Monday, 25th November 2024

Vinayaka M Bhatta, Amblihonda Column: ಕೆರೆಯ ನೀರಲು ಕೆರೆಗೆ ಚೆಲ್ಲುವ ಕಳಕಳಿ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ಒಬ್ಬರು ತಮ್ಮ ಗಳಿಕೆಯ ನಿರ್ದಿಷ್ಟ ಭಾಗವನ್ನು ಸಮಾಜದ ವಂಚಿತ ವರ್ಗದೊಂದಿಗೆ ಹಂಚಿಕೊಳ್ಳು ವುದಕ್ಕಿರುವ ಮಹತ್ವವನ್ನು ಭಾರತೀಯ ಧರ್ಮಗ್ರಂಥಗಳು ಹಲವೆಡೆ ಉಲ್ಲೇಖಿಸಿವೆ. ಇತರ ದೇಶಗಳಿಗೆ ಹೋಲಿಸಿದಾಗ, ಹಂಚಿಕೊಳ್ಳುವ ಮತ್ತು ಪರರ ಕುರಿತು ಕಾಳಜಿ ವಹಿಸುವ ಆಳ ಸಂಸ್ಕೃತಿಯನ್ನು ಭಾರತೀಯರಾದ ನಾವು ಮೊದಲಿನಿಂದಲೂ ಪಡೆದುಕೊಂಡೇ ಬಂದಿದ್ದೇವೆ ಎನ್ನಬಹುದು.

ಲಾಭ ಗಳಿಸುವ ಮತ್ತು ವರ್ಷದಿಂದ ವರ್ಷಕ್ಕೆ ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಕಂಪನಿಗಳು, ಸುತ್ತಲಿನ ಸಮಾಜದಿಂದ ತಾವು ಸಂಪನ್ಮೂಲಗಳನ್ನು ಪಡೆದು ಉಪಯೋಗಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದ ರೂ ಕೊಡುಗೆಯಿತ್ತು, ಸಕಾರಾತ್ಮಕ ಬದಲಾವಣೆಗೆ ಕಾರಣವಾಗುವ ಪರಿಪಾಠವನ್ನು ‘ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ’ (Corporate Social Responsibility- CSR) ಎನ್ನುತ್ತಾರೆ. ಈ ಪರಿಕಲ್ಪನೆಯು ಈಗ ‘ಕಾರ್ಪೊರೇಟ್ ಪೌರತ್ವ’ ಎಂದೂ ಪರಿಚಿತ. ‘ಸಿಎಸ್‌ಆರ್’ ಎಂಬ ಪರಿಭಾಷೆ ಭಾರತಕ್ಕೆ ತುಲನಾತ್ಮಕವಾಗಿ ಹೊಸದಿರಬಹುದು, ಆದರೆ ಈ ಪರಿಕಲ್ಪನೆ ಹೊಸದಲ್ಲ. ಇದು ಮೌರ್ಯರ ಕಾಲಘಟ್ಟದಷ್ಟು ಹಿಂದಿನದು.

ಆಗ ಕೌಟಿಲ್ಯನಂಥ ತತ್ವಜ್ಞಾನಿಗಳು, ‘ವ್ಯಾಪಾರ-ವ್ಯವಹಾರ ನಡೆಸುವವರು ನೈತಿಕ ಅಭ್ಯಾಸಗಳಿಗೆ, ಒಂದಷ್ಟು ತತ್ವ-ಸಿದ್ಧಾಂತಗಳಿಗೆ ಒತ್ತುನೀಡಬೇಕು’ ಎಂದು ಉಪದೇಶಿಸಿದ್ದರು. ಅದಿಲ್ಲದಿದ್ದರೆ, ವ್ಯಾಪಾರವೆಂಬುದು ಗ್ರಾಹಕರಿಗೆ ದ್ರೋಹ ಮಾಡುವುದೇ ಆಗಿಬಿಡುತ್ತದೆ (ವ್ಯಾಪಾರಂ ದ್ರೋಹ ಚಿಂತನಂ) ಎಂಬುದು ಅವರ ಅಭಿಪ್ರಾಯವಾಗಿತ್ತು. ಪ್ರಾಚೀನ ಕಾಲದಲ್ಲಿ ವ್ಯಾಪಾರದಲ್ಲಿ ಲಾಭ ಗಳಿಸುತ್ತಿದ್ದವರು, ಬಡವರಿಗೆ ಮತ್ತು ಅನುಕೂಲ ಇಲ್ಲದವರಿಗೆ ದಾನ ರೂಪದಲ್ಲಿ ಅನೌಪಚಾರಿಕವಾಗಿ ನೀಡುತ್ತಿದ್ದುದನ್ನು ಈ ಕಾಲದ ‘ಸಿಎಸ್‌ಆರ್’ಗೆ ಹೋಲಿಸಬಹುದೇನೋ!

ಒಬ್ಬರು ತಮ್ಮ ಗಳಿಕೆಯ ನಿರ್ದಿಷ್ಟ ಭಾಗವನ್ನು ಸಮಾಜದ ವಂಚಿತ ವರ್ಗದೊಂದಿಗೆ ಹಂಚಿಕೊಳ್ಳುವುದಕ್ಕಿರುವ
ಮಹತ್ವವನ್ನು ಭಾರತೀಯ ಧರ್ಮಗ್ರಂಥಗಳು ಹಲವೆಡೆ ಉಲ್ಲೇಖಿಸಿವೆ. ಹಾಗಾಗಿ ಇತರ ದೇಶಗಳಿಗೆ ಹೋಲಿಸಿದಾಗ,
ಹಂಚಿಕೊಳ್ಳುವ ಮತ್ತು ಪರರ ಕುರಿತು ಕಾಳಜಿ ವಹಿಸುವ ಆಳ ಸಂಸ್ಕೃತಿಯನ್ನು ಭಾರತೀಯರಾದ ನಾವು ಮೊದಲಿ
ನಿಂದಲೂ ಪಡೆದುಕೊಂಡೇ ಬಂದಿದ್ದೇವೆ ಎನ್ನಬಹುದು. ‘ಸಿಎಸ್‌ಆರ್’ ಪರಿಕಲ್ಪನೆಯನ್ನು ಭಾರತದಲ್ಲಿ ಐತಿಹಾಸಿಕ
ವಾಗಿ ಉತ್ತೇಜಿಸುವಲ್ಲಿ ನಮ್ಮ ಧರ್ಮಾಚರಣೆಗಳೂ ಪ್ರಮುಖ ಪಾತ್ರ ವಹಿಸಿದ್ದುಂಟು.

ಉದಾಹರಣೆಗೆ, ಇಸ್ಲಾಂನಲ್ಲಿ ‘ಜಕಾತ್’ ಎಂಬ ಕಾನೂನಿತ್ತು; ಒಬ್ಬರು ತಮ್ಮ ಗಳಿಕೆಯ ಒಂದು ಭಾಗವನ್ನು ದೇಣಿಗೆಯ ರೂಪದಲ್ಲಿ ಬಡವ ರೊಂದಿಗೆ ಹಂಚಿಕೊಳ್ಳಬೇಕು ಎಂಬುದನ್ನು ಅದು ಹೇಳುತ್ತದೆ. ಹಿಂದೂ ಧರ್ಮದ ವ್ಯಾಪಾರಿಗಳು ಭಿಕ್ಷೆ ನೀಡಿ ದರು, ಬಡವರಿಗೆ ಆಶ್ರಯಕ್ಕೆಂದು ಛತ್ರಗಳು, ತಂಗುದಾಣಗಳನ್ನು ನಿರ್ಮಿಸಿದರು. ಹಿಂದೂಗಳು ‘ಧರ್ಮದಾ’ ವ್ಯವಸ್ಥೆಯನ್ನು ಅನುಸರಿಸುತ್ತಿದ್ದರು; ಖರೀದಿದಾರರಿಗೆ ತಯಾರಕರು ಅಥವಾ ಮಾರಾಟ ಗಾರರು ನಿರ್ದಿಷ್ಟ ಮೊತ್ತದ ತೆರಿಗೆ ವಿಧಿಸಿ ಅದನ್ನು ದಾನಕ್ಕಾಗಿ ಮಾತ್ರವೇ ಬಳಸುತ್ತಿದ್ದರು.

ಈ ಮೊತ್ತವನ್ನು ‘ಚಾರಿಟಿ’ ಅಥವಾ ‘ಧರ್ಮದಾ’ (ಇಂದಿನ ‘ಸೆಸ್’) ಎನ್ನಲಾಗುತ್ತಿತ್ತು. ಅದೇ ರೀತಿಯಲ್ಲಿ, ಸಿಖ್ಖರು
‘ದಶಾಂಶ್’ ಎಂಬ ವಿಧಾನವನ್ನು ಅನುಸರಿಸುತ್ತಿದ್ದರು. ನಾವು ಎಲ್ಲವನ್ನೂ ಈ ಸಮಾಜದಿಂದಲೇ ಪಡೆಯುವಾಗ,
‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸವರೇಣ್ಯರ ಉಪದೇಶದಂತೆ ಅದರಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ
ಹಿಂದಿರುಗಿಸುವ ಅಭ್ಯಾಸವು ಭಾರತೀಯ ಮೂಲಸಂಸ್ಕೃತಿಯಲ್ಲೇ ಬೇರೂರಿತ್ತು ಎನ್ನಬಹುದು. ಭಾರತದಲ್ಲಿ ‘ಸಿಎಸ್‌ಆರ್’ ಬೆಳವಣಿಗೆಯನ್ನು 4 ಹಂತಗಳಾಗಿ ವಿಂಗಡಿಸಿ ನೋಡಬಹುದು. ಮೊದಮೊದಲು ಇದು ಲೋಕೋ ಪಕಾರಿಗಳು ಮತ್ತು ದಾನಿಗಳ ಸ್ವಯಂ ಪ್ರೇರಿತ ಉದಾತ್ತ ಕಾರ್ಯಗಳಿಂದ ನಡೆಸಲ್ಪಟ್ಟಿತು.

ಕೈಗಾರಿಕೀಕರಣದ ಜತೆಗೆ ಕೌಟುಂಬಿಕ ಮೌಲ್ಯಗಳು, ಸಂಪ್ರದಾಯಗಳು, ಸುತ್ತಲಿನ ಸಂಸ್ಕೃತಿ ಮತ್ತು ಧರ್ಮ ದಿಂದಾದ ಪ್ರಭಾವವಿದು. 1850 ರವರೆಗೆ ದೇಶದ ಶ್ರೀಮಂತ ಉದ್ಯಮಿಗಳು, ದೇಗುಲ ಅಥವಾ ಧಾರ್ಮಿಕ ಸಂಸ್ಥೆ ಗಳನ್ನು ಸ್ಥಾಪಿಸುವ ಮೂಲಕ ತಮ್ಮ ಸಂಪತ್ತನ್ನು ಸಮಾಜದೊಂದಿಗೆ ಹಂಚಿಕೊಳ್ಳುತ್ತಿದ್ದುದು, ಬರಗಾಲದ ವೇಳೆ ಹಸಿದವರು ಮತ್ತು ಬಡವರಿಗಾಗಿ ಸ್ವಯಂಸೂರ್ತಿಯಿಂದ ದಾನ- ಧರ್ಮ ಮಾಡುತ್ತಿದ್ದುದು ಕಂಡುಬರುತ್ತದೆ.

ಸ್ವಾತಂತ್ರ್ಯಪೂರ್ವ ಕಾಲಘಟ್ಟದ ದೇಶದ ಕೈಗಾರಿಕೀಕರಣದ ಪ್ರವರ್ತಕರು ಕೂಡ ‘ಸಿಎಸ್‌ಆರ್’ ಪರಿಕಲ್ಪನೆ
ಯನ್ನು ಮನಃಪೂರ್ವಕವಾಗಿ ಬೆಂಬಲಿಸಿದರು. ಉದಾಹರಣೆಗೆ, 1900ರ ದಶಕದಲ್ಲಿ ಟಾಟಾ, ಬಿರ್ಲಾ, ಮೋದಿ,
ಗೋದ್ರೆಜ್, ಬಜಾಜ್, ಸಿಂಘಾನಿಯಾ ಮುಂತಾದ ಕೈಗಾರಿಕೋದ್ಯಮಿ ಕುಟುಂಬಗಳು ಸಮುದಾಯದ ಅಭಿವೃದ್ಧಿ
ಗಾಗಿ ದತ್ತಿ-ಪ್ರತಿಷ್ಠಾನಗಳು, ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳು ಮತ್ತು ವಿಶ್ವಸ್ಥ ಮಂಡಳಿಗಳನ್ನು ಸ್ಥಾಪಿಸುವ
ಮೂಲಕ ಈ ಪರಿಕಲ್ಪನೆಯನ್ನು ನಿಜಾರ್ಥದಲ್ಲಿ ಉತ್ತೇಜಿಸಿದವು. 1892ರಲ್ಲಿ ಟಾಟಾ ಸಮೂಹ ಸ್ಥಾಪಿಸಿದ ‘ಜೆ.ಎನ್.
ಟಾಟಾ ಎಂಡೋಮೆಂಟ್’, ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವ್ಯಾಸಂಗವನ್ನು ಕೈಗೊಳ್ಳಲು
ವಿದ್ಯಾರ್ಥಿ ವೇತನವನ್ನು ಒದಗಿಸಿತು.

ಮಾತ್ರವಲ್ಲ, ಬೆಂಗಳೂರಿನಲ್ಲಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ ಸ್ಥಾಪನೆಗೆ ದೊಡ್ಡ ಮೊತ್ತದ ಹಣವನ್ನು ದಾನ‌ ಮಾಡಿತು ಮತ್ತು 1941ರಲ್ಲಿ ಮುಂಬೈನಲ್ಲಿ ‘ಟಾಟಾ ಮೆಮೊರಿಯಲ್ ಆಸ್ಪತ್ರೆ’ಯನ್ನು ಸ್ಥಾಪಿಸಿತು. ಇದು ಈಗ ಭಾರತದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವೆನಿಸಿಕೊಂಡಿದೆ. ದೇಶದಲ್ಲಿ ‘ಸಿಎಸ್‌ಆರ್’ಗೆ ಭದ್ರ ಅಡಿಪಾಯ
ಹಾಕಿ ಬೆಳೆಸುವಲ್ಲಿ ಟಾಟಾ ಸಮೂಹ ಇಂದಿಗೂ ಅತ್ಯುತ್ತಮ ಉದಾಹರಣೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಕೈಗಾರಿಕೋದ್ಯಮಿಗಳು ಆ ಸಂಗ್ರಾಮಕ್ಕೂ ತಮ್ಮ ಸಮರ್ಪಣಾ ಭಾವವನ್ನು ತೋರಿದ್ದುಂಟು. ಸಮಾಜದ ದೀನ-ದಲಿತರ ಪ್ರಯೋಜನಕ್ಕಾಗಿ ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ಹಂಚಿಕೊಳ್ಳುವಂತೆ ಮಹಾತ್ಮ ಗಾಂಧಿಯವರೂ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದ್ದರು.

ದೇಶದ ಕಂಪನಿ-ಕೈಗಾರಿಕೆಗಳನ್ನು ಆಧುನಿಕ ಭಾರತದ ದೇಗುಲಗಳೆಂದು ಪರಿಗಣಿಸಿದ್ದ ಗಾಂಧೀಜಿ, ಕಾಲೇಜುಗಳು, ಸಂಶೋಧನೆ ಮತ್ತು ತರಬೇತಿ ಕೇಂದ್ರಗಳಿಗೆ ಟ್ರಸ್ಟ್‌ಗಳನ್ನು ನಿರ್ಮಿಸುವಂತಾಗಲು ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಪ್ರಭಾವ ಬೀರಿದರು. ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಶಿಕ್ಷಣದಂಥ ಸಮಾಜ ಸುಧಾರಣಾ ಕಾರ್ಯಗಳು ಏರುಗತಿ ಕಾಣಲು ಈ ಟ್ರಸ್ಟ್‌ಗಳು ಕಾರಣವಾದವು. ಸ್ವಾತಂತ್ರ್ಯಾನಂತರದಲ್ಲಿ ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಸೇರಿ ‘ಸಿಎಸ್‌ಆರ್’ ಮಾರ್ಗದರ್ಶಿ ಸೂತ್ರಗಳ ಕುರಿತು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಅವುಗಳಲ್ಲಿನ ಪಾರದರ್ಶಕತೆಗೆ ಹೆಚ್ಚಿನ ಒತ್ತುನೀಡುವ ಕುರಿತು ಚರ್ಚಿಸಿದರು.

1980ರಿಂದೀಚೆಗೆ ಭಾರತೀಯ ಕಂಪನಿಗಳು ‘ಸಿಎಸ್ ಆರ್’ ಅನ್ನು ತಮ್ಮ ಸುಸ್ಥಿರ ವ್ಯವಹಾರ ಕಾರ್ಯತಂತ್ರದಲ್ಲಿ
ವ್ಯವಸ್ಥಿತವಾಗಿ ಸಂಯೋಜಿಸಿಕೊಂಡವು. 1990 ದಶಕದಲ್ಲಿನ ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದ
ಪರಿಪಾಠ, ನಿಯಂತ್ರಣಗಳು ಮತ್ತು ಪರವಾನಗಿ ವ್ಯವಸ್ಥೆಗ ಭಾಗಶಃ ಹಿಂತೆಗೆದುಕೊಳ್ಳುವಿಕೆಯೊಂದಿಗೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಉತ್ಕರ್ಷ ಕಂಡುಬಂತು. ಇದು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿನ ಆವೇಗಕ್ಕೆ ಕಾರಣವಾಗಿ, ಕಂಪನಿಗಳು ಹೆಚ್ಚು ಲಾಭಗಳಿಸತೊಡಗಿದವು. ಹಾಗಾಗಿ, ಸಿಎಸ್‌ಆರ್ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡಲು ಅವಕ್ಕೆ ಸಾಧ್ಯವಾಯಿತು. ದಾನವಾಗಿ ಪ್ರಾರಂಭವಾದುದನ್ನು ಈಗ ‘ಜವಾಬ್ದಾರಿ’ ಎಂಬುದಾಗಿ ಉದ್ಯಮ ವಲಯ ಸ್ವೀಕರಿಸಿತು.

ದೇಶದಲ್ಲಿ ಪ್ರಸ್ತುತ ಕೆಲ ಅರ್ಹ ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ
ಮೀಸಲಿಡುವುದನ್ನು ಕಡ್ಡಾಯಗೊಳಿಸಲು ಮತ್ತು ಈ ಪ್ರಕ್ರಿಯೆಯನ್ನು ಶಾಸನದಡಿ ತರಲೆಂದು 1956ರ ಕಂಪನಿ
ಕಾಯ್ದೆಗೆ 2012ರಲ್ಲಿ ತಿದ್ದುಪಡಿ ತರಲಾಯಿತು. ಅದರನ್ವಯ, ನಿರ್ದಿಷ್ಟ ಕಂಪನಿಗಳು ತಮ್ಮ ಹಿಂದಿನ 3 ಹಣಕಾಸು ವರ್ಷಗಳ ಸರಾಸರಿ ನಿವ್ವಳ ಲಾಭದ ಶೇ.೨ರಷ್ಟನ್ನು ಸಿಎಸ್ ಆರ್‌ಗಾಗಿ ವಿನಿಯೋಗಿಸಬೇಕೆಂದು ನಿಯಮ ರೂಪಿಸ ಲಾಯಿತು.

ಇದು 2013ರಿಂದ ಜಾರಿಗೆ ಬಂದ ನಂತರ, ಸಿಎಸ್ ಆರ್ ವಿಷಯದಲ್ಲಿ ಭಾರತಕ್ಕೆ ಮಹತ್ವದ ತಿರುವು ದಕ್ಕಿತು.
ಶಾಸನಬದ್ಧ ನಿಯಮಗಳ ಮೂಲಕ ಸಿಎಸ್‌ಆರ್ ವೆಚ್ಚವನ್ನು ಕಡ್ಡಾಯಗೊಳಿಸಿದ ಮೊದಲ ದೇಶವೆನಿಸಿಕೊಂಡಿತು
ಭಾರತ. ಅರ್ಹ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಶಿಕ್ಷಣಕ್ಕೆ ಉತ್ತೇಜನ. ಹಸಿವು ಮತ್ತು ಬಡತನದ ನಿರ್ಮೂಲನ,
ಪರಿಸರ ಸುಸ್ಥಿರತೆಯ ಖಾತ್ರಿ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಉತ್ತೇಜನ
ಸೇರಿವೆ. ‘ಕಂಪನಿಗಳ ಕಾಯ್ದೆ, 2013’ಕ್ಕೆ ಆದ ಮಾರ್ಪಾಡುಗಳು, ಉತ್ತಮ ಉತ್ತರದಾಯಿತ್ವವನ್ನು ಹೊಂದಲು
ಸರಕಾರಕ್ಕೆ ವರದಿ ಮಾಡುವ ಅವಶ್ಯಕತೆಗಳನ್ನೂ ಒತ್ತಿಹೇಳುತ್ತವೆ ಮತ್ತು ಕಂಪನಿಗಳು ತಮ್ಮ ಸಿಎಸ್‌ಆರ್ ಉಪಕ್ರಮಗಳನ್ನು ತಮ್ಮ ವಾರ್ಷಿಕ ವರದಿಗಳಲ್ಲೂ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿವೆ.

ಸಿಎಸ್‌ಆರ್ ಅನ್ನು ಕಡ್ಡಾಯವಾಗಿಸಿದಾಗಿನಿಂದ ಭಾರತದಲ್ಲಿನ ಕಾರ್ಪೊರೇಟ್ ವಾತಾವರಣವು ಗಮನಾರ್ಹ
ಬದಲಾವಣೆಗೆ ಸಾಕ್ಷಿಯಾಗಿದೆ. ದೊಡ್ಡ ಮತ್ತು ಸಣ್ಣ ಕಂಪನಿಗಳು ಸಿಎಸ್‌ಆರ್ ಅನ್ನು ತಮ್ಮ ವ್ಯವಹಾರ ತಂತ್ರಗಳ
ಅವಿಭಾಜ್ಯ ಅಂಗವಾಗಿಸಿಕೊಂಡಿವೆ. ಸಿಎಸ್‌ಆರ್ ಉಪಕ್ರಮಗಳು ಲೋಕೋಪಕಾರ ಮತ್ತು ದಾನವನ್ನೂ ಮೀರಿ,
ಸುಸ್ಥಿರ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಕೌಶಲವರ್ಧನೆ ಮತ್ತು ಸಮುದಾಯದ ಸಬಲೀಕರಣದವರೆಗೂ
ವಿಸ್ತರಿಸಿವೆ. ಭಾರತದಲ್ಲಿನ ಕಂಪನಿಗಳು ಸರಕಾರೇತರ ಸಂಸ್ಥೆಗಳ (ಎನ್‌ಜಿಒ) ಸಹಭಾಗಿತ್ವ, ಸರಕಾರಿ ಸಂಸ್ಥೆಗ
ಳೊಂದಿಗಿನ ಸಹಯೋಗ ಮತ್ತು ಸ್ಥಳೀಯ ಸಮುದಾಯಗಳೊಂದಿಗಿನ ತೊಡಗಿಸಿಕೊಳ್ಳುವಿಕೆ ಸೇರಿದಂತೆ ಸಿಎಸ್
ಆರ್‌ಗೆ ವಿನೂತನ ವಿಧಾನಗಳನ್ನು ಅಳವಡಿಸಿಕೊಂಡಿವೆ.

ದೀನದಲಿತ ಯುವಕರಿಗೆ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ
ಉಪಕ್ರಮಗಳು, ನೈರ್ಮಲ್ಯ ಅಭಿಯಾನಗಳು ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಂಥ ಸಾಮಾಜಿಕ ಸವಾಲುಗಳನ್ನು ಎದುರಿಸುವ ಕಾರ್ಯಕ್ರಮಗಳನ್ನು ಅವು ಕೈಗೆತ್ತಿಕೊಂಡಿವೆ. ಸಕಾರಾತ್ಮಕ ಸಾಮಾಜಿಕ ಬದಲಾವಣೆ ಯನ್ನು ಪ್ರೇರೇಪಿಸುವಲ್ಲಿ, ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸುವಲ್ಲಿನ ಅಂತರಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಎಸ್‌ಆರ್ ಉಪಕ್ರಮಗಳು, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸುವಲ್ಲಿನ ಸರಕಾರದ ಯತ್ನಗಳಿಗೆ ಪೂರಕವಾಗಿ ಸಹಕರಿಸಿವೆ. ಹೀಗೆ ಸಿಎಸ್‌ಆರ್ ಮೂಲಕ ಸಂಸ್ಥೆಗಳಿಂದ ಸಮಾಜಕ್ಕೆ ಹರಿಯುತ್ತಿರುವ ಸಂಪನ್ಮೂಲವು ಸಾವಿರಾರು ಕೋಟಿಗಳಲ್ಲಿದ್ದು, ಅದು ಸಮಾಜದಲ್ಲಿ ನಿರ್ಣಾಯಕ ಬದಲಾವಣೆಯನ್ನು ತರುವಂಥದ್ದಾಗಿದೆ.

೨೦ ವರ್ಷಗಳ ಹಿಂದೆ, ನಾಡಿನ ಹೆಮ್ಮೆಯ ಇನೋಸಿಸ್ ಸಂಸ್ಥೆಯ ದೇಣಿಗೆಗಳಿಂದಾಗಿ ಉತ್ತರ ಕರ್ನಾಟಕದ ಅನೇಕ
ಮಾಧ್ಯಮಿಕ ಶಾಲೆಗಳು ಕಂಪ್ಯೂಟರ್‌ಗಳನ್ನು ಹೊಂದುವಂತಾಯಿತು. ‘ವಿಪ್ರೋ’ ಸಂಸ್ಥಾಪಕ ಅಜೀಂ ಪ್ರೇಮ್
ಜಿಯವರ ಪ್ರತಿಷ್ಠಾನವೂ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಹಣವನ್ನು ವಿನಿಯೋಗಿಸಿ ಗಮನಾರ್ಹ
ಬದಲಾವಣೆ ತಂದಿದೆ. ೨೦೨೩ರ ಹಣಕಾಸು ವರ್ಷದಲ್ಲಿ ಒಟ್ಟು ಸಿಎಸ್‌ಆರ್ ವೆಚ್ಚವು 30000 ಕೋಟಿ ರುಪಾಯಿ ಗಳನ್ನು ದಾಟಿದೆ ಎಂದರೆ ಅಚ್ಚರಿಯಾಗಬಹುದು. ಉದ್ಯಮಗಳು ಹೆಚ್ಚಿರುವ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್‌ನಂಥ ರಾಜ್ಯಗಳು ಸಹಜವಾಗಿ ಹೆಚ್ಚು ಸಿಎಸ್‌ಆರ್ ದೇಣಿಗೆ ಪಡೆದರೆ, ಈಶಾನ್ಯ ರಾಜ್ಯಗಳು ತುಲನಾತ್ಮಕ ವಾಗಿ ಕಮ್ಮಿ ಮೊತ್ತವನ್ನು ಪಡೆದಿವೆ.

ಸಿಎಸ್‌ಆರ್‌ಗೆ ವೆಚ್ಚಮಾಡಿದ (ಮೊತ್ತ ಕೋಟಿ ರು.ಗಳಲ್ಲಿ) ಅಗ್ರಗಣ್ಯ ಕಂಪನಿಗಳಲ್ಲಿ ಎಚ್‌ಡಿಎಫ್‌ ಸಿ ಬ್ಯಾಂಕ್ (820.89), ಟಿಸಿಎಸ್ (783), ರಿಲಯನ್ಸ್ ಇಂಡಸ್ಟ್ರೀಸ್ (744), ಟಾಟಾ ಸ್ಟೀಲ್ (480.62), ಒಎನ್‌ಜಿಸಿ (475.89), ಐಸಿಐಸಿಐ ಬ್ಯಾಂಕ್ (462.66), ಇನ್ಪೋಸಿಸ್ (391.51) ಸೇರಿವೆ. ಕಳೆದ 3 ವರ್ಷಗಳಲ್ಲಿ ಸರಾಸರಿ ನಷ್ಟ ದಾಖಲಿಸಿರುವ ಕಂಪನಿಗಳು ಕಾನೂನಿನನ್ವಯ ಸಿಎಸ್‌ಆರ್ ಗಾಗಿ ವಿನಿಯೋಗಿಸುವ ಅಗತ್ಯವಿಲ್ಲವಾದರೂ, ಟಾಟಾ ಮೋಟಾರ‍್ಸ್, ಐಡಿಎಫ್‌ ಸಿ ಫಸ್ಟ್ ಬ್ಯಾಂಕ್, ಎಂಆರ್ ಪಿಎಲ್, ಸಿಪಿಸಿಲ್, ಬಿಎಚ್‌ಇಎಲ್, ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್ ಮುಂತಾದ 48 ಕಂಪನಿಗಳು ಈ ಬಾಬತ್ತಿಗೆ ವಿನಿಯೋಗಿಸಿರುವುದು ಅವುಗಳ ಸಾಮಾಜಿಕ ಕಳಕಳಿಯ ದ್ಯೋತಕ ಮತ್ತು ಅದು ಶ್ಲಾಘನೀಯ ಕೂಡ. ದಿವಂಗತ ರತನ್ ಟಾಟಾ ನೇತೃತ್ವದ ‘ಟಾಟಾ ಸಮೂಹ ಸಂಸ್ಥೆಗಳು’ ತಮ್ಮ ಆದಾಯದ ಸಿಂಹಪಾಲನ್ನು ಸಮಾಜ ಸುಧಾರಣೆಗೆ ನೀಡುವ ಮೂಲಕ ಮಾದರಿಯಾಗಿವೆ. ಇಷ್ಟಾಗಿಯೂ, ರಾಜಕಾರಣಕ್ಕಾಗಿ ಉದ್ಯಮಿಗಳನ್ನು ಸಮಾಜದಲ್ಲಿ ಖಳನಾಯಕರಂತೆ ಬಿಂಬಿಸುತ್ತಿರುವುದು ವಿಷಾದನೀಯ.

ಕಂಪನಿಗಳ ಕಾಯ್ದೆಯ ಪ್ರಕಾರ, ಸಿಎಸ್‌ಆರ್ ದೇಣಿಗೆಯನ್ನು ತಮ್ಮಿಚ್ಛೆಯಂತೆ ವಿನಿಯೋಗಿಸುವ ಸ್ವಾತಂತ್ರ್ಯ ಸಂಸ್ಥೆಗಳಿಗಿದ್ದರೂ, ಸ್ಥಳೀಯ ಸರಕಾರಗಳು, ಮಂತ್ರಿಗಳು/ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲೇ ಅದನ್ನು ವೆಚ್ಚ ಮಾಡುವಂತೆ ತಮ್ಮ ಪ್ರಭಾವ ಬೀರುತ್ತಿರುವುದು, ರಾಜಕೀಯ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ. ಹಾಗೆ ಸಂಸ್ಥೆಗಳು ಮಾಡಿದ ಕೆಲಸವನ್ನು ತಾವೇ ಮಾಡಿಸಿರುವುದಾಗಿ ಹೇಳಿಕೊಂಡು ಮತ ಕೀಳುವ ಹುನ್ನಾರ ಇದರ ಹಿಂದಿರುವಂತೆ ತೋರುತ್ತದೆ. ಕಾನೂನಿನನ್ವಯ ಆದಾಯ ತೆರಿಗೆ, ಜಿಎಸ್‌ಟಿ ಮತ್ತು ವಿವಿಧ ‘ಸೆಸ್’ಗಳನ್ನು ಸರಕಾರಕ್ಕೆ ಸರಿಯಾಗಿ ಪಾವತಿಸುವುದರ ಜತೆಗೆ, ಸಮಾಜದ ಏಳ್ಗೆಗೆ ಸರಕಾರಗಳ ಜತೆಗೆ ಕೈಜೋಡಿಸುತ್ತಿರುವ ಹೆಮ್ಮೆಯ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕಿದೆ ಮತ್ತು ಲೋಕೋಪಕಾರಿ ಉದ್ಯಮಿ ಎನಿಸಿಕೊಂಡಿದ್ದ ರತನ್ ಟಾಟಾರಿಗೆ
ಮರಣೋತ್ತರವಾಗಿಯಾದರೂ ರಾಷ್ಟ್ರಮಟ್ಟದ ಉನ್ನತ ಪುರಸ್ಕಾರವನ್ನು ನೀಡಿ ಗೌರವಿಸಬೇಕಿದೆ. ಹಾಗಾದಾಗ
ಮಾತ್ರವೇ ಉದ್ಯಮ ವಲಯದಿಂದ ಸಮಾಜವು ಹೆಚ್ಚಿನ ಪ್ರಮಾಣದ ನೆರವನ್ನು ನಿರೀಕ್ಷಿಸಬಹುದು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Vinayak Bhatta, Amblihonda Column: ಮನೆಯ ಜಗಳವನ್ನು ಊರ ಬಾಗಿಲಿಗೆ ತರಕೂಡದು