ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿಯಿಂದ ಶನಿವಾರ ನಗರದಲ್ಲಿ ಸಂಭ್ರಮದ ಶಮೀಪೂಜಾ ಕಾರ್ಯಕ್ರಮ ನಡೆಯಿತು. ಏಳು ದಶಕಗಳಿಂದ ಸಮಾಜದಿಂದ ಶಮಿಪೂಜಾ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ.
ರೇಣುಕಾ ವಿದ್ಯಾಪೀಠ ಆವರಣದಲ್ಲಿ ನಡೆದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಷ್ಟ ಶಕ್ತಿ ದಮನವಾಗಿ, ಶಿಷ್ಟ ಶಕ್ತಿಯು ಉಳಿಯಬೇಕು ಎಂಬದು ವಿಜಯ ದಶಮಿ ಆಚರಿಸಲಾಗುತ್ತಿದೆ. ವಿಜಯದಶಮಿಗೆ ರಾಮಾಯಣ, ಮಹಾಭಾರತ, ಪುರಾಣಗಳ ಹಿನ್ನೆಲೆಯಿದೆ. ದಕ್ಷಿಣ ಭಾರತದಲ್ಲಿ ದುಷ್ಟ ಸಂಹಾರ ಮಾಡಿದ ದೇವಿಯ ವಿಜಯವನ್ನು ವಿಜಯದಶಮಿಯಾಗಿ ಆಚರಿಸಿದರೆ, ಉತ್ತರ ಭಾರತದಲ್ಲಿ ಭಾರತದಲ್ಲಿ ರಾಮಣ ಮೂರ್ತಿ ಸುಡುವ ಮೂಲಕ ರಾಮನ ವಿಜಯೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.
ವೀರಶೈವ ಸಮಾಜ ಸೂಕ್ಷö್ಮಸಂವೇದನೆಯ ಸಮಾಜ. ಜ್ಞಾನ, ತಂತ್ರಜ್ಞಾನ, ದಾನದಲ್ಲಿ ವೀರಶೈವ ಸಮಾಜದ ಕೊಡುಗೆಗೆ ಕೊರತೆಯಿಲ್ಲ. ಸಮಾಜದ ಸ್ವಾಮೀಜಿಗಳು ಶಿಕ್ಷಣವನ್ನು ಸಾರ್ವತ್ರಿಕಗೊಳಿಸದಿದ್ದರೆ ಸಮಾಜದಲ್ಲಿ ಇಷ್ಟು ಜ್ಞಾನವಂತರನ್ನು ಕಾಣಲು ಸಾಧ್ಯವಿರಲಿಲ್ಲವೇನೋ, ಸ್ವಾಮೀಜಿಗಳು ಮಾತ್ರವಲ್ಲದೆ ವೀರಶೈವ ಸಮಾಜದ ಹಲ ವಾರು ಮುಖಂಡರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಎಷ್ಟೋ ಮಹನೀಯರು ಸಮಾಜಕ್ಕಾಗಿ ತಮ್ಮ ಆಸ್ತಿ, ಸಂಪತ್ತನ್ನು ನೀಡಿದ್ದಾರೆ ಎಂದು ಹೇಳಿದರು.
ಸಾಮೂಹಿಕ ಶಿವಪೂಜೆಗೆ ಸಲಹೆ
ಜಾತಿ ಗಣತಿಯಂತೆ ವೀರಶೈವ ಸಮಾಜದಲ್ಲಿ ದೀಕ್ಷಾ ಗಣತಿ ನಡೆಸಬೇಕಾಗಿದೆ. ಸಮಾಜದ ಎಲ್ಲರೂ ದೀಕ್ಷೆ ಪಡೆಯ ಬೇಕು. ನಿತ್ಯ ಶಿವಪೂಜೆ ಮಾಡಲು ಸಾಧ್ಯವಾಗದೇ ಇರಬಹುದು, ಹೀಗಾಗಿ ವಾರಕ್ಕೊಮ್ಮೆ ಶ್ರೀ ಮಠದಲ್ಲಿ ಸಾಮೂಹಿಕ ಶಿವಪೂಜೆ ವ್ಯವಸ್ಥೆ ಮಾಡುವ ಆಲೋಚನೆ ತಮಗಿದೆ. ಮುಸ್ಲೀಮರು, ಕ್ರೈಸ್ತರು ಶುಕ್ರವಾರ, ಭಾನುವಾರ ಮಸೀದಿ, ಚರ್ಚ್ಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ರೀತಿಯಲ್ಲಿ ವಾರಕ್ಕೊಮ್ಮೆ ಸಾಮೂಹಿಕ ಶಿವಪೂಜೆ ಪದ್ದತಿ ಶುರು ಮಾಡಬೇಕು. ಇದರಿಂದ ನಮ್ಮ ಧರ್ಮ, ಸಂಸ್ಕೃತಿ ಉಳಿಯುತ್ತದೆ ಎಂದು ಸ್ವಾಮೀಜಿ ಹೇಳಿದರು.
ಇದೂವರೆಗೂ ವೀರಶೈವ ಸಮಾಜ ಸೇವಾ ಸಮಿತಿಯ ಶಮೀಪೂಜಾ ಕಾರ್ಯಕ್ರಮವು ಉರುಗಾದ್ರಿ ಗವಿ ಮಠಾಧ್ಯಕ್ಷ ರಾದ ಚನ್ನಬಸವ ರಾಜೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುತ್ತಿತ್ತು. ಅನಾರೋಗ್ಯದ ಕಾರಣ ಈ ಬಾರಿ ಸ್ವಾಮೀಜಿ ಭಾಗವಹಿಸಲಿಲ್ಲ, ತಮ್ಮ ಸಂದೇಶ ಕಳಿಸಿದ್ದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಏಳು ದಶಕಗಳಿಂದ ವೀರಶೈವ ಸಮಾಜ ನಗರದಲ್ಲಿ ದಸರಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈಗಲೂ ಅದೇ ಸಂಪ್ರದಾಯದಲ್ಲಿ ಆಚರಣೆ ಮುಂದುವರೆದಿದೆ. ಧಾರ್ಮಿಕ ಕಾರ್ಯ ಕ್ರಮ ವ್ಯವಸ್ಥೆ ಮಾಡುವುದರಲ್ಲಿ ವೀರಶೈವ ಸಮಾಜ ಯಾವತ್ತಿಗೂ ಮುಂದೆ ಇರುತ್ತದೆ ಎಂದು ಹೇಳಿದರು.
ಈ ವೇಳೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಡಾ.ಎಸ್.ಪರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಪ್ರದಾಯದಂತೆ ದೇಶದ ಶೆಟ್ಟರು ಮನೆತನದವರು ಸಮಾಜದ ಶಮೀಪೂಜಾ ಕಾರ್ಯಕ್ರಮದಲ್ಲಿ ಶಮಿ ಕಡಿಯುವ ಪದ್ದತಿ ಮುಂದುವರೆದಿದೆ. ಇದೇ ಮನೆತನದ ವಿ.ಆರ್.ಎಲ್.ಟ್ರಾನ್ಸ್ಪೋರ್ಟ್ ಶಾಖಾ ವ್ಯವಸ್ಥಾಪಕ ಕೆ.ಎಸ್.ಚೆನ್ನಬಸಪ್ಪ ಅವರು ಬನ್ನಿ ಮರ ಕಡಿದು ಶಮೀಪೂಜೆ ನೆರವೇರಿಸಿದರು.
ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸೊಗಡು ಶಿವಣ್ಣ, ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಜಂಟಿ ಕಾರ್ಯದರ್ಶಿ ಟಿ.ಎನ್.ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಆಡಳಿತಾಧಿಕಾರಿ ರುದ್ರಕುಮಾರ್ ಆರಾಧ್ಯ, ಮುಖಂಡ ರಾದ ದಿಲೀಪ್ಕುಮಾರ್, ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಸಿ.ಓಹಿಲೇಶ್ವರ್, ಕೆ.ಜೆ.ರುದ್ರಪ್ಪ, ಟಿ.ಆರ್.ನಟರಾಜು, ಟಿ.ಸಿ.ವಿಕಾಸ್, ನಳಿನಾ ಶಿವಾನಂದ್, ಸುಮ ಪ್ರಸನ್ನ, ಡಿ.ಆರ್.ಮಲ್ಲೇಶಯ್ಯ, ಟಿ.ಆರ್.ಅನುಸೂಯಮ್ಮ ಮೊದಲಾದ ವರು ಭಾಗವಹಿಸಿದ್ದರು.
ದಿವಾನರ ಬೀದಿಯ ಸಿದ್ಧಲಿಂಗೇಶ್ವರಸ್ವಾಮಿ, ಕೊಡಿ ಬಸವೇಶ್ವರಸ್ವಾಮಿ, ಕಾಶಿ ವಿಶ್ವನಾಥಸ್ವಾಮಿ, ಬೆಣ್ಣೆ ಬಸವೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ಶಮೀಪೂಜಾ ಸ್ಥಳಕ್ಕೆ ಮೆರವಣ ಗೆಯಲ್ಲಿ ಕರೆತರಲಾಗಿತ್ತು.
ಇದನ್ನೂ ಓದಿ: Tumkur Dasara: ಸಂಪ್ರದಾಯಬದ್ಧವಾಗಿ ತುಮಕೂರು ದಸರಾ ಉತ್ಸವ ಆಚರಣೆ