ಕೆಲಸದ ಒತ್ತಡ ಎಷ್ಟೇ ಇದ್ದರೂ ರಾತ್ರಿ ಕೆಲವು ಗಂಟೆಗಳಾದರೂ ನಾವು ನಿದ್ರೆಗೆ (sleep) ಶರಣಾಗುತ್ತೇವೆ. ಈ ನಿದ್ರೆ (Sleepy Hollow Village) ನಮ್ಮನ್ನು ದೈನಂದಿನ ಕೆಲಸಕ್ಕೆ ಉತ್ತೇಜನ ತುಂಬುತ್ತದೆ. ಕೆಲವೊಮ್ಮೆ ಮಧ್ಯಾಹ್ನ ಹೊತ್ತಿಗೆ ಎಷ್ಟೇ ತೂಕಡಿಕೆ ಉಂಟಾದರೂ ಕಚೇರಿ ಕೆಲಸದ ಮಧ್ಯೆ ಮಲಗುವ ಹಾಗಿಲ್ಲ. ಆಗ ಛೇ ನಿದ್ದೆ ಬಂದಾಗ ಹಾಯಾಗಿ ಮಲಗುವ ಅವಕಾಶ ಸಿಗಬೇಕು ಎಂದೆನಿಸುವುದು ಉಂಟು.
ಉತ್ತಮ ಆರೋಗ್ಯಕ್ಕೆ ದಿನಕ್ಕೆ 7ರಿಂದ 8 ಗಂಟೆಗಳ ನಿದ್ರೆ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಆದರೆ ಅತಿಯಾದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಜನರು ದಿನವಿಡೀ ಮಲಗಿದರೆ ಅಥವಾ ಕುಳಿತುಕೊಳ್ಳುವಾಗ, ಮಾತನಾಡುವಾಗ, ನಡೆಯುವಾಗ ನಿದ್ರೆಗೆ ಜಾರಿದರೆ ಏನು ಮಾಡುವುದು. ಇದೇ ರೀತಿಯಾಗಿ ನಿದ್ರೆ ಹೋಗುವ ಜನರಿರುವ ಹಳ್ಳಿಗಳಿವೆ ಎಂದು ಕೇಳಿದರೆ ಆಶ್ಚರ್ಯವಾಗಬಹುದಲ್ಲವೇ?
ಈ ಗ್ರಾಮಗಳ ಜನರು ದಿನವಿಡೀ ನಿದ್ರಿಸುತ್ತಾರೆ. ಆದರೂ ಅವರ ನಿದ್ರೆ ಪೂರ್ಣವಾಗುವುದಿಲ್ಲ. ಒಂದು ತಿಂಗಳ ಕಾಲ ಇಲ್ಲಿನ ಜನರನ್ನು ಎಬ್ಬಿಸದಿದ್ದರೂ ಅವರಿಗೆ ಯಾವುದೇ ತೊಂದರೆ ಇಲ್ಲ. ಅಂತಹ ವಿಶಿಷ್ಟ ಹಳ್ಳಿಗಳೆರಡು ಕಝಾಕಿಸ್ತಾನದಲ್ಲಿದೆ. ಹಲವು ತಿಂಗಳುಗಳ ಕಾಲ ಜನರು ಮಲಗುವ ಕಝಾಕಿಸ್ತಾನದ ಈ ಗ್ರಾಮಗಳ ಹೆಸರು ಕಲಾಚಿ ಮತ್ತು ಕ್ರಾಸ್ನೋಗೊರ್ಸ್ಕ್. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಒಂದು ತಿಂಗಳ ಕಾಲ ನಿದ್ರಿಸುತ್ತಾನೆ. ಹೀಗಾಗಿ ಈ ಗ್ರಾಮಗಳನ್ನು ‘ಸ್ಲೀಪಿ ಹಾಲೋ’ ಎಂದು ಕರೆಯಲಾಗುತ್ತದೆ. ನಿದ್ದೆ ಬಂದರೆ ಎಷ್ಟೇ ಪ್ರಯತ್ನಿಸಿದರೂ ಏಳಲಾರದಂತಹ ಸ್ಥಿತಿ ಇಲ್ಲಿನ ಕೆಲವರದ್ದು. ನಿದ್ರೆ ಮಾಡುತ್ತಿರುವವರ ಹತ್ತಿರ ಹೋಗಿ ಬಾಂಬ್ ಸ್ಫೋಟಿಸಿದರೂ ಅಥವಾ ಜೋರಾಗಿ ಡಿಜೆ ನುಡಿಸಿದರೂ ಅವರು ಎಚ್ಚರಗೊಳ್ಳುವುದಿಲ್ಲ.
ಏನು ಕಾರಣ?
ವೈಜ್ಞಾನಿಕ ಸಂಶೋಧನೆಯ ಪ್ರಕಾರ ಇದು ಆ ಗ್ರಾಮಗಳ ಜನರು ಆಯ್ಕೆ ಮಾಡಿಕೊಂಡಿರುವ ದಿನಚರಿಯಲ್ಲ. ಬದಲಿಗೆ ಈ ಸಮಸ್ಯೆಗೆ ಮುಖ್ಯ ಕಾರಣ ಗ್ರಾಮಗಳ ಕಲುಷಿತ ನೀರು ಮತ್ತು ಗಾಳಿ. ವಿಜ್ಞಾನಿಗಳು ವಿವಿಧ ಪರೀಕ್ಷೆಗಳನ್ನು ನಡೆಸಿದ ಬಳಿಕ ಗ್ರಾಮದ ನೀರು, ಗಾಳಿಯಲ್ಲಿ ಕಾರ್ಬನ್ ಮೊನೊ-ಆಕ್ಸೈಡ್ ಪತ್ತೆಯಾಗಿದೆ.
ಗ್ರಾಮಗಳ ಹತ್ತಿರವಿರುವ ಯುರೇನಿಯಂ ಗಣಿಯಿಂದ ಕಾರ್ಬನ್ ಮೊನೊ-ಆಕ್ಸೈಡ್ ಹಳ್ಳಿಯ ಜನರು ಬಳಸುವ ನೀರಿನಲ್ಲಿ ಸೇರಿಕೊಂಡಿದೆ. ಈ ಕಾರಣದಿಂದಲೇ ಇಲ್ಲಿನ ಜನರು ಹಲವು ತಿಂಗಳುಗಳ ಕಾಲ ನಿದ್ದೆ ಮಾಡುತ್ತಾರೆ.
ಹೆಚ್ಚು ನಿದ್ರೆಯಿಂದ ತೊಂದರೆ
ಕಲಾಚಿಯ ಜನರು ಹೆಚ್ಚು ನಿದ್ರೆಯನ್ನು ಬಯಸುವುದಿಲ್ಲ. ಬದಲಿಗೆ ಅವರ ನಿದ್ರೆಯಿಂದ ತುಂಬಾ ತೊಂದರೆಗೊಳಗಾಗುತ್ತಾರೆ. ಯಾಕೆಂದರೆ ಒಬ್ಬ ವ್ಯಕ್ತಿಯು ರಸ್ತೆಯ ಮಧ್ಯದಲ್ಲಿ ಮಲಗಿದರೆ ಅವನು ತಿಂಗಳುಗಟ್ಟಲೆ ಮಲಗಿರುತ್ತಾನೆ. ಎಷ್ಟೋ ಜನರಿಗೆ ನಿದ್ರೆಯಿಂದ ಎದ್ದ ಬಳಿಕ ಅವರು ಹೇಗೆ ಮತ್ತು ಎಷ್ಟು ಸಮಯದಿಂದ ಮಲಗಿದ್ದರು ಎಂಬುದು ಅವರಿಗೆ ತಿಳಿದಿರುವುದಿಲ್ಲ. ಈ ರೀತಿಯ ನಿದ್ರೆಯಿಂದಾಗಿ ಅವರ ಮೆದುಳು ನಿಷ್ಕ್ರಿಯಗೊಂಡಿರುತ್ತದೆ, ಕೆಲವರಿಗೆ ತಲೆನೋವು ಕಾಡುತ್ತದೆ ಎನ್ನಲಾಗಿದೆ.
2010ರಲ್ಲಿ ಶಾಲೆಯೊಂದರ ಅನೇಕ ಮಕ್ಕಳು ತರಗತಿಯಲ್ಲೇ ಮಲಗಿದ್ದರು. ಹಲವಾರು ದಿನಗಳ ಕಾಲ ಅವರಿಗೆ ಎಚ್ಚರವಾಗಿರಲಿಲ್ಲ. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಯಾರೊಬ್ಬರೂ ಎಚ್ಚೆತ್ತುಕೊಳ್ಳಲಿಲ್ಲ. ಕ್ರಮೇಣ ಗ್ರಾಮದ ಶೇ. 14ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿಯಿತು.
ಒಟ್ಟು 810 ಜನಸಂಖ್ಯೆಯನ್ನು ಹೊಂದಿರುವ ಎರಡು ಗ್ರಾಮಗಳ 140ಕ್ಕೂ ಹೆಚ್ಚು ಜನರು ಕೆಲಸದ ಮಧ್ಯದಲ್ಲಿಯೇ ನಿದ್ರೆಗೆ ಜಾರುತ್ತಾರೆ. ಕೆಲವರು ಸತತ ಒಂದು ವಾರ ಎಚ್ಚರಗೊಳ್ಳದ ಕಾರಣ 2013ರಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
2015ರಲ್ಲಿ ಕಝಾಕಿಸ್ತಾನದ ಉಪ ಪ್ರಧಾನ ಮಂತ್ರಿಯಾಗಿದ್ದ ಬರ್ಡಿಬೆಕ್ ಸಪರ್ಬಾವ್ ಅವರು ಗ್ರಾಮದ ಜನರ ಈ ಸಮಸ್ಯೆಗೆ ಯುರೇನಿಯಂ ಗಣಿಗಳು ಮೂಲ ಕಾರಣ ಎಂದು ದೃಢಪಡಿಸಿದರು.
ಎಲ್ಲಾ ನಿವಾಸಿಗಳ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳನ್ನು ಪರಿಶೀಲಿಸಿದ ಅನಂತರ ಗಾಳಿಯಲ್ಲಿ ಕಾರ್ಬನ್ ಮೊನೊ-ಆಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳ ಪ್ರಮಾಣದಿಂದ ಹೀಗಾಗುತ್ತಿದೆ ಎಂಬುದನ್ನು ಸಂಶೋಧಕರು ತೀರ್ಮಾನಿಸಿದ್ದಾರೆ. 2015ರಿಂದ ಕಝಕಿಸ್ತಾನದ ಸರ್ಕಾರವು ಕಲಾಚಿ ಮತ್ತು ಕ್ರಾಸ್ನೋಗೊರ್ಸ್ಕ್ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡುತ್ತಿದೆ.