ಸ್ಟಾಕ್ಹೋಮ್ (ಸ್ವೀಡನ್): ಅಣ್ವಸ್ತ್ರ ಮುಕ್ತ ಜಗತ್ತನ್ನು ಸೃಷ್ಟಿಸುವ ಪ್ರಯತ್ನಗಳಿಗಾಗಿ ಜಪಾನಿನ ಸಂಸ್ಥೆ ನಿಹಾನ್ ಹಿಡಂಕ್ಯೊ (Nihon Hidankyo)ಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ (Nobel Peace Prize 2024).
ಈ ಸಂಘಟನೆಯು 1945ರಲ್ಲಿ ಜಪಾನ್ನ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ನಡೆದ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರ ತಳಮಟ್ಟದ ಆಂದೋಲನವಾಗಿದ್ದು, ಇದನ್ನು ಹಿಬಾಕುಶಾ ಎಂದೂ ಕರೆಯಲಾಗುತ್ತದೆ. ಇದು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸಾಧಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎನ್ನುವುದನ್ನು ಸಾಕ್ಷಿ ಮೂಲಕ ಪ್ರದರ್ಶಿಸಲು ಶ್ರಮಿಸುತ್ತಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.
BREAKING NEWS
— The Nobel Prize (@NobelPrize) October 11, 2024
The Norwegian Nobel Committee has decided to award the 2024 #NobelPeacePrize to the Japanese organisation Nihon Hidankyo. This grassroots movement of atomic bomb survivors from Hiroshima and Nagasaki, also known as Hibakusha, is receiving the peace prize for its… pic.twitter.com/YVXwnwVBQO
“ನಿಹಾನ್ ಹಿಡಂಕ್ಯೊ ಪರಮಾಣು ಶಸ್ತ್ರಾಸ್ತ್ರದ ವಿರುದ್ಧ ಸಾವಿರಾರು ಸಾಕ್ಷಿಗಳ ಹೇಳಿಕೆಗಳನ್ನು ಒದಗಿಸಿದೆ. ನಿರ್ಣಯಗಳು ಮತ್ತು ಸಾರ್ವಜನಿಕ ಮನವಿಗಳನ್ನು ನೀಡಿದೆ ಮತ್ತು ಪರಮಾಣು ನಿಶ್ಯಸ್ತ್ರೀಕರಣದ ತುರ್ತು ಅಗತ್ಯವನ್ನು ಜಗತ್ತಿಗೆ ನೆನಪಿಸಲು ವಿಶ್ವಸಂಸ್ಥೆಗೆ ನಿಯೋಗಗಳನ್ನು ಮತ್ತು ವಿವಿಧ ಶಾಂತಿ ಸಮ್ಮೇಳನಗಳನ್ನು ಕಳುಹಿಸಿದೆ” ಎಂದು ಪ್ರಶಸ್ತಿ ಆಯ್ಕೆ ಸಮಿತಿ ವಿವರಿಸಿದೆ. ಈ ಸಂಘಟನೆಯನ್ನು 1956ರಲ್ಲಿ ಸ್ಥಾಪಿಸಲಾಗಿದೆ.
ಕಳೆದ ಬಾರಿಯ ಪ್ರಶಸ್ತಿ
ಇರಾನ್ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ, ಮಾನವ ಹಕ್ಕುಗಳು ಮತ್ತು ಎಲ್ಲರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನರ್ಗೆಸ್ ಮೊಹಮ್ಮದಿ ಅವರಿಗೆ 2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು. ನರ್ಗೆಸ್ ಮೊಹಮ್ಮದಿ ಮಹಿಳಾ ಮತ್ತು ಮಾನವ ಹಕ್ಕುಗಳ ಪರ ವಕೀಲೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಅವರನ್ನು ಇರಾನ್ ಆಡಳಿತ 13 ಬಾರಿ ಅವರನ್ನು ಬಂಧಿಸಿದೆ. 5 ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಅಲ್ಲದೇ ಆಕೆಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ.
ನೊಬೆಲ್ ಶಾಂತಿ ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಶ್ ಕ್ರೌನ್ (ಸುಮಾರು 1 ಮಿಲಿಯನ್ ಡಾಲರ್ ಅಥವಾ ಸುಮಾರು 8.5 ಕೋಟಿ ರೂ.) ಮೊತ್ತವನ್ನು ಒಳಗೊಂಡಿದೆ. ಈ ಬಾರಿಯ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 7ರಿಂದ ಘೋಷಿಸಲಾಗುತ್ತಿದೆ. ಅಕ್ಟೋಬರ್ 14ರಂದು ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಾರಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ ಅವರಿಗೆ ಘೋಷಿಸಲಾಗಿದೆ. ಇನ್ನು ಜಾನ್ ಜೆ. ಹಾಪ್ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್ ಅವರು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಂಬ್ರೋಸ್, ಗ್ಯಾರಿ ರುವ್ಕುನ್ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿದೆ. ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಜಂಪರ್ ಭಾಜನರಾಗಿದ್ದಾರೆ.