Saturday, 26th October 2024

Mohammed Siraj: ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಕ್ರಿಕೆಟರ್‌ ಮೊಹಮ್ಮದ್ ಸಿರಾಜ್

mohammed siraj

ಹೈದರಾಬಾದ್:‌ ಭಾರತ ತಂಡದ ವೇಗದ ಬೌಲರ್, ಆರ್‌ಸಿಬಿ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್ (Mohammed Siraj) ಈಗ ತೆಲಂಗಾಣದಲ್ಲಿ (Telangana) ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್‌ಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ಶುಕ್ರವಾರ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ರಿಪೋರ್ಟ್ ಮಾಡಿಕೊಂಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರಿಗೆ ಪ್ರತಿಷ್ಠಿತ ಗ್ರೂಪ್-1 ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (revanth reddy) ಘೋಷಣೆ ಮಾಡಿದ್ದರು. ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿನ್ನೆ ಸಿರಾಜ್ ಡಿಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿರಾಜ್ ಅಧಿಕಾರ ಸ್ವೀಕರಿಸುವ ಮುನ್ನ ಸಿಎಂ ರೇವಂತ್ ರೆಡ್ಡಿ ಮಾತನಾಡಿ, ಕ್ರೀಡಾಪಟುಗಳಿಗೆ ಬೆಂಬಲ ಕೊಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಭಾರತ ತಂಡವು 2024 ರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಬಳಿಕ ಮೊಹಮ್ಮದ್ ಸಿರಾಜ್ ಅವರಿಗೆ ಡಿಎಸ್‌ಪಿ ಕೆಲಸ ಕೊಡುವುದಾಗಿ ಭರವಸೆ ಕೊಟ್ಟಿತ್ತು. ಇದರ ಹೊರತಾಗಿ ಜುಬಿಲಿ ಹಿಲ್ಸ್‌ನಲ್ಲಿ 1800 ಚದರ ಅಡಿ ಭೂಮಿಯನ್ನು ಕೂಡ ನೀಡಿದೆ.

ಮೊಹಮ್ಮದ್ ಸಿರಾಜ್, ಮಾರ್ಚ್ 13, 1994 ರಂದು ತೆಲಂಗಾಣದ ಹೈದರಾಬಾದ್‌ನಲ್ಲಿ ಜನಿಸಿದರು. ಬಲಗೈ ವೇಗದ ಬೌಲಿಂಗ್‌ಗೆ ಹೆಸರಾಗಿರುವ ಸಿರಾಜ್ ಸದ್ಯ ಭಾರತ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರು. ಅವರ ತಂದೆ ಆಟೋ ರಿಕ್ಷಾ ಚಾಲಕರು. 16ನೇ ವಯಸ್ಸಿನಲ್ಲಿ ಟೆನಿಸ್ ಬಾಲ್‌ನಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ ಅವರು, 19ನೇ ವಯಸ್ಸಿನಲ್ಲಿ ಕ್ಲಬ್ ಕ್ರಿಕೆಟ್‌ ಆಡಲು ಪ್ರಾರಂಭಿಸಿದರು.

ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡುತ್ತಾರೆ. ದೇಶೀಯ ಕ್ರಿಕೆಟ್‌ಲ್ಲಿ ಹೈದರಾಬಾದ್ ತಂಡಕ್ಕಾಗಿ ಆಡುತ್ತಾರೆ.

2023ರ ಏಷ್ಯಾಕಪ್‌ ಗೆಲುವಿನಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 21 ರನ್ ನೀಡಿ 6 ವಿಕೆಟ್ ಪಡೆದುಕೊಂಡಿದ್ದರು. 2024ರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಭಾಗವಾಗಿದ್ದರು.

ಇದನ್ನೂ ಓದಿ: IND vs BAN: ಮೈದಾನದಲ್ಲೇ ಸಿರಾಜ್‌ಗೆ ಕ್ಷಮೆ ಕೇಳಿದ ಪಂತ್‌; ಕಾರಣವೇನು?