Friday, 22nd November 2024

CM Siddaramaiah: ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ರೂ. ನಷ್ಟ; ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

CM Siddaramaiah

ಮೈಸೂರು: ಕಳೆದ 5 ವರ್ಷಗಳಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ರೂ. ನಷ್ಟವಾಗಿದೆ. ಬಿಜೆಪಿ ಸಂಸದರು ಕರ್ನಾಟಕದ ಪರ ಧ್ವನಿ ಎತ್ತದೆ, ರಾಜ್ಯದ ಜನರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼಕೇಂದ್ರದಿಂದ ರಾಜ್ಯಕ್ಕೆ ಕೇವಲ 6,498 ಕೋಟಿ ರೂ.ಗಳ ತೆರಿಗೆ ಪಾಲು ಬಂದಿದ್ದು, ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರದ ಉತ್ತರ ಪ್ರದೇಶಕ್ಕೆ 31,000 ಕೋಟಿ ರೂ. ಹೆಚ್ಚು ನೀಡಲಾಗಿದೆʼʼ ಎಂದರು.

ಅದ್ಧೂರಿ ದಸರಾ

ಈ ವರ್ಷ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದ ಸಿಎಂ ದಸರಾ ಉತ್ಸವ ಯಶಸ್ವಿಯಾಗಲು ಕಾರಣರಾದ ಜಿಲ್ಲಾಮಂತ್ರಿಗಳು ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ʼʼರಾಜ್ಯದಲ್ಲಿ ಸಾಕಷ್ಟು ಮಳೆ-ಬೆಳೆಯಾಗಿದ್ದರಿಂದ ಈ ಬಾರಿ ನಾಡ ಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಜನರು ದಸರಾದಲ್ಲಿ ಸಂತೋಷದಿಂದ ಭಾಗವಹಿಸಿದ್ದು, ಸರ್ಕಾರದ ಶ್ರಮ ಸಾರ್ಥಕವಾಗಿದೆʼʼ ಎಂದು ತಿಳಿಸಿದರು.

ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ವಾಪಸ್ಸು ಪಡೆದಿರುವ ಬಗ್ಗೆ ಬಿಜೆಪಿಗರು ಹೋರಾಟ ಹಮ್ಮಿಕೊಳ್ಳಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ಉಪಸಮಿತಿಯು ನಿರ್ಧಾರ ಕೈಗೊಂಡಿದ್ದು, ನ್ಯಾಯಾಲಯಕ್ಕೆ ಮಂಡಿಸಿದ ನಂತರವಷ್ಟೇ ಪ್ರಕರಣ ವಾಪಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

ಅತಿ ಹೆಚ್ಚು ಬಾರಿ ಅಂಬಾರಿಗೆ ಪುಷ್ಪಾರ್ಚನೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ: ಸಿದ್ದರಾಮಯ್ಯ

ಅಂಬಾರಿ ಏರಿದ ತಾಯಿ ಚಾಮುಂಡಿಗೆ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸಿದ ಭಾಗ್ಯ ತಮ್ಮ ಪಾಲಿಗೆ ಒದಗಿ ಬಂದಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಅರ್ಪಿಸಿದ ಬಳಿಕ ಅವರು ಮಾತನಾಡಿದರು.

ಕಳೆದ ವರ್ಷ ಭೀಕರ ಬರಗಾಲದ ಕಾರಣದಿಂದ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದ ಸರಳ ದಸರಾವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ನಿರೀಕ್ಷಿತ ಮಟ್ಟಕ್ಕಿಂತ ಉತ್ತಮ ಬೆಳೆ ಆಗುವ ಲಕ್ಷಣಗಳೂ ಸ್ಪಷ್ಟವಾಗಿವೆ. ಸಾಲದ್ದಕ್ಕೆ ಈ ಬಾರಿ ಜಿಎಸ್ ಟಿ ಮತ್ತು ತೆರಿಗೆ ಸಂಗ್ರಹವೂ ನಿರಾಸೆ ಮೂಡಿಸಿಲ್ಲ. ಇದು ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿ ಏರುಗತಿಯಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ. ಎಲ್ಲವೂ ಒಟ್ಟಾಗಿ ದಸರಾ ಸಂಭ್ರಮವನ್ನು ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದಸರಾ ಪೂರ್ವಭಾವಿ ಸಭೆಗಳಲ್ಲಿ ಕೊಟ್ಟ ಸೂಚನೆ ಮತ್ತು ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ಯುವ ದಸರಾವನ್ನು ಚಾಮುಂಡಿ ತಪ್ಪಲಿನ ಉತ್ತನಹಳ್ಳಿಯಲ್ಲಿ ಸಂಘಟಿಸಿ ಲಕ್ಷ ಲಕ್ಷ ಮಂದಿ ಸಂಭ್ರಮಿಸಿದರು. ಶಾಸ್ತ್ರೀಯ ಸಂಗೀತ ಪ್ರಕಾರಗಳಿಂದ, ಸಮಕಾಲೀನ ಸಂಗೀತವನ್ನೂ, ಶಾಸ್ತ್ರೀಯ ನೃತ್ಯದಿಂದ ಸಮಕಾಲೀನ ನೃತ್ಯ ಪ್ರಕಾರಗಳು, 20 ಕ್ಕೂ ಹೆಚ್ಚು ತಂಡಗಳು, ನೂರಾರು ಕಲಾವಿದರು ಯುವ ದಸರಾ ಸಡಗರವನ್ನು ಹೆಚ್ಚಿಸಿದ್ದಾರೆ. ಹಾಗೆಯೇ ದಸರಾದ ಮುಖ್ಯ ಸಾಂಸ್ಕೃತಿಕ ವೇದಿಕೆಯಲ್ಲೂ ಸಾಹಿತ್ಯ, ಸಂಗೀತ, ಕಲೆ, ನೃತ್ಯಗಳು ಮೇಳೈಸಿ ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Mysuru Dasara: ಮೈಸೂರು ದಸರಾ ವೈಭವದ ಫೋಟೊಗಳು ಇಲ್ಲಿವೆ