Friday, 22nd November 2024

Union Minister V Somanna: ಪ್ರಧಾನಿಯಿಂದ ಜಿಲ್ಲೆಗೆ ಶೀಘ್ರ ದೊಡ್ಡ ಯೋಜನೆ ಘೋಷಣೆ: ಸಚಿವ ಸೋಮಣ್ಣ

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಗೆ ದೊಡ್ಡ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ, ಆ ಯೋಜನೆ ಯಾವುದೆಂದು ನಾನು ಈಗ ಹೇಳುವುದಿಲ್ಲ, ಕಾದು ನೋಡಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಭಾನುವಾರ ನಗರದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ವೇಗ ನೀಡಲು ಪ್ರಧಾನಿ ಮೋದಿಯವರು ನೆರವಾಗಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಮುಗಿಯದೆ ಉಳಿದಿದ್ದ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗದ ಭೂಸ್ವಾಧೀನ ಕೆಲಸವನ್ನು ತೀವ್ರಗೊಳಿಸಿ ಆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. ಇಷ್ಟು ವರ್ಷಗಳಿಂದ ಆಗದ ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು 88 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಿ, ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಿವ ಯೋಜನೆ ಚಾಲನೆ ಸಿಕ್ಕಿದೆ. ಇದೆಲ್ಲಾ ನಿಮ್ಮ ಆಶೀರ್ವಾದ, ನೀವು ಮತ ನೀಡಿ ಕೊಟ್ಟ ಅವಕಾಶ ಎಂದರು.

ಕನ್ನಡದಲ್ಲಿ ಪರೀಕ್ಷೆ

ರೈಲ್ವೆ ಇಲಾಖೆಯಲ್ಲಿ ಹಲವಾರು ಉದ್ಯೋಗಾವಕಾಶಗಳಿವೆ. ಇದೂವರೆಗೆ ಹಿಂದಿ, ಇಂಗ್ಲೀಷಿನಲ್ಲಿ ನೇಮಕಾತಿ ಪರೀಕ್ಷೆಗಳನ್ನು ಬರೆಯಬೇಕಾಗಿತ್ತು. ಈಗ ಕನ್ನಡದಲ್ಲೂ ಪರೀಕ್ಷೆ ಬರೆದು ಕನ್ನಡಿಗರು ರೈಲ್ವೆ ಇಲಾಖೆಯ ವಿವಿಧ ಹಂತದ ಹುದ್ದೆಗಳನ್ನು ಪಡೆಯಬಹುದು. ಇದು ಮಹತ್ವದ ಬದಲಾವಣೆ. ರೈಲ್ವೆ ಗೇಟುಗಳನ್ನು ತೆರವು ಮಾಡಿ ಆ ಭಾಗದಲ್ಲಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾವಿರಾರು ಕೋಟಿ ರೂ. ಖರ್ಚು ಮಾಡಿ 1426 ಕಿ.ಮೀ ಉದ್ದ ಸಿಗ್ಮಲ್‌ರಹಿತ ಮಾರ್ಗ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ರೈಲು ಪ್ರಯಾಣಿಕರ ವೇದಿಕೆಯ ಜಿಲ್ಲೆಯ ರೈಲ್ವೆ ಅಭಿವೃದ್ಧಿಯ ಮುನ್ನೋಟದ ಕಿರು ಹೊತ್ತಿಗೆ ಹಾಗೂ ನಮ್ಮ ರೈಲು ಎಂಬ ಸ್ಮರಣ ಸಂಚಿಕೆಯನ್ನು ಸಚಿವ ಸೋಮಣ್ಣ ಬಿಡುಗಡೆ ಮಾಡಿದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ರಚಿಸಿ ನಿರ್ದೇಶನ ಮಾಡಿದ ರೈಲು ಕುರಿತ ಸಾಕ್ಷಚಿತ್ರವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅನಾವರಣಗೊಳಿಸಿದರು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೈಲು ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವೇದಿಕೆಯ ದಶಮಾನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರೈಲು ಮತ್ತು ರೈಲಿನ ಸುರಕ್ಷತೆ ವಿಷಯದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಎಸ್.ಶಿವಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.

ಸಮಾರಂಭದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ಜಯಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್, ಉಪಾಧ್ಯಕ್ಷರಾದ ಪರಮೇಶ್ ಸಿಂದಗಿ ಬಿ.ಆರ್., ಮಾಧವಮೂರ್ತಿ ಗುಡಿಬಂಡೆ, ಜಂಟಿ ಕಾರ್ಯದರ್ಶಿಗಳಾದ ಸಗರ ಚಕ್ರವರ್ತಿ, ಎಂ.ಆರ್.ರಘು, ಖಜಾಂಚಿ ಆರ್.ಬಾಲಾಜಿ, ಸದಸ್ಯರಾದ ರಘೋತ್ತಮರಾವ್, ಸಿ.ನಾಗರಾಜ್ ರಾಮಾಂಜನೇಯ, ರವಿಶಂಕರ್, ಉಮಾಶಂಕರ್, ಶಿವಕುಮಾರ್ ದೀಪಕ್, ಭರತ್‌ಕುಮಾರ್, ಮಹಮದ್‌ಹುಸೇನ್, ಹರೀಶ್, ಪ್ರಸನ್ನ, ಶಿವಾನಂದ್, ಮೋಹನ್‌ಕುಮಾರ್, ದಯಾನಂದ್, ಅಶ್ವತ್ಥನಾರಾಯಣ ಸಿದ್ದಲಿಂಗೇಶ್ವರ, ವೀರಪ್ಪ, ಸೋಮೇಶಪ್ಪ, ಚೇತನ್ ಉಪಸ್ಥಿತರಿದ್ದರು.

ಇದನ್ನೂ ಓದಿ: V Somanna: ಕನ್ನಡಿಗರಿಗೆ ಸಿಹಿ ಸುದ್ದಿ- ರೈಲ್ವೆ ನೇಮಕಾತಿ, ಮುಂಬಡ್ತಿ ಪರೀಕ್ಷೆಗಳು ಕನ್ನಡದಲ್ಲಿ: ಸೋಮಣ್ಣ