುವ ಅಡಿಕೆ ಖರೀದಿದಾರರಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಮ್ಯಾಮ್‌ಕೋಸ್‌ನಲ್ಲಿ ₹ 35,000 ಟೆಂಡರ್ ಬಂದು, ಅಷ್ಟೊಂದು ಕಡಿಮೆ ಬೆಲೆಗೆ ಮಾರಲಾಗದೆ ರೈತರು ಹಿಂಪಡೆದ ಅಡಿಕೆಯನ್ನು ಮನೆ ಅಂಗಳದಲ್ಲಿ ಬಂದು ಖರೀದಿ ಮಾಡುವ ವ್ಯಾಪಾರಸ್ತರು,₹ 47,000-₹ 48,000ಕ್ಕೆ ಖರೀದಿಸುತ್ತಿದ್ದಾರೆ.
ಮ್ಯಾಮ್‌ಕೋಸ್ ಮತ್ತು APMC ಯಾರ್ಡ್ ಗೇಟ್‌ನಿಂದ ನಿಂದ ಅಡಿಕೆ ಮೂಟೆಗಳು ಹೊರಬಂದು, ಖಾಸಗಿ ವರ್ತಕರಿಗೆ ಸಮಾಧಾನಕರ ಬೆಲೆಗೆ ವರ್ಗಾವಣೆ ಆಗುತ್ತಿದೆ. ಮ್ಯಾಮ್‌ಕೋಸ್ ಅಸಹಾಯಕವಾಗಿದೆ. ನಿರ್ದೇಶಕರು ಹೆಲ್ಪ್‌ಲೆಸ್ ಆಗಿದ್ದಾರೆ. APMC ತಲೆಗೆ ಕೈ ಹೊತ್ತು ಕುಳಿತಿದೆ. ತುಂಬ ಗಂಭೀರವಾದ ಪರಿಸ್ಥಿತಿಯನ್ನು ಈಗ ಮ್ಯಾಮ್‌ಕೋಸ್ ಮತ್ತು ಇತರ ಸಹಕಾರಿ ಸಂಸ್ಥೆಗಳು ಎದುರಿಸುತ್ತಿವೆ.
ಪರಿಹಾರೋಪಾಯ ಇಲ್ಲ
30,000ಕ್ಕೂ ಹೆಚ್ಚು ಸದಸ್ಯರಿರುವ ಮ್ಯಾಮ್‌ಕೋಸ್ ಸಹಕಾರಿ ಸಂಸ್ಥೆಯಲ್ಲಿ ಕಳೆದ ತಿಂಗಳು ನಡೆದ ಸರ್ವ ಸದಸ್ಯರ ಸಭೆಯಲ್ಲೂ, ಸಂಸ್ಥೆಯಲ್ಲಿ ರಾಶಿ ಇಡಿಯ ಟೆಂಡರ್ ಧಾರಣೆ ಕಡಿಮೆ ಬೀಳುತ್ತಿರುವುದರ ವಿಚಾರ ಚರ್ಚೆಗೆ ಬಂದರೂ, ಸೂಕ್ತ ಸಮಾಧಾನಕರ ಪರಿಹಾರೋಪಾಯಗಳು ಮ್ಯಾಮ್‌ಕೋಸ್‌ನ ಆಡಳಿತ ನಿರ್ದೇಶಕರುಗಳಿಂದ ಬಾರದೇ ಇದ್ದುದು ಕೂಡ ಸದಸ್ಯ ರೈತರಲ್ಲಿ ಅಸಮಾಧಾನ ಉಂಟು ಮಾಡಿದೆ.
ಮಲೆನಾಡಿನ ಈ ವರ್ಷದ ಅಡಿಕೆ ಕುಯಿಲು ಮಾಡಲು ಮಳೆ ಬಿಡುತ್ತಿಲ್ಲ. ಈಗಾಗಲೆ ಜುಲೈ-ಆಗಷ್ಟ್‌ನಲ್ಲಿ ಬಿದ್ದ ದಾಖಲೆಯ ಮಳೆಗೆ ಕೊಳೆ ರೋಗ ಬಂದು ಸಾಕಷ್ಟು ಅಡಿಕೆ ಫಸಲು ನಷ್ಟ ಆಗಿದೆ. ಅಡಿಕೆ ಎಲೆ ಚುಕ್ಕಿ ರೋಗವು ಕಳೆದೆರಡು ವರ್ಷಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮಲೆನಾಡಿನ ಅಡಿಕೆ ತೋಟವನ್ನು ವ್ಯಾಪಿಸುತ್ತಿದೆ. ಬೆಳಕಿಗೆ ಬಂದ ವಿದೇಶಿ ಅಕ್ರಮ ಅಡಿಕೆ ಆಮದಿನ ಪತ್ರಿಕೆ ಸುದ್ದಿಗಳು ಕ್ರಾಫ್ಟ್ ಆಗಿ ವಾಟ್ಸ್‌ಆ್ಯಪ್ ಹರಿದಾಡುತ್ತಿದೆ.
ಮುಂದಿನ ದಿನಗಳಲ್ಲಿ, ಅಡಿಕೆ ಕುಯಿಲು ಮಾಡಿ, ಈ ವರ್ಷ ಅಡಿಕೆಯನ್ನು ಮ್ಯಾಮ್‌ಕೋಸ್‌ಗೆ ಕಳಿಸುವುದಕ್ಕೆ ಸಾಧ್ಯವಾಗುವುದಿಲ್ಲವೇನೋ ಅನ್ನುವ ಪರಿಸ್ಥಿತಿ ಅಡಿಕೆ ಬೆಳೆಗಾರ ಸದಸ್ಯರದು. ಇವತ್ತಿನ ಧಾರಣೆ ವ್ಯತ್ಯಾಸದ ಪರಿಸ್ಥಿತಿಯನ್ನು ಮ್ಯಾಮ್‌ಕೋಸ್ ಹೇಗೆ ಸಂಬಾಳಿಸಿ ಸರಿ ಮಾಡುತ್ತದೆ ಎಂಬುದು ಸದಸ್ಯ ರೈತರ ಮುಂದಿರುವ ಪ್ರಶ್ನೆ.
ಶೇ. 10ರಷ್ಟು ವ್ಯಾಪಾರ ಮಾತ್ರ
ಶಿವಮೊಗ್ಗದ APMC ವರ್ತಕರ ಸಂಘದ ಪ್ರಮುಖರು ಹೇಳಿದಂತೆ, ಮಲೆನಾಡಿನಲ್ಲಿನ ಒಟ್ಟು ಅಡಿಕೆಯಲ್ಲಿ APMC ಮೂಲಕ ವ್ಯಾಪಾರ ಆಗುವುದು ಕೇವಲ 10% ಮಾತ್ರ. 90% ಅಡಿಕೆ APMC ಹೊರಗಡೆಯೇ ನೆಡೆಯುವುದು. ಈಗಿನ ಮ್ಯಾಮ್‌ಕೋಸ್ ಮತ್ತು ಇತರ ಸಹಕಾರಿ ಸಂಸ್ಥೆಗಳ ಒಳಗಿನ ರಾಶಿ ಇಡಿ ಅಡಿಕೆಯ ಧಾರಣೆ ಕುಸಿತದ ಪರಿಸ್ಥಿತಿ ಹೀಗೆ ಮುಂದುವರೆದರೆ, APMC ಒಳ ಬರುವ ಅಡಿಕೆ ಪ್ರಮಾಣ ಇನ್ನಷ್ಟು ಕಡಿಮೆ ಆಗಲಿದೆ.
ಇಷ್ಟೆಲ್ಲ ಕತೆಗಳ ನಡುವೆಯೂ ಅರ್ಥವಾಗದ ವಿಚಾರಗಳು ಅಂದ್ರೆ, ಮ್ಯಾಮ್‌ಕೋಸ್ ಸಂಸ್ಥೆ ಮತ್ತು ಇತರ ಸಹಕಾರಿ ಸಂಸ್ಥೆಗಳಲ್ಲಿ ಮಾತ್ರ ಈ ದರ ಕುಸಿತ ಏಕೆ? ಇಲ್ಲಿ ಕುಸಿದ ಧಾರಣೆಯ ಅಡಿಕೆಗೆ APMC ಹೊರಗಡೆ ಓಪನ್ ಮಾರುಕಟ್ಟಯಲ್ಲಿ ಹೆಚ್ಚು ಬೆಲೆಗೆ ವ್ಯಾಪಾರ ಆಗುತ್ತಿರುವುದು ಹೇಗೆ? ಅದೂ ಅಷ್ಟೊಂದು ವ್ಯತ್ಯಾಸದಲ್ಲಿ? ₹ 35,000ದ ಅಡಿಕೆಗೆ ಹೊರಗಡೆ ₹ 48,000 ಸಿಗುವುದರ ಹಿಂದಿನ ಚಿದಂಬರ ರಹಸ್ಯ ಏನು? ಮ್ಯಾಮ್‌ಕೋಸ್‌ನಲ್ಲಿ ಕಳಪೆ ಆಗಿರುವ ಅಡಿಕೆ ಹೊರಗಡೆ ಕ್ವಾಲಿಟಿ ಅಡಿಕೆ ಆಗುವುದು ಹೇಗೆ? ಕ್ವಿಂಟಾಲ್‌ಗೆ ₹ 13,000 ಹೆಚ್ಚು ಸಿಗುವುದು ಹೇಗೆ?
ಕಳಪೆ ಅಡಿಕೆ ಮಿಶ್ರಣ, ಗೊರಬಲು ಫಾಲಿಶ್ ಯಂತ್ರದ ಗಟ್ಟಿ ಅಡಿಕೆ ಮಿಶ್ರಣ, ಚೇಣಿದಾರರು ಕ್ವಾಲಿಟಿ ಅಡಿಕೆ ಕೊಡ್ತಾ ಇಲ್ಲ, ಗುಟ್ಕಾ ಕಂಪನಿಯವರು ಅಡಿಕೆ ಕ್ವಾಲಿಟಿ ಸರಿ ಇಲ್ಲ ಎನ್ನುತ್ತಿರುವುದು, ಅಡಿಕೆಯ ಅನೇಕ ಲೋಡ್‌ಗಳನ್ನು ರಿಟರ್ನ್ಸ್ ಮಾಡಿದಾರೆ, ಅಡಿಕೆ ಬಿಡ್ ಮಾಡುವವರು ಮ್ಯಾಮ್‌ಕೋಸ್, ಸಹ್ಯಾದ್ರಿ, ಕ್ಯಾಂಪ್ಕೋಗಳಿಗೆ ಬರುವುದು ಕಮ್ಮಿಯಾಗಿದೆ, ಸ್ವತಃ ಮ್ಯಾಮ್‌ಕೋಸ್‌ನ ನೇರ ಖರೀದಿಗೂ ಆರ್ಡರ್‌ಗಳು ಕಮ್ಮಿ ಇವೆ ಇತ್ಯಾದಿಗಳೆಲ್ಲದರ ಹಿಂದೆ ಒಂದು ವ್ಯವಸ್ಥಿತ ಸಂಚು ಏನಾದರು ನೆಡೆಯುತ್ತಿರಬಹುದಾ? ಏನದು? ಯಾರಿಂದ?
ಅಂತು ಒಟ್ಟಿನಲ್ಲಿ ಅಡಿಕೆಯ ಸಮಸ್ಯೆಗಳು ಆನೆಯಾಕರಕ್ಕೆ ಬೆಳೆದು, ಮಾನ ಹರಾಜಾಗುತ್ತಿದೆ!
ಈ ಸುದ್ದಿಯನ್ನೂ ಓದಿ: Crop Survey Problems: ‘ಬೆಳೆ ಸಮೀಕ್ಷೆ’, ‘ದಿಶಾಂಕ್’ ಆ್ಯಪ್‌ಗಳ ನಕ್ಷೆಯಲ್ಲಾಗಿದೆ ಭೂ ಕುಸಿತ, ಭೂ ಪಲ್ಲಟ!