Monday, 25th November 2024

Rohit Sharma: ಅಜರುದ್ದೀನ್ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್‌

ಮುಂಬಯಿ: ಭಾರತ ಮತ್ತು ನ್ಯೂಜಿಲ್ಯಾಂಡ್‌(india vs new zealand) ನಡುವಣ ಮೂರು ಪಂದ್ಯಗಳ ತವರಿನ ಟೆಸ್ಟ್‌ ಸರಣಿ ಆರಂಭಕ್ಜಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಸರಣಿಯ ಮೊದಲ ಪಂದ್ಯ ಅಕ್ಟೋಬರ್‌ 19 ರಿಂದ ಆರಂಭವಾಗಲಿದೆ. ಈಗಾಗಲೇ ನ್ಯೂಜಿಲ್ಯಾಂಡ್‌ ತನ್ನ ತಂಡವನ್ನು ಪ್ರಕಟಿಸಿದೆ. ಭಾರತ ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಸರಣಿಗೆ ಭಾರತ ತಂಡದ ನಾಯರ ರೋಹಿತ್ ಶರ್ಮಾ(Rohit Sharma) ಮುಂಬೈನ ಜಿಯೋ ಪಾರ್ಕ್‌ನಲ್ಲಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ವಿರಾಟ್‌ ಕೊಹ್ಲಿ ಕೂಡ ಲಂಡನ್‌ನಿಂದ ಭಾರತಕ್ಕೆ ಬಂದಿದ್ದಾರೆ. ರೋಹಿತ್ ಅವರು ಅಭ್ಯಾಸ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಹಾಗೆಯೇ ಕೊಹ್ಲಿ ಕೂಡ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಡಿಯೊ ಕೂಡ ವೈರಲ್‌ ಆಗಿದೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಭಾರತ ಇದೀಗ ಕಿವೀಸ್‌ ವಿರುದ್ದವೂ ಇದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಒಂದೊಮ್ಮೆ ಈ ಸರಣಿಯನ್ನು ಭಾರತ ಕ್ಲೀನ್‌ ಸ್ವೀಪ್‌ ಮಾಡಿದರೆ, ನಾಯಕ ರೋಹಿತ್‌ ಅವರು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆಯೊಂದನ್ನು ಮುರಿಯಲಿದ್ದಾರೆ.

ಇದನ್ನೂ ಓದಿ ‌Rohit Sharma: ಕಾರು ನಿಲ್ಲಿಸಿ ಅಭಿಮಾನಿಗೆ ಹ್ಯಾಪಿ ಬರ್ತ್‌ಡೇ ಎಂದ ರೋಹಿತ್‌; ವಿಡಿಯೊ ವೈರಲ್

ಮೂರು ಪಂದ್ಯ ಗೆದ್ದರೆ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ರೋಹಿತ್‌ ಅವರು ಅಜರುದ್ದೀನ್ ದಾಖಲೆ ಹಿಂದಿಕ್ಕಲಿದ್ದಾರೆ. ಅಜರುದ್ದೀನ್ ನಾಯಕನಾಗಿ 47 ಟೆಸ್ಟ್ ಪಂದ್ಯಗಳಿಂದ 14 ಟೆಸ್ಟ್ ಪಂದ್ಯ ಗೆದ್ದಿದ್ದಾರೆ. ರೋಹಿತ್‌ ಸದ್ಯ 18 ಟೆಸ್ಟ್ ಪಂದ್ಯಗಳಲ್ಲಿ 12 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ.

ಭಾರತ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕನ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ತಮ್ಮ ನಾಯಕತ್ವದಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಕೊಹ್ಲಿ ಬಳಿಕ ಮಹೇಂದ್ರ ಸಿಂಗ್ ಧೋನಿ ದ್ವಿತೀಯ ಸ್ಥಾನದಲ್ಲಿದ್ದಾರೆ. ನಾಯಕನಾಗಿ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆದ್ದಿದ್ದಾರೆ. ಸೌರವ್ ಗಂಗೂಲಿ 47 ಟೆಸ್ಟ್ ಪಂದ್ಯಗಳಿಂದ 21 ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದ್ದಾರೆ.