Wednesday, 23rd October 2024

2024 Nobel Economics Prize: ಡಾರೊನ್ ಅಸೆಮೊಗ್ಲು, ಸೈಮನ್ ಜಾನ್ಸನ್, ಜೇಮ್ಸ್ ಎ. ರಾಬಿನ್ಸನ್‌ಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

2024 Nobel Economics Prize

ಸ್ಟಾಕ್ಹೋಮ್ (ಸ್ವೀಡನ್‌): ಡಾರೊನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಮತ್ತು ಜೇಮ್ಸ್ ಎ. ರಾಬಿನ್ಸನ್ (Daron Acemoglu, Simon Johnson, James A. Robinson) ಅವರಿಗೆ 2024ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ (2024 Nobel Economics Prize) ಘೋಷಿಸಲಾಗಿದೆ. “ಸಂಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ” ಎಂಬ ಅಧ್ಯಯನಕ್ಕಾಗಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

“ರಾಜಕೀಯ ಸಂಸ್ಥೆಗಳು ರೂಪುಗೊಳ್ಳುವ ಮತ್ತು ಬದಲಾಗುವ ಸಂದರ್ಭಗಳನ್ನು ವಿವರಿಸುವ ಪ್ರಶಸ್ತಿ ವಿಜೇತರ ಮಾದರಿ 3 ಅಂಶಗಳನ್ನು ಹೊಂದಿದೆ. ಸಂಪನ್ಮೂಲಗಳನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ, ಸಮಾಜದಲ್ಲಿ ಯಾರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎನ್ನುವ ಸಂಘರ್ಷ ಮೊದಲನೆಯ ಅಂಶ” ಎಂದು ನೊಬೆಲ್ ಪ್ರಶಸ್ತಿ ಎಕ್ಸ್‌ (ಹಿಂಡಿನ ಟ್ವಿಟರ್)ನಲ್ಲಿ ತಿಳಿಸಿದೆ.

“ಎರಡನೆಯದು ಜನಸಾಮಾನ್ಯರು ಕೆಲವೊಮ್ಮೆ ಆಳುವ ಅಧಿಕಾರ ವರ್ಗ ಬೆದರಿಕೆ ಹಾಕುವ ಅವಕಾಶವನ್ನು ಹೊಂದಿರುತ್ತಾರೆ. ಆದ್ದರಿಂದ ಸಮಾಜದಲ್ಲಿ ಅಧಿಕಾರವು ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಗಿಂತ ಹೆಚ್ಚಾಗಿದೆ. ಮೂರನೆಯದು ಬದ್ಧತೆಯ ಸಮಸ್ಯೆ. ಗಣ್ಯರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಜನರಿಗೆ ಹಸ್ತಾಂತರಿಸುವುದು ಇದಕ್ಕಿರುವ ಏಕೈಕ ಪರ್ಯಾಯ ಮಾರ್ಗ” ಎಂದು ಎಕ್ಸ್‌ನಲ್ಲಿ ವಿವರಿಸಲಾಗಿದೆ.

ಕಳೆದ ವರ್ಷದ ವಿಜೇತರು

ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಕಳೆದ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಮಹಿಳೆಯರ ಕೆಲಸ ಮತ್ತು ಮಾರುಕಟ್ಟೆಯಲ್ಲಿ ಅವರ ಕೊಡುಗೆಯನ್ನು ಉತ್ತಮವಾಗಿ ಅರ್ಥೈಸಿಕೊಂಡಿದ್ದಕ್ಕಾಗಿ ಅವರಿಗೆ ಈ ಗೌರವವನ್ನು ನೀಡಲಾಗಿತ್ತು. ಕಾರ್ಮಿಕ ಮಾರುಕಟ್ಟೆಯಲ್ಲಿ ಗೋಲ್ಡಿನ್ ಅವರ ಸಂಶೋಧನೆಯನ್ನು ಸಮಿತಿಯು ಅತ್ಯುತ್ತಮವೆಂದು ಪರಿಗಣಿಸಿತ್ತು. ಅವರ ಸಂಶೋಧನೆಯು ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಅವರ ಗಳಿಕೆಯ ಬಗ್ಗೆ ಮಾಹಿತಿಯನ್ನು ನೀಡಿತ್ತು.

200 ವರ್ಷಗಳ ಡೇಟಾವನ್ನು ಅಧ್ಯಯನ ಮಾಡಿದ ನಂತರ ಗೋಲ್ಡಿನ್ ತನ್ನ ವರದಿಯನ್ನು ಸಿದ್ಧಪಡಿಸಿದ್ದರು. ಉದ್ಯೋಗ ಮತ್ತು ಗಳಿಕೆಯ ಮೇಲೆ ಲಿಂಗವು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಇದರಲ್ಲಿ ವಿವರಿಸಿದ್ದರು. ಗೋಲ್ಡಿನ್ ಅವರ ಸಂಶೋಧನೆಯ ಪ್ರಕಾರ, ಮಾರುಕಟ್ಟೆಗೆ ಮಹಿಳೆಯರ ಕೊಡುಗೆಯಲ್ಲಿ ನೇರ ಹೆಚ್ಚಳ ಕಂಡುಬಂದಿಲ್ಲ. ಬದಲಾಗಿ ಆರಂಭಿಕ ಹಂತದಲ್ಲಿ ಕಡಿಮೆಯಾಗಿ ಈಗ ಹೆಚ್ಚಾಗುತ್ತಿದೆ.

ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ 3ನೇ ಮಹಿಳೆ ಕ್ಲೌಡಿಯಾ ಗೋಲ್ಡಿನ್. ಇದಕ್ಕೂ ಮುನ್ನ 92 ಅರ್ಥಶಾಸ್ತ್ರ ಪ್ರಶಸ್ತಿ ವಿಜೇತರ ಪೈಕಿ ಕೇವಲ ಇಬ್ಬರು ಮಹಿಳೆಯರು ಮಾತ್ರ ಈ ಪ್ರಶಸ್ತಿ ಪಡೆದಿದ್ದರು. 1998ರಲ್ಲಿ ಈ ಗೌರವವನ್ನು ಪಡೆದ ಏಕೈಕ ಭಾರತೀಯ ಅಮರ್ತ್ಯ ಸೇನ್. ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆಯ ಸಿದ್ಧಾಂತಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಆರ್ಥಿಕ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.

ಈ ಬಾರಿಯ ನೊಬೆಲ್‌ ಪ್ರಶಸ್ತಿಯನ್ನು ಅಕ್ಟೋಬರ್‌ 7ರಿಂದ ಘೋಷಿಸಲಾಗಿದೆ. ಈ ಬಾರಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ ಅವರಿಗೆ ಘೋಷಿಸಲಾಗಿದೆ. ಇನ್ನು ಜಾನ್ ಜೆ. ಹಾಪ್‌ಫೀಲ್ಡ್‌ ಮತ್ತು ಜೆಫ್ರಿ ಇ. ಹಿಂಟನ್ ಅವರು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಂಬ್ರೋಸ್, ಗ್ಯಾರಿ ರುವ್ಕುನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿದೆ. ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಜಂಪರ್ ಭಾಜನರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Nobel Peace Prize 2024: ಜಪಾನಿನ ಸಂಸ್ಥೆ ನಿಹಾನ್ ಹಿಡಂಕ್ಯೊಗೆ ನೊಬೆಲ್ ಶಾಂತಿ ಪ್ರಶಸ್ತಿ