Monday, 25th November 2024

Cherkady Sachidanand Shetty Column: ಅವೈಜ್ಞಾನಿಕ ವೀಟೋ ಪವರ್

ವಿಚಾರ ವೇದಿಕೆ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ವಿಶ್ವಸಂಸ್ಥೆಯು ಕೇವಲ ಬಲಿಷ್ಠ ರಾಷ್ಟ್ರಗಳ ತಾಳಕ್ಕೆ ತಕ್ಕಂತೆ ನರ್ತಿಸಿದರೆ, ಅದರ ಅಸ್ತಿತ್ವಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಅದರ ಸ್ಥಾಪನೆಯ ಉದ್ದೇಶವು ವಿಫಲಗೊಂಡಂತೆ ಆಗುತ್ತದೆ. ಈಗಾಗಲೇ ಆ ಕಾರ್ಯವು ಯಥಾವತ್ತಾಗಿ ಆಗಿದೆ. ಅವೈಜ್ಞಾನಿಕ ‘ವೀಟೋ ಪವರ್ ’ನಿಂದಾಗಿ ವಿಶ್ವಸಂಸ್ಥೆಯು ಒಂದು ಅಸಮರ್ಥ ಅಸ್ತಿತ್ವವಾಗಿದೆ.

ಯುದ್ಧ ಮತ್ತು ಶಾಂತಿ ಇವು ಅಂತಾರಾಷ್ಟ್ರೀಯ ಬಾಂಧವ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿದ್ದು ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿಯಾಗಿ ಪಾತ್ರ ವಹಿಸುತ್ತಿಲ್ಲ. ಇಂದಿನ ಅತ್ಯಾಧುನಿಕ ಯುದ್ಧೋಪಕರಣಗಳು ಒಂದಿಡೀ ಮಾನವ ಕುಲವನ್ನು ಕ್ಷಣಾರ್ಧದಲ್ಲಿ ನಾಶಮಾಡಬಲ್ಲಂಥ ವಿನಾಶಕಾರಿ ಸ್ವರೂಪದ್ದಾಗಿವೆ ಎಂಬ
ಅಪ್ರಿಯ ಸತ್ಯವು ವಿಶ್ವಸಂಸ್ಥೆಗೆ ಇನ್ನೂ ಅರ್ಥವಾಗದಿರುವುದು ವಿಷಾಧನೀಯ. ವಿಶ್ವಶಾಂತಿಗೆ ಭಂಗ ತರುವ ಸಮಸ್ಯೆಗಳನ್ನು ವಿಶ್ವಸಂಸ್ಥೆಯೇ ಬಗೆಹರಿಸಬೇಕಲ್ಲವೇ? ಎಲ್ಲಕ್ಕೂ ಮೊದಲಾಗಿ, ಲೋಕಕಲ್ಯಾಣದ ಚಿಂತನೆ ಗಳನ್ನು ಹೊಂದಿರುವ ಮುತ್ಸದ್ದಿ ನಾಯಕರ ಅಗತ್ಯವಿದೆ ಈ ವಿಶ್ವಸಂಸ್ಥೆಗೆ.

ವಿಶ್ವಸಂಸ್ಥೆಯ ಇಂದಿನ ವೈಫಲ್ಯಕ್ಕೆ ಅದರ ಭದ್ರತಾ ಮಂಡಳಿಯೇ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ಈ ಮಂಡಳಿಯಲ್ಲಿನ ಐದು ಕಾಯಂ ಸದಸ್ಯ ರಾಷ್ಟ್ರಗಳ ಹಿತಾಸಕ್ತಿಗಳು ಜಗತ್ತಿನ ಇತರ ಕೆಲವು ದೇಶಗಳ ನಡುವಿನ ವೈಮನಸ್ಸಿಗೂ ಕಾರಣವಾಗಿವೆ. ಈ ಐದು ರಾಷ್ಟ್ರಗಳು ತಮ್ಮ ಹಿತಾಸಕ್ತಿಯನ್ನು ಬಿಟ್ಟುಕೊಡುವ ಕೆಲಸವನ್ನು ಎಂದಿಗೂ ಮಾಡಲೇ ಇಲ್ಲ. ವಿಶ್ವಸಂಸ್ಥೆಯು ಪ್ರಾರಂಭದಿಂದಲೂ ಜಗತ್ತಿನ ಒಂದೂ ಯುದ್ಧವನ್ನು ನಿಲ್ಲಿಸಿಲ್ಲ, ನಿಲ್ಲಿಸಲು ಅದಕ್ಕೆ ಆಗಿಯೂ ಇಲ್ಲ.

ಪ್ರಸ್ತುತ ನಡೆಯುತ್ತಿರುವ ಯುದ್ಧಗಳೆಡೆಗೆ ಗಮನ ಹರಿಸುವುದಕ್ಕೂ ಮುನ್ನ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಅರಿಯೋಣ. ಇದರಲ್ಲಿರುವ ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳನ್ನು ಬಿಟ್ಟು ಉಳಿದ ಮೂರು ದೇಶಗಳಾದ ಅಮೆರಿಕ, ರಷ್ಯಾ ಮತ್ತು ಚೀನಾದ ಸ್ವಹಿತಾಸಕ್ತಿಗಳು ಇಲ್ಲಿ ಹೆಚ್ಚು ಕೆಲಸ ಮಾಡುತ್ತವೆ.

ಮೊದಲೇ ಉಲ್ಲೇಖಿಸಿದಂತೆ, ವಿಶ್ವಸಂಸ್ಥೆಯ ಅವೈಜ್ಞಾನಿಕ ‘ವೀಟೋ ಪವರ್’ ಜಾಗತಿಕ ಅಶಾಂತಿಗಿರುವ ಪ್ರಮುಖ ಕಾರಣಗಳ ಲ್ಲೊಂದು. ವಿಶ್ವಸಂಸ್ಥೆಯನ್ನು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ವಿಸ್ತರಿಸುವ ಮತ್ತು ಅದರ ಅಂಗ ಸಂಸ್ಥೆಗಳಲ್ಲಿನ ಪ್ರಾತಿನಿಧ್ಯವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ವಿಶ್ವಸಂಸ್ಥೆಯ ಒಟ್ಟಾರೆ ಕಾರ್ಯವ್ಯಾಪ್ತಿಯಲ್ಲಿ ಸುಧಾರಣೆ ತರುವ ಅಗತ್ಯವಿದೆ. ಜಗತ್ತಿನ ವಿವಿಧ ಸ್ತರಗಳಲ್ಲಿ ಮತ್ತು ಆಯಾಮಗಳಲ್ಲಿ ರಾಜಕೀಯವಾಗಿ, ಆರ್ಥಿಕ ವಾಗಿ ಮತ್ತು ವೈಜ್ಞಾನಿಕವಾಗಿ ಅದೆಷ್ಟೋ ಬದಲಾವಣೆಗಳಾಗಿವೆ. ಆದರೆ ವಿಶ್ವಸಂಸ್ಥೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ವಿಶ್ವಸಂಸ್ಥೆಯಲ್ಲಿ ಬದಲಾವಣೆ ಆಗಬೇಕಿರುವ ಬಗ್ಗೆ ಕೆಲವು ವರ್ಷಗಳಿಂದ ಪ್ರಬಲವಾಗಿ ಪ್ರತಿಪಾದಿ ಸುತ್ತಾ ಬಂದಿರುವ ಭಾರತವು, ಅದರ ಭದ್ರತಾ ಮಂಡಳಿಯಲ್ಲಿ ತನಗೆ ಕಾಯಂ ಸದಸ್ಯತ್ವವನ್ನು ನೀಡಬೇಕೆಂಬ ಆಗ್ರಹವನ್ನು ಜಾಗತಿಕ ಸಮುದಾಯದ ಮುಂದೆ ಮಂಡಿಸಿದೆ. ಈ ಕುರಿತಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸತತವಾಗಿ ತನ್ನ ಉಮೇದುವಾರಿಕೆಯನ್ನು ಮಂಡಿಸುವುದರ ಜತೆಗೆ, ಇತರ ಚುನಾಯಿತ ರಾಷ್ಟ್ರಗಳ ಬೆಂಬಲ ಪಡೆಯುವ ಯತ್ನದಲ್ಲೂ ವ್ಯಸ್ತವಾಗಿದೆ.

ಭಾರತದ ಈ ಮಹತ್ವಾಕಾಂಕ್ಷೆಗೆ ಈಗಾಗಲೇ ತಮ್ಮ ಬೆಂಬಲ ಘೋಷಿಸಿರುವ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾ, ಈ ನಿಟ್ಟಿನಲ್ಲಿನ ಭಾರತದ ಯತ್ನಗಳಿಗೆ ಕೈಜೋಡಿಸಿವೆ. ಭದ್ರತಾ ಮಂಡಳಿ ಏಕೆ ಕಾರ್ಯಕಾರಿ ಆಗಿಲ್ಲ ಎಂಬುದಕ್ಕೆ ಉತ್ತರಿಸುವವರಿಲ್ಲ. ಮಂಡಳಿಯಲ್ಲಿ ಭಾರತ, ಜರ್ಮನಿ, ಜಪಾನ್, ಬ್ರೆಜಿಲ್, ಅರ್ಜೆಂಟೀನಾ, ದಕ್ಷಿಣ ಆಫ್ರಿಕಾಗಳಂಥ ದೇಶಗಳಿಗೆ ಕಾಯಂ ಸದಸ್ಯತ್ವ ನೀಡಬೇಕು ಎಂಬ ವಾದವಿದೆ; ಆದರೆ ಪ್ರತಿಯೊಂದು ದೇಶಕ್ಕೂ ಒಬ್ಬೊಬ್ಬರು ವಿರೋಽಗಳಿದ್ದಾರೆ. ಜಪಾನ್ ಮತ್ತು ಭಾರತದ ಕಾಯಂ ಸದಸ್ಯತ್ವದ ಬಗ್ಗೆ ಚೀನಾದ ಆಕ್ಷೇಪ ಇದ್ದೇ ಇದೆ. ಆದರೆ ಇದೇ ಚೀನಾಕ್ಕೇ ತನ್ನ ಸ್ಥಾನವನ್ನು ಕೈಚೆಲ್ಲಿ ಭಾರತ ಬೆಂಬಲಿಸಿತ್ತು ಎಂಬುದು ಗಮನಾರ್ಹ.

ವಿಶ್ವಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಡೆಸುತ್ತಿರುವ ಪ್ರಯತ್ನ ಹಾಗೂ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿನ ಸಾಮರ್ಥ್ಯದ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವೇನು ಎಂಬುದನ್ನು ಬಿಂಬಿಸಿದೆ; ತನ್ಮೂಲಕ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ತಾನೆಷ್ಟು ಅರ್ಹ ಎಂಬುದನ್ನು ಸಾಬೀತುಪಡಿಸಿದೆ ಎನ್ನಲಡ್ಡಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಜಾಗತಿಕ ಪ್ರಭಾವವು ವೃದ್ಧಿಸುತ್ತಿದೆ. ಪ್ಯಾರಿಸ್ ಒಪ್ಪಂದ, ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ ಈ ಎಲ್ಲ ವಿಷಯ ಗಳಲ್ಲಿನ ಭಾರತ ಆಸಕ್ತಿ ಮತ್ತು ಆಲೋಚನೆಗಳು, ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಭಾರತಕ್ಕಿರುವ ಬದ್ಧತೆಯನ್ನು ತೋರಿಸುತ್ತವೆ. ಹೀಗಾಗಿ, ಭಾರತವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಪಡೆಯು ವಂತಾಗಬೇಕೆಂದು ವಿಶ್ವದ ಇತರ ರಾಷ್ಟ್ರಗಳು ಉತ್ಸುಕತೆಯನ್ನು ತೋರಿಸುತ್ತಿದ್ದು, ಇದು ಭದ್ರತಾ ಮಂಡಳಿಯ ಸದಸ್ಯತ್ವವನ್ನು ಪಡೆಯುವಲ್ಲಿ ಭಾರತಕ್ಕೆ ಪರೋಕ್ಷವಾಗಿ ನೆರವಾಗಬಲ್ಲದು.

ಭದ್ರತಾ ಮಂಡಳಿಯ ವಿಷಯದಲ್ಲಿ ತಾನು ‘ಔಟ್‌ಡೇಟೆಡ್’ ಆಗಿರುವುದು ವಿಶ್ವಸಂಸ್ಥೆಗೆ ಅರಿವಾದಂತಿಲ್ಲ; ಒಂದೊಮ್ಮೆ ಆ ಪರಿಜ್ಞಾನ ವಿದ್ದರೂ ಕುರುಡನಂತೆ ವರ್ತಿಸುತ್ತಿದ್ದರೆ ಅದು ಇಡೀ ಜಗತ್ತಿಗೇ ರವಾನೆಯಾಗುತ್ತಿರುವ ಒಂದು ತಪ್ಪು ಸಂದೇಶವಾಗಿದೆ. ಆದ್ದರಿಂದ, ಭದ್ರತಾ ಮಂಡಳಿಯ ಸುಧಾರಣೆಯಾಗಿ, ವೀಟೋ ಅಧಿಕಾರವನ್ನು
ತೆಗೆದು, ಪ್ರಜಾಪ್ರಭುತ್ವ ಆಧರಿತವಾಗಿ ಮುನ್ನಡೆದರೆ ಜಾಗತಿಕ ಸಮಸ್ಯೆಗಳಿಗೆ ಕೊಂಚ ಮಟ್ಟಿನ ಪರಿಹಾರವನ್ನಾ ದರೂ ಹುಡುಕಬಹುದು.

ವಿಶ್ವಸಂಸ್ಥೆಯ ಸ್ಥಾಪನೆಯಾಗಿ 79 ವರ್ಷಗಳು ಕಳೆದಿದ್ದು, ಅಂದಿನಿಂದ ಪ್ರಪಂಚವು ಬಹಳಷ್ಟು ಬದಲಾಗಿದೆ. ಬದಲಾದ ಕಾಲಘಟ್ಟದಲ್ಲಿ ಜಗತ್ತಿನೆದುರು ಸಾಕಷ್ಟು ಸವಾಲುಗಳಿದ್ದು, ವಿಶ್ವಸಂಸ್ಥೆಯ ಹಾಲಿ ವ್ಯವಸ್ಥೆಯಿಂದ ಇದನ್ನು ನಿಭಾಯಿಸುವುದು ಕಷ್ಟಸಾಧ್ಯ. ಆದ್ದರಿಂದ ವಿಶ್ವಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪ್ರಾತಿ ನಿಧಿಕ ಸಂಸ್ಥೆಯಾಗಿ ರೂಪಿಸಬೇಕು. ಅದರ ಹಳೆಯ ನಿಲುವುಗಳು ಬದಲಾಗಬೇಕು; ಏಕೆಂದರೆ, ಜಗದ ರಾಜಕೀಯ-ಆರ್ಥಿಕ ನಕಾಶೆಗಳು ಬದಲಾಗಿದ್ದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಲುವು ಮಾತ್ರ ನಿಂತ ನೀರಾಗಿದೆ!

ವಿಶ್ವಸಂಸ್ಥೆಯ ಸ್ಥಾಪನೆಯಾಗಿದ್ದು ಜಾಗತಿಕ ಶಾಂತಿಗಾಗಿಯೇ; ಕೇವಲ ಯುದ್ಧದ ಮೇಲಷ್ಟೇ ಗಮನವಿಡದೆ ಮಾನವ ಹಕ್ಕುಗಳ ರಕ್ಷಣೆ, ಪರಿಸರ ಸಂರಕ್ಷಣೆ, ಆರೋಗ್ಯ ಸೇರಿದಂತೆ ಎಲ್ಲಾ ರಂಗಗಳಿಗೆ ಸಂಬಂಧಿಸಿದ ವಿಭಾಗಗಳು ರಚನೆ ಯಾಗಿವೆ. ವಿಶ್ವಶಾಂತಿಯ ಪಾಲನೆ ಎಂಬ ಮಾತು ಬಂದಾಗ ಎಲ್ಲಾ ರಾಷ್ಟ್ರಗಳಿಗೆ ನೆನಪಾಗುವ ದೇಶ ಭಾರತ. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸಿಕೊಂಡಿರುವ ಭಾರತವು ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ; ಜಗತ್ತಿನ 4ನೇ ಅತಿದೊಡ್ಡ ಸೈನ್ಯವನ್ನು ಹೊಂದಿರುವ ಭಾರತವು ಜಿ-೨೦, ‘ಕ್ವಾಡ್’ನಂಥ ಜಾಗತಿಕ ಮಟ್ಟದ ಕೂಟಗಳಲ್ಲಿ ಭಾಗೀದಾರ ಎನಿಸಿಕೊಂಡಿದೆ. ಇಷ್ಟಾಗಿಯೂ, ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನವನ್ನೇಕೆ ಪಡೆಯಲಿಲ್ಲ ಎಂಬುದು ಭಾರತೀಯರನ್ನು ಮಾತ್ರವಲ್ಲದೆ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿರುವ ಪ್ರಶ್ನೆಯೂ ಹೌದು.

ಎಲ್ಲೆಡೆ ಅಶಾಂತಿ, ಯುದ್ಧ, ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಿರುವ ಈ ದಿನಗಳಲ್ಲಿ ಪ್ರಬಲ ನಾಯಕತ್ವವೊಂದನ್ನು ಎದುರುನೋಡುತ್ತಿರುವ ಜಗತ್ತಿಗೆ ಭಾರತದ ಪ್ರಾಮುಖ್ಯ ಅರಿವಾಗತೊಡಗಿದೆ. ಭಾರತಕ್ಕೆ ಇಂಥದೊಂದು ಅಧಿಕಾರ ದಕ್ಕಬೇಕಿರುವುದರ ಮಹತ್ವ ಜಗತ್ತಿನ ಇತರ ರಾಷ್ಟ್ರ ಗಳಿಗೆ ಮನವರಿಕೆಯಾಗಿದೆ. ಸದ್ಯ ಭದ್ರತಾ ಮಂಡಳಿಯ ಐದು
ಕಾಯಂ ರಾಷ್ಟ್ರಗಳ ಪೈಕಿ ಚೀನಾ ಮಾತ್ರವೇ ಭಾರತದ ಈ ಮಹತ್ವಾಕಾಂಕ್ಷೆಗೆ ಅಡ್ಡಗಾಲು ಹಾಕುತ್ತಿದೆ; ಆದರೆ, ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಗಳಲ್ಲಿ ಜಾಗತಿಕ ಸಮುದಾಯದ ಪ್ರಾತಿನಿಧ್ಯ ಹೆಚ್ಚಬೇಕೆಂಬ ಭಾರತದ ಕೂಗಿಗೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ, ಚೀನಾ ಕೂಡ ಒತ್ತಡಕ್ಕೆ ಸಿಲುಕಿ ಈ ಪ್ರಸ್ತಾವನೆಗೆ ತನ್ನ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.

(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು)

ಇದನ್ನೂ ಓದಿ: Salman Khan: ಬರೋಬ್ಬರಿ 174 ವಜ್ರಗಳಿರುವ ಕಾಸ್ಟ್ಲೀ ವಾಚ್‌ ಇದು! ಸಲ್ಲು ಕೈಗಡಿಯಾರದ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ