Saturday, 23rd November 2024

Bengaluru Rain: ಭಾರಿ ಮಳೆ ಹಿನ್ನೆಲೆ ಬೆಂಗಳೂರಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

Bengaluru Rain

ಬೆಂಗಳೂರು: ರಾಜಧಾನಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯು ಭಾರಿ ಅವಾಂತರ ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ (Bengaluru Rain) ಬೆಂಗಳೂರಿನ ಶಾಲೆಗಳು, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಬೆಂಗಳೂರಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಅಂಗನವಾಡಿಗಳಿಗೆ ಅಕ್ಟೋಬರ್ 16ರಂದು ರಜೆ ಘೋಷಿಸಿದ್ದಾರೆ.

ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಕೆಲ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಮರು ಪರೀಕ್ಷೆ ನಿಗದಿ ಕಷ್ಟವಾಗಿರುವುದರಿಂದ ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ವಿವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Train Route: ರೈಲು ಪ್ರಯಾಣಿಕರ ಗಮನಕ್ಕೆ; ಸಂಚಾರದಲ್ಲಿ ಬದಲಾವಣೆ ಮಾಡಿದ ಉತ್ತರ ಮಧ್ಯ ರೈಲ್ವೆ

ಇದೇ ವೇಳೆ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಹಾಗೂ ವಿದ್ಯುತ್ ಕಂಬ, ತಂತಿ ಮೊದಲಾದ ಅಪಾಯಗಳ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ.

ಮುಂಜಾನೆಯಿಂದಲೇ ಹಿಡಿದ ಮಳೆ, ಮಲೆನಾಡಿನಂತಾದ ಬೆಂಗಳೂರು

bengaluru rain news

ಬೆಂಗಳೂರು: ಮುಂಜಾನೆಯಿಂದಲೇ ರಾಜಧಾನಿಯಲ್ಲಿ ಜಡಿಮಳೆ (Bengaluru rain news, Bangalore rain) ಸುರಿಯುತ್ತಿದೆ. ಬೆಳಗ್ಗೆ ಐದು ಗಂಟೆಯಿಂದಲೇ ಮಳೆ ಆರಂಭವಾಗಿದ್ದು ನಿರಂತರವಾಗಿ ಸುರಿಯುತ್ತಿದೆ. ಮೋಡದಿಂದ ಆವೃತವಾಗಿ ಮಂಕು ಕವಿದಂತಿದ್ದ ಆಕಾಶ ಮಲೆನಾಡನ್ನು ನೆನಪಿಸಿತು. ಬೆಳಗ್ಗೆ ಶಾಲೆ ಕಾಲೇಜುಗಳಿಗೆ ತೆರಳುವವರು ಮಳೆಯ ಪರಿಣಾಮ ಪರದಾಡಿದರು. ತಗ್ಗು ಪ್ರದೇಶಗಳು ಜಲಾವೃತವಾದವು.

ಮುಂಜಾನೆಯಿಂದ ಸುರಿದ ಮಳೆಗೆ ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಹಲವೆಡೆ ಮರಗಳು ಧರೆಗುಳಿದಿದ್ದು, ಮತ್ತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿವೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಹೊರಟ ಮಕ್ಕಳು ಯೂನಿಫಾರಂ ಒದ್ದೆಯಾದ ಪರಿಣಾಮ ಆತಂಕಕ್ಕೀಡಾದರು. ಮಲ್ಲೇಶ್ವರಂ, ಕೆಆರ್‌ ಮಾರ್ಕೆಟ್‌, ಹೆಬ್ಬಾಳ ರಸ್ತೆ, ಸಿಕ್ಲ್‌ ಬೋರ್ಡ್‌ ವೃತ್ತಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾದ ಪರಿಣಾಮ, ವಾಹನ ಚಾಲಕರು ಸಂಕಷ್ಟಕ್ಕೀಡಾದರು.

ಮಳೆಯಿಂದಾಗಿ HMT ಲೇಔಟ್​​ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮರ ನೆಲಕ್ಕುರುಳಿದ್ದು, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. 3 ತಿಂಗಳ ಹಿಂದೆ ಮರ ತೆರವು ಮಾಡುವಂತೆ ಬಿಬಿಎಂಪಿಗೆ ದೂರು ನೀಡಿದ್ದರೂ ಪರಿಗಣಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮಳೆಯಿಂದಾಗಿ ಹಲವೆಡೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ದ್ವಿಚಕ್ರ ವಾಹನ ಸವಾರರನ್ನು ಮಳೆ ಇನ್ನಿಲ್ಲದಂತೆ ಕಾಡಿದೆ. ಈಗಾಗಲೇ ಕೆಟ್ಟುಹೋಗಿರುವ ರಸ್ತೆಗಳಲ್ಲಿ ಮಳೆ ನೀರು ನಿಂತು, ಗುಂಡಿಗಳು ಎಲ್ಲಿವೆ ಎಂದು ತಿಳಿಯದ ಕಾರಣ ಭಯಪಡುತ್ತಿದ್ದಾರೆ. ಮಳೆಯ ಅಬ್ಬರದಿಂದ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ.

ಇದನ್ನೂ ಓದಿ: Karnataka Weather: ಹವಾಮಾನ ವರದಿ; ಇಂದು ಚಿಕ್ಕಬಳ್ಳಾಪುರ, ತುಮಕೂರು ಸೇರಿ ಹಲವೆಡೆ ಭಾರಿ ಮಳೆ ಮುನ್ಸೂಚನೆ

ಇನ್ನೂ ಮೂರು ದಿನ ಮಳೆ

ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಹಾಗೂ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಸೇರಿದಂತೆ ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮೇಲಿನ ಜಿಲ್ಲೆಗಳಿಗೆ ಮಂಗಳವಾರ ಹಾಗೂ ಬುಧವಾರ ಯೆಲ್ಲೋ ಅಲರ್ಟ್ ಹಾಗೂ ಅಕ್ಟೋಬರ್ 17ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.