Friday, 22nd November 2024

Team India : 14 ಓವರ್‌ಗಳಲ್ಲಿ 200 ರನ್, ಪವರ್‌ಪ್ಲೇನಲ್ಲಿ ಗರಿಷ್ಠ ಸ್ಕೋರ್‌, ಸಂಜು ಶತಕ; ಹಲವು ದಾಖಲೆ ಉಡೀಸ್ ಮಾಡಿದ ಭಾರತ

Team India

ಹೈದರಾಬಾದ್‌: ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) ಇತಿಹಾಸ ಬರೆದಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು 6 ವಿಕೆಟ್‌ ನಷ್ಟಕ್ಕೆ 297 ರನ್ ಗಳಿಸುವ ಮೂಲಕ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತ್ಯಧಿಕ ಮೊತ್ತ ಬಾರಿಸಿದ ವಿಶ್ವ ದಾಖಲೆ ಬರೆದಿದೆ. ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಪೈಕಿ ಇದು ಅತ್ಯಧಿಕ ಮೊತ್ತ. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 111 ರನ್ ಬಾರಿಸಿದ್ದಾರೆ. ಸ್ಯಾಮ್ಸನ್ 10ನೇ ಓವರ್‌ ವೇಳೆ 11 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ ಔಟಾದರು. ಇದು ಸ್ಯಾಮ್ಸನ್ ಅವರ ಮೊದಲ ಟಿ20 ಅಂತಾರಾಷ್ಟ್ರೀಯ ಶತಕ. ಅದನ್ನು ಸಾಧಿಸಲು ಅವರು ಕೇವಲ 40 ಎಸೆತಗಳನ್ನು ತೆಗೆದುಕೊಂಡರು.

ಭಾರತದ ಮೊತ್ತ 297 ಕಿರು ಸ್ವರೂಪದ ಕ್ರಿಕೆಟ್‌ನಲ್ಲಿ ಎರಡನೇ ಅತ್ಯುತ್ತಮ ಮೊತ್ತ. 2019ರಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 3 ವಿಕೆಟ್‌ಗೆ 314 ರನ್ ಬಾರಿಸಿದ್ದು ಅತಿ ಗರಿಷ್ಠ ಮೊತ್ತವಾಗಿದೆ. ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಭಾರಿಸಿದ 3 ವಿಕೆಟ್‌ಗೆ 278 ರನ್‌ ಬಾರಿಸಿದ ದಾಖಲೆಯನ್ನು ಭಾರತ ಮೀರಿಸಿದೆ. ಇದು ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಹಿಂದಿನ ಅತ್ಯುತ್ತಮ ಸಾಧನೆ.

ಭಾರತ ತನ್ನ ಇನ್ನಿಂಗ್ಸ್‌ನ ಮಧ್ಯದಲ್ಲಿ ಅಂದರೆ 10ನೇ ಓವರ್‌ಗೆ 1 ವಿಕೆಟ್‌ಗೆ 152 ರನ್ ಬಾರಿಸಿತ್ತು. ಇದು ಆ ಹಂತದಲ್ಲಿ ಯಾವುದೇ ತಂಡದ ಗರಿಷ್ಠ ರನ್‌ ದಾಖಲೆಯಾಗಿದೆ. ಅದ ರೀತಿ ಭಾರತ 200 ರನ್‌ಗಳನ್ನನು ತಲುಪಲು ಅತ್ಯಂತ ಕಡಿಮೆ ಎಸೆತಗಳನ್ನು ತೆಗೆದುಕೊಂಡಿತು. 14 ಓವವರ್‌ಗಲ್ಲಿ (84 ಎಸೆತಗಳು) ಈ ಸಾಧನೆ ಮಾಡಿತು.

ಭಾರತ 47 ಬೌಂಡರಿ ಹಾಗೂ 22 ಸಿಕ್ಸರ್ ಸಿಡಿಸಿತು. ಇದು ಕೂಡ ಅತ್ಯಧಿಕ ಬೌಂಡರಿ ಸಿಕ್ಸರ್‌ಗಳಾಗಿವೆ.

ಟಿ20ಐನಲ್ಲಿ ಶತಕ ಬಾರಿಸಿದ ಭಾರತದ ಏಕೈಕ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಸ್ಯಾಮ್ಸನ್ ಪಾತ್ರರಾಗಿದ್ದಾರೆ. ಅವರ 111 ರನ್ ಬಾಂಗ್ಲಾದೇಶದ ವಿರುದ್ಧ ಭಾರತದ ಪರ ಬ್ಯಾಟರ್ ಒಬ್ಬರು ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಅವರು ಈಗ ಬಾಂಗ್ಲಾದೇಶದ ವಿರುದ್ಧ ಭಾರತದ ಪರ ವೇಗವಾಗಿ ಅರ್ಧಶತಕ ಗಳಿಸಿದ್ದಾರೆ. ಅವರು ಕೇವಲ 22 ಎಸೆತಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದರು. ಇದು ಈಗ ಟಿ 20 ಯಿಂದ ನಿವೃತ್ತರಾದ ರೋಹಿತ್ ಅವರಿಗಿಂತ ವೇಗದ ಅರ್ಧ ಶತಕವಾಗಿದೆ.

ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ ಭಾರತವು ಆರು ಓವರ್‌ಗಳಲ್ಲಿ1 ವಿಕೆಟ್‌ಗೆ 82 ರನ್ ಬಾರಿಸಿತು. ಇದು ಟಿ 20 ಪಂದ್ಯಗಳಲ್ಲಿ ತಂಡದ ಅತ್ಯುತ್ತಮ ಪವರ್‌ಪ್ಲೇ ಸ್ಕೋರ್ ಆಗಿದೆ. ನಂತರ ತಂಡ 7.1 ಓವರ್‌ಗಳಲ್ಲಿ 100 ರನ್‌ಗಳ ಗಡಿಯನ್ನು ಮುಟ್ಟಿದೆ. ಇದು ಇದು ವಿಶ್ವದಾಖಲೆಯೂ ಆಗಿದೆ.

ಟಿ20ಐನಲ್ಲಿ ಇನ್ನಿಂಗ್ಸ್ ಒಂದರಲ್ಲಿ ದಾಖಲಾದ ಅತ್ಯಧಿಕ ಮೊತ್ತ
  • ನೇಪಾಳ – ಮಂಗೋಲಿಯಾ ವಿರುದ್ಧ 314/3, 2023
  • ಭಾರತ – ಬಾಂಗ್ಲಾದೇಶ ವಿರುದ್ಧ 297/6
  • ಅಫ್ಘಾನಿಸ್ತಾನ – ಐರ್ಲೆಂಡ್ ವಿರುದ್ಧ 278/3
  • ಜೆಕ್ ಗಣರಾಜ್ಯ – ಟರ್ಕಿ ವಿರುದ್ಧ 278/4, 2019
  • ಮಲೇಷ್ಯಾ – 268/4 ವಿರುದ್ಧ ಥೈಲ್ಯಾಂಡ್, 2023


ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಪರ ಅಭಿಷೇಕ್ ಶರ್ಮಾ ಕೇವಲ 4 ರನ್‌ಗಳಿಗೆ ಔಟಾದರು. ಆದರೆ , ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಬಾಂಗ್ಲಾದ ಬೌಲರ್‌ಗಳನ್ನು ನಾಶ ಮಾಡಿದ್ದರು. ಬ್ಯಾಟ್‌ನಲ್ಲಿ ಅಸ್ಥಿರತೆ ಮತ್ತು ಸರಣಿಯಲ್ಲಿ ಇಲ್ಲಿಯವರೆಗೆ ಕಳಪೆ ಇನಿಂಗ್ಸ್‌ ಕಾರಣಕ್ಕೆ ಟೀಕೆಗೆ ಒಳಗಾಗಿದ್ದ ಸಂಜು ಸ್ಯಾಮ್ಸನ್‌ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಇದನ್ನೂ ಓದಿ: IND vs BAN: ಮೈದಾನದಲ್ಲೇ ಸಿರಾಜ್‌ಗೆ ಕ್ಷಮೆ ಕೇಳಿದ ಪಂತ್‌; ಕಾರಣವೇನು?

ಸ್ಯಾಮ್ಸನ್ ಮತ್ತು ಸೂರ್ಯ ಜೋಡಿ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಮನಬಂದಂತೆ ದಾಳಿ ನಡೆಸಿ, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಸೂರ್ಯ ಕೇವಲ 23 ಎಸೆತಗಳಲ್ಲಿ ಅದ್ಭುತ ಅರ್ಧಶತಕ ದಾಖಲಿಸಿದರೆ, ಸ್ಯಾಮ್ಸನ್ ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು. ಇದು ಟಿ20 ಪಂದ್ಯಗಳಲ್ಲಿ ಭಾರತೀಯರ ಅತಿ ವೇಗದ ಅರ್ಧಶತಕ. ಬಳಿಕ ಸಂಜು ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಟಿ 20 ಪಂದ್ಯಗಳಲ್ಲಿ ಭಾರತೀಯ ವೇಗದ ಶತಕ ಮತ್ತು ಟೆಸ್ಟ್ ಆಡುವ ರಾಷ್ಟ್ರದ ಬ್ಯಾಟರ್‌ಗಳಿಸಿದ ನಾಲ್ಕನೇ ವೇಗದ ಶತಕ.

ಕಳೆದ ವರ್ಷ ಸೆಂಚೂರಿಯನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 13.5 ರನ್‌ಗಳಲ್ಲಿ 200 ರನ್‌ ಗಳಿಸಿದ ದಕ್ಷಿಣ ಆಫ್ರಿಕಾದ ಬಳಿಕ ಮೆನ್ ಇನ್ ಬ್ಲೂ ಕೇವಲ 14 ಓವರ್‌ಗಳಲ್ಲಿ 200 ರನ್ ಬಾರಿಸಿದ ತಂಡ ಎನಿಸಿಕೊಂಡಿತು. ಸ್ಯಾಮ್ಸನ್ ಅಂತಿಮವಾಗಿ 111 ರನ್‌ಗಳಿಗೆ ಮುಸ್ತಾಫಿಜುರ್ ಎಸೆತಕ್ಕೆ ಔಟ್ ಆದರು. ಸೂರ್ಯ ಅವರು ಮಹಮದುಲ್ಲಾ ಎಸೆತಕ್ಕೆ ಔಟಾಗುವ ಮೂದಲು 75 ರನ್ ಬಾರಿಸಿದ್ದರು. ಬಳಿಕ ರಿಯಾನ್ ಪರಾಗ್ (13 ಎಸೆತಕ್ಕೆ 34 ರನ್) ಮತ್ತು ಹಾರ್ದಿಕ್ ಪಾಂಡ್ಯ (18 ಎಸೆತ 47 ರನ್‌) ಅವರ ಹೊಡೆತಗಳನ್ನು ಸಹಿಸಿಕೊಳ್ಳಬೇಕಾಯಿತು.