ದಿನೇದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ (Inflation Impacts) ಆಗುತ್ತಿದ್ದರೂ ಅದಕ್ಕೆ ಸರಿಸಮಾನವಾಗಿ ನಮ್ಮ ಆದಾಯದಲ್ಲಿ (Income) ವೃದ್ಧಿಯಾಗುತ್ತಿಲ್ಲ. ಇದು ಕಳೆದ ಮೂರು ನಾಲ್ಕು ವರ್ಷಗಳಿಂದ ಕೇಳಿ ಬರುತ್ತಿರುವ ಜನ ಸಾಮಾನ್ಯರ ಮಾತುಗಳು. ಈಗಾಗಲೇ ಬೆಲೆ ಏರಿಕೆ (Price hike) ಬಿಸಿ ಬಹುತೇಕ ಜನರನ್ನು ತಟ್ಟಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿ ಮುಟ್ಟಿಸಲಿದೆ. ಇದು ಹಣದುಬ್ಬರದ ಒಂದು ಪ್ರಮುಖ ಲಕ್ಷಣವಾಗಿದೆ.
ಹಣದುಬ್ಬರ ಎಂದರೇನು?
ಸರಳವಾಗಿ ಹೇಳುವುದಾದರೆ ವಸ್ತುವನ್ನು ಖರೀದಿ ಮಾಡುವ ನಮ್ಮ ಹಣದ ಮೌಲ್ಯ ಕಡಿಮೆಯಾಗುವುದು. ಒಂದು ಕೆಜಿ ಅಕ್ಕಿಯನ್ನು ಈಗ 50 ರೂ. ಗೆ ಖರೀದಿ ಮಾಡಿದರೆ ಒಂದೆರಡು ವರ್ಷಗಳ ಬಳಿಕ ಅದು 100 ರೂ. ಆಗಬಹುದು. ಆದರೆ ನಮ್ಮ ಆದಾಯ ಹೆಚ್ಚಳವಾಗಿರುವುದಿಲ್ಲ ಅಥವಾ ಅತ್ಯಲ್ಪವಾಗಿರುತ್ತದೆ. ಇದರಿಂದ ನಮ್ಮ ಖರೀದಿ ಮಾಡುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಇದನ್ನೇ ಹಣದುಬ್ಬರ ಎನ್ನಲಾಗುತ್ತದೆ.
ಹಣದುಬ್ಬರದ ಪರಿಣಾಮ ಏನು?
ಹಣದುಬ್ಬರವು ನಮ್ಮಲ್ಲಿರುವ ಹಣದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ಇವತ್ತು ನಿಮ್ಮಲ್ಲಿ 1 ಕೋಟಿ ರೂ. ಗಳಾಗಿದ್ದರೆ, ಕೆಲವು ವರ್ಷಗಳಲ್ಲಿ 1 ಕೋಟಿ ರೂ.ನ ಬೆಲೆ 17 ಲಕ್ಷ ರೂ.ಗಳಾಗಬಹುದು.
ಹಣದುಬ್ಬರವು ನಮ್ಮ ಸಂಪತ್ತಿನ ಮೇಲೆ ಗಣನೀಯ ಪರಿಣಾಮವನ್ನು ಬೀರುತ್ತದೆ. 1 ಕೋಟಿ ರೂ. ಉಳಿತಾಯ ಹಣದ ಮೇಲೆ ಹಣದುಬ್ಬರವು ಯಾವ ರೀತಿ ಪರಿಣಾಮ ಬೀರುತ್ತದೆ ಮತ್ತು ಅದರ ಪರಿಣಾಮ ತಗ್ಗಿಸುವುದು ಹೇಗೆ ಎನ್ನುವುದನ್ನು ನೋಡೋಣ.
ಹಣದುಬ್ಬರ ಅಗೋಚರ ಕಳ್ಳನಿದ್ದಂತೆ!
ಹಣದುಬ್ಬರದಿಂದ ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಕ್ರಮೇಣ ಹೆಚ್ಚಳವಾಗುತ್ತದೆ. ಬೆಲೆಗಳು ಹೆಚ್ಚಾದಂತೆ ನಾವು ಖರೀದಿ ಮಾಡುವ ಪ್ರಮಾಣವನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಉದಾಹರಣೆಗೆ ಹಣದುಬ್ಬರವು ವಾರ್ಷಿಕವಾಗಿ ಶೇ. 6ರಷ್ಟಿದ್ದರೆ 1 ಕೋಟಿ ರೂ. ಸಂಖ್ಯಾತ್ಮಕವಾಗಿ ಒಂದೇ ಆಗಿರುತ್ತದೆ. ಆದರೆ ಅದರ ಖರೀದಿ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗುತ್ತದೆ.
ಮೌಲ್ಯ ಕುಸಿತ
ವಾರ್ಷಿಕವಾಗಿ ಶೇ. 6ರಷ್ಟು ಹಣದುಬ್ಬರವಾದರೆ 1 ಕೋಟಿ ರೂ. ಮೌಲ್ಯ 10 ವರ್ಷಗಳ ಅನಂತರ ಸರಿಸುಮಾರು 55.87 ಲಕ್ಷ ರೂ. ಆಗಿರುತ್ತದೆ. ಅಂದರೆ ಅದರ ಖರೀದಿ ಸಾಮರ್ಥ್ಯ ಅರ್ಧದಷ್ಟು ನಷ್ಟವಾಗಿರುತ್ತದೆ. ಅದೇ 20 ವರ್ಷಗಳ ಅನಂತರ ಅದರ ಮೌಲ್ಯವು ಸುಮಾರು 31.15 ಲಕ್ಷ ರೂ. ಆಗಿರುತ್ತದೆ. ಇದು ಆರಂಭಿಕ ಖರೀದಿ ಸಾಮರ್ಥ್ಯದ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿರುತ್ತದೆ. ಹಾಗೆಯೇ 30 ವರ್ಷಗಳ ಅನಂತರ 1 ಕೋಟಿ ರೂ. ಮೌಲ್ಯ ಕೇವಲ ರೂ 17.42 ಲಕ್ಷ ರೂ. ಆಗುತ್ತದೆ. ಅದರ ಮೂಲ ಮೌಲ್ಯ ಕೇವಲ ಆರನೇ ಒಂದು ಭಾಗದಷ್ಟಾಗಿರುತ್ತದೆ.
ಹಣ ಏಕೆ ಮೌಲ್ಯ ಕಳೆದುಕೊಳ್ಳುತ್ತದೆ?
ಬೆಲೆಗಳು ಹೆಚ್ಚಾದಂತೆ ಸರಕು ಮತ್ತು ಸೇವೆಗಳನ್ನು ಖರೀದಿಸುವ ಹಣದ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವು ವರ್ಷಗಳ ಹಿಂದೆ 5 ರೂ.ಗೆ ಸಿಗುತ್ತಿದ್ದ ಒಂದು ಕಪ್ ಚಹಾ ಇಂದು 20 ರೂ. ಗೆ ದೊರೆಯುತ್ತಿದೆ. ಇದು ಹಣದುಬ್ಬರದ ಪರಿಣಾಮವಾಗಿದೆ.
ಸಂಪತ್ತನ್ನು ರಕ್ಷಿಸುವುದು ಹೇಗೆ?
ಹಣದುಬ್ಬರವನ್ನು ಎದುರಿಸಲು ಮತ್ತು ಉಳಿತಾಯವನ್ನು ಕುಗ್ಗುವ ಬದಲು ಬೆಳೆಯುವಂತೆ ಮಾಡಲು ಹಲವು ದಾರಿಗಳಿವೆ. ಅವುಗಳಲ್ಲಿ ಮುಖ್ಯವಾಗಿ..
ಇಕ್ವಿಟಿ ಮತ್ತು ಮ್ಯೂಚುಯಲ್ ಫಂಡ್‌ಗಳು
ಸ್ಟಾಕ್ ಮತ್ತು ಮ್ಯೂಚುಯಲ್ ಫಂಡ್‌ಗಳು ಹಣದುಬ್ಬರವನ್ನು ಮೀರಿಸುವಂತಹ ಆದಾಯವನ್ನು ನೀಡುತ್ತವೆ. ಶೇ. 10 ಪ್ರತಿಶತ ವಾರ್ಷಿಕ ಮಾರುಕಟ್ಟೆಯ ಬೆಳವಣಿಗೆಯು 1 ಕೋಟಿ ರೂ. ಅನ್ನು 10 ವರ್ಷಗಳಲ್ಲಿ ಸರಿಸುಮಾರು 2.59 ಕೋಟಿ ರೂ., 20 ವರ್ಷಗಳಲ್ಲಿ 6.73 ಕೋಟಿ ರೂ. ಮತ್ತು 30 ವರ್ಷಗಳಲ್ಲಿ 17.45 ಕೋಟಿ ರೂ. ಗಳಾಗಿ ಪರಿವರ್ತಿಸಬಹುದು.
ರಿಯಲ್ ಎಸ್ಟೇಟ್
ಆಸ್ತಿ ಮೌಲ್ಯಗಳು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಇದು ಉತ್ತಮ ಆದಾಯವನ್ನೂ ಕೊಡುತ್ತದೆ. ಆದರೆ ಸ್ಟಾಕ್ ಮಾರುಕಟ್ಟೆಯಂತೆಯೇ ರಿಯಲ್ ಎಸ್ಟೇಟ್ ಮಾರುಕಟ್ಟೆಗಳು ಏರಿಳಿತಗೊಳ್ಳಬಹುದು ಎಂಬುದನ್ನು ನೆನಪಿನಲ್ಲಿರಲಿ.
ಚಿನ್ನದ ಮೇಲೆ ಹೂಡಿಕೆ
ಹೆಚ್ಚಿನ ಹಣದುಬ್ಬರದ ಅವಧಿಯಲ್ಲಿ ಚಿನ್ನವನ್ನು ಸಾಮಾನ್ಯವಾಗಿ ಸುರಕ್ಷಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಹಣದುಬ್ಬರವು ಹೆಚ್ಚಾದಾಗ ಅದರ ಬೆಲೆ ಹೆಚ್ಚಾಗುತ್ತದೆ.
ಸುರಕ್ಷಿತ ಹೂಡಿಕೆ
ಸಾಂಪ್ರದಾಯಿಕ ಸ್ಥಿರ ಠೇವಣಿ ಮತ್ತು ಬಾಂಡ್‌ಗಳು ಹಣದುಬ್ಬರವನ್ನು ಎದುರಿಸುವಲ್ಲಿ ಸಹಾಯ ಮಾಡುತ್ತದೆ. ಕೆಲವು ಸರ್ಕಾರಿ ಬಾಂಡ್‌ಗಳು ಹಣದುಬ್ಬರ ದರಗಳಿಗೆ ಸರಿಯಾದ ಆದಾಯವನ್ನು ನೀಡುತ್ತವೆ. ಇದು ಏರುತ್ತಿರುವ ಬೆಲೆಗಳ ಪರಿಣಾಮವನ್ನು ತಗ್ಗಿಸುತ್ತವೆ.
ಹಣದುಬ್ಬರ ಭಾರತದಲ್ಲಿ ಹೇಗಿದೆ?
ಭಾರತದ ಹಣದುಬ್ಬರ ದರವು ಪ್ರಸ್ತುತ ಶೇ. 6.4ರ ಆಸುಪಾಸಿನಲ್ಲಿದೆ. ಸರ್ಕಾರದ ಹಣದುಬ್ಬರದ ನಿರ್ದಿಷ್ಟ ಗುರಿಯಾದ ಶೇ. 4- 6 ಅನ್ನು ಇದು ಮೀರಿದೆ. ಹೀಗಾಗಿ ಈಗಲೇ ನಮ್ಮ ಸಂಪತ್ತನ್ನು ರಕ್ಷಿಸಲು ಹೂಡಿಕೆ ನಿರ್ಧಾರಗಳನ್ನು ಸರಿಯಾಗಿ ಯೋಚಿಸಿ ತೆಗೆದುಕೊಳ್ಳುವುದು ಬಹಳ ಮುಖ್ಯ.