ತುಮಕೂರು: ಜಗತ್ತಿನಲ್ಲಿ ಯುದ್ಧ ಮೇಳೈಸುತ್ತಿರುವಾಗ ವಿಶ್ವಸಂಸ್ಥೆ ಮೌನಕ್ಕೆ ಜಾರಿದೆ ಎಂದು ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಯುದ್ಧ ನಿಸರ್ಗ ವಿರೋಧಿಯಾಗಿದೆ. ಯುದ್ದೋನ್ಮಾದದಲ್ಲಿ ಜಗತ್ತು ಕಟ್ಟಲು ಸಾಧ್ಯವಿಲ್ಲ. ಗ್ಯಾಟ್ ಸೇರಿ ಅನೇಕ ಜಾಗತಿಕ ಒಪ್ಪಂದ ಗಳು ನೈಸರ್ಗಿಕ ನಾಶಕ್ಕೆ ಮುನ್ನಡಿ ಬರೆಯುತ್ತಿವೆ. ಆಪತ್ಕಾಲಘಟ್ಟದಲ್ಲಿ ನಾವಿದ್ದು, ಬಹುತ್ವ ಸಂಸ್ಕೃತಿ ಯನ್ನು ಬೆಂಬಲಿಸದಿದ್ದರೆ ವಿನಾಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾಂಸ್ಕೃತಿಕ ದಾಸ್ಯದೊಳಗೆ ಸಿಲುಕಿಕೊಂಡ ದೇಶ ಮುನ್ನಡೆಯಲು ಸಾಧ್ಯವಿಲ್ಲ. ನಾವಿನ್ನೂ ಸಾಂಸ್ಕೃತಿಕ ಗುಲಾಮಗಿರಿಯಲ್ಲಿದ್ದೇವೆ. ದ್ರಾವಿಡ ಚಳವಳಿ ಕಟ್ಟಿದವರಲ್ಲಿ ವಚನ ಚಳವಳಿಕಾರರು ಪ್ರಮುಖರಾಗಿದ್ದಾರೆ. ರಾಮನನ್ನು ಒಂದು ಸಂಸ್ಕೃತಿಯ ವಕ್ತಾರನಂತೆ ಬಿಂಬಿಸಿದ ಸಂದರ್ಭದಲ್ಲಿ ಶಿವನ ಚಿತ್ರವನ್ನು ಧರ್ಮ ಸಂರಕ್ಷಕನಾಗಿ ಸಂಸತ್ನಲ್ಲಿ ಪ್ರದರ್ಶಿಸಲಾಯಿತು. ಇದೆಲ್ಲದರ ಪ್ರಜ್ಞೆಯನ್ನು ಮಕ್ಕಳಿಗೆ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಲ್ಲವಾದಲ್ಲಿ ದ್ವೇಷದ ರಾಜಕಾರಣಕ್ಕೆ ಮಕ್ಕಳು ಅಸ್ತ್ರಗಳಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ತುಮಕೂರು ದಸರಾ ಆಚರಣೆಯಲ್ಲಿ ಕವಿಗೋಷ್ಠಿ, ವಿಚಾರ ಮಂಥನಕ್ಕೆ ಪ್ರಾಧಾನ್ಯತೆ ಸಿಕ್ಕಿದ್ದು ಸ್ವಾಗತಾರ್ಹ ಸಂಗತಿ ಎಂದು ಮೆಚ್ಚುಗೆ ಸೂಚಿಸಿದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಚಿಂತಕ, ಕವಿ ಡಾ.ವಡ್ಡಗೆರೆ ನಾಗರಾಜಯ್ಯ ವಹಿಸಿದ್ದರು. ಕವಿಗೋಷ್ಠಿ ಸಮಿತಿ ಅಧ್ಯಕ್ಷ ಡಾ.ಬಾಲಾಗುರುಮೂರ್ತಿ ಆಶಯ ನುಡಿಗಳನ್ನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಕವಿಗಳಾದ ಡಾ.ಬಿ.ಸಿ.ಶೈಲಾನಾಗರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ ನೀಹ. ಕವಿ ಬಿಳಿಗೆರೆ ಕೃಷ್ಣಮೂರ್ತಿ ಕವನ ವಾಚಿಸಿ ಪ್ರತಿಕ್ರಿಯಿಸಿದರು.
ಜಿಲ್ಲೆಯ ಕವಿಗಳಾದ ಬಿದಲೋಟಿ ರಂಗನಾಥ್, ಗುರುಪ್ರಸಾದ್ ಕಂಟಲಗೆರೆ, ಗಂಗಾಧರ್ ಕೊಡ್ಲಿಯವರ್, ಲಕ್ಷ್ಮಣ್ ದ್ವಾರನಕುಂಟೆ, ಹೊದೆಕಲ್ ರಂಗಮ್ಮ, ಪಲ್ಲವಿ, ನಾಗಾರ್ಜುನ ಸಾಗ್ಗೆರೆ, ಷಬ್ಬೀರ್ ಹುಳಿಯಾರ್, ಡಾ.ಕೆ.ವಿ.ಮುದ್ದ ವೀರಪ್ಪ, ಶಿವಣ್ಣ ತಿಮ್ಲಾಪುರ, ಕಲ್ಲೂರು ಗೀತಾ ಲೋಕೇಶ್, ನಳಿನಿ ಕೃಷ್ಣಪ್ಪ, ವಿದ್ಯಾ ಅರಮನೆ, ಮೇ.ನಾ.ತರಂಗಣಿ , ಸಣ್ಣರಂಗಮ್ಮ, ಸುಶೀಲಾ ಸದಾಶಿವಯ್ಯ, ಜಮೀರ್ಪಾಷಾ, ನಿಡಸಾಲೆ ಪ್ರಸಾದ್, ಫಾಲಾಕ್ಷ ಆರ್.ಹಾಗಲವಾಡಿ, ಲಕ್ಷ್ಮಿನರಸಯ್ಯ, ಸಂತೋಷ್ ಮಡೇನೂರು, ಡಾ.ಎಚ್.ಡಿ.ಲೋಕೇಶ್, ಮಲ್ಲಿಕಾರ್ಜುನಸ್ವಾಮಿ, ಸಿದ್ದರಾಜು ಎಂ.ಎಸ್, ಶಾಂತಮೂರ್ತಿ ಆರ್., ಅವರು ಕವನ ವಾಚಿಸಿದರು. ನರಸಿಂಹಮೂರ್ತಿ ನಿರೂಪಿಸಿದರು.
ಇದನ್ನೂ ಓದಿ: Tumkur News: ಭಕ್ತಿ ಪರಾಕಾಷ್ಠೆಯಿಂದ ನಡೆದ ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವ