Tuesday, 26th November 2024

Shishir Hegde Column: ಪರಿಪೂರ್ಣ ಬದುಕು, ಇಂದಿನ ದೊಡ್ಡ ವಾಣಿಜ್ಯ ಸರಕು

ಶಿಶಿರ ಕಾಲ

ಶಿಶಿರ್‌ ಹೆಗಡೆ

ಅವರು ಎಲ್ಲೆಂದದರಲ್ಲಿ, ಹೋದಲ್ಲ ಕಾಣಿಸುತ್ತಲೇ ಇರುತ್ತಾರೆ. ನೀವು ಅವರನ್ನು ನೋಡದೇ ಇರಲು ಸಾಧ್ಯವೇ ಇಲ್ಲ. ಪೇಟೆಯ ಸಿಗ್ನಲ್ಲಿನ ಪಕ್ಕದ ಕಟ್ಟಡದ ಮೇಲಿನ ಬಿಲ್ ಬೋರ್ಡುಗಳಲ್ಲಿ, ಪತ್ರಿಕೆಯ ಮುಖಪುಟದ ಜಾಹೀರಾತಿನಲ್ಲಿ, ಟಿವಿಯಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಸಲೂನಿನಂಗಡಿಯ ನೇತು ಹಾಕಿದ ಕ್ಯಾಲೆಂಡರಿನಲ್ಲಿ, ಅಲ್ಲಿಯೇ ಹರಡಿಬಿದ್ದ ಪತ್ರಿಕೆಗಳಲ್ಲಿ, ಬಾರು ಪಬ್ಬಿನ, ದವಾಖಾನೆಯ ಗೋಡೆಗಳಲ್ಲಿ ಹೀಗೆ ಎಂದರಲ್ಲಿ ಅವರೇ ಆವರಿಸಿರುತ್ತಾರೆ. ಅವರೆಲ್ಲ ಯಾವತ್ತೂ ಸಂತೋಷದಿಂದ ನಗುತ್ತಿರುತ್ತಾರೆ, ಖುಷಿ ಯಿಂದಿರುತ್ತಾರೆ. ಅವರಿಗೆ ಜೀವನದ ಯಾವ ಸಂಘರ್ಷ, ಕಷ್ಟ ಕಾರ್ಪಣ್ಯಗಳು ಇದ್ದಂತಿಲ್ಲ.

ಜಾಹೀರಾತಿನಲ್ಲಿ ಬರುವ ಅವನ ಹಲ್ಲಿನಲ್ಲಿ ಒಂದೇ ಒಂದು ಚಿಕ್ಕ ಕಲೆಯೂ ಇಲ್ಲ. ಅವರಬ್ಬ ಒಮ್ಮೊಮ್ಮೆ ಕ್ಲಬ್ ಸೋಡಾ, ತಂಪು ಪಾನೀಯ ಕುಡಿಯುವುದಿದೆ. ಗುಟ್ಕಾ ತಿನ್ನುವುದೂ ಇದೆ. ಆದರೂ ಬಿಣಚುಗಲ್ಲು ಪಾಲಿಷ್ ಮಾಡಿದಂತೆ ಫಳಫಳ ಹೊಳೆಯುವ ಹಲ್ಲು ಅವನದು. ಕೆಂಪು ತುಟಿ. ಗಾಳಿ ಬೀಸದೇ ಹಾರಾಡುವ, ತಲೆ ತುಂಬ ಹರಡಿ ಕರಡದಂತಾಗದ ದಟ್ಟ ಕೂದಲು. ಒಳ್ಳೆಯ ಕಟ್ಟುಮಸ್ತು ದೇಹ, ಚಂದದ ಮುಖ, ಒಂಚೂರೂ ಹೊಟ್ಟೆ ಉಬ್ಬಿಲ್ಲ, ಮೂಗು ಸೊಟ್ಟಗಿಲ್ಲ, ನೀಳಕಾಯ, ಸುರಸುಂದರಾಂಗ. ಅವಳದೋ, ಜೀರೋ ಫಿಗರ್, ರೇಷ್ಮೆಯಂಥ ಕೂದಲು. ಅವನದು ಬ್ಯೂಟಿಫುಲ್ ವೈಫು,‌ ಪರ್ಫೆಕ್ಟ್‌ ಲೈಫು!

ಅವಳು ಹರಿದ ಜೀನ್ಸಿನಿಂದ ಹಿಡಿದು ಕಂಚಿ ಸೀರೆಯವರೆಗೆ ಯಾವ ಬಟ್ಟೆಯನ್ನು ಧರಿಸಿದರೂ ಚಂದವೇ
ಚಂದ. ಆಭರಣ ಹೇರಿಕೊಂಡರೂ ಚಂದ, ಒಂದೆಳೆಯ ತಾಳಿಯಷ್ಟೇ ಆದರೂ ಅಂದ. ಅವಳದು ಆಫೀಸಿನಲ್ಲಿ ದೊಡ್ಡ ಹುದ್ದೆ, ಆದರೂ ಮಕ್ಕಳನ್ನು, ಮನೆಯನ್ನು, ಅತ್ತೆ ಮಾವಂದಿರನ್ನು ಸಂಭಾಳಿಸುವುದು ಗೊತ್ತು. ಅವರ‍್ಯಾ ರಿಗೂ ಸಿಟ್ಟೇ ಬರುವುದಿಲ್ಲ, ವೈಮನಸ್ಸು ಬಿಲ್‌ಕುಲ್ ಇಲ್ಲವೇ ಇಲ್ಲ. ಅವರ ಮಕ್ಕಳೋ ಶಿಸ್ತಿನ ಸಿಪಾಯಿಗಳು, ಬುದ್ಧಿವಂತರು; ಗಣಿತ, ವಿಜ್ಞಾನ ಕಂಪ್ಯೂಟರ್ ಬಲ್ಲ ನಯವಂತರು, ಹದವಾದ ತುಂಟತನವಿರುವವರು, ಕ್ಲಾಸಿಗೆ ಫಸ್ಟು, ಆರೋಗ್ಯವಂತರು.

ಒಹ್, ಅಂದಹಾಗೆ ಅವರದು ಚಂದದ ಮನೆ, ಮನೆ ತುಂಬಾ ಅಲಂಕಾರಿಕ ವಸ್ತುಗಳು. ಬೆಂಗಳೂರಿನಂಥ ಮಹಾನಗರದಲ್ಲಿಯೇ ಇದ್ದರೂ ಅವರದು ಹುಲ್ಲು ಹಾಸಿರುವ ಮನೆ. ಅಲ್ಲಿಯೇ ಸ್ವಿಮ್ಮಿಂಗ್ ಪೂಲ್ ಕೂಡ ಇದೆ. ಬಹುಶಃ ಜತೆ ಗೊಂದು ಫಾರಿನ್ ಬ್ರೀಡಿನ ಸಾಕುನಾಯಿ. ಅವರ ಮಕ್ಕಳ ಅಜ್ಜ-ಅಜ್ಜಿ ಕೂಡ ಅಲ್ಲಿಯೇ ಇzರೆ. ಅವರೆಲ್ಲ ಯಾವತ್ತೂ ಮನೆಯಲ್ಲಿಯೇ ಇದ್ದರೂ ಹೊಸ ಬಟ್ಟೆಯನ್ನೇ ನಿತ್ಯ ಧರಿಸುವುದು. ಇಡೀ ದಿನ ಇಸಿ ಹಾಕಿದ ಶುಭ್ರ ಬಟ್ಟೆ ಧರಿಸಿ, ಮೇಕಪ್ ಮಾಡಿಕೊಂಡೇ ಇರುವುದು. ಅವರು ಮಧ್ಯರಾತ್ರಿಯಲ್ಲಿರಲಿ, ಬೆಳಗ್ಗೆ ನಿದ್ರೆಯಾಗಿ ಏಳಲಿ, ಯಾವತ್ತೂ ಫ್ರೆಶ್, ಪರ್ಫೆಕ್ಟ್‌. ಅವರದು ಲಕ್ಷುರಿ ಕಾರು. ಅದರಲ್ಲಿ ಕೂತು ಆಫೀಸಿನಿಂದ ವಾಪಸ್ ಬಂದಾಗ ಕಾಯುತ್ತ ಕುಳಿತು, ಬಂದ ಕೂಡಲೇ ಮುದ್ದಿಸುವ ಹೆಂಡತಿ-ಮಕ್ಕಳು. ಅವರು ಕಾರು ಓಡಿಸುವಾಗ ಟ್ರಾಫಿಕ್ ಜಂಜಾಟವೇ ಇಲ್ಲ. ಅವರು ಹೊಸ ಮಾಡೆಲ್ಲಿನ ಬೈಕ್ ಏರಿದರೂ, ಇಡೀ ರಸ್ತೆ ಖಾಲಿ. ಹೀಗೆ ಅವರದು ಪರಿಪೂರ್ಣ ಜೀವನ. ಬಹುತೇಕ ಜಾಹೀರಾತುಗಳು ತಯಾರಾಗುವುದೇ ಈ ಪರಿಪೂರ್ಣ ಜೀವನದ ಪರಿಕಲ್ಪನೆಯ ಸುತ್ತ. ಆದರೆ ಅಸಲಿ ಬದುಕಿನಲ್ಲಿ ಎಲ್ಲರಿಗೂ ಒಂದಿದ್ದರೆ ಇನ್ನೊಂದಿಲ್ಲದ ಕೊರತೆಯ ಬದುಕು ಇದ್ದದ್ದೇ. ಅದಕ್ಕೆ ಹೊರತಾದವರು ಯಾರೂ ಇಲ್ಲ.

ಸಾವು ಇಲ್ಲದ ಮನೆಯಿಂದ ಬುದ್ಧ ಏನನ್ನೋ ತರಲಿಕ್ಕೆ ಹೇಳಿ ಕಳುಹಿಸಿದಂತೆ; ಹುಡುಕಲು ಹೋದರೆ ನಮ್ಮ ಪ್ರತಿ
ಯೊಬ್ಬರ ಪರಿಕಲ್ಪನೆಯ ‘ಪರಿಪೂರ್ಣ ಬದುಕು’ ಉಳ್ಳವರು ಸಿಗುವುದೇ ಇಲ್ಲ. ಜಾಹೀರಾತುಗಳೇ ಹಾಗೆ. ಸುಂದರ ಬದುಕಿನ ಕಲ್ಪನೆಯಲ್ಲಿ ಅವರ ಸರಕಿಗೊಂದು ಜಾಗ ಕೊಟ್ಟರೆ ಆಗ ಎಲ್ಲವೂ ಪರಿಪೂರ್ಣ. ಅದನ್ನು ಅವರು ನಂಬಿಸಬೇಕು. ನಾವು ನಂಬಿ ಖರೀದಿಸಬೇಕು. ಇಲ್ಲದಿದ್ದರೆ ನಮ್ಮದು ಪರಿಪೂರ್ಣ ಬದುಕುಗಳು ಶಕ್ಯವೇ ಇಲ್ಲ.
ನಾವೆಲ್ಲರೂ ನಿರಂತರ ಇನ್ನೊಬ್ಬರ ಬದುಕಿನ ಜತೆ ಹೋಲಿಸಿಕೊಳ್ಳುತ್ತಲೇ ಇರುತ್ತೇವೆ. ಮತ್ತೊಬ್ಬರ ಬದುಕು, ಕುಟುಂಬ, ದೇಹ, ಸಾಮರ್ಥ್ಯ, ಐಶ್ವರ್ಯ ಇವನ್ನೆಲ್ಲ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂಬೊಂದು ವಿಚಾರವಿದೆ. ಹೋಲಿಕೆ ಮಾಡಿಕೊಂಡರೆ ಮಾತ್ರ ಉದ್ಧಾರವಾಗಲು ಸಾಧ್ಯವೆನ್ನುವವರೂ ಇzರೆ. ಸರಿಯೋ ತಪ್ಪೋ, ಇನ್ನೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳುತ್ತಲೇ ಇರುವುದು ಮನುಷ್ಯಸಹಜ ಗುಣವಂತೂ ಹೌದು. ಹೋಲಿಕೆಯ ಗುಣವು ಆದಿಮಾನವನ ಕಾಲದಲ್ಲಿ ಕುಟುಂಬ ಮತ್ತು ಸಮಾಜವಾಗಿ, ಗುಂಪಿನಲ್ಲಿ ಬದುಕುವಾಗ ಅತ್ಯಂತ ಅಗತ್ಯವಾಗಿತ್ತು.

ಮನುಷ್ಯ ಚಿಕ್ಕ ತಂಡದಲ್ಲಿ ಬದುಕುವಾಗ ಪ್ರತಿಯೊಬ್ಬರ ತಾಕತ್ತಿನ, ವಿಶೇಷತೆಯ ಅರಿವಿರುವುದು ಅವಶ್ಯವಾಗಿತ್ತು. ಅದರಲ್ಲಿಯೇ ಬಲಿಷ್ಠನಾದವನು ಗುಂಪಿನ ಮುಖಂಡ. ಯುದ್ಧ, ರಕ್ಷಣೆ, ಬೇಟೆ, ಆಹಾರ ತಯಾರಿಕೆ ಮೊದಲಾದವು ಗಳಲ್ಲಿ ಯಾರು ಯಾವ ಕೆಲಸ ನಿರ್ವಹಿಸಬೇಕೆಂದು ನಿರ್ಧಾರವಾಗುವುದು ಹೀಗಾಗಿತ್ತು. ಆಗ ಮನುಷ್ಯ ತನ್ನ ಸಾಮರ್ಥ್ಯದ ಜತೆ ಇನ್ನೊಬ್ಬನ ಸಾಮರ್ಥ್ಯದ ಹೋಲಿಕೆ ಮಾಡಿಕೊಂಡು ಅದಕ್ಕನುಗುಣವಾಗಿ ತಾನು ಗುಂಪಿನಲ್ಲಿ ಹೊಂದಿಸಿಕೊಳ್ಳುತ್ತಿದ್ದ. ಸಹಜವಾಗಿ ಅಲ್ಲಿ ಹೆಚ್ಚಿನ ಸಾಮರ್ಥ್ಯದವನಿಗೆ ಒಂದಿಷ್ಟು ವಿಶೇಷ ಅವಕಾಶಗಳಿ ದ್ದವು. ಅವು ಕ್ರಮೇಣ ಶ್ರೇಣೀಕೃತ ಸಮಾಜದ ನಿರ್ಮಾಣಕ್ಕೆ ನಾಂದಿಯಾದದ್ದು. ಬದುಕುಳಿಯುವ ತಂತ್ರ, ಸಾಮಾಜಿಕ ಸ್ಥಾನಮಾನ, ಸ್ವಯಂ ಮೌಲ್ಯಮಾಪನ, ಕಲಿಕೆ ಇವೆಲ್ಲದಕ್ಕೂ ಹೋಲಿಕೆ ಅವಶ್ಯಕ.

ಎಲ್ಲ ಜೀವಿಗಳಲ್ಲೂ ಅಳತೆ ಮಾಡುವ ಒಂದು ಗುಣ ಸಾಮಾನ್ಯ. ಅವು ತಮ್ಮೆದುರಿಗೆ ಸಿಕ್ಕದ್ದನ್ನೆಲ್ಲ ಅಂದಾ ಜಿಸುತ್ತಲೇ ಇರುತ್ತವೆ. ಚಿಕ್ಕ ಅಮೀಬಾದಿಂದ ಹಿಡಿದು ಸಂಕೀರ್ಣವಾದ ಯಾವ ಜೀವಿಯೂ ಇದಕ್ಕೆ ಹೊರತಲ್ಲ. ಆಕ್ರಮಣವೋ, ಶರಣಾಗತಿಯೋ ಎಂದು ಜೀವ ಜಗತ್ತಿನಲ್ಲಿ ನಿರ್ಧಾರವಾಗುವುದೇ ದೇಹದ ಅಳತೆಯಿಂದ, ದೈಹಿಕ ಸಾಮರ್ಥ್ಯದಿಂದ. ಜೀವಜಗತ್ತಿನಲ್ಲಿ ಅಳತೆಯ ವ್ಯವಹಾರ ಬಹಳ ಸರಳ, ಸುಲಭ. ಬೇಟೆಯನ್ನು ಗೆಲ್ಲಬಹುದೋ ಇಲ್ಲವೋ, ಆಹಾರವನ್ನು ಬಾಯೊಳಕ್ಕೆ ಬಿಟ್ಟುಕೊಳ್ಳಬಹುದೋ ಇಲ್ಲವೋ, ಯುದ್ಧವೋ, ಪಲಾಯನವೋ ಇವೆಲ್ಲವೂ ನಿರ್ಧಾರವಾಗುವುದು ಅಳತೆಯ ಮೂಲಕ. ನಮ್ಮಲ್ಲಿಯೂ ನಿರಂತರ ಅಳತೆ ಮಾಡಿಕೊಳ್ಳುವ ಗುಣವಿದೆ. ಆದರೆ ನಮ್ಮ ಅಳತೆಗಳಲ್ಲಿ ಕೆಲವಕ್ಕೆ ಮಾಪಕಗಳಿವೆ, ಕೆಲವಕ್ಕೆ ಇಲ್ಲ.

ಸುಂದರ ಬದುಕು, ಒಳ್ಳೆಯ ಜೀವನ ಇತ್ಯಾದಿಗಳನ್ನು ಅಳತೆ ಮಾಡುವ ಮಾಪಕ, ವಿಧಾನ ನಮ್ಮೊಳಗೆ ಇಲ್ಲ ಅಥವಾ ನಮ್ಮಲ್ಲಿ ಇಂಥ ವಿಷಯಗಳನ್ನು ಅಳೆಯುವ ಸಾಮರ್ಥ್ಯ ಶಿಶಿರಸುಪ್ತಿಯಲ್ಲಿದೆ (eಜಿಚಿಛ್ಟ್ಞಿZಠಿಜಿಟ್ಞ). ಇಂಥ ಅಳತೆಗೆ ಸಿಗದ ವಿಷಯ ಎದುರಿಗೆ ಬಂದಾಗ ಪರ್ಯಾಯವಾಗಿ ಇನ್ನೊಬ್ಬರ ಜತೆ ಹೋಲಿಸಿಕೊಳ್ಳುವ ಗುಣ ಬೆಳೆದುಬಂದಿದೆ. ಇಲ್ಲದಿದ್ದರೆ ನಮ್ಮ ಬದುಕು ಉಳಿದವರಿಗಿಂತ ಎಷ್ಟು ಚಂದ ಎಂದು ಅಳತೆ ಮಾಡುವುದಾದರೂ ಹೇಗೆ?
ನಾಗರಿಕತೆ ಎಂದಾಕ್ಷಣ ಅದು ವಿಜೃಂಭಿತವಾಗಿ ಸಂಭವಿಸಿದ್ದು ಅಖಂಡ ಭಾರತ, ಚೀನಾ ಮತ್ತು ರೋಮ್ ಈ
ಪ್ರಾಂತ್ಯಗಳಲ್ಲಿ. ಇಲ್ಲಿ ಹಿಂದೆ ಈ ಪರಿಪೂರ್ಣ ಜೀವನದ ಬಗ್ಗೆ ಯಾವ ಅಭಿಪ್ರಾಯ ಬೆಳೆದಿತ್ತು ಎಂದು ನೋಡುವುದಾದರೆ ಆಶ್ಚರ್ಯವೆನಿಸುವಷ್ಟು ಸಾಮ್ಯತೆ ಕಾಣಿಸುತ್ತದೆ.

ಭಾರತದ ವೇದ, ಉಪನಿಷತ್ತುಗಳಲ್ಲಿನ ಸಾರದ ಬಗ್ಗೆ ವಿವರಿಸಬೇಕಿಲ್ಲ. ಅಂದಿನ ಕಾಲದ ದಾಖಲೆಗಳಾದ ಯಾವುದೇ ಒಂದು ಗ್ರಂಥವನ್ನು ಕೈಗೆತ್ತಿಕೊಂಡರೂ ಅವೆಲ್ಲ ಹೇಳುವುದು ಧರ್ಮ, ಅರ್ಥ, ಕಾಮ, ಮೋಕ್ಷದ ಬಗ್ಗೆ. ಪರಿಪೂರ್ಣ ಬದುಕೆಂದರೆ ಇವೆಲ್ಲವನ್ನೂ ಸರಿಯಾಗಿ ನಿಭಾಯಿಸುವುದು, ಮೋಕ್ಷಪ್ರಾಪ್ತಿ. ಅದಕ್ಕೆ ಜ್ಞಾನ, ಭಕ್ತಿ ಮೊದಲಾದ ಹಲವು ಮಾರ್ಗಗಳು. ಇದೇ ವಿಚಾರವನ್ನೇ ಅಸಂಖ್ಯ ಋಷಿಮುನಿಗಳಿಂದ ಹಿಡಿದು ಇಂದಿನ ಸಂತರವರೆಗೆ ಹೇಳುವುದು. ಪ್ರಾಚೀನ ಗ್ರೀಸಿನಲ್ಲಿದ್ದ ಪ್ಲೇಟೋ, ಅರಿಸ್ಟಾಟಲ್ ಬದುಕಿನ ಉದ್ದೇಶವೇ ಸಮೃದ್ಧ ಜೀವನವಾಗಿತ್ತು. ಉbZಜಿಞಟ್ಞಜಿZ (ಸಮೃದ್ಧ ಜೀವನ) ಎಂದರೆ ಭೌತಿಕ ಬದುಕನ್ನು ತ್ಯಜಿಸುತ್ತ ಆಧ್ಯಾತ್ಮಿಕದತ್ತ ಹೊರಳಿ ಕೊಳ್ಳುವುದು. ಇತ್ತ ಚೀನಾದ ಕನ್ ಫ್ಯೂಷಿಯಸ್ ನಿಂದ ಹಿಡಿದು ಅಲ್ಲಿನ eನಿಗಳು ಹೇಳಿದ ಪೂರ್ಣ ಬದುಕಿನ
ವ್ಯಾಖ್ಯಾನ ಅದುವೇ ಆಗಿದೆ.

ಈ ಹೋಲಿಕೆ ಮತ್ತು ಪೂರ್ಣ ಬದುಕಿನ ಹಪಾಹಪಿತನ ವಿಚಿತ್ರ ರೂಪ ಪಡೆದಿರುವುದು ಈಗ. ನಾವು ಈಗೊಂದು
ವಿಚಿತ್ರ ಕಾಲಘಟ್ಟದಲ್ಲಿದ್ದೇವೆ. ಈಗ ನಮ್ಮೊಳಗಿನ ಎಲ್ಲ ರಾಗ ಭಾವಗಳೂ ದಿನನಿತ್ಯ ನಾನಾರೀತಿಯಲ್ಲಿ ಉದ್ರೇಕಿಸಲ್ಪ
ಡುತ್ತವೆ, ಶೋಷಿಸಲ್ಪಡುತ್ತವೆ. ರಾಗ-ಭಾವಗಳ ವಾಣಿಜ್ಯೀಕರಣ. ಕೈಗಾರಿಕೀಕರಣ, ಬಂಡವಾಳಶಾಹಿ ಮತ್ತು ಇತ್ತೀಚೆಗೆ ಡಿಜಿಟಲ್ ಮಾಧ್ಯಮದ ಬೆಳವಣಿಗೆಯೊಂದಿಗೆ, ಪರಿಪೂರ್ಣ ಜೀವನ ಎಂಬ ಕಲ್ಪನೆ ಸಂಪತ್ತು, ಖ್ಯಾತಿ, ದೈಹಿಕ ಸೌಂದರ್ಯ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೆ ಕೇಂದ್ರೀಕೃತವಾಗಿದೆ. ಪರಿಪೂರ್ಣ ಬದುಕಿಗೆ ಹೋಲಿಸಿ ಉದ್ರೇಕಿಸುವುದು, ಆ ಮೂಲಕ ವ್ಯಾಪಾರ ಮಾಡುವುದು ಇಂದಿನ ಮಾರ್ಕೆಟಿಂಗ್ ಮಂತ್ರವಾಗಿದೆ. ಇವೆಲ್ಲ ಕೇವಲ ನಿತ್ಯ ಬಳಸುವ ವಸ್ತುಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ.

ಅದರಾಚೆಯ ಬದುಕಿನ ಅನ್ಯ ರಂಗಗಳಲ್ಲಿಯೂ ಇದರ ಕಬಂಧಬಾಹು ಚಾಚಿಕೊಂಡಾಗಿದೆ. ಈಗೊಂದು ಐವತ್ತು ವರ್ಷದಿಂದೀಚೆಗೆ ಈ ಪರಿಪೂರ್ಣ ಬದುಕಿನ ಕಲ್ಪನೆಯ ರೂಪರೇಷೆ ಬದಲಾದದ್ದು. ಈಗೊಂದು ಇನ್ನೂರು ವರ್ಷದ ಹಿಂದೆ ಪರಿಪೂರ್ಣ ಬದುಕಿನ ಕಲ್ಪನೆ ಇಂದಿಗಿಂತ ಪೂರ್ಣ ಬದಲಿತ್ತು. ಈಗ ಆಗಿರುವುದು
ಪಾಶ್ಚಾತ್ಯ ಸಂಸ್ಕೃತಿಯ ದಾಳಿ ಅನ್ನುತ್ತೇವಲ್ಲ ಅದು. ಇದಕ್ಕೆ ‘ಅಮೆರಿಕನ್ ಕನಸು’ ಎಂದು ಹೆಸರು. ಹಾಗಂದರೆ ಅಮೆರಿಕದಲ್ಲಿ ಬದುಕುವುದು ಎಂದರ್ಥವಲ್ಲ. ಬದಲಿಗೆ ಪರಿಪೂರ್ಣ ಜೀವನ ಎಂದರೆ ಮನೆಯನ್ನು ಹೊಂದುವುದು, ಆರ್ಥಿಕ ಗಟ್ಟಿತನ, ಸ್ಥಿರ ಕುಟುಂಬ, ಉದ್ಯೋಗದಲ್ಲಿ ಏಳ್ಗೆ. ಎರಡನೇ ಮಹಾಯುದ್ಧದ ತರುವಾಯ ಜಗತ್ತಿನದ ಬದಲಾವಣೆಗಳಿಂದ, ಆಧುನೀಕರಣದಿಂದ ಟಿವಿ, ಬೈಕು, ಕಾರು, ಆಸ್ತಿ ಇವನ್ನೆಲ್ಲ ಪಡೆಯುವುದಾದರೆ ಅದು ಪರಿಪೂರ್ಣ ಬದುಕು ಎಂದು.

ಇದೆಲ್ಲ ಸೋಷಿಯಲ್ ಮೀಡಿಯಾ ಬಂದಾಗಿನಿಂದ ಇನ್ನಷ್ಟು ಬದಲಾಗಿದೆ. ಸೋಷಿಯಲ್ ಮೀಡಿಯಾ ಹೊತ್ತು
ತರುವ ಜಾಹೀರಾತುಗಳ ಬಗ್ಗೆ ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಇದರಿಂದಾಗಿ ನಾವು ಹೋಲಿಸಿಕೊಳ್ಳುವ, ಸುಂದರ ಬದು
ಕೆಂದರೆ ಇದೆಂದು ಕಲ್ಪಿಸುವ ಗ್ರಹಿಕೆ ಇನ್‌ಸ್ಟಾಗ್ರಾಮ, ಫೇಸ್ ಬುಕ್ ಮೊದಲಾದವುಗಳಿಂದಾಗಿ ಪೂರ್ಣ ಬದಲಾಗಿದೆ.
ಇಂದು ನಾವು ನಮ್ಮ ಬದುಕನ್ನು ಅಲ್ಲಿಯೇ ಅಕ್ಕಪಕ್ಕದಲ್ಲಿರುವವರ ಜತೆ ಹೋಲಿಸಿಕೊಳ್ಳುತ್ತಿಲ್ಲ. ಬದಲಿಗೆ ಸಂಬಂಧವೇ ಇಲ್ಲದವರ ಜತೆಯೆಲ್ಲ ಹೋಲಿಸಿಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ, ಉದಾಹರಣೆಗೆ ನಿಮ್ಮ ಸೋಷಿಯಲ್ ಮೀಡಿಯಾ ಟೈಮ್‌ಲೈನ್‌ನಲ್ಲಿ ಒಂದಿಪ್ಪತ್ತು ಜನರು ಪ್ರವಾಸಕ್ಕೆ ಹೋಗುವ ಫೋಟೋ ಹಾಕಿದರೆಂದುಕೊಳ್ಳಿ. ಆಗ ಸುಳ್ಳೇಸುಳ್ಳು ಎಲ್ಲರೂ ಹೀಗೆಯೇ ಬದುಕುತ್ತಿದ್ದಾರೆ, ಹಾಗೆ ಬದುಕುವುದೇ ಪೂರ್ಣ ಬದುಕು ಎಂದೆಲ್ಲ ಹೋಲಿಕೆ ಬೇಡವೆಂದರೂ ಆರಂಭವಾಗುತ್ತದೆ. ಸೋಷಿಯಲ್ ಮೀಡಿಯಾ ಎಷ್ಟು ಪ್ರಮಾಣದಲ್ಲಿ ಜನರನ್ನು ಜೋಡಿಸು ತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಹೋಲಿಕೆಗೆ ಅವಕಾಶವಾಗಿ ಕಲ್ಪಿಸಿಕೊಟ್ಟು ಅದುವೇ ಒಂದು ಸರಕಾಗಿ ಮಾರ್ಪಾಡಾಗಿದೆ. ಇದು ಬೇರೆ ಬೇರೆ ವಯೋಮಾನದವರನ್ನು ಬೇರೆ ಬೇರೆಯದೇ ರೀತಿಯಲ್ಲಿ ಬಾಧಿಸುತ್ತಿದೆ.
ಹದಿಹರೆಯದ ವಯಸ್ಸೆಂದರೆ ಅದು ಪರಸ್ಪರ ಆಕರ್ಷಣೆ ಹುಟ್ಟುವ ಸಮಯ. ಆ ವಯಸ್ಸಿನಲ್ಲಿ ಪರಿಪೂರ್ಣ ಬದುಕೆಂದರೆ ಸೌಂದರ್ಯ, ಮೈಕಟ್ಟು ಇತ್ಯಾದಿ. ಆ ವಯಸ್ಸಿನವರನ್ನು ಕೇಂದ್ರಿತವಾಗಿಟ್ಟುಕೊಂಡು ವಸ್ತುಗಳನ್ನು ಮಾರಾಟಮಾಡುವ ಪ್ರಭಾವಿಗಳು ಸಾವಿರಾರು. ಈ ಕಾರಣಕ್ಕೆ ಹುಡುಗಿಯರು ಕಿಮ್ ಕರ್ದಾಶಿಯನ್, ಶಿಲ್ಪಾ ಶೆಟ್ಟಿಯಂಥ ದೇಹ, ಗಂಡುಮಕ್ಕಳು ಜಾನ್ ಅಬ್ರಹಾಂನಂಥ ದೇಹ ಪಡೆಯಲು ಬಯಸುತ್ತಿದ್ದಾರೆ.

ಹಾಗಾಗಬೇಕೆಂದರೆ ಈ ಮೇಕಪ್ ಬಳಸಿ, ಈ ಪೌಡರ್ ತಿನ್ನಿ, ಈ ವ್ಯಾಯಾಮ ಮಾಡಿ ಎಂಬ ಜಾಹೀರಾತುಗಳು. ಸೋಷಿಯಲ್ ಮೀಡಿಯಾದ ಪ್ರಭಾವ ಒಂದು ಹಂತ ಮುಂದೆ ಹೋಗಿಯೂ ಆಗಿದೆ. ಹದಿಹರೆಯದವರು ಸುಂದರ ದೇಹಗಳುಳ್ಳ ಮಾಡೆಲ್‌ಗಳನ್ನು, ಪ್ರಭಾವಿಗಳನ್ನು ನೋಡಿ, ಅವರಂತಾಗಲು ದೇಹವನ್ನು ಶಸ್ತ್ರಕ್ರಿಯೆಯ ಮೂಲಕ ಬದಲಿಸಿಕೊಳ್ಳುವ ಹಂತಕ್ಕೆ ತಲುಪಿಯಾಗಿದೆ.

ಬೊಜ್ಜು ಇಳಿಸಿ ಸ್ಲಿಮ್ ಆಗಲು ವ್ಯಾಯಾಮ ಬೇಕಿಲ್ಲ, ಲೈಪೋಸಕ್ಷನ್ ಸಾಕು. ಇವೆಲ್ಲವೂ ಪೂರ್ಣ ಬದುಕಿನ ಹಂಬಲದ ವಿಕಾರಗಳು. ಅಮೆರಿಕ, ಬ್ರೆಜಿಲ, ದಕ್ಷಿಣ ಕೊರಿಯಾ ಇಲ್ಲ ಈಗ ಕೆಲ ವರ್ಷಗಳಿಂದ ಇದೊಂದು ಸಾಮಾಜಿಕ ಸಮಸ್ಯೆ. ಇಲ್ಲಿನ ಹದಿಹರೆಯದವರು ಪ್ಲಾಸ್ಟಿಕ್ ಸರ್ಜರಿಯಿಂದ ಹಿಡಿದು ಹೊಟ್ಟೆ ಸಣ್ಣದಾಗುವ,
ದವಡೆ ಕಿರಿದಾಗುವ ಶಸಕ್ರಿಯೆಗೊಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ಇಂದು ಎತ್ತರ ಕಡಿಮೆಯಾದರೆ ಕಾಲಿನ ಮೂಳೆ
ಕತ್ತರಿಸಿ, ಅದಕ್ಕೇನೋ ಜೋಡಿಸಿ ನಾಲ್ಕೈದು ಇಂಚು ಎತ್ತರ ಹೆಚ್ಚಿಸುವ ಶಸಕ್ರಿಯೆಗಳು ಜನಪ್ರಿಯತೆ ಪಡೆಯುತ್ತಿವೆ. ಕಾಸ್ಮೆಟಿಕ್ ಸರ್ಜರಿಯ ಜನಪ್ರಿಯತೆ ಎಂದರೆ ಸುಮ್ಮನೆ ಅ ಒಂದಿಬ್ಬರು ಮಾಡಿಸಿಕೊಳ್ಳುವವರು ಹೆಚ್ಚಿದ್ದಾರೆಂದಲ್ಲ.

ಅಮೆರಿಕ ದೇಶವೊಂದರ ಪ್ರತಿ ವರ್ಷ ಸುಮಾರು ಐವತ್ತು ಲಕ್ಷ ಮಂದಿ ಅವಶ್ಯವಲ್ಲದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಪೃಷ್ಠ ಭಾಗದ ಮಾಂಸಖಂಡವನ್ನು ದುಂಡಗಾಗಿಸುವ, ಸ್ತನ ಗಾತ್ರ ಹೆಚ್ಚಿಸುವ, ತುಟಿ, ಮೂಗು, ಕಣ್ಣು, ಹೀಗೆ ದೇಹದ ಪ್ರತಿಯೊಂದು ಭಾಗದ ಹೊರರೂಪವನ್ನು ಸೌಂದರ್ಯವೆಂಬ ಹೆಸರಿನಲ್ಲಿ ವಿರೂಪಗೊಳಿಸುವ ವ್ಯವಹಾರ ಇಂದು ಶತಕೋಟಿ ಡಾಲರ್ ಮೀರಿದೆ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವವರ ಸಂಖ್ಯೆ ಪ್ರತಿ ವರ್ಷ ಜಗತ್ತಿನಲ್ಲಿ ಶೇ.೧೧ರಷ್ಟು ಹೆಚ್ಚುತ್ತಿದೆ. ಎಲ್ಲವೂ ಪೂರ್ಣತೆಯ ಹುಚ್ಚು ಹಂಬಲಗಳು. ಇವು ಐವಿಎ- ಕೇಂದ್ರಗಳಂತೆ ಬೆಂಗಳೂರಿನ ಬೀದಿಬೀದಿಗಳಲ್ಲಿ ತುಂಬಿಕೊಳ್ಳುವ ಸಮಯ ದೂರವುಳಿದಿಲ್ಲ. ಅವಶ್ಯಕತೆಗಾಗುವ ಸೌಲಭ್ಯವೇ ವ್ಯಾಪಾರವಲ್ಲವೇ?

ಕೆಲ ದಿನಗಳ ಹಿಂದೆ ಭಾರತದಿಂದ ಬಂದು ಅಮೆರಿಕದಲ್ಲಿ ಓದುತ್ತಿದ್ದ ಪರಿಚಯದ ಹುಡುಗಿ ಮನೆಗೆ ಬಂದಿದ್ದಳು. ಆ
ಸಮಯದಲ್ಲಿ ಯಾವುದೇ ಭಾರತೀಯ ಟಿವಿ ಚಾನಲ್ ಹಚ್ಚಿದರೂ ಅಂಬಾನಿ ಮಗನ ಮದುವೆಯದೇ ಸುದ್ದಿ.
ನಾವೆ ಅದನ್ನು ನೋಡುತ್ತ, ಅಲ್ಲಿನ ದುಂದುವೆಚ್ಚ ಮೊದಲಾದವನ್ನು ಚರ್ಚಿಸುತ್ತ ಕೂತಿzವು. ಕೆಲ ಸಮಯದ ನಂತರ ಅವಳಲ್ಲಿ ಅಭಿಪ್ರಾಯ ಕೇಳಿದಾಗ “ಮದುವೆ, ಲೈಫು ಎಂದರೆ ಹೀಗಿರಬೇಕು” ಎಂದಳು. ಅವಳು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಐಷಾರಾಮಿ ಬದುಕು, ಮದುವೆ ಇತ್ಯಾದಿ ಬಯಸುವುದು ತಪ್ಪೇನಲ್ಲವಲ್ಲ.

ಅಲ್ಲಿಯೇ ಇದ್ದ ಗೆಳೆಯ “ನೀನು ಅಂಬಾನಿ ಮಗನನ್ನು ಮದುವೆಯಾದರೆ ಏನು ಮಾಡುತ್ತೀಯಾ?” ಎಂದು ಪ್ರಶ್ನಿಸಿದ. ಅದಕ್ಕವಳು “ಏನು ಬೇಕಾದರೂ ಮಾಡಬಹುದು ಎಂಬುದೇ ಇಲ್ಲಿನ ಸಾಧ್ಯತೆ” ಎಂದಳು. “ಸರಿ, ನೀನೇ ಈಗ ಅಂಬಾನಿಯ ಸೊಸೆ ಎಂದು ಇಟ್ಟುಕೊಳ್ಳೋಣ, ಹಾಗಾದಲ್ಲಿ ಏನು ಮಾಡುತ್ತೀಯಾ?” ಎಂದು ಮರುಪ್ರಶ್ನೆ ಹಾಕಿದ. “ದುಬಾರಿ ಬಟ್ಟೆ, ಕಾರು, ವಿಮಾನ ಎಲ್ಲವನ್ನೂ ಖರೀದಿಸುತ್ತೇನೆ. ಬೇಕೆಂದಲ್ಲಿ ಓಡಾಡುತ್ತೇನೆ. ಬೇಕಾದ ವಸ್ತು ಖರೀದಿಸುತ್ತೇನೆ. ಐಷಾರಾಮಿ ಬಂಗಲೆಯಲ್ಲಿ ಉಳಿಯುತ್ತೇನೆ”- ಹೀಗೆ ಉದ್ದದ ಲಿಸ್ಟು ಕೊಟ್ಟಳು. ಸ್ನೇಹಿತ ಅವಳ ಎಲ್ಲ ಉತ್ತರಗಳಿಗೆ “ಆಮೇಲೆ, ಆಮೇಲೆ” ಎಂದು ಕೇಳುತ್ತಲೇ ಹೋದ.

ಸ್ವಲ್ಪ ಹೊತ್ತಿನಲ್ಲಿ ಅವಳ ಪಟ್ಟಿ ಮುಗಿಯಿತು. ಸ್ನೇಹಿತ ಅವಳಲ್ಲಿ “ಹಾಗಾದರೆ ಸಾಧ್ಯವಾದಲ್ಲಿ, ಅವಕಾಶ ಕೂಡಿಬಂದಲ್ಲಿ, ಅನಂತ್ ಅಂಬಾನಿಯನ್ನೇ ಮದುವೆಯಾಗುತ್ತೀಯಾ. ಪರ್ಫೆಕ್ಟ್ ಲೈಫು ಎಂದರೆ ಅದೇನಾ?” ಎಂದು ಕೇಳಿದ. ಒಂದು ಕ್ಷಣ ಯೋಚಿಸಿದಳು, ಉತ್ತರಿಸಲಿಲ್ಲ. ಪರಿಪೂರ್ಣ ಬದುಕೆನ್ನುವುದು ಯಾವತ್ತೂ ಕತ್ತೆಯ ಬೆನ್ನಿಗೆ ಕೋಲನ್ನು, ಅದಕ್ಕೆ ಹುಲ್ಲನ್ನು ಕಟ್ಟಿ ಬಿಟ್ಟಂತೆ. ಅದೆಂದೂ ಬಾಯಿಗೆ ಎಟುಕುವುದೇ ಇಲ್ಲ. ಅದರ ಹಿಂದೆ ಓಡುತ್ತಲೇ
ಇರುವಂತೆ ಮಾಡುವುದೇ ಅದರ ಕೆಲಸ. ಅದು ಕತ್ತೆಯ ಅರಿವಿಗೆ ಬರುವುದೇ ಇಲ್ಲ. ಪರಿಪೂರ್ಣ ಬದುಕಿನ ಅನವರತ
ಬಯಕೆಯೇ ಇಂದಿನ ಬಹುತೇಕ ಕಂಪನಿಗಳ, ವ್ಯವಹಾರಗಳ ವ್ಯಾಪಾರಿ ಜೀವಾಳ. ಅದುವೇ ಸರಕು- commodity. ಈ ಪೂರ್ಣ ಬದುಕಿನೆಡೆಗಿನ ಗೊಂದಲಗಳನ್ನೇ ವ್ಯಾಪಾರೀಕರಿಸಿ ಆ ಮೂಲಕ ಲಾಭಮಾಡಿ ಕೊಳ್ಳುವ, ಹಣ ಸಂಪಾದಿ ಸುವ ವ್ಯವಹಾರಗಳು ನಮ್ಮನ್ನಿಂದು ಸಂಪೂರ್ಣ ಅವರಿಸಿ ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಪ್ರಪಂಚವನ್ನು ಗ್ರಹಿಸಿದಾಗ ಅದು.

ಇದನ್ನೂ ಓದಿ: Shishir Hegde Column: ಮನೆ ಮಂತ್ರಾಲಯವಾದರಷ್ಟೇ ಮನ ದೇವಾಲಯವಾದೀತು