Saturday, 23rd November 2024

IND vs BAN: ಅರ್ಧಶತಕ ಬಾರಿಸಿ ದಾಖಲೆ ಬರೆದ ಸೂರ್ಯಕುಮಾರ್‌

ಹೈದರಾಬಾದ್‌: ಬಾಂಗ್ಲಾದೇಶ(IND vs BAN) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ 133 ರನ್ನುಗಳಿಂದ ಭರ್ಜರಿಯಾಗಿ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಸಾಧನೆಗೈದಿದೆ. ಇದೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿ ಮಿಂಚಿದ ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ಅವರು ದಾಖಲೆಯೊಂದನ್ನು ಬರೆದಿದ್ದಾರೆ.

ಬಿರುಸಿನ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್‌ ಯಾದವ್‌ 35 ಎಸೆತಗಳಿಂದ 75 ರನ್‌ ಹೊಡೆದರು. ಇದೇ ವೇಳೆ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್‌ ಪೂರ್ತಿಗೊಳಿಸಿದ ವಿಶ್ವದ ಮೂರನೇ ಹಾಗೂ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ. ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್‌ ಹೆಸರಿನಲ್ಲಿದೆ.

ಅತಿ ವೇಗವಾಗಿ 2500 ರನ್‌ ಗಳಿಸಿದ ಬ್ಯಾಟರ್‌ಗಳು

ಬಾಬರ್‌ ಅಜಂ-67 ಇನಿಂಗ್ಸ್‌

ವಿರಾಟ್‌ ಕೊಹ್ಲಿ-73 ಇನಿಂಗ್ಸ್‌

ಸೂರ್ಯಕುಮಾರ್‌ ಯಾದವ್‌-74 ಇನಿಂಗ್ಸ್‌

ಮೊಹಮ್ಮದ್‌ ರಿಜ್ವಾನ್‌-76 ಇನಿಂಗ್ಸ್‌

ಆ್ಯರೋನ್ ಫಿಂಚ್-78 ಇನಿಂಗ್ಸ್‌

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಬಿರುಸಿನ ಬ್ಯಾಟಿಂಗ್‌ ನಡೆಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಶತಕ ಹಾಗೂ ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಭರ್ಜರಿ ಆಟದಿಂದಾಗಿ ಆರು ವಿಕೆಟಿಗೆ 297 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಗೆಲ್ಲಲು 298 ರನ್‌ ಗಳಿಸುವ ಕಠಿನ ಗುರಿ ಪಡೆದ ಬಾಂಗ್ಲಾದೇಶವು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 7 ವಿಕೆಟಿಗೆ 164 ರನ್‌ ಗಳಿಸಷ್ಟೇ ಶಕ್ತವಾಗಿ ಶರಣಾಯಿತು.

ಇದನ್ನೂ ಓದಿ Sanju Samson: ಸಂಜು ಬಾರಿಸಿದ ಸತತ 5 ಸಿಕ್ಸರ್‌ ವಿಡಿಯೊ ಇಲ್ಲಿದೆ

ಭಾರತ ಸಿಡಿಸಿದ 297 ರನ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಐಸಿಸಿ ಪೂರ್ಣ ಸದಸ್ಯ ದೇಶವೊಂದು ಗಳಿಸಿದ ಗರಿಷ್ಠ ರನ್‌. ಒಟ್ಟಾರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸ್ಕೋರ್‌ ದಾಖಲೆ ಇರುವುದು ನೇಪಾಳ ಹೆಸರಲ್ಲಿ. 2023ರ ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 3 ವಿಕೆಟ್‌ಗೆ 314 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು: ಭಾರತ ಆರು ವಿಕೆಟಿಗೆ 297 (ಸ್ಯಾಮ್ಸನ್‌ 111, ಸೂರ್ಯ ಕುಮಾರ್‌ ಯಾದವ್‌ 75, ರಿಯಾನ್‌ ಪರಾಗ್‌ 34, ಹಾರ್ದಿಕ್‌ ಪಾಂಡ್ಯ 47, ತಂಜಿಮ್‌ ಹಸನ್‌ ಶಕಿಬ್‌ 66ಕ್ಕೆ 3); ಬಾಂಗ್ಲಾದೇಶ 7 ವಿಕೆಟಿಗೆ 164 (ಲಿಟನ್‌ ದಾಸ್‌ 42, ತೌಹಿದ್‌ ಹೃದಯ್‌ 63 ಔಟಾಗದೆ, ಮಯಾಂಕ್‌ ಯಾದವ್‌ 32ಕ್ಕೆ 2, ರವಿ ಬಿಷ್ಣೋಯಿ 30ಕ್ಕೆ 3).