ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ (Martin Movie) ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಕುರಿತಂತೆ ಹಲವರು ಅಭಿಪ್ರಾಯ ನೀಡುತ್ತಿದ್ದಾರೆ. ಈ ನಡುವೆ ಮಾರ್ಟಿನ್ ಚಿತ್ರ ತುಂಬಾ ಕೆಟ್ಟದಾಗಿದೆ ಎಂದು ರಿವ್ಯೂ ನೀಡಿದ್ದ ಖ್ಯಾತ ಯೂಟ್ಯೂಬರ್ ಸುಧಾಕರ್ ಗೌಡ (sudhakar gowda) ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಚೆನ್ನಾಗಿಲ್ಲ ಎಂದು ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್ ವಿಡಿಯೊ ಹಾಕಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಧ್ರುವ ಸರ್ಜಾ ಅಭಿಮಾನಿಗಳಿಂದ ಯೂಟ್ಯೂಬರ್ಗೆ ಬೆದರಿಕೆ ಕರೆಗಳು ಹೋಗಿದ್ದವು. ಅಲ್ಲದೇ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ನಟ ಧ್ರುವ ಸರ್ಜಾ ಅಭಿಮಾನಿಗಳು ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದರು.
ನಟ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾದ ಕುರಿತಂತೆ ವಿಮರ್ಶೆ ಮಾಡಿದ್ದ ಯೂಟ್ಯೂಬರ್ ಸ್ಟ್ರಾಂಗ್ ಸುಧಾಕರ್, ನಾನು ಜೀವನದಲ್ಲಿ ನೋಡಿದ ಅತ್ಯಂತ ಕೆಟ್ಟ ಸಿನಿಮಾ ಮಾರ್ಟಿನ್. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಎಲ್ಲರೂ ಕೆಜಿಎಫ್ ಸಿನಿಮಾ ಕಾಪಿ ಮಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾ ಮಾದರಿಯಲ್ಲಿಯೇ ಕಳಪೆಯಾಗಿ ಉಪೇಂದ್ರ ಅವರ ‘ಕಬ್ಜ’ ಸಿನಿಮಾ ಮಾಡಲಾಗಿದೆ. ಕಬ್ಜ ಸಿನಿಮಾದ ಮುಂದುವರಿದ ಕಳಪೆ ಭಾಗ ಎನ್ನುವಂತಹ ರೀತಿಯಲ್ಲಿ ಮಾರ್ಟಿನ್ ಸಿನಿಮಾ ಮಾಡಲಾಗಿದೆ ಎಂದು ಸುಧಾಕರ್ ಹೇಳಿದ್ದರು.
ನೆಗೆಟಿವ್ ವಿಮರ್ಶೆ ಮಾಡಿದ್ದ ಹಿನ್ನೆಲೆಯಲ್ಲಿ ಸುಧಾಕರ್ ವಿರುದ್ಧ ಧ್ರುವ ಸರ್ಜಾ ಫ್ಯಾನ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ, ವಿಡಿಯೊ ಡಿಲೀಟ್ ಮಾಡಿಸಿದ್ದರು. ಆದರೆ ಇದೀಗ ಮಾದನಾಯಕನಹಳ್ಳಿ ಪೊಲೀಸರು ಹಲ್ಲೆ ಕೇಸ್ವೊಂದರಲ್ಲಿ ರೀಲ್ಸ್ ಸ್ಟಾರ್ ಸುಧಾಕರ್ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Bomb scare : ಮಂಗಳವಾರ ಒಂದೇ ದಿನ ನಾಲ್ಕು ವಿಮಾನಗಳಿಗೆ ಬಾಂಬ್ ಬೆದರಿಕೆ!
ಹಲ್ಲೆ ಪ್ರಕರಣವೊಂದರಲ್ಲಿ ಸುಧಾಕರ್ ಭಾಗಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಸುಧಾಕರ್ ವಿರುದ್ಧ ವಾರೆಂಟ್ ಸಹ ಜಾರಿ ಮಾಡಿದ್ದರು. ಈ ಸಂಬಂಧ ಸುಧಾಕರ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.