ಒಡಲಾಳ
ಎಸ್.ಶ್ರೀನಿವಾಸ
ಪ್ರಸ್ತುತ ಭಾರತದಲ್ಲಿ 30 ಕೋಟಿ ಹಸುಗಳಿವೆ ಎಂಬುದೊಂದು ಅಂದಾಜಿದೆ. ಆದರೆ, ಹಾಲು ಕೊಡುವು ದನ್ನು ನಿಲ್ಲಿಸಿದ ಹಸುಗಳನ್ನು ಸಾಕಲು ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಅಂದರೆ, ಅವನ್ನು ರೈತರಿಂದ ಖರೀದಿಸಲು ಹಣ, ಅವಕ್ಕೆ ಬೇಕಾದ ನೆಲೆ, ಮೇವು/ಹುಲ್ಲು, ಕುಡಿಯಲು ನೀರು ಇತ್ಯಾದಿಗಳ ವ್ಯವಸ್ಥೆ ನಮ್ಮಲ್ಲಿದೆಯೇ?
ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಪುರಿಯ ಗೋವರ್ಧನ ಪೀಠದ ಶಂಕರಾಚಾ ರ್ಯರು 1966ರಲ್ಲಿ ಆಮರಣಾಂತ ಉಪವಾಸಕ್ಕೆ ಮುಂದಾದರು. ಈ ನಡೆಯನ್ನು ತೀವ್ರವಾಗಿ ಟೀಕಿಸಿದ ಸಾಹಿತಿ ಡಿ.ವಿ.ಗುಂಡಪ್ಪನವರು (ಡಿವಿಜಿ), “ಸ್ವಾಮೀಜಿಗಳು ಲೌಕಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು; ಸಾಧು-ಸಂತರು ಹೀಗೆ ಸರಕಾರದ ಮೇಲೆ ಒತ್ತಡ ಹಾಕುವ ಬದಲು, ‘ಹಸುಗಳನ್ನು ಕಟುಕರಿಗೆ ಮಾರಬೇಡಿ’ ಎಂದು ತಮ್ಮ ಅನುಯಾಯಿಗಳಿಗೆ ಉಪದೇಶಿಸಲಿ” ಎಂದರು.
ವ್ಯಾವಹಾರಿಕ ದೃಷ್ಟಿಯಲ್ಲಿ ಗೋಹತ್ಯೆ ನಿಷೇಧಿಸಲು ಅಸಾಧ್ಯವೆಂಬುದು ಡಿವಿಜಿಯವರಿಗೆ ಗೊತ್ತಿತ್ತು. ಏಕೆಂದರೆ,
ಗೋಹತ್ಯೆ ನಿಷೇಧಿಸುವ ವಿಚಾರದಲ್ಲಿ ಅಂದಿನ ಮೈಸೂರು ಸರಕಾರವು 1926ರಲ್ಲಿ ಒಂದು ಸಮಿತಿಯನ್ನು ರಚಿಸಿ ದಾಗ ಅದರ ಸದಸ್ಯರಾಗಿ ಅವರು ಕೆಲಸ ಮಾಡಿದ್ದರು. ಕೆ.ಪಿ.ಪುಟ್ಟಣ್ಣ ಚೆಟ್ಟಿಯವರ ನೇತೃತ್ವದ ಈ ಸಮಿತಿಯಲ್ಲಿ ಡಿವಿಜಿಯವರು ಸೇರಿದಂತೆ 6 ಮಂದಿ ಹಿಂದೂ, ಇಬ್ಬರು ಮುಸಲ್ಮಾನರು ಹಾಗೂ ಇಬ್ಬರು ಕ್ರೈಸ್ತ ಸದಸ್ಯರಿದ್ದರು. ಸಮಿತಿಯು ಚರ್ಚಾವಿಷಯದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸರಕಾರಕ್ಕೆ ಮುಂದೆ ಉಲ್ಲೇಖಿಸಿರುವ ಒಂದಷ್ಟು ಸಲಹೆಗಳನ್ನು ನೀಡಿತು- ಹಸುಗಳನ್ನು ಬಲಿಕೊಡುವ ಅಥವಾ ವಧೆ ಮಾಡುವ ಮುನ್ನ ಅವುಗಳನ್ನು ಮೆರವಣಿಗೆ ಯಲ್ಲಿ ಕೊಂಡು ಹೋಗಬಾರದು ಹಾಗೂ ಮಾರಾಟಕ್ಕಿಟ್ಟಿರುವ ಅವುಗಳ ಮಾಂಸವನ್ನು ಬಹಿರಂಗವಾಗಿ ಪ್ರದರ್ಶಿಸಬಾರದು, ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತದೆ.
ಸರಕಾರದ ಧನಸಹಾಯದೊಂದಿಗೆ ಗೋಶಾಲೆಯನ್ನು ಸ್ಥಾಪಿಸಬೇಕು; ಗೋವುಗಳಿಗೆ ಮೇವು ಮತ್ತು ಗೋಮಾ
ಳವನ್ನು ಸರಕಾರವು ಒದಗಿಸಬೇಕು. ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ. ಅಲ್ಲದೆ ಹಾಲು ಕೊಡಲು ನಿಲ್ಲಿಸಿದ ಹಸುಗಳನ್ನು ಸಾಕಲು ರೈತರಿಗೆ ಹೊರೆಯಾಗುತ್ತದೆ. ಆದ್ದರಿಂದ, ಹಾಲುಕೊಡುವ ಹಸುಗಳು, ಗರ್ಭಧರಿಸಿದ ಹಸುಗಳು, ಹಾಲು ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಹಸುಗಳ ಹತ್ಯೆ ಮಾಡದಂತೆ ಕಾನೂನು ಮಾಡಬೇಕು.
ಗೋವುಗಳ ಸಂತಾನಾಭಿವೃದ್ಧಿ ಮಾಡಿಸುವಾಗ ಅದರ ಸಂಖ್ಯೆಯನ್ನು, ರಾಜ್ಯದಲ್ಲಿರುವ ಸಂಪನ್ಮೂಲದ ಮಿತಿಯನ್ನು ಅರಿತು ಮಾಡಬೇಕು (Public Affairs- vol xi-1, January 1967, Gokhale Institute of Public Affairs, Bangalore). ಸ್ವಲ್ಪ ಆಲೋಚಿಸಿ, 1926ರಲ್ಲಿ ಮೈಸೂರು ರಾಜ್ಯದಲ್ಲಿ ಹೈನುಗಾರಿಕೆ ಉದ್ಯಮವು ಅಷ್ಟೇನೂ ಬೆಳೆದಿರಲಿಲ್ಲ ಹಾಗೂ ಹಸುಗಳ ಸಂತಾನಾಭಿವೃದ್ಧಿ ಕಾರ್ಯವು ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿತ್ತು. ಸಹಜ ವಾಗಿಯೇ, ವರ್ತಮಾನ ಕಾಲಕ್ಕೆ ಹೋಲಿಸಿದರೆ ಹಸುಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿತ್ತು.
ಹೀಗಿದ್ದಾಗ್ಯೂ, ‘ಹಸುಗಳ ಸಂತಾನಾಭಿವೃದ್ಧಿ ಮಾಡುವಾಗ ಅದರ ಸಂಖ್ಯೆಯನ್ನು, ರಾಜ್ಯದಲ್ಲಿರುವ ಸಂಪನ್ಮೂಲದ ಮಿತಿ ಯನ್ನು ಅರಿತು ಮಾಡಬೇಕು’ ಎಂದು ಸಮಿತಿ ಸಲಹೆ ನೀಡಿತ್ತು. ಪ್ರಸ್ತುತ ಭಾರತದಲ್ಲಿ 30 ಕೋಟಿ ಹಸುಗಳಿವೆ
ಎಂದು ಅಂದಾಜಿಸಲಾಗಿದೆ. ಆದರೆ, ಹಾಲು ಕೊಡುವುದನ್ನು ನಿಲ್ಲಿಸಿದ ಹಸುಗಳನ್ನು ಸಾಕಲು ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಇವೆಯೇ? ಅಂದರೆ, ಹಾಲು ಕೊಡದ ಹಸುಗಳನ್ನು ರೈತರಿಂದ ಖರೀದಿಸಲು ಹಣ, ಆ ಹಸುಗಳು ವಾಸಿಸುವ ಜಾಗ, ಅವಕ್ಕೆ ಬೇಕಾದ ಮೇವು/ಹುಲ್ಲು, ಕುಡಿಯಲು ನೀರು ಇತ್ಯಾದಿಗಳ ವ್ಯವಸ್ಥೆ ನಮ್ಮಲ್ಲಿದೆಯೇ?
ಗೋಹತ್ಯೆ ನಿಷೇಽಸಬೇಕು ಎಂಬ ಅಭಿಪ್ರಾಯ ಇರುವವರು ಕೆಲ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಒಂದು ಗೋವನ್ನು ಹತ್ಯೆಮಾಡುವುದು ಎಷ್ಟು ಪಾಪವೋ, ಅದರ ಹಾಲನ್ನು ಕುಡಿಯುವದೂ ಅಷ್ಟೇ ದೊಡ್ಡ ಪಾಪ ವಾಗಿರುತ್ತದೆ. ಏಕೆಂದರೆ ಗೋವು ಹಾಲನ್ನು ಉತ್ಪಾದಿಸುವುದು ತನ್ನ ಕರುವಿಗಾಗಿಯೇ ವಿನಾ, ಮನುಷ್ಯರಿಗಲ್ಲ. ಆದರೆ ನಾವು ಕರುವನ್ನು ಅದರ ತಾಯಿಯಿಂದ ಬೇರ್ಪಡಿಸಿ, ಕರು ಕುಡಿಯಬೇಕಾದ ಹಾಲನ್ನು ನಾವು ಹಿಂಡಿಕೊಂಡು ಬಳಸುತ್ತೇವೆ.
ಸ್ವಲ್ಪ ಯೋಚಿಸಿ, ಶಿಶುವು ತನ್ನ ತಾಯಿಯ ಹಾಲನ್ನು ಕುಡಿಯಲಾಗದಂತೆ ಅದನ್ನು ವಂಚಿಸಿ, ಆ ಹಾಲನ್ನು ನಾವು ಬಳಸಿಕೊಂಡರೆ, ಆ ತಾಯಿ ಮತ್ತು ಮಗು ಅನುಭವಿಸುವ ವೇದನೆ ಎಷ್ಟಿರಬಹುದು? ಇತ್ತೀಚೆಗೆ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಭಾರತದ ವಿವಿಧೆಡೆ ಮಾರಾಟವಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ತಿರುಪತಿಯ ಲಡ್ಡು ತಯಾರಿಕೆಯಲ್ಲಿ ನಂದಿನಿ ತುಪ್ಪವನ್ನು ಬಳಸಲಾಗುತ್ತಿರುವುದರ ಕುರಿತು ಕನ್ನಡಿಗರು ಸಂಭ್ರಮಿಸುತ್ತಿದ್ದಾರೆ; ಸಾಲದೆಂಬಂತೆ ಕೆಚ್ಚಲಿನಲ್ಲಿ ಅಷ್ಟೋ ಇಷ್ಟೋ ಉಳಿಸುತ್ತಿದ್ದ ಹಾಲನ್ನು ನಾವು ಕುಡಿಯುತ್ತಿದ್ದೇವೆ. ಹಾಲಿನ ಬೇಡಿಕೆ ಹೆಚ್ಚಾದುದರಿಂದ ಆ ಹಾಲಿಗೂ ಕುಂದುಬರಬಹುದೆಂದು ಕರ್ನಾಟಕದ ಕರುಗಳೂ ಮತ್ತು ಹೆಚ್ಚು ಹಾಲು ಉತ್ಪಾದಿ ಸಲು ಇನ್ನೂ ಎಷ್ಟು ಇಂಜೆಕ್ಷನ್ ಗಳನ್ನು ತಾವು ಚುಚ್ಚಿಸಿಕೊಳ್ಳಬೇಕಾಗುತ್ತದೆಯೋ ಎಂದು ಹಸುಗಳೂ ಆತಂಕದಲ್ಲಿ ಮುಳುಗಿರಬಹುದೇ? ಗೋವನ್ನು ‘ಮಾತೆ’ ಎನ್ನುವವರ ಪೈಕಿ ಎಷ್ಟು ಜನರು, ಕಸದ ತೊಟ್ಟಿಯಲ್ಲಿ ಆಯ್ದುಕೊಂಡು ತಿನ್ನುವ ಹಸುಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಹಾರ ನೀಡುತ್ತಾರೆ? ನಮ್ಮ ಹೆತ್ತತಾಯಿಯೇ ಹಾಗೆ ಕಸದ ತೊಟ್ಟಿಯಲ್ಲಿ ಆಹಾರ ಹೆಕ್ಕುತ್ತಿದ್ದಿದ್ದರೆ ನಮ್ಮ ಪ್ರತಿಕ್ರಿಯೆ ಏನಾಗಿರುತ್ತಿತ್ತು? ನವಜಾತ ಶಿಶುವನ್ನು ಸೋಂಕು ಗಳಿಂದ ರಕ್ಷಿಸಲು ಅದು ಹುಟ್ಟಿದ ಮೊದಲ ಗಂಟೆಯೊಳಗಾಗಿ ಅದರ ತಾಯಿಯು ಎದೆಹಾಲನ್ನು ಉಣಿಸುತ್ತಾಳೆ.
ಆದರೆ ನಾವು, ಆಗ ತಾನೆ ಜನಿಸಿದ ಕರುವನ್ನು ಅದರ ತಾಯಿಯಿಂದ ಬೇರ್ಪಡಿಸಿ, ಅದಕ್ಕೆ ತಾಯಿ ಹಾಲನ್ನು ವಂಚಿಸುತ್ತೇವೆ. ಆ ಹಾಲನ್ನು (ಗಿಣ್ಣು) ನಾವು ಬಳಸುತ್ತೇವೆ. ಇದು ಪಾಪವಲ್ಲವೇ? ಗೋವು ನಮ್ಮ ತಾಯಿಯಾದರೆ ಅದರ ಕರುವು ನಮಗೆ ತಮ್ಮ/ತಂಗಿಯ ಸಮಾನವಲ್ಲವೇ? ಗೋಹತ್ಯೆ ನಿಷೇಧಿಸಬೇಕು ಎನ್ನುವವರಲ್ಲಿ ಸಸ್ಯಾಹಾರಿ ಗಳು ಹಾಗೂ ಮಾಂಸಾಹಾರಿಗಳು ಇದ್ದಾರೆ. ಒಂದು ವೇಳೆ ಕುರಿ, ಕೋಳಿ ಹಾಗೂ ಮೀನುಗಳನ್ನು ಆಹಾರವಾಗಿ ಸೇವಿಸ ಬಾರದು ಎಂದು ಜೈನರು ಬೇಡಿಕೆಯಿಟ್ಟರೆ, ಗೋಹತ್ಯೆ ನಿಷೇಧಿಸಬೇಕು ಎನ್ನುವ ಮಾಂಸಾಹಾರಿಗಳು ಅದನ್ನು ಒಪ್ಪುತ್ತಾರಾ? ಗೋಹತ್ಯೆ ನಿಷೇಧಿಸಬೇಕು ಎನ್ನುವವರು ಮೊಸರು, ಬೆಣ್ಣೆ, ತುಪ್ಪ, ಪನೀರ್ ಮುಂತಾದ ಹಾಲಿನ ಉತ್ಪನ್ನಗಳನ್ನು ಮೊದಲು ಸಂಪೂರ್ಣವಾಗಿ ತ್ಯಜಿಸಬೇಕು.
ಹಾಗೆಯೇ ನಮ್ಮ ದೇವಾಲಯಗಳಲ್ಲಿ ದೇವರಿಗೆ ಹಾಲಿನ ಅಭಿಷೇಕ, ಬೆಣ್ಣೆ ಅಲಂಕಾರ ಮತ್ತು ಪ್ರಸಾದದ ತಯಾರಿಕೆಯಲ್ಲಿ ತುಪ್ಪದ ಬಳಕೆ ಇತ್ಯಾದಿಯನ್ನು ನಿಲ್ಲಿಸಬೇಕು. ಆಗ ಹಾಲಿನ ಬೇಡಿಕೆಯು ಸಹಜವಾಗಿಯೇ ತಗ್ಗುತ್ತದೆ ಮತ್ತು ಡೈರಿಗಳಲ್ಲಿ ಇದರ ಉತ್ಪಾದನೆಯು ಇಳಿಮುಖವಾಗುತ್ತದೆ. ಯಾವಾಗ ಹಾಲಿಗೆ ಬೇಡಿಕೆ ಕಡಿಮೆ ಯಾಗುವುದೋ ಆಗ ಹಸು ಸಾಕುವುದು ಲಾಭದಾಯಕವಾಗಿರುವುದಿಲ್ಲ; ಆಗ ಸಹಜವಾಗಿಯೇ ಹೈನುಗಾರರು ಹಸುವಿನ ಸಾಕಣೆಯನ್ನು ಮತ್ತು ಹಸುಗಳ ಸಂತಾನೋತ್ಪತ್ತಿ ಮಾಡಿಸುವುದನ್ನು ನಿಲ್ಲಿಸುವರು. ಈ ಕ್ರಮವು ಹಸುಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಹಾಗೂ ಅವನ್ನು ನೋಡಿಕೊಳ್ಳಲು ಆರ್ಥಿಕವಾಗಿ ಹೊರೆಯಾ ಗುವುದಿಲ್ಲ. ಅಲ್ಲದೆ ರೈತರು ಹಸುವನ್ನು ಮಾರಾಟ ಮಾಡಲು ಮುಂದೆ ಬಂದಾಗ, ‘ಕಟುಕರು ಕೊಡುವ ಬೆಲೆಗಿಂತ ದುಪ್ಪಟ್ಟು ಬೆಲೆಗೆ ನಾವು ಖರೀದಿಸುವೆವು’ ಎಂದು ಗೋರಕ್ಷಕರು ಹೇಳಿದರೆ, ಮುಂದೆ ಎಲ್ಲ ರೈತರೂ ಇವರಿಗೆ ಹಸುವನ್ನು ಮಾರಾಟ ಮಾಡುವರು. ಹಸುಗಳು ಕಸಾಯಿಖಾನೆಗೆ ಹೋಗುವುದನ್ನು ಇದರಿಂದ ತಪ್ಪಿಸಬಹುದು. ಆದರೆ ಇದನ್ನು ಕಾರ್ಯರೂಪಕ್ಕೆ ತರುವುದು ಸಾಧ್ಯವೇ ಎಂಬುದು ಪ್ರಶ್ನೆ.
ಕೆಲವೊಂದು ವಿಷಯಗಳನ್ನು ಭಾವನಾತ್ಮಕವಾಗಿ ಯೋಚಿಸದೆ ವಿವೇಚನೆಯಿಂದ ಪರಿಗಣಿಸಬೇಕು. ಆನೆ,
ಜಿಂಕೆಯಂಥ ಕೆಲ ಪ್ರಾಣಿಗಳು ಕೇವಲ ಹುಲ್ಲು, ಎಲೆಗಳನ್ನು ತಿನ್ನುತ್ತವೆ. ಸಿಂಹ, ಮೊಸಳೆ ಮುಂತಾದ
ಪ್ರಾಣಿಗಳು ಕೇವಲ ಮಾಂಸವನ್ನು ಭಕ್ಷಿಸುತ್ತವೆ. ಕೆಲ ಮಾನವರು ದವಸ-ಧಾನ್ಯ, ಹಣ್ಣು-ತರಕಾರಿಗಳ ಜತೆಗೆ
ಮಾಂಸವನ್ನೂ ತಿನ್ನುತ್ತಾರೆ. ಏನನ್ನು ತಿನ್ನಬೇಕು ಎಂಬುದನ್ನು ನಿರ್ಧರಿಸುವುದು ಸೃಷ್ಟಿ (ಭಗವಂತ); ಈ
ನಿರ್ಧಾರದ ಹಿಂದಿನ ಕಾರಣ ತಿಳಿಯಲು ಅಸಾಧ್ಯ. ಒಬ್ಬ ಯುವಚಿಂತಕ ಬಯಲಿನಲ್ಲಿ ಮರದ ಕೆಳಗೆ
ಕುಳಿತು, ಎದುರಿಗೆ ಹಸುವು ಹುಲ್ಲು ಮೇಯುತ್ತಿರುವುದನ್ನು, ಬಾನಲ್ಲಿ ಹಕ್ಕಿಗಳು ಹಾರುತ್ತಿರುವುದನ್ನು, ಹೀಗೆ ಎಲ್ಲವನ್ನೂ ವೀಕ್ಷಿಸುತ್ತಿದ್ದ.
ಆಗ ಅವನ ಮನಸ್ಸಿನಲ್ಲಿ, “ಛೇ, ದೇವರು ಯಾವ ಪ್ರಯೋಜನಕ್ಕೂ ಬಾರದ ಹಕ್ಕಿಗಳಿಗೆ ಹಾರಲು ರೆಕ್ಕೆ ಕೊಡುವ ಬದಲು, ಬಲು ಉಪಯೋಗಿಯಾದ ಹಸುವಿಗೆ ಕೊಟ್ಟಿದ್ದಿದ್ದರೆ ತನ್ನ ಭಾರವಾದ ದೇಹವನ್ನು ಹೊತ್ತು ನಡೆಯುವ ಕಷ್ಟ ಅದಕ್ಕೆ ತಪ್ಪುತ್ತಿತ್ತು” ಎಂಬ ಆಲೋಚನೆ ಮೂಡಿತು. ಕೆಲ ಹೊತ್ತಿನ ನಂತರ ಹಸುವು ಬಾಲ ಎತ್ತಿ ಸಗಣಿ ಹಾಕಿತು. ಹಾರುವ ಹಸು ಸಗಣಿ ಹಾಕಿದರೆ ಏನಾದೀತು ಎಂದು ಊಹಿಸಿಕೊಂಡ ಆ ಯುವಚಿಂತಕ, “ಇಲ್ಲ, ಸೃಷ್ಟಿ ಮಾಡುವಾಗ ದೇವರ ನಡೆ ಸರಿಯಾಗಿಯೇ ಇದೆ” ಎಂದು ಸಮಾಧಾನ ಪಟ್ಟುಕೊಂಡನಂತೆ!
(ಲೇಖಕರು ಇತಿಹಾಸಕಾರರು ಹಾಗೂ ಸಂಶೋಧಕರು)
ಇದನ್ನೂ ಓದಿ: Cow Rescue Operation: ಏಣಿ ಮೂಲಕವೇ 70 ಅಡಿ ಎತ್ತರದ ನೀರಿನ ಟ್ಯಾಂಕ್ ಏರಿದ ಹಸು; ಇಳಿಸಲು ಹರಸಾಹಸಪಟ್ಟ ಅಧಿಕಾರಿಗಳು!