ಬಸವ ಮಂಟಪ
ರವಿ ಹಂಜ್
(ಭಾಗ -೧)
ಲಿಂಗಾಯತ ಪ್ರತ್ಯೇಕ ಧರ್ಮ’ದ ಕೂಗಿನವರ ಹಿಂದಿನ ಧಿಃಶಕ್ತಿ ಎಂಥ ಬಾಲಿಶ ಎಂದು ಈ ಹಿಂದೆ ತೋರಿದ್ದೇನಷ್ಟೇ. ಅವರ ಬಾಲಿಶ ಅಂಶಗಳನ್ನು ಇನ್ನಷ್ಟು ಆಳವಾಗಿ ತೋರುವ ಮುನ್ನ ಇತಿಹಾಸದ ವಾಸ್ತವಾಂಶವನ್ನು ತೆರೆದಿಡ ಬೇಕಾದ್ದು ಅತ್ಯಗತ್ಯ. ಒಂದು ಧರ್ಮದ ಪರಿಗಣನೆಯನ್ನು ಇಂದಿನ 21ನೇ ಶತಮಾನದ ನ್ಯಾಯಾಂಗವು ಒಪ್ಪು ವಂಥ ವಾದವನ್ನು ದಾಖಲೆಯುಕ್ತ ಸಾಮಾನ್ಯ ಜ್ಞಾನದ ಪರಿಧಿಯಲ್ಲಿ ಮಂಡಿಸಬೇಕು.
‘ನಮ್ಮ ಪರವಾಗಿ ಬುದ್ಧಿಜೀವಿಗಳಿದ್ದಾರೆ, ಸಂಶೋಧಕರಿದ್ದಾರೆ, ಸರಕಾರಿ ಯಂತ್ರದ ನಿವೃತ್ತ ನಿಯಂತ್ರಕರಿದ್ದಾರೆ, ರಾಜಕಾರಣಿಗಳಿದ್ದಾರೆ, ಅವರಿದ್ದಾರೆ ಇವರಿದ್ದಾರೆ’ ಎನ್ನುವ ಹುಂಬತನದ ಕೂಪದಾಚೆ ಆಲೋಚಿಸಬೇಕು. ಅಂಥ ಒಂದು ಕಣ್ಣು ತೆರೆಸುವ ಮತ್ತು ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ‘ವಿಶ್ವವಾಣಿ’ಯದು. ಆ ಘನ ಉದ್ದೇಶ ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವೀರಶೈವದ ಎಲ್ಲಾ ಆಕರಮೂಲಗಳನ್ನು ತೆರೆದಿಟ್ಟು ತಾರ್ಕಿಕವಾಗಿ ವಿಶ್ಲೇಷಿಸುವ ಪ್ರಯತ್ನವಿದು.
12ನೇ ಶತಮಾನದಲ್ಲಿ ರಚಿಸಲಾಗಿದೆ ಎನ್ನುವ ವೀರಶೈವ ವಚನ ಸಾಹಿತ್ಯದ ಸಂಗ್ರಹಕಾರ್ಯ 15ನೇ ಶತಮಾನದ
ಪ್ರೌಢದೇವರಾಯನ ಕಾಲದಲ್ಲಿ ಆರಂಭವಾಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ, ‘ಇವುಗಳನ್ನು 12ನೇ ಶತಮಾನದಲ್ಲಿಯೇ ಶರಣರು ರಚಿಸಿದ್ದರು ಎಂಬುದು ಪ್ರಶ್ನಾರ್ಹ’ ಎಂದು
ಸಾಕಷ್ಟು ಸಂಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ‘ಸಿದ್ಧಾಂತ ಶಿಖಾಮಣಿ’ಯನ್ನು ಒಂದನೇ
ಅಥವಾ ಏಳನೇ ಶತಮಾನದಲ್ಲಿ ರಚಿಸಿದ್ದಾರೆ ಎನ್ನುವುದು ಸಹ. ಆಗಲೇ ಇದ್ದ ವಚನಗಳ ಆಧಾರವಾಗಿ ‘ಶೂನ್ಯ ಸಂಪಾದನೆ’ಯ ಮೊದಲ ಸಂಕಥನವನ್ನು ಶಿವಗಣಪ್ರಸಾದಿ ಮಹದೇವಯ್ಯ 15ನೇ ಶತಮಾನದ ಆರಂಭದಲ್ಲಿ ರಚಿಸಿದ್ದರೆ, ಆಗಲೇ ಸಂಸ್ಕೃತದಲ್ಲಿದ್ದ ‘ಸಿದ್ಧಾಂತ ಶಿಖಾಮಣಿ’ಗೆ ಇದೇ 15ನೇ ಶತಮಾನದಲ್ಲಿದ್ದ ಗೊರಕೋಡು ಉಜ್ಜನೀಶನು ಕರ್ಣಾಟ ಭಾಷಾ ಟೀಕಾವನ್ನು ರಚಿಸಿದ್ದಾನೆ.
ಅಂದರೆ ಕನ್ನಡಕ್ಕೆ ತರ್ಜುಮೆ ಮಾಡಿದ್ದಾನೆ. ಸಮಗ್ರವಾಗಿ 15ನೇ ಶತಮಾನದ ಈ ಕಾಲಘಟ್ಟವು ವೀರಶೈವದ ಧ್ರುವೀ ಕರಣದ ಸಮಯ ಎಂದು ಸ್ಪಷ್ಟವಾಗುತ್ತದೆ. ಇನ್ನು ಸಂಸ್ಕೃತದಲ್ಲಿದ್ಧ ‘ಶಕ್ತಿವಿಶಿಷ್ಟಾದ್ವೈತ’ಕ್ಕೆ ವೀರಶೈವ ಆಚಾರ್ಯ ನಾದ ಶ್ರೀಪತಿ ಪಂಡಿತಾರಾಧ್ಯನು 11ನೇ ಶತಮಾನದಲ್ಲಿ ‘ಶ್ರೀಕರ ಭಾಷ್ಯ’ವನ್ನು ರಚಿಸಿದ್ದಾನೆನ್ನುವ ಊಹೆಯಿದ್ದರೂ ಶ್ರೀಪತಿ ಪಂಡಿತಾರಾಧ್ಯ 11ನೇ ಶತಮಾನದಲ್ಲಿ ಇದ್ದನೆನ್ನುವುದಕ್ಕೆ ಪುರಾವೆಗಳಿವೆ.
ಹಾಗಾಗಿ ಸದ್ಯದ ಸಾಹಿತ್ಯಿಕ ಆಕರಗಳ ದೃಷ್ಟಿಯಿಂದ ‘ಶಕ್ತಿವಿಶಿಷ್ಟಾದ್ವೈತ’ವು ಈ ಮೂರರಲ್ಲಿ ಪ್ರಾಚೀನ ಎನಿಸು ತ್ತದೆ. ಇದಿಷ್ಟು ವೀರಶೈವ ಗ್ರಂಥೇತಿಹಾಸದ ಇತಿಹಾಸ ತಜ್ಞ-ಮಾನ್ಯ ಮಾಹಿತಿ. ಇನ್ನುಳಿದಂತೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗರು ಅಪಹರಿಸಿರುವ ಬಸವಣ್ಣನ ಕುರಿತಾಗಿ 12ನೇ ಶತಮಾನದಲ್ಲಿ ಪಾಲ್ಕುರಿಕೆ ಸೋಮನಾಥನು ‘ಬಸವ‘ ಪುರಾಣ’ ರಚಿಸಿದ್ದಾನೆ.
ಹಾಗೆಯೇ ಪ್ರತ್ಯೇಕ ಕೂಗಿಗರು ತಮ್ಮ ಬದ್ಧ ಶತ್ರುಗಳು ಎಂದು ಪರಿಗಣಿಸಿರುವ ಪಂಚಾಚಾರ್ಯರ ಪಂಡಿತಾರಾಧ್ಯನ
ಕುರಿತಾದ ‘ಪಂಡಿತಾರಾಧ್ಯ ‘ಚರಿತ್ರೆ’ಯನ್ನೂ ಸೋಮನಾಥನು ರಚಿಸಿದ್ದಾನೆ. ಅದೇ ರೀತಿ ಹರಿಹರನು ಸಹ ಪ್ರತ್ಯೇಕ
ಕೂಗಿಗರ ಆದ್ಯದೈವ ಮತ್ತು ಬದ್ಧಶತ್ರುಗಳ ನಡುವೆ ಭೇದವೆಣಿಸದೆ ‘ಬಸವರಾಜದೇವರ ‘ರಗಳೆ’, ‘ರೇವಣಸಿದ್ದ
‘ರಗಳೆ’, ’ಏಕಾಂತರಾಮಯ್ಯನ ‘ರಗಳೆ’ಗಳನ್ನೂ ರಚಿಸಿದ್ದಾನೆ.
ಒಟ್ಟಾರೆ ಪುರಾಣ, ಚರಿತ್ರೆ, ರಗಳೆ ಎಂಬ ಈ ಮೂರು ವಿಧದ ಪದಗಳು ವೀರಶೈವದ ಮುಂಬರುವ ಶತಮಾ ನಗಳಾಚೆಯ ವಿಪ್ಲವಕ್ಕೆ ಮುನ್ನುಡಿ ಬರೆದಂತಿವೆ. ಇನ್ನು, ಶೂನ್ಯ ಸಂಪಾದನೆಯನ್ನು ವೀರಶೈವರ ಕೈಪಿಡಿ
ಯಾಗಿಸಲು ಪಣತೊಟ್ಟಂತೆ ಸಂಪಾದಕರಾದ ಶಿವಗಣ ಪ್ರಸಾದಿ ಮಹದೇವಯ್ಯ, ನಂತರದ ಹಲಗೆಯಾರ್ಯ,
ಸಿದ್ಧಲಿಂಗ ಯತಿ, ಸಿದ್ಧವೀರಣ್ಣೊಡೆಯ ಎಲ್ಲರೂ ವಚನಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ತಿದ್ದಿದ್ದಾರೆ ಎಂದು
ಸಂಶೋಧಕರಾದ ಎಲ.ಬಸವರಾಜು ಆರೋಪಿಸಿದ್ದಾರೆ.
ಅಂದರೆ ಪ್ರತಿಯೊಬ್ಬ ಸಂಪಾದಕನೂ ಉದ್ದೇಶಪೂರ್ವಕವಾಗಿ ಈ ಸಂಪಾದನೆಯನ್ನು ಹೆಚ್ಚು ಹೆಚ್ಚು ಆಕರ್ಷಕ ಗೊಳಿಸಿದ್ದಾರೆ. ಉದಾಹರಣೆಗೆ ಪ್ರಥಮ ಶೂನ್ಯಸಂಪಾದನೆಯಲ್ಲಿರುವ, “ಮಹಾದೇವಿಯಕ್ಕಗಳು ಕಲ್ಯಾಣದ ದಾರಿಯಲ್ಲಿದ್ದಾಗ (ಆಕೆಯನ್ನು) ಕಿನ್ನರಯ್ಯನು ಹರುಷಿಸಿ (ಪರುಷಿಸಿ/ಸ್ಪರ್ಶಿಸಿ) ನೋಡಲು ಅಕ್ಕಗಳು ಅಂತರಂಗದ ಜ್ಞಾನಾಗ್ನಿಯೊಳ್ ಕಾಮನ ಭಸ್ಮಮಂ ಮಾಡಿತೋರಿದರೆಂಬ” ಪ್ರಸಂಗವನ್ನು ಹಲಗೆ ಯಾರ್ಯನು ತನ್ನ ದ್ವಿತೀಯ ಸಂಪಾದನೆಯಲ್ಲಿ, “ಯೋನಿ ಯೊಳ್ ಅಂಗುಲಿಪ್ರವೇಶಂ” ಮಾಡಿ ಕಿನ್ನರಯ್ಯನು ಮಹಾದೇವಿಯನ್ನು ಪರೀಕ್ಷಿಸಿ ದ್ದನು ಎಂದಿದ್ದಾನೆ.
ಇದನ್ನು ಬಸವರಾಜುರವರು ಹಲಗೆಯಾರ್ಯನನ್ನು ‘ತೆವಲನ್ನು ತೀರಿಸಿಕೊಂಡ ಪಾಠಪೀಡಕನು’ ಎಂದು
ಖಂಡಿಸಿದ್ದಾರೆ. ಇಲ್ಲಿ ಹಲಗೆಯಾರ್ಯನು ಸೂಚ್ಯರೂಪಕ ಮೂಲಪಾಠವಾಗಿದ್ದುದನ್ನು ವಾಚ್ಯವಾಸ್ತವವಾಗಿ ವಿಸ್ತರಿಸಿ ಹೇಳಿದ್ದಾನೋ ಅಥವಾ ಬಸವರಾಜು ಅವರ ಮಡಿವಂತಿಕೆಯ ಚಿಂತನೆ ಅವರಿಗೆ ಹೀಗೆನ್ನಿಸುವಂತೆ ಮಾಡಿತೋ ಎಂಬ ಸಂಶೋಧಕ ಜಿeಸೆ ಕಾಡುತ್ತದೆ. ಹಾಗಾಗಿ ಇದನ್ನು ಸಂಶೋಧಿಸಿದಾಗ ಅಂದಿನ ಕಾಲಘಟ್ಟದಲ್ಲಿ
ಕನ್ಯತ್ವವನ್ನು ಪರೀಕ್ಷಿಸುವವರು ಸಹ ಇಂಥ “ಯೋನಿಯೊಳ್ ಅಂಗುಲಿಪ್ರವೇಶಂ” ಮಾಡಿ ಪರೀಕ್ಷಿಸುತ್ತಿದ್ದದ್ದು ಸಾಮಾನ್ಯ ಸಂಗತಿ ಎಂದು ಇತಿಹಾಸ ತಿಳಿಸುತ್ತದೆ.
ಆ ಕಾಲಮಾನದ ಕ್ರಿಶ್ಚಿಯನ್ ಸನ್ಯಾಸಿಗಳು ತಮ್ಮ ಸನ್ಯಾಸಿನಿ ಯರ ಆತ್ಮಶುದ್ಧಿಯ ಪಾವಿತ್ರ್ಯವನ್ನು ಇಂಥ ದೈಹಿಕ ಪರೀಕ್ಷೆಗೊಳಗಾಗಿಸುತ್ತಿದ್ದ ಅನೇಕ ಕತೆಗಳು ಇವೆ. ಕ್ರಿಸ್ತಶಕ 13ನೇ ಶತಮಾನದ ಜೇಕಬಸ್ ಡಿ.ವೊರೇಗನ್ ಸಂಗ್ರಹಿಸಿ ರುವ ‘ಗೋಲ್ಡನ್ ಲೆಜೆಂಡ್’ ಕೃತಿಯಲ್ಲಿ ಬರುವ ‘ಅಂಟಿ ಯಾಕ್ ಕನ್ಯೆ’ ಎಂದು ಖ್ಯಾತವಾಗಿರುವ ಕತೆಯ ಅತ್ಯಂತ ಸುಂದರ ಸನ್ಯಾಸಿನಿಗೆ ಚರ್ಚಿನ ಸಹ ಸನ್ಯಾಸಿಗಳು, “ಆಕೆ ತನ್ನ ಆತ್ಮಶುದ್ಧಿಯ ಪಾವಿತ್ರ್ಯವನ್ನು ಸಾಬೀತು ಪಡಿಸಲು ಒಂದು ವೇಶ್ಯಾಗೃಹದಲ್ಲಿ ಎಲ್ಲಾ ರೀತಿಯ ಲೈಂಗಿಕ ಅನುಭವಗಳಿಗೊಳಗಾಗಿಯೂ ಕಾಮದ ಹಂಗನ್ನು ಹೊಂದದೆ ಆತ್ಮಶುದ್ಧಿಯನ್ನು ಕಾಪಾಡಿಕೊಂಡರೆ ಆಕೆಯನ್ನು ಸೇರಿಸಬಹುದು.
ಇಲ್ಲದಿದ್ದರೆ ಆಕೆ ಅನ್ಯಧರ್ಮಕ್ಕೆ ಹೋಗಲಿ” ಎಂದು ಸವಾಲು ಹಾಕುತ್ತಾರೆ. “ದೈಹಿಕವಾಗಿ ಹಾದರವನ್ನು ಮಾಡಿ ಯೇನೆ ವಿನಾ ಆತ್ಮದಲ್ಲಿ ಬೇರೆ ದೇವರ ನೆನೆಯೆನು” ಎಂದು ಆ ಸನ್ಯಾಸಿನಿ ವೇಶ್ಯಾವಾಟಿಕೆಗೆ ಸೇರಿ ಕನ್ಯತ್ವವನ್ನು ಕಳೆದುಕೊಂಡು ತನ್ನ ಆತ್ಮಶುದ್ಧಿಯನ್ನು ಮೆರೆಯುತ್ತಾಳೆ. ಇಂಥ ಅನೇಕ ಕ್ರೈಸ್ತ ಸನ್ಯಾಸಿನಿಯರ ಕತೆಗಳಿವೆ. ಭಾರತದಲ್ಲೂ ಮಹಿಳೆ ತನ್ನ ಪಾವಿತ್ರ ವನ್ನು ಸಾಬೀತುಪಡಿಸಬೇಕಾದಂಥ ಪರಿಸ್ಥಿತಿಯ ಕತೆಗಳು ಸಾಕಷ್ಟಿವೆ. ಅಗ್ನಿಪ್ರವೇಶಕ್ಕೊಳಗಾದ ರಾಮಾಯಣದ ಸೀತೆ ಅದಕ್ಕೊಂದು ಉದಾಹರಣೆ. ಇಂಥ ಸನ್ನಿವೇಶ ಮಹಾದೇವಿಗೆ ಬಂದಿತ್ತು ಎಂದು ವಚನಗಳೇ ತಿಳಿಸುತ್ತವೆ. ಮಹಿಳೆಯರಿಗೆ ಸಮಾನಹಕ್ಕು ಕೊಟ್ಟದ್ದು ಶರಣ ಚಳವಳಿ ಎನ್ನುವ ಆವೇಶದ ಭಾವನಾತ್ಮಕ ಭಾಷಣವೀರರು ಇಂಥ ಕಪ್ಪುಚುಕ್ಕೆಯನ್ನು ಸದಾ ನೆನಪಿಟ್ಟು ಕೊಳ್ಳಬೇಕು.
ಇಂಥ ವಾಚ್ಯವಾಸ್ತವಾಂಶಗಳು ಹಲಗೆಯಾರ್ಯನ ಸಂಪಾದನೆಯ ವಿಶೇಷ! ಒಟ್ಟಾರೆ ಶೂನ್ಯ ಸಂಪಾದನೆಯು
ವಚನಗಳ ಆಧಾರದಲ್ಲಿ ಕಟ್ಟಿದ ಒಂದು ಕಾಲ್ಪನಿಕ ಸಂಕಥನ. ರಾಮಾಯಣವನ್ನು ಹೇಗೆ ತಮ್ಮ ತಮ್ಮ ಕಲ್ಪನೆಗೆ ಸಿದ್ಧಾಂತಕ್ಕೆ ತಕ್ಕಂತೆ ಸಾಕಷ್ಟು ಕವಿಗಳು ಕಾವ್ಯವನ್ನಾಗಿ, ಸಾಹಿತಿಗಳು, ಸಮಾಜವಾದಿಗಳು, ಬುಡಕಟ್ಟು ಜನಾಂಗ ದವರು, ಕಮ್ಯುನಿ ನಾಸ್ತಿಕರು ಗದ್ಯವನ್ನಾಗಿ ಕಟ್ಟಿರುವರೋ ಅದೇ ರೀತಿಯಲ್ಲಿ ವಚನಗಳಾಧರಿತ ಶೂನ್ಯ ಸಂಪಾ ದನೆಯ ನಾಲ್ಕು ಆವೃತ್ತಿಗಳು ಎಂದುಕೊಳ್ಳಬಹುದು.
ಇನ್ನು ಈ ಶೂನ್ಯ ಸಂಪಾದನೆಗಳಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಈ ಎಲ್ಲಾ ಸಂಪಾದಕರೂ ತಮ್ಮ ನೆಚ್ಚಿನ
ಸಾಮಾಜಿಕ ನಾಯಕರನ್ನು ಕೈಲಾಸಗಣಂಗಳಾಗಿಸಿ ಪುರಾಣ ಪುರುಷರನ್ನಾಗಿಸಿರುವುದು! ಅಲ್ಲಿಗೆ ವಚನಗಳು ಮತ್ತು
ವಚನಕಾರರು ಪೌರಾಣಿಕವೆನಿಸಿ ಅವರ/ಅವುಗಳ ಅಸ್ತಿತ್ವ ಅತ್ಯಂತ ಅನುಮಾನಾಸ್ಪದ ಎನಿಸಿಬಿಡುತ್ತದೆ. ಇದಕ್ಕೆ ತಕ್ಕಂತೆ ಶೂನ್ಯಸಂಪಾದನೆ ಕೃತಿಯ ಬಗ್ಗೆ ಮತ್ತು ಬಸವಣ್ಣನ ಬಗ್ಗೆ ಮಂಟೇಸ್ವಾಮಿ, ಕೊಡೇಕಲ್ ಬಸವಣ್ಣ ಮುಂತಾದ ನಂತರದ ತತ್ವಪುರುಷರು ವ್ಯಂಗ್ಯವಾಡಿದ್ದಾರಲ್ಲದೆ ಇಂದಿನ ಆಧುನಿಕ ಶರಣರು ಸಹ ಇದು ‘ಸಂದೇಹ ಸಂಪಾದನೆ’ ಎಂದಿದ್ದಾರೆ.
ಇಷ್ಟೆಲ್ಲದರ ನಡುವೆ ಆಧುನಿಕ ಕವಿಗಳ/ಸಂಶೋಧಕರ ನವಿರು ಭಾವನೆ, ವಚನಗಳ ಕಾವ್ಯಮಯ ಮೋಹಕತೆ,
ಕಮ್ಯುನಿ ಒಲವು, ಆಧುನಿಕತೆಯ ಆಕರ್ಷಣೆಗಳು ವಚನಗಳನ್ನು ಸಿದ್ಧಾಂತಗಳನ್ನಾಗಿಸಿ ಬಸವಣ್ಣನನ್ನು ಲೆನಿನ್,
ಸ್ಟಾಲಿನ್, ಐನ್ಸ್ಟೀನ್ ಎಂದು ಸಮೀಕರಿಸಿ ಬಸವಣ್ಣನೇ ವೀರಶೈವ ಮತಸ್ಥಾಪಕ, ವಚನಗಳ ಕಟ್ಟೇ ಧಾರ್ಮಿಕ
ಗ್ರಂಥ ಎಂದು ಸಮಾಜವನ್ನು ಸಮ್ಮೋಹಿಸಿರುವುದು ಸಹ ಶೂನ್ಯಸಂಪಾದನೆಯ ಮುಂದುವರಿದ ಒಂದು ಸುಂದರ ಸಂಕಥನ ಉಫೆ ಸಂದೇಹ ಸಂಕಥನ.
ಈಗ ಅನುಭವ ಮಂಟಪದ ಚರ್ಚಾ ದಾಖಲೆಯ ವಚನಗಳ ಆಧಾರದ ಮೇಲೆ ಸೃಷ್ಟಿಸಿದ ಭಾವಾವೇಶದ ಸಂಶೋಧಕ ಪಿತಾಮಹರ ಸಂಶೋಧನಾ ಸಂಕಥನಗಳಲ್ಲಿ, ಹುಸಿ ಸಮಾಜವಾದಿಗಳ ನಿರ್ವಚನಗಳಲ್ಲಿ ಸೃಜಿಸಿದ
ಲಿಂಗಾಯತ ಪ್ರತ್ಯೇಕ ಧರ್ಮದ ಕಥನವನ್ನು ಬದಿಗಿಟ್ಟು ಪ್ರಾಗೈತಿಹಾಸಿಕ, ಪ್ರಾಕ್ತನ, ಶಾಸನ, ಮಾನವಿಕ, ಸಾಮಾಜಿಕ,
ಮನಸ್ವಿಕ, ವೈeನಿಕ ಅಂಶಗಳಿಂದ ಮತ್ತಷ್ಟು ಆಳವಾಗಿ ನೋಡಿದಾಗ, ವೀರಶೈವದ ಮೂಲವನ್ನು ಆರ್ಯರಿಗಿಂತ
ಮೊದಲು ಭಾರತಕ್ಕೆ ವಲಸೆ ಬಂದ ಪೂರ್ವ ಆಫ್ರಿಕಾ ಜನರಿಂದ ಹರಿದುಬಂದ ಲಿಂಗಾರಾಧನೆಯೆನ್ನಬಹುದು. ಈ
ಮೂಲನಿವಾಸಿಗಳ ಲಿಂಗಾರಾಧನೆಯೇ ವೇದಗಳಲ್ಲಿ ರುದ್ರಾರಾಧನೆಯಾಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ.
ಈ ವಾದವನ್ನು ಪುರಸ್ಕರಿಸಲು ಪೂರಕವಾಗಿ ಬ್ರಿಟಿಷ್ ಭಾರತದ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಆಗಿದ್ದ ಇತಿಹಾಸ ತಜ್ಞ ಸರ್ ಜಾನ್ ಮಾರ್ಷಲ್ ತಮ್ಮ ‘ಮೊಹೆಂಜೋದಾರೋ ಆಂಡ್ ದಿ ಇಂಡಸ್ ಸಿವಿಲೈಜೇಷನ್’ ಸಂಶೋಧನ ಗ್ರಂಥದಲ್ಲಿ “ಕಲ್ಲಿನಿಂದ ಮಾಡಿದ ಸಣ್ಣ ಲಿಂಗಾಕೃತಿಗಳು ಮೊಹೆಂಜೋದಾರೋ ಉತ್ಖನನದ ಸಮಯದಲ್ಲಿ ಸಿಕ್ಕಿದ್ದು, ಶೈವರಾಧನೆ ಅಥವಾ ಲಿಂಗಾರಾಧನೆಯು ಈ ಕಾಲದಲ್ಲಿಯೂ ಪ್ರಚಲಿತವಿತ್ತೆಂದು ಸಾಕ್ಷ್ಯವನ್ನು ನೀಡುತ್ತವೆ.
ಇಲ್ಲಿ ದೊರೆತ ಸಣ್ಣ ಲಿಂಗಾಕೃತಿಗಳು ದಕ್ಷಿಣ ಭಾರತದಲ್ಲಿನ ಇಂದಿನ ವೀರಶೈವರು ಕೊರಳಿಗೆ ಕಟ್ಟಿಕೊಂಡಿರುವ ಕರಂಡದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕದಿವೆ” ಎಂದಿದ್ದಾರೆ. ಆಸಕ್ತರು ಈ ಗ್ರಂಥವನ್ನು ಪರಿಶೀಲಿಸ ಬಹುದು. ಒಂದು ವೇಳೆ ಈ ಗ್ರಂಥವು ಅನುಪಲಬ್ಧವಾಗಿದ್ದರೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ
ಸಂಶೋಧಕರಾದ ಆರ್.ಸಿ.ಹಿರೇಮಠ ಅವರ ‘ಮಹಾಯಾತ್ರೆ’ ಕೃತಿಯನ್ನು ಪರಿಶೀಲಿಸಬಹುದು.
ಅವರು ತಮ್ಮ ಈ ಕೃತಿಯಲ್ಲಿ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಉಲ್ಲೇಖಿಸುತ್ತ ತಮ್ಮ ಸಂಶೋಧನೆಯ ಇನ್ನಷ್ಟು ಪೂರಕ ವಿಷಯಗಳನ್ನು ಮಂಡಿಸಿದ್ದಾರೆ. ಇದೇ ರೀತಿ ಸಾಹಿತಿ ಜೆ.ರುದ್ರಪ್ಪನವರು ‘ಶೈವಮತ’ ಎಂಬ ತಮ್ಮ ಲೇಖನದಲ್ಲಿ ಸಹ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಆಕರವಾಗಿ ಉಲ್ಲೇಖಿಸಿದ್ದಾರೆ.
ಇವರ ಈ ಲೇಖನವು ಅ.ನ.ಕೃಷ್ಣರಾಯರು ಸಂಪಾದಿಸಿರುವ ‘ಭಾರತೀಯ ಸಂಸ್ಕೃತಿ ದರ್ಶನ’ ಕೃತಿಯಲ್ಲಿ ಒಂದು ಅಧ್ಯಾಯವಾಗಿದೆ (ಪುಟ 216). ಮೊಹೆಂಜೋದಾರೋ ಉತ್ಖನನದಲ್ಲಿ ದೊರೆತ ಈ ಲಿಂಗಗಳು ಲಿಂಗಗಳಾಗಿದ್ದರೂ ಅವುಗಳ ಕೆಳಗಿನ ಪೀಠ ಯೋನಿಪೀಠ ಎಂದು ಹೇಳಲಾಗದು ಎಂದು ಆರ್ಥರ್ ಬಾಶಂ ತಮ್ಮ ಸಂದೇಹವನ್ನು ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಬ್ರಿಟಿಷ್ ಭಾರತದ ಮತ್ತಿಬ್ಬರು ಉತ್ಖನನ ಸಂಶೋಧಕರಾದ ಜೋ ಮತ್ತು ರಾಯನ್, ಹರಪ್ಪಾ ಮತ್ತು ಮೊಹೆಂಜೋದಾರೋದಲ್ಲಿ ತಮಗೆ ಯೋನಿಪೀಠದ ಮೇಲಿರುವ ಲಿಂಗಗಳೇ ಸಿಕ್ಕಿರು ವುದು ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಇತಿಹಾಸ ತಜ್ಞೆ ವೆಂಡಿ ಡೋನಿಗರ್ ‘ಸಿಂಧೂ ಕಣಿವೆ ನಾಗರಿಕತೆಯು ಬಳಸುತ್ತಿದ್ದ ಮೊಹರುಗಳಲ್ಲಿ
ಒಂದಾದ ಪಶುಪತಿ ಮೊಹರಿನಲ್ಲಿರುವ ಲಿಂಗಾಕೃತಿಯನ್ನು ತೋರಿ “ಇಲ್ಲಿ ಸಿಕ್ಕ ಪಳೆಯುಳಿಕೆಗಳು ಲಿಂಗಗಳೇ” ಎಂದಿ
ದ್ದಾರೆ.
ಒಟ್ಟಾರೆ ಈ ಎಲ್ಲಾ ಉತ್ಖನನಗಳು ಮತ್ತು ಸಂಶೋಧನೆಗಳು ಲಿಂಗಾರಾಧನೆಯು ಸಿಂಧೂ ನಾಗರಿಕತೆಯ ಭಾಗವಾ ಗಿದೆ ಎಂದು ಪ್ರತಿಪಾದಿಸಿವೆ. ಹಾಗಾಗಿ ಲಿಂಗಾರಾಧನೆಯು ಭಾರತದಲ್ಲಿ ಆರ್ಯನ್ ವಲಸಿಗರು ಬರುವ ಮುಂಚಿ ನಿಂದಲೂ ಇದ್ದ ಮೂಲ ಸಂಸ್ಕೃತಿಯೆನ್ನಬಹುದು. ಅಲ್ಲಿಗೆ, ಮೂಲನಿವಾಸಿ ಪಶುಪಾಲಕರ ಪಶುಪತಿಗೂ
ಹರಪ್ಪಾ ಮೊಹೆಂಜೋದಾರೊ ಮೊಹರಿಗೂ ನೇರ ಸಂಬಂಧವಲ್ಲದೆ ಲಿಂಗ ಯಾನೆ ಶೈವಕ್ಕೆ ಸಹ ಪುರಾವೆಯನ್ನು
ಸ್ಥಾಪಿಸುತ್ತದೆ. ಈ ಪಶುಪತಿಯ ಆರಾಧಕರೇ ಮುಂದೆ ಪಾಶುಪತರೆಂದು ಕರೆಯಲ್ಪಟ್ಟರು. ಸರ್ ಜಾನ್ ಮಾರ್ಷಲ್
ಅವರು ಸಣ್ಣ ಲಿಂಗಾಕೃತಿಗಳನ್ನು ಶೈವಿಗರು ತಮ್ಮ ಕೊರಳಿಗೆ ಅಥವಾ ತೋಳಿಗೆ ಕಟ್ಟಿಕೊಂಡು ತಿರುಗುವ ‘ಜಂಗಮ’
ಸಂಸ್ಕೃತಿಯವರು ಎಂದಿದ್ದಾರೆ.
ಆ ಜಂಗಮ ಸಂಸ್ಕೃತಿಯು ಬೌದ್ಧರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆ ಪ್ರಭಾವದಿಂದಲೇ ಬೌದ್ಧರು ಬುದ್ಧನ ಅಥವಾ ನಂತರದ ಬೌದ್ಧಗುರುಗಳ ಜೈವಿಕ ಪಳೆಯುಳಿಕೆಗಳಾದ ಹಲ್ಲು, ಮೂಳೆ, ಕೂದಲುಗಳನ್ನೋ ಕರಂಡಕ ಗಳಲ್ಲಿಟ್ಟು ಪೂಜಿಸುತ್ತಿದ್ದರು ಮತ್ತು ತಮ್ಮೊಟ್ಟಿಗೆ ದೇಶಾಂತರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಮುಂದೆ ಸ್ತೂಪಗಳನ್ನು ಕಟ್ಟಲು ತೊಡಗಿದಾಗ ಆ ಸ್ತೂಪಗಳಲ್ಲಿ ಈ ಕರಂಡಕಗಳನ್ನು ಸ್ಥಾವರ ಗೊಳಿಸಲಾ ರಂಭಿಸಿದರು. ಆ ಕರಂಡಕಗಳ ಸಂಸ್ಕೃತಿಯಿಂದ ಪ್ರಭಾವಿತರಾಗಿ ಶೈವರು ತೋಳು, ಕೊರಳಿಗೆ ಕಟ್ಟಿಕೊಳ್ಳುತ್ತಿದ್ದ ಲಿಂಗಗಳನ್ನು ಇಂಥ ಕರಂಡಕಗಳಲ್ಲಿಟ್ಟು ಅವುಗಳನ್ನು ತೋಳು, ಕೊರಳಿಗೆ ಕಟ್ಟಿಕೊಳ್ಳಲಾ ರಂಭಿಸಿರಬೇಕು ಅಥವಾ ಬೌದ್ಧರೇ ಶೈವಿಗರ ಈ ಪದ್ಧತಿಯನ್ನು ಅಳವಡಿಸಿಕೊಂಡಿರಲೂಬಹುದು.
ಪುನರ್ಜನ್ಮದಲ್ಲಿ ನಂಬಿಕೆಯಿರದ ಬೌದ್ಧರು ನಿರ್ವಾಣ ಹೊಂದಿದ ಜೀವಿಗಳ ಭೌತಿಕ ಪಳೆಯುಳಿಕೆಗಳಾದ ಹಲ್ಲು, ಕೂದಲು, ಮೂಳೆಗಳನ್ನು ಕರಂಡಕದಲ್ಲಿಟ್ಟು ಪೂಜಿಸಿದರೆ, ಪಾಶುಪತರು ತಮ್ಮ ಆತ್ಮವನ್ನೇ ಲಿಂಗದ ರೂಪ ವಾಗಿಸಿಟ್ಟು ಪೂಜಿಸುತ್ತಿದ್ದರು. ಕ್ರಿ.ಶ. 127ರಲ್ಲಿ ಕಾನಿಷ್ಕನ ಪಟ್ಟಾಭಿಷೇಕದ ಪ್ರಥಮ ವಾರ್ಷಿಕೋತ್ಸವದಲ್ಲಿ
ರಚಿಸಿದ ಕರಂಡಕದ ಆಕಾರದಂತೆಯೇ ಶೈವಿಗರ ಲಿಂಗವಿಡುವ ಕರಂಡಕ ಯಾನೆ ಕರಡಿಗೆಯ ಆಕಾರವಿದೆ.
ಹೀಗೆ ಪರಸ್ಪರ ಪ್ರಭಾವಿಸುವ ಹಿಂದೂ ಸಂಸ್ಕೃತಿಯಿಂದಲೇ ಬೌದ್ಧ, ಜೈನ, ಪಾಶುಪತಗಳು ಒಂದೇ ಸಂಸ್ಕೃತಿಯ
ಕವಲುಗಳು ಎನಿಸುವುದು. ಕಾನಿಷ್ಕನ ಈ ಕರಂಡಕವು ಇಂದು ಪಾಕಿಸ್ತಾನದ ಪೇಶಾವರ್ ವಸ್ತುಸಂಗ್ರಹಾ ಲಯದಲ್ಲಿದೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)
ಇದನ್ನೂ ಓದಿ: Ravi Hanz Column: ತಲೆಮಾಸಿದ ತಲೆಮಾರಿನ ವೈಚಾರಿಕ ಸಂಕಥನಗಳ ಮೌಢ್ಯದ ಚಿಂತನೆ !