Friday, 25th October 2024

ವಾಸನ್ ಐ ಕೇರ್‌ ಸಂಸ್ಥಾಪಕನ ಅನುಮಾನಾಸ್ಪದ ಸಾವು

ಚೆನ್ನೈ: ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಗಳಲ್ಲೊಂದಾದ ವಾಸನ್​ ಐ ಕೇರ್ ಸಂಸ್ಥಾಪಕ ಎಎಂ ಅರುಣ್ ಅವರು ಚೆನ್ನೈನಲ್ಲಿ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ವಾಸನ್​ ಐ ಕೇರ್​ ಸ್ಥಾಪಕ ಎಎಂ ಅರುಣ್​ ಅವರು ಸೋಮವಾರ =ನಿಧನ ಹೊಂದಿದ್ದು, ಅವರಿಗೆ 52 ವರ್ಷ ವಯಸ್ಸಾಗಿತ್ತು. ಚೆನ್ನೈನ ಕಾವೇರಿ ಆಸ್ಪತ್ರೆಗೆ ಅರುಣ್ ಅವರನ್ನು ಕರೆ ತರುವ ವೇಳೆಗೆ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೆ, ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

ತಮಿಳುನಾಡಿನ ತಿರುಚ್ಚಿಯಲ್ಲಿ ಕುಟುಂಬ ನಡೆಸಿಕೊಂಡು ಹೋಗುತ್ತಿದ್ದ ಔಷಧಾಲಯ ಉದ್ಯಮವನ್ನು 1991ರಲ್ಲಿ ಅರುಣ್​ ಕೈಗೆತ್ತಿಕೊಂಡರು. ವಾಸನ್​ ಮೆಡಿಕಲ್​ ಹಾಲ್​ ಎಂಬುದು ಇದರ ಹೆಸರಾಗಿತ್ತು. 2002ರಲ್ಲಿ ತಿರುಚ್ಚಿಯಲ್ಲಿ ವಾಸನ್​ ಐ ಕೇರ್​ ಹೆಸರಿನ ಕಣ್ಣಿನ ಆಸ್ಪತ್ರೆಯನ್ನು ಅರುಣ್​ ಆರಂಭಿಸಿ​ದರು. ಇದು ಅವರು ಸ್ಥಾಪಿಸಿದ ಮೊದಲ ಕಣ್ಣಿನ ಆಸ್ಪತ್ರೆ. ನಂತರ ವರುಣ್​ ದಕ್ಷಿಣ ಭಾರತದಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ಕಣ್ಣಿನ ಆಸ್ಪತ್ರೆ ಆರಂಭಿಸಿದರು.

2015ರಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕಾರ್ತಿ ಭಾಗಿಯಾಗಿದ್ದ ಅಕ್ರಮ ಹಣ ವಹಿವಾಟಿನ ಪ್ರಕರಣದಲ್ಲಿ ವಾಸನ್​ ಐ ಕೇಸ್​ ಹೆಸರು ಸೇರಿಕೊಂಡಿತ್ತು. ಕಾರ್ತಿ ಕಪ್ಪು ಹಣವನ್ನು ಬಿಳಿ ಮಾಡಲು ಈ ಸಂಸ್ಥೆಯನ್ನು ಬಳಕೆ ಮಾಡಿಕೊಂಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅನೇಕ ವಾಸನ್​ ಐ ಕೇರ್​ ಮೇಲೆ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು.