ತೂಕ ಇಳಿಸಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಆಹಾರದಲ್ಲಿ ನಿಯಂತ್ರಣ ಹಾಗೂ ವ್ಯಾಯಾಮ ಉತ್ತಮ ಮಾರ್ಗವಾದರೂ ಕೆಲವರು ವಾಮ ಮಾರ್ಗ ತುಳಿಯುತ್ತಾರೆ. ಅದು ಅವರ ಪ್ರಾಣಕ್ಕೆ ಕುತ್ತು ತರುತ್ತದೆ. ಅಂತೆಯೇ ದೇಹದ ತೂಕ ಕಡಿಮೆ (Weight Loss) ಮಾಡಿಕೊಳ್ಳಲು ಆನ್ಲೈನ್ (Online order) ಮೂಲಕ ಲಾಡಿ ಹುಳದ ಮಾತ್ರೆಗಳನ್ನು (Tapeworm Pills) ತರಿಸಿಕೊಂಡು ಸೇವಿಸಿದ ಮಹಿಳೆ ತೀವ್ರವಾಗಿ ಅಸ್ವಸ್ಥಗೊಂಡ ಪ್ರಕರಣವೊಂದು ದಾಖಲಾಗಿದೆ. ಇದು ಆಗಿರುವುದು ಅಮೆರಿಕದಲ್ಲಿ ಮಾತ್ರೆ ತೆಗೆದುಕೊಂಡ ಬಳಿಕ ಮಹಿಳೆ ಸ್ಮರಣ ಶಕ್ತಿ (memory lose) ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಲಾಡಿ ಹುಳದ ಮಾತ್ರೆಗಳನ್ನು ಸೇವಿಸಿದ ಬಳಿಕ ಮಹಿಳೆಯಲ್ಲಿ ಗಂಭೀರ ಅನಾರೋಗ್ಯದ ಲಕ್ಷಣಗಳು ಕಂಡು ಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆಹಾರ ಮತ್ತು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಮಹಿಳೆ ಕ್ರಿಪ್ಟೋಕರೆನ್ಸಿಯ ಸಹಾಯದಿಂದ ಆನ್ ಲೈನ್ ಮೂಲಕ ಲಾಡಿ ಹುಳದ ಮಾತ್ರೆಗಳನ್ನು ಖರೀದಿ ಮಾಡಿ ಸೇವಿಸಿದ್ದಾರೆ. ಬಳಿಕ ಮಹಿಳೆಯಲ್ಲಿ ಮಾರಣಾಂತಿಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದೆ.
ಈ ಕುರಿತು ಯುಎಸ್ ಮೂಲದ ಕ್ಯಾನ್ಸರ್ ತಜ್ಞರಾದ ಡಾ. ಬರ್ನಾರ್ಡ್ ಹ್ಸು ಅವರು ಮಾಹಿತಿ ನೀಡಿದ್ದು, ಹುಳುಗಳು ಆಕೆಯ ದೇಹವನ್ನು ಹೇಗೆ ಹಾನಿಗೊಳಿಸಿದವು ಎಂಬುದನ್ನು ತಿಳಿಸಿದ್ದಾರೆ.
ಲಾಡಿ ಹುಳುಗಳು ಪರಾವಲಂಬಿ ಜೀವಿಗಳು. ಅವುಗಳು ಕರುಳಿನಲ್ಲಿ ಮನೆ ಮಾಡುತ್ತವೆ. ನಾವು ತಿನ್ನುವ ಆಹಾರದಿಂದ ಅವುಗಳು ಬೆಳೆಯ ತೊಡಗುತ್ತವೆ. ಸುಮಾರು 30 ಅಡಿ ಉದ್ದದವರೆಗೂ ಬೆಳೆಯುವ ಇವುಗಳು ನಮ್ಮ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಆದರೆ ತೂಕ ನಷ್ಟಕ್ಕೆ ಈ ಲಾಡಿಹುಳುಗಳ ಮೊಟ್ಟೆಗಳನ್ನು ತಿನ್ನುವ ಸಂಪ್ರದಾಯ ಬಹಳ ಪುರಾತನ ಕಾಲದ್ದು ಎಂದು ಡಾ. ಬರ್ನಾರ್ಡ್ ತಿಳಿಸಿದ್ದಾರೆ.
ಮಹಿಳೆಯ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿದ ಡಾ. ಬರ್ನಾರ್ಡ್ ಹ್ಸು, ಯುಎಸ್ ನ ಅಯೋವಾ ಮೂಲದ 21 ವರ್ಷದ ಮಹಿಳೆ ಕ್ರಿಪ್ಟೋಕರೆನ್ಸಿ ಬಳಸಿ ಲಾಡಿ ಹುಳುವಿನ ಮೊಟ್ಟೆಗಳಿಂದ ತುಂಬಿದ ಕ್ಯಾಪ್ಸುಲ್ಗಳು ಖರೀದಿಸಿದ್ದಾರೆ. ಆಹಾರ ಮತ್ತು ವ್ಯಾಯಾಮದ ಮೂಲಕ ತೂಕ ನಷ್ಟ ಮಾಡಿಕೊಳ್ಳಲು ಅಸಾಧ್ಯವಾದಾಗ ಅವರು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಈ ವಿಧಾನವನ್ನು ಅನುಸರಿಸಲು ಮುಂದಾಗಿದ್ದರು.
ಮಹಿಳೆ ಆರಂಭದಲ್ಲಿ ಎರಡು ಲಾಡಿ ಹುಳು ಮಾತ್ರೆಗಳನ್ನು ತೆಗೆದುಕೊಂಡಳು. ಇದರಿಂದ ಪೂರಕ ಫಲಿತಾಂಶಗಳನ್ನು ಪಡೆದಿದ್ದಳು . ಆದರೆ ಸರಿಸುಮಾರು ಒಂದು ವಾರದಲ್ಲಿ ಹೊಟ್ಟೆಯಲ್ಲಿ ಸೆಳೆತ ಕಂಡು ಬಂದಿತ್ತು. ಆದರೆ ತೂಕ ನಷ್ಟವಾಗಿರುವುದರಿಂದ ಸಂತೋಷಗೊಂಡಿದ್ದ ಆಕೆ ಅದನ್ನು ನಿರ್ಲಕ್ಷಿಸಿದ್ದಳು.
ಬಳಿಕ ಪದೇಪದೇ ಮಲ ವಿಸರ್ಜನೆ ಸಮಸ್ಯೆ ಕಾಣಿಸಿಕೊಂಡಿತ್ತು. ಅಲ್ಲದೆ ಕುಳಿತಿರುವಾಗ ಅವಳ ಕೆನ್ನೆಯ ಸುತ್ತ ಯಾರೋ ಬಡಿದಂತೆ ಭಾಸವಾಗುತ್ತಿತ್ತು. ಅಲ್ಲದೇ ಮಲದಲ್ಲಿ ಕಂದು ಬಣ್ಣದ ಆಯತಾಕಾರದ ತುಂಡುಗಳು ಗಮನಿಸಿದಳು. ಇದಾಗಿ ಕೆಲವು ದಿನಗಳ ಬಳಿಕ ತೀವ್ರವಾದ ಕಿಬ್ಬೊಟ್ಟೆಯ ನೋವು ಕಾಣಿಸಿಕೊಂಡಿತು. ಅವಳ ಗಲ್ಲದಲ್ಲಿ ಅಸಾಮಾನ್ಯ ಗಡ್ಡೆ ಕಾಣಿಸಿಕೊಂಡಿತು. ತೀವ್ರವಾದ ತಲೆನೋವು ಕೂಡ ಉಂಟಾಯಿತು.
ಬಳಿಕ ಬ್ಯಾಕ್ಟೀರಿಯಾ ಸೋಂಕಿನ ಪರೀಕ್ಷೆ ನಡೆದಿತ್ತು. ಆದರೆ ನೆಗೆಟಿವ್ ವರದಿ ಸಿಕ್ಕಿತು. ಈ ನಡುವೆ ಆಕೆಯಲ್ಲಿ ಮರೆವಿನ ಲಕ್ಷಣವೂ ಕಂಡು ಬಂದಿತ್ತು. ಆಕೆಗೆ ದಿನದ ಕೆಲವು ಅವಧಿ ಮಾತ್ರ ನೆನಪಿನಲ್ಲಿ ಉಳಿಯುತ್ತಿತ್ತು. ಹೆಚ್ಚಿನ ಭಾಗ ಮರೆತು ಹೋಗುತ್ತಿತ್ತು. ಇದು ಹೆಚ್ಚಾದಾಗ ವೈದ್ಯರು ಆಕೆಯ ಸಂಪೂರ್ಣ ತಪಾಸಣೆ ನಡೆಸಿದರು.
ಈ ವೇಳೆ ಆಕೆಯ ಮೆದುಳು, ನಾಲಿಗೆ, ಯಕೃತ್ ಸೇರಿ ದೇಹದ ಹಲವು ಭಾಗಗಳಲ್ಲಿ ಅನೇಕ ಗಾಯಗಳಾಗಿರುವುದು ಪತ್ತೆಯಾಯಿತು. ಅನಂತರ ಆಕೆ ತಾನು ಲಾಡಿ ಹುಳುವಿನ ಮಾತ್ರೆಗಳನ್ನು ಸೇವಿಸಿರುವುದನ್ನು ತಿಳಿಸಿದ್ದಳು. ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಹಿಳೆಯು ಎರಡು ಜಾತಿಯ ಪರಾವಲಂಬಿಗಳನ್ನು ಸೇವಿಸಿದ್ದಾರೆ. ಟೇನಿಯಾ ಸಜಿನಾಟಾ ಮತ್ತು ಟೇನಿಯಾ ಸೋಲಿಯಂ. ಇದು ರಕ್ತ ಪ್ರವಾಹಕ್ಕೆ ಮೊಟ್ಟೆಗಳನ್ನು ಬಿಡುಗಡೆ ಮಾಡಿದ್ದು, ಸೋಂಕನ್ನು ಉಂಟು ಮಾಡಿದೆ. ಅನಂತರ ಈ ಸಮಸ್ಯೆಗೆ ಚಿಕಿತ್ಸೆ ನೀಡಲು ಆಕೆಗೆ ಔಷಧ ನೀಡಲಾಯಿತು ಎಂದು ಡಾ. ಬರ್ನಾರ್ಡ್ ಹ್ಸು ತಿಳಿಸಿದ್ದಾರೆ.
ಲಾಡಿ ಹುಳುಗಳು ಎಷ್ಟು ಅಪಾಯಕಾರಿ?
ತಜ್ಞರ ಪ್ರಕಾರ ಕರುಳಿನಲ್ಲಿ ಲಾಡಿ ಹುಳುಗಳು ಬಂದಾಗ ಅದು ದೇಹದ ಪೋಷಕಾಂಶಗಳನ್ನು ತಿನ್ನಲು ಪ್ರಾರಂಭಿಸುತ್ತದೆ. ಇವುಗಳು ಸರಪಳಿಯಂತೆ ಕಾಣುತ್ತದೆ. ಜೀರ್ಣಾಂಗವ್ಯೂಹದ ಹೊರಗಿನ ಇತರ ಅಂಗಗಳು ಅಥವಾ ಅಂಗಾಂಶಗಳ ಮೇಲೆ ಗಂಭೀರ ಹಾನಿಯನ್ನುಂಟು ಮಾಡುತ್ತವೆ. ಅದು ದೇಹದ ಯಾವ ಭಾಗದಲ್ಲಿ ಅಂಟಿಕೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮುಖ್ಯವಾಗಿ ಅತಿಸಾರ, ತೀವ್ರ ಹೊಟ್ಟೆನೋವು, ವಾಕರಿಕೆ, ದೌರ್ಬಲ್ಯ, ಜ್ವರ, ಬ್ಯಾಕ್ಟೀರಿಯಾದ ಸೋಂಕು, ನರ ಸಂಬಂಧಿತ ಸಮಸ್ಯೆಗಳನ್ನು ಇದು ಉಂಟು ಮಾಡುವ ಅಪಾಯವಿದೆ ಎನ್ನುತ್ತಾರೆ ತಜ್ಞರು.