Tuesday, 26th November 2024

Arkavathy Layout issue: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

Arkavathy Layout issue

ಬೆಂಗಳೂರು: ಮುಡಾ ಹಗರಣದಲ್ಲಿ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅರ್ಕಾವತಿ ಲೇಔಟ್ ನಿವೇಶನ ಹಂಚಿಕೆಗೆ (Arkavathy Layout issue) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳು ಭೂಗಳ್ಳರ ಪಾಲಾಗುತ್ತಿವೆ ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ.

ಅರ್ಕಾವತಿ ಲೇಔಟ್‌ನಲ್ಲಿ ಸೈಟ್ ಹಂಚಿಕೆಯಾಗಿದ್ದ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ ರಾಜಶೇಖರ್ ಎಂಬುವವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತರು ಹಾಗೂ ಬಿಡಿಎ ಅಧಿಕಾರಿಗಳ ವಿರುದ್ದ ದೂರು ಸಲ್ಲಿಕೆ ಮಾಡಲಾಗಿದೆ. ಅರ್ಕಾವತಿ ಲೇಔಟ್‌ನಲ್ಲಿ ಸೈಟ್‌ ಹಂಚಿಕೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು ಕೆ.ನಾರಾಯಣಪುರ ಹಾಗೂ 16 ಹಳ್ಳಿಗಳೂ ಸೇರಿ ಸುಮಾರು 800 ಎಕರೆ ಪ್ರದೇಶದಲ್ಲಿ ಬಿಡಿಎಯಿಂದ ಅರ್ಕಾವತಿ ಬಡಾವಣೆ ನಿರ್ಮಾಣವಾಗಿತ್ತು. 2004ರಲ್ಲಿ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದ ಬಿಡಿಎಗೆ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಪೈಕಿ 20 ಸಾವಿರ ಫಲಾನುಭವಿಗಳನ್ನು ಪರಿಗಣಿಸಲಾಗಿತ್ತು. 12 ಸಾವಿರ ನಿವೇಶನದಾರರಿಗೆ ಬಿಡಿಎ ನಿವೇಶನ ನೋಂದಣಿ ಹಾಗೂ ಕ್ರಯಪತ್ರ ಮಾಡಿಕೊಡಲಾಗಿತ್ತು.

2006ರಲ್ಲಿ ನೂರಾರು ಮಂದಿಗೆ‌ ಬಿಡಿಎಯಿಂದ ನಿವೇಶನ ಹಂಚಿಕೆಯಾಗಿತ್ತು. 30×40 ನಿವೇಶನಕ್ಕೆ ಎರಡೂವರೆ ಲಕ್ಷ, 40×60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ಹಣ ಪಡೆದು ಹಂಚಿಕೆ ಮಾಡಿತ್ತು. ನೋಂದಣಿ ಪತ್ರ ಹಾಗೂ ಕ್ರಯಪತ್ರ ಪಡೆದ ನಿವೇಶನದಾರರು ಕನಿಷ್ಠ ಹತ್ತು ವರ್ಷ ನಿವೇಶನ ಮಾರಾಟ ಮಾಡುವಂತಿರರಲ್ಲ. ಆದರೆ, 2014ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್​ನಲ್ಲಿ ನೀಡಲಾಗಿದ್ದ ನಿವೇಶನ ಹಿಂಪಡೆದಿತ್ತು ಎಂದು ದೂರುದಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | India Canada row: ಬಿಷ್ಣೋಯ್‌ ಗ್ಯಾಂಗ್‌ ಜೊತೆ ಭಾರತದ ಏಜೆಂಟ್‌ಗಳಿಗೆ ನಂಟು; ಕೆನಡಾ ಗಂಭೀರ ಆರೋಪ

2006ರಿಂದ ನಿವೇಶನ ಸಂಬಂಧ ತೆರಿಗೆ ಪಾವತಿಸಲಾಗಿದೆ. 2014ರಿಂದ ಇದುವರೆಗೂ ನಿವೇಶನದಾರರು ಹಂಚಿಕೆಯಾಗಿ ರಿಜಿಸ್ಟರ್ ಆಗಿದ್ದ ಸೈಟ್ ಹಿಂಪಡೆಯಲಾಗಿದೆ. ಅಲ್ಲದೆ, ಮಾಲೀಕರಿಂದ ವಶಪಡಿಸಿಕೊಂಡ ಜಾಗವನ್ನು ಅವರಿಗೂ ಹಿಂದಿರುಗಿಸಿಲ್ಲ. ಹಂಚಿಕೆ ಮಾಡಿ ನೋಂದಣಿ ಮಾಡಿದ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅರ್ಕಾವತಿಯಲ್ಲಿ ಸೈಟಿಲ್ಲ, ಕೆಂಪೇಗೌಡ ಲೇಔಟ್​ನಲ್ಲಿ ನೋಡೋಣ ಎಂದು ನಿರ್ಲಕ್ಷ್ಯದಿಂದ ಅಧಿಕಾರಿಗಳು ಉತ್ತರಿಸುತ್ತಾರೆ. ಇದರಿಂದ ಅಸಲಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರುದಾರರು ಅಳಲು ತೋಡಿಕೊಂಡಿದ್ದಾರೆ.