Tuesday, 26th November 2024

ಭಾರತೀಯ ಕೋಸ್ಟ್​ ಗಾರ್ಡ್​ ಹೆಲಿಕಾಪ್ಟರ್​ ಪತನವಾಗಿ ತಿಂಗಳ ಬಳಿಕ ಪೈಲಟ್ ಶವ ಪತ್ತೆ

ALH MK-III

ಗಾಂಧಿನಗರ: ಕಳೆದ ತಿಂಗಳು ಹೆಲಿಕಾಪ್ಟರ್‌ ಪತನಗೊಂಡು ನಾಪತ್ತೆಯಾಗಿದ್ದ ಭಾರತೀಯ ಕೋಸ್ಟ್ ಗಾರ್ಡ್ ಪೈಲಟ್‌ನ ಮೃತದೇಹ ಗುಜರಾತ್ ಕರಾವಳಿಯಲ್ಲಿ ಪತ್ತೆಯಾಗಿದೆ. ಸೆಪ್ಟೆಂಬರ್‌ 2ರಂದು ಅವಘಡ ನಡೆದಿತ್ತು. ಅದಾಗಿ ಸುಮಾರು ಒಂದು ತಿಂಗಳ ಬಳಿಕ ಇದೀಗ ಮೃತದೇಹ ಪತ್ತೆಯಾಗಿದೆ.

ನಾಲ್ವರು ಭಾರತೀಯ ಕೋಸ್ಟ್ ಗಾರ್ಡ್‌ಗಳಿದ್ದ ಎಎಲ್‌ಎಚ್‌ ಎಂಕೆ-III (ALH MK-III) ಹೆಲಿಕಾಪ್ಟರ್ ಅನ್ನು ಸೆಪ್ಟೆಂಬರ್‌ 2ರ ತಡರಾತ್ರಿ ಗುಜರಾತ್‌ನ ಪೋರ್‌ಬಂದರ್‌ನ ಅರಬ್ಬಿ ಸಮುದ್ರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ಪತನವಾಗಿತ್ತು. ಈ ವೇಳೆ ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದರು. ಈ ಪೈಕಿ ಒಬ್ಬರನ್ನು ರಕ್ಷಿಸಲಾಗಿತ್ತು. ಉಳಿದಿಬ್ಬರ ಮೃತದೇಹ ಪತ್ತೆಯಾಗಿತ್ತು. ಆದರೆ ಪೈಲಟ್‌ ರಾಕೇಶ್‌ ಕುಮಾರ್‌ ರಾಣಾ ಅವರ ಸುಳಿವು ಸಿಕ್ಕಿರಲಿಲ್ಲ.

ಸತತ ಪರಿಶೀಲನೆ ಬಳಿಕ ಇದೀಗ ಅಕ್ಟೋಬರ್‌ 10ರಂದು ಪೋರ್‌ ಬಂದರ್‌ನಿಂದ ಸುಮಾರು 55 ಕಿ.ಮೀ. ದೂರದಲ್ಲಿ ಸಮುದ್ರದ ಮಧ್ಯೆ ಮೃತದೇಹ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

“ಐಸಿಜಿ (Coast Guard)ಯು ಭಾರತೀಯ ನೌಕಾಪಡೆ ಮತ್ತು ಇತರ ಸಂಘಟನೆಗಳೊಂದಿಗೆ ಸೇರಿ ರಾಕೇಶ್ ಕುಮಾರ್ ರಾಣಾ ಅವರನ್ನು ಪತ್ತೆಹಚ್ಚಲು ನಿರಂತರ ಶೋಧ ನಡೆಸಿದೆ. ಇದೀಗ ಮೃತದೇಹ ಪತ್ತೆಯಾಗಿದೆ. ಸೇವಾ ಸಂಪ್ರದಾಯಗಳು ಮತ್ತು ಗೌರವದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುವುದು. ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ಭಾರತೀಯ ಕೋಸ್ಟ್ ಗಾರ್ಡ್‌ಗಳಿಗೆ ಗೌರವ ನಮನಗಳುʼʼ ಎಂದು ಭಾರತೀಯ ಕೋಸ್ಟ್ ಗಾರ್ಡ್‌ ಪ್ರಕಟಣೆ ತಿಳಿಸಿದೆ.

ಪೋರ್‌ಬಂದರ್‌ ಕರಾವಳಿಯಿಂದ ಸುಮಾರು 30 ನಾಟಿಕಲ್ ಮೈಲಿ ದೂರದಲ್ಲಿರುವ ಮೋಟಾರು ಟ್ಯಾಂಕರ್ ಹರಿ ಲೀಲಾದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ ಕೋಸ್ಟ್ ಗಾರ್ಡ್‌ನ ಈ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (Advanced Light Helicopter) ಅಪಘಾತಕ್ಕೀಡಾಗಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿ ಪೈಕಿ ಒಬ್ಬರಾದ ಗೌತಮ್ ಕುಮಾರ್ ಅವರನ್ನು ತಕ್ಷಣ ರಕ್ಷಿಸಲಾಗಿದ್ದು, ಮೂವರು ನಾಪತ್ತೆಯಾಗಿದ್ದರು. ಒಂದು ದಿನದ ನಂತರ, ಪೈಲಟ್ ವಿಪಿನ್ ಬಾಬು ಮತ್ತು ಡೈವರ್ ಕರಣ್ ಸಿಂಗ್ ಅವರ ಶವಗಳು ಕಂಡು ಬಂದಿದ್ದವು. ಆದರೆ ರಾಕೇಶ್‌ ಕುಮಾರ್‌ ರಾಣಾ ಪತ್ತೆಯಾಗಿರಲಿಲ್ಲ. ಅವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿತ್ತು.

ಗುಜರಾತ್‌ನಲ್ಲಿ ಇತ್ತೀಚೆಗೆ ಬೀಸಿದ ಭೀಕರ ಚಂಡಮಾರುತದ ಸಮಯದಲ್ಲಿ 67 ಮಂದಿಯನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಈ ಹೆಲಿಕಾಪ್ಟರ್ ಮೂಲಕ ರಕ್ಷಿಸಿತ್ತು. ಕೋಸ್ಟ್ ಗಾರ್ಡ್ ತನ್ನ ಎಎಲ್‌ಎಚ್‌ ಫ್ಲೀಟ್‌ನ ಒಂದು ಬಾರಿ ಸುರಕ್ಷತಾ ತಪಾಸಣೆಗೊಳಪಡಿಸಿತ್ತು. ಇದನ್ನು ಬೆಂಗಳೂರು ಮೂಲದ ವಿಮಾನ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿತ್ತು.

ಈ ಸುದ್ದಿಯನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಕರಾವಳಿ ಭದ್ರತಾ ಪಡೆಯ ಹೆಲಿಕಾಪ್ಟರ್‌ನ ಎಮರ್ಜೆನ್ಸಿ ಲ್ಯಾಂಡಿಂಗ್‌; ಮೂವರು ನಾಪತ್ತೆ