ಮುಂಬಯಿ: ನವೆಂಬರ್ 26ರಿಂದ ಭಾರತ (India) ಹಾಗೂ ಆಸ್ಟ್ರೇಲಿಯಾ (India) ನಡುವೆ ಆರಂಭವಾಗಲಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ರೋಹಿತ್ (Rohit Sharma) ಸರಣಿಯ ಮೊದಲೆರಡು ಪಂದ್ಯಗಳಿಗೆ ಗೈರಾಗಬಹುದು ಎಂದಿದ್ದಾರೆ.
ರೋಹಿತ್ ಅಲಭ್ಯರಾದರೆ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ (Abhimanyu Eshwaran) ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಸರಣಿಯ ಮೊದಲೆರಡು ಪಂದ್ಯಗಳನ್ನು ಕೆ.ಎಲ್. ರಾಹುಲ್ (KL Rahul), ಜಸ್ಪ್ರೀತ್ ಬುಮ್ರಾ ಅಥವಾ ಶುಭಮನ್ ಗಿಲ್ (Shubman Gill) ಮುನ್ನಡೆಸಬಹುದು ಎಂದು ಹೇಳಲಾಗಿದೆ. ಅನುಭವದ ಆಧಾರದಲ್ಲಿ ನಾಯಕತ್ವ ಕೆ.ಎಲ್ ರಾಹುಲ್ಗೆ ಸಿಗುವ ಸಾಧ್ಯತೆ ಅಧಿಕವಾಗಿದೆ. ಆದರೆ ಅವರು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಬೇಕು. ಕಿವೀಸ್ ವಿರುದ್ಧ ಕಳಪೆ ಪ್ರದರ್ಶನ ತೋರಿದ್ದೇ ಆದಲ್ಲಿ ಅವರನ್ನು ಆಸೀಸ್ ವಿರುದ್ಧದ ಸರಣಿಯಿಂದ ಕೈ ಬಿಡಬಹುದು. ಆಗ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಬಹುದು.
ಭಾರತ 1991-92ರ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಭಾರತ ತಂಡವು ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಕ್ಯಾನ್ಬೆರಾದ ಮನುಕಾ ಓವಲ್ ನಲ್ಲಿ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ ಹಗಲು-ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ವೆಬ್ಸೈಟ್ ನಲ್ಲಿ ತಿಳಿಸಿದೆ. 1991-92ರಲ್ಲಿ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 4-0 ಅಂತರದ ಗೆಲುವು ಸಾಧಿಸಿತ್ತು.
ಇದನ್ನೂ ಓದಿ Cameron Green: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಗ್ರೀನ್ ಹೊರಕ್ಕೆ
5 ಪಂದ್ಯಗಳ ಈ ಟೆಸ್ಟ್ ಸರಣಿ ನವೆಂಬರ್ 22ರಿಂದ ಜನವರಿ(2025) 7ರವರೆಗೆ ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಈ ಪಂದ್ಯಗಳು ನಡೆಯಲಿದೆ. ಅಡಿಲೇಡ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಆಗಿದೆ.
5 ಟೆಸ್ಟ್ ಪಂದ್ಯ ವೇಳಾಪಟ್ಟಿ
ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಪಿಂಕ್ ಬಾಲ್ ಟೆಸ್ಟ್)
ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
ಐದನೇ ಟೆಸ್ಟ್: ಜನವರಿ 3-7, ಸಿಡ್ನಿ