Wednesday, 23rd October 2024

Vishweshwar Bhat Column: ಪರಿಚಯಕ್ಕೂ ಮುನ್ನ ಬೇರೆಯವರು, ಮಾತಿಗಿಳಿದ ಮೇಲೆ ನಮ್ಮವರು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ನನ್ನ ಜೀವನದಲ್ಲಿ ಹಾಸುಹೊಕ್ಕಾದ ಇಬ್ಬರು ಹೊಟೇಲ್ ಉದ್ಯಮಿಗಳ ಬಗ್ಗೆ ನಾನು ಹೇಳಬೇಕು. ಲೀಲಾ ಪ್ಯಾಲೇಸ್, ಲೀಲಾ ಕೆಂಪೆನ್‌ಸ್ಕಿ ಹೊಟೇಲ್ ಪಂಚತಾರಾ, ಸಪ್ತತಾರಾ ಹೊಟೇಲ್‌ಗಳ ಮಾಲೀಕರಾಗಿದ್ದ ಕ್ಯಾಪ್ಟನ್ ನಾಯರ್ ಜತೆ ನನಗೆ ಆತ್ಮೀಯ ಒಡನಾಟವಿತ್ತು. ಬೆಂಗಳೂರಿಗೆ ಅವರು ಬಂದಾಗ, ಹೊಟೇಲ್‌ಗೆ ಬರುವಂತೆ ಅವರು ಹೇಳಿ ಕಳುಹಿಸುತ್ತಿದ್ದರು.

ನಾನು ಆಗ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿದ್ದೆ. ಹೊಟೇಲ್‌ಗೆ ಆಗಮಿಸುತ್ತಿದ್ದಂತೆ ಸ್ವತಃ ಕ್ಯಾಪ್ಟನ್ ನಾಯರ್
ಅವರೇ ವಿಶಾಲವಾದ ಹಜಾರದಲ್ಲಿ ನಿಂತು ಸ್ವಾಗತಿಸುತ್ತಿದ್ದರು. ಆ ಭವ್ಯ ಹೊಟೇಲ್‌ನ ಮಾಲೀಕ ಖುದ್ದಾಗಿ ಸ್ವಾಗತಿಸುವುದನ್ನು ಹೊಟೇಲ್‌ನ ಸಿಬ್ಬಂದಿ ಬೆರಗಾಗಿ ನೋಡುತ್ತಿದ್ದರೆ, ನನಗೆ ಒಳಗೊಳಗೇ ವಿನೀತಭಾವ, ಪುಳಕ. ಕ್ಯಾಪ್ಟನ್ ನಾಯರ್ ಅವರು ಇಲ್ಲದ ಬೇರೆ ಸಂದರ್ಭದಲ್ಲಿ ಲೀಲಾ ಪ್ಯಾಲೇಸ್‌ಗೆ ಹೋದರೆ ನನಗೆ ರಾಜಾತಿಥ್ಯ.

ಕ್ಯಾಪ್ಟನ್ ನನ್ನನ್ನು ಚೇಂಬರ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಹತ್ತು-ಹದಿನೈದು ನಿಮಿಷ ಮಾತಾಡಿದ ಬಳಿಕ, ಊಟಕ್ಕೆ ಹೋಗೋಣವೆಂದು ಹೇಳುತ್ತಿದ್ದರು. ‘ನಿಮಗೆ ಸಮಯವಿದೆ ತಾನೆ? ಬೇರೆ ಕೆಲಸವಿಲ್ಲ ತಾನೆ?’ ಎಂದು ಪದೇ ಪದೆ ಕೇಳಿ ಖಾತರಿಪಡಿಸಿಕೊಳ್ಳುತ್ತಿದ್ದರು. ಹೊಟೇಲ್ ಮಾಲೀಕ ತನ್ನ ಗೆಸ್ಟ್ ಜತೆಗೆ ಊಟಕ್ಕೆ ಕುಳಿತರೆ, ಕಸುಬುದಾರಿ ವೇಟರ್‌ಗಳು ಉಪಚಾರಕ್ಕೆ ನಿಲ್ಲುತ್ತಿದ್ದರು. ಇಡೀ ಹೊಟೇಲ್‌ನ ಸಿಬ್ಬಂದಿ ಗಮನ ನಮ್ಮ ಮೇಲೆ ನೆಟ್ಟಿರುತ್ತಿತ್ತು. ನಮ್ಮ ಜತೆಗೆ ಅವರ ಸೆಕ್ರೆಟರಿ ಕೂಡ ಎರಡು-ಮೂರು ಸಲ ಊಟದ ಟೇಬಲ್‌ಗೆ ಬಂದಿರುತ್ತಿದ್ದರು.

ಕ್ಯಾಪ್ಟನ್ ನಾಯರ್ ನನಗೇನು ಬೇಕು ಎಂಬುದನ್ನು ತಿಳಿದುಕೊಂಡು ಅವರೇ ಐಟಮ್‌ಗಳನ್ನು ಆರ್ಡರ್ ಮಾಡು
ತ್ತಿದ್ದರು. ಊಟದ ಆರಂಭಕ್ಕೆ ಮುನ್ನ ತಾವೇ ಬಡಿಸುತ್ತಿದ್ದರು. ಯಾವುದೇ ಬಿಗುಮಾನ ಇಲ್ಲದಿರುವ, ಸಲೀಸು ಹಾಗೂ
ಖುಷಿಯ ವಾತಾವರಣ ಸೃಷ್ಟಿಸುತ್ತಿದ್ದರು. ತಾವು ದೊಡ್ಡ ಹೊಟೇಲ್ ಮಾಲೀಕ ಎಂಬ ಅಹಮಿಕೆಯ ಲವಲೇ
ಶವೂ ನೆಲೆಸದೇ, ಸರೀಕರಂತೆ ವ್ಯವಹರಿಸುವ ಸಹಜ, ತಿಳಿ ವಾತಾವರಣ ನೆಲೆಸುವಂತೆ ಮಾಡುತ್ತಿದ್ದರು. ನಾವಿಬ್ಬರೂ ಹರಟೆಗೆ ಕುಳಿತರೆ ಎರಡು ತಾಸು ಕಳೆದಿದ್ದು ಗೊತ್ತಾಗುತ್ತಿರಲಿಲ್ಲ. ಒಮ್ಮೆ ನಾನು ಅವರಲ್ಲಿ ‘ಪ್ರತಿಸಲವೂ ನೀವೇ ನನ್ನನ್ನು ಸ್ವಾಗತಿಸಿ, ಕಾರಿನ ಬಾಗಿಲು ಹಾಕಿ ಕಳಿಸಿಕೊಡುತ್ತೀರಲ್ಲ?’ ಎಂದು ಕೇಳಿದೆ.

ಅದಕ್ಕೆ ನಾಯರ್, ‘ಅದು ಅತಿಥಿ ಸತ್ಕಾರದ ಪ್ರಾಥಮಿಕ ಸಂಗತಿ. ಅಷ್ಟೂ ಮಾಡಲು ಸಾಧ್ಯವಾಗದಿದ್ದರೆ ಯಾರನ್ನೂ ಕರೆಯಲೇಬಾರದು’ ಎಂದರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ‘ಪ್ರತಿಯೊಬ್ಬರೂ ಪ್ರಮುಖರೇ. ಆದರೆ ಯಾರೂ ತಾವು ಪ್ರಮುಖರು ಎಂದು ಹೇಳಿಕೊಳ್ಳುವುದಿಲ್ಲ. ಆದರೆ ನಮ್ಮ ನಡವಳಿಕೆಯಿಂದ ನಾವು ಅವರಿಗೆ ಅದನ್ನು ಮನವರಿಕೆ ಮಾಡಿಕೊಡಬಹುದು. ಒಬ್ಬ ವ್ಯಕ್ತಿಯ ಆತ್ಮಬಲವನ್ನು ನಮ್ಮ ನಡವಳಿಕೆಯಿಂದ ಹೆಚ್ಚಿಸ ಬಹುದು. ನಮ್ಮಿಂದ ಒಬ್ಬನ ಮಹತ್ವ ಹೆಚ್ಚಾಗುವಂತೆ ಮಾಡಬಹುದು. ಮೊದಲು ನಾವು ಆ ವ್ಯಕ್ತಿಗೆ ಮಹತ್ವ ಕೊಡುವುದನ್ನು ಕಲಿ ಯಬೇಕು’ ಎಂದು ಕ್ಯಾಪ್ಟನ್ ನಾಯರ್ ಹೇಳಿದ್ದರು. ಪ್ರತಿ ಸಲ ಅವರನ್ನು ಭೇಟಿಯಾದಾಗಲೂ ನನಗೆ ಈ ಸಂಗತಿ ಮನವರಿಕೆಯಾಗುತ್ತಿತ್ತು. ಹೀಗಾಗಿ ಅವರನ್ನು ಭೇಟಿಮಾಡಲು ಎಲ್ಲರೂ ಹಾತೊರೆಯುತ್ತಿದ್ದರು. ಗೆಳೆತನ ವೃದ್ಧಿಸುವ, ಸಂಬಂಧವನ್ನು ಹಸನಾಗಿಡುವ ಕಲೆಗಾರಿಕೆ ಅವರಿಗೆ ಸಿದ್ಧಿಸಿತ್ತು.

ಪ್ರತಿಸಲ ಕ್ಯಾಪ್ಟನ್ ಅವರನ್ನು ಭೇಟಿಯಾಗಿ ಎರಡು ದಿನಗಳೊಳಗೆ ಅವರಿಂದ ಒಂದು ಪತ್ರ ಬಂದಿರುತ್ತಿತ್ತು.
ನನ್ನೊಂದಿಗಿನ ಭೇಟಿ. ಮಾತುಕತೆಯ ಇಂಪ್ರೇಶನ್ ಅನ್ನು ಅವರು ಕಟ್ಟಿಕೊಡುತ್ತಿದ್ದರು. ಆ ಪತ್ರದಲ್ಲಿ ಅವರ ಪ್ರೀತಿ,
ವ್ಯಕ್ತಿತ್ವ, ಸ್ಟೈಲ್ ಎದ್ದು ಕಾಣುತ್ತಿತ್ತು. ಒಂದು ಸಲ ಬೆಂಗಳೂರಿನಿಂದ ದಿಲ್ಲಿಗೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕಿತ್ತು. ಇಬ್ಬರೂ ಅಕ್ಕಪಕ್ಕದಲ್ಲಿ ಬಿಜಿನೆಸ್ ಕ್ಲಾಸ್‌ನಲ್ಲಿ ಕುಳಿತು ಪ್ರಯಾಣಿಸು ತ್ತಿದ್ದೆವು. ಕ್ಯಾಪ್ಟನ್ ನಾಯರ್ ಅವರು, ಬಿಜಿನೆಸ್ ಕ್ಲಾಸಿನಲ್ಲಿ ಕುಳಿತಿದ್ದ ಸುಮಾರು ಏಳೆಂಟು ಸಹ ಪ್ರಯಾಣಿಕರ
ಬಳಿ ಹೋಗಿ ಕೈಕುಲುಕಿ, ತಮ್ಮ ಪರಿಚಯ ಮಾಡಿಕೊಂಡರು. ಆ ಪೈಕಿ ಒಂದಿಬ್ಬರು ಕ್ಯಾಪ್ಟನ್‌ಗೆ ಪರಿಚಿತರಿದ್ದರು. ಉಳಿದವರ‍್ಯಾರೂ ಅವರಿಗೆ ಗೊತ್ತಿರಲಿಲ್ಲ. ಆದರೂ ಅವರು ಖುದ್ದಾಗಿ ಎಲ್ಲರನ್ನೂ ಮಾತಾಡಿಸಿ ಬಿಜಿನೆಸ್ ಕ್ಲಾಸಿನಲ್ಲಿ ಸಾಮಾನ್ಯವಾಗಿ ನೆಲೆಸಿರುವ ಬಿಗುಮಾನ ಸಡಿಲಿಸಿದರು.

ಸಾಮಾನ್ಯವಾಗಿ ಶ್ರೀಮಂತರು, ಸಮಾಜದ ಉನ್ನತ ಸ್ಥಾನಮಾನದಲ್ಲಿರುವವರು ಬೇರೆಯವರೊಂದಿಗೆ ಬೆರೆಯುವು
ದಿಲ್ಲ. ತಮ್ಮ ಪಾಡಿಗೆ ತಾವು ಮುಖ ಗಂಟಿಕ್ಕಿಕೊಂಡು ಕುಳಿತಿರುತ್ತಾರೆ. ನಕ್ಕರೂ ಹಣ ಖರ್ಚಾಗುತ್ತದೆಂದು ಭಾವಿಸಿ ರುತ್ತಾರೆ. ಅದರಲ್ಲೂ ತಮಗಿಂತ ಕೆಳಗಿನ ಅಂತಸ್ತಿನವರ ಜತೆ ಬೆರೆಯುವುದು ತಮ್ಮ ಸ್ಥಾನಮಾನಕ್ಕೆ ತಕ್ಕದಾದುದಲ್ಲ ಎಂದು ತಿಳಿದಿರುತ್ತಾರೆ. ಬಿಜಿನೆಸ್ ಕ್ಲಾಸಿನಲ್ಲಿ ಎಲ್ಲರೂ ತಮ್ಮ ಸುತ್ತ ಗೋಡೆ ಕಟ್ಟಿಕೊಂಡು ಸುಮ್ಮನಿರುತ್ತಾರೆ.

ಹೀಗಿರುವಾಗ ಕ್ಯಾಪ್ಟನ್ ನಡವಳಿಕೆ ನನಗೆ ತೀರಾ ಭಿನ್ನವಾಗಿ ಕಂಡಿತು. ಈ ಕುರಿತು ನಾನು ಅವರನ್ನು ಕೇಳಿದೆ.
ಅದಕ್ಕೆ ಅವರು ಹೇಳಿದರು- ‘ನೋಡಿ, ನಾನು ಹೊಟೇಲ್ ಮಾಲೀಕ. ಹಾಸ್ಪಿಟಾಲಿಟಿ (ಆತಿಥ್ಯ) ಉದ್ಯಮದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಯಾರನ್ನೇ ಭೇಟಿ ಮಾಡಿದರೂ ಆತಿಥ್ಯ ನೀಡುವುದು ನನ್ನ ಧರ್ಮ. ಬಿಜಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರೆಲ್ಲ ಪ್ರತಿಷ್ಠಿತರು, ಶ್ರೀಮಂತರು. ಅವರೆಲ್ಲರೂ ಒಂದೋ ನನ್ನ ಗ್ರಾಹಕರು(ಅತಿಥಿಗಳು)
ಅಥವಾ ಭಾವಿ ಗ್ರಾಹಕರು’. ಕ್ಯಾಪ್ಟನ್ ನಾಯರ್ ಒಂದು ಕ್ಷಣ ಬಿಟ್ಟು ಮುಂದುವರಿಸಿದರು- ‘ನೋಡಿ, ನಾವೆಲ್ಲರೂ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಯೋಗಾಯೋಗ.

ಒಂದೇ ವಿಮಾನದಲ್ಲಿ ಅಕ್ಕಪಕ್ಕ ಕುಳಿತು ಸುಮ್ಮನಿದ್ದರೂ ಪ್ರಯಾಣ ಸಾಗುತ್ತದೆ. ಅದೇ, ಪರಿಚಯ ಮಾಡಿಕೊಂಡು
ಮಾತಿಗಿಳಿದರೆ, ಗೆಳೆತನ ಚಿಗುರುತ್ತದೆ. ಬೇರೆಯವರೊಂದಿಗೆ ಮೈತ್ರಿ ಬೆಳೆಯುತ್ತದೆ. ಪರಿಚಿತರಾಗುವುದಕ್ಕಿಂತ ಮುನ್ನ
ಎಲ್ಲರೂ ಅಪರಿಚಿತರೇ. ಮಾತಿಗಿಳಿಯದೇ ಯಾರನ್ನೂ ಪರಿಚಯ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಎಲ್ಲರಿಗೂ ತಮ್ಮೊಂದಿಗೆ ಇರುವವರನ್ನು ಪರಿಚಯ ಮಾಡಿಕೊಂಡು ಮಾತಾಡಿಸಬೇಕು ಎಂಬ ಒಳ ಆಸೆಯಿರುತ್ತದೆ. ಒಂದು ನಗು, ಮಾತು, ಪರಿಚಯ ಜೀವನದ ಕೊನೆಯತನಕ ಸಂಬಂಧ, ಗೆಳೆತನಕ್ಕೆ ನಾಂದಿಯಾಗಬಹುದು’.

‘ಪ್ರತಿಯೊಬ್ಬ ವ್ಯಕ್ತಿಯೂ ಸೋಜಿಗವೇ. ಪ್ರತಿಯೊಬ್ಬರಿಂದಲೂ ಕಲಿಯುವಂಥದ್ದು ಸಾಕಷ್ಟು ಇರುತ್ತದೆ. ಆದರೆ
ನಮಗೆ ಆಸಕ್ತಿಯಿರುವುದಿಲ್ಲ. ಕೆಲವು ಸಲ ಅವರಿಗೇನು ಗೊತ್ತು ಎಂದು ಉಪೇಕ್ಷೆ ಮಾಡಿರುತ್ತೇವೆ. ನಾನು ಹೊಸ ಹೊಸ ಜನರನ್ನು ಭೇಟಿಮಾಡುವ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬರನ್ನೂ ಭೇಟಿ ಮಾಡಿದಾಗಲೆಲ್ಲ ನಾನು ವಿಷಯ ಜ್ಞಾನದಿಂದ ಮತ್ತಷ್ಟು ಶ್ರೀಮಂತ ನಾಗುತ್ತೇನೆ’. ನನಗೆ ಕ್ಯಾಪ್ಟನ್ ಇಷ್ಟವಾಗಿದ್ದೇ ಈ ಕಾರಣಕ್ಕೆ. ಆ ಮನುಷ್ಯನಿಗೆ ತಾನು ಸಾವಿರಾರು ಕೋಟಿ ರುಪಾಯಿಗಳ ಧನಿಕ ಎಂಬ ಪೊಗರು ಇರಲೇ ಇಲ್ಲ. ಈ ಶ್ರೀಮಂತಿಕೆ, ಸ್ಥಾನಮಾನಗಳೆಲ್ಲ ಮತ್ತಷ್ಟು ಸಾಧನೆಗೆ ಸಿಕ್ಕ ಅವಕಾಶ ಎಂದೇ ಭಾವಿಸಿದ್ದರು. ‘ಮಿಸ್ಟರ್ ಭಟ್, ಒಂದು ವಿಷಯ ಗೊತ್ತಿರಲಿ, ನಾವಿಬ್ಬರೂ ಭೇಟಿಯಾಗಿದ್ದು ವಿಮಾನದಲ್ಲಿ. ಅಕ್ಕಪಕ್ಕ ಕುಳಿತು ಪ್ರಯಾಣಿಸುತ್ತಿರುವಾಗ, ನಾನೇ ನಿಮ್ಮನ್ನು ಪರಿಚಯ ಮಾಡಿಕೊಂಡಿದ್ದು. ಅಂದಿನ ಪರಿಚಯ ನಮ್ಮನ್ನು ಎಷ್ಟು ದೂರ ಕರೆದುಕೊಂಡು ಬಂದಿದೆ ಅಲ್ವಾ? ಅಂದು ನಾನು ನಿಮ್ಮೊಂದಿಗೆ ಮಾತಾಡದೇ ತೆಪ್ಪಗೆ ಕುಳಿತಿದ್ದರೆ, ನಾನ್ಯಾರೋ, ನೀವ್ಯಾರೋ? ನಾವು ಮತ್ತೊಮ್ಮೆ ಭೇಟಿಯಾಗುತ್ತಿರಲಿಲ್ಲ.

ನಿಮ್ಮಂಥವರ ಸ್ನೇಹವೇ ನನಗೆ ಸಿಗುತ್ತಿರಲಿಲ್ಲ. ಅಂದಹಾಗೆ ನಾನ್ಯಾಕೆ ಇವರೆಲ್ಲರ ಪರಿಚಯ ಮಾಡಿಕೊಂಡೆ ಎಂಬುದು ನಿಮಗೆ ಗೊತ್ತಾಗಿರಬಹುದು’ ಎಂದರು ಕ್ಯಾಪ್ಟನ್ ನಾಯರ್ ಬಾಯ್ತುಂಬಾ ನಗುತ್ತಾ. ವಿಮಾನ ಇಳಿಯು ವಾಗ ಬಿಜಿನೆಸ್ ಕ್ಲಾಸಿನಲ್ಲಿದ್ದವರೆಲ್ಲ ಕ್ಯಾಪ್ಟನ್‌ಗೆ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟರು, ಕೈಕುಲುಕಿ ಬೀಳ್ಕೊಟ್ಟು ಹೋದರು. ಕ್ಯಾಪ್ಟನ್ ಅವರೆಲ್ಲರಿಗೂ ‘ನಮ್ಮ ಹೊಟೇಲ್‌ಗೆ ಬನ್ನಿ. ನಿಮ್ಮ ಆತಿಥ್ಯ ಮಾಡುವ ಅವಕಾಶ ಕೊಡಿ’ ಎಂದು ಹೇಳಿದರು. ನನಗೆ ಅವರ ವ್ಯವಹಾರ ಚಾತುರ್ಯ, ಸ್ನೇಹಕ್ಕೆ ಮಿಡಿಯುವ ಸ್ವಭಾವ, ಪರಿಚಯಕ್ಕೆ
ಹಾತೊರೆಯುವ ಗುಣ ಯಾವತ್ತೂ ಪ್ರೇರಣೆಯೇ. ಅವರ ನೆನಪು ಮನಸ್ಸಿನಲ್ಲಿ ಹಾದುಹೋದಾಗಲೆಲ್ಲ ಒಂದಷ್ಟು ಖುಷಿ, ಹುರುಪು, ಲವಲವಿಕೆ ಹೆಪ್ಪುಗಟ್ಟುತ್ತವೆ.

ಮತ್ತೊಬ್ಬ ಹೊಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ. ಇವರು ಮುಂಬೈನ ‘ಆರ್ಕಿಡ್’ ಎಂಬ ಪಂಚತಾರಾ
ಹೊಟೇಲ್‌ನ ಮಾಲೀಕರು. ಇವರು ಬರೆದ ‘ಇಡ್ಲಿ, ಆರ್ಕಿಡ್ ಹಾಗೂ ಆತ್ಮಬಲ’ ಎಂಬ ಪುಸ್ತಕ ಬಹಳ ಜನಪ್ರಿಯ. ಕಾಮತರು ತಮ್ಮ ಜೀವನದಲ್ಲಿ ನಡೆದ ಎರಡು ಘಟನೆಗಳನ್ನು ಹೇಳಿದ್ದರು. ಅದನ್ನು ಅವರು ‘ಇಡ್ಲಿ…’ ಪುಸ್ತಕ ದಲ್ಲೂ ಬರೆದಿದ್ದಾರೆ. ಅದನ್ನು ಅವರ ಮಾತಿನಲ್ಲಿಯೇ ಕೇಳೋಣ.

ಒಮ್ಮೆ ನಾನು ದೆಹಲಿಗೆ ಹೋಗುತ್ತಿದ್ದೆ. ಏರ್‌ಪೋರ್ಟಿನ ಸಾಮಾನು ಚೆಕ್ ಇನ್ ಮಾಡುವ ‘ಕ್ಯೂ’ನಲ್ಲಿ, ನನ್ನ
ಹಿಂದಿದ್ದ ಯುವತಿಯೊಬ್ಬಳು ತನ್ನೊಟ್ಟಿಗೆ ಸಾಕಷ್ಟು ಸಾಮಾನು ತಂದಿದ್ದಳು. ಅಲ್ಲದೇ, ಕೈಯಲ್ಲಿ ಒಂದು
ಬ್ಯಾಗ್, ಪರ್ಸ್ ಹಾಗೂ ಎರಡು ವರ್ಷದ ಚಿಕ್ಕ ಮಗುವೊಂದನ್ನು ಹಿಡಿದುಕೊಂಡಿದ್ದಳು. ಮಗುವಿನೊಟ್ಟಿಗೆ ಸಾಮಾನು ಹಿಡಿದು ಆಕೆ ಪಡುತ್ತಿದ್ದ ಅವಸ್ಥೆ ನೋಡಿ ನಾನವಳಿಗೆ ಚೆಕ್-ಇನ್ ಮಾಡಲು ಸಹಾಯ ಮಾಡಿದೆ. ಆಕೆಯ ಹಿಂದೆ ಮೂವರು ಹೊರದೇಶದ ಸ್ತೀಯರಿದ್ದರು.

ಸ್ವಲ್ಪ ಹೊತ್ತಿನಲ್ಲೇ ಇಂಡಿಯನ್ ಏರ್‌ಲೈನ್ಸ್‌ನ ವಿಮಾನಕ್ಕೆ ಕರೆದುಕೊಂಡು ಹೋಗುವ ಬಸ್ಸು ಬಂದಾಗ ಕೈಯಲ್ಲಿರುವ ಸಾಮಾನನ್ನು ಬಸ್ಸಿನಲ್ಲಿಡುವ ಅವಸರದಲ್ಲಿ ಅವಳ ಕಂಕುಳಲ್ಲಿರುವ ಮಗು ಬೀಳುವುದರಲ್ಲಿತ್ತು. ಅದನ್ನು ನೋಡಿದ ನಾನು, ತಕ್ಷಣ ಮಗುವನ್ನು ಎತ್ತಿಕೊಂಡೆ. ಆಕೆ ಬಸ್ ಹತ್ತಿದ ನಂತರ ಮಗುವನ್ನು ಆಕೆಗೆ ಒಪ್ಪಿಸಿ, ನಾನು ಬಸ್ ಹತ್ತಿದೆ. ಆಗ ನನ್ನ ಹಿಂದಿದ್ದ ಒಬ್ಬಾಕೆ ನಗುತ್ತ, ‘ನಿಮ್ಮ ಮಗು ತುಂಬ ಮುದ್ದಾಗಿದೆ’ ಅಂದಳು. ಅದಕ್ಕೆ ನಾನು ನಗುತ್ತ, ‘ಇದು ನನ್ನ ಮಗುವಲ್ಲ, ಆದರೆ ಪುಟ್ಟ ಮಗು ಅನ್ನೋದು ಮಾತ್ರ ನಿಜ. ಅದರ ತಾಯಿ ಸಾಮಾನಿ ನೊಟ್ಟಿಗೆ ಇದನ್ನು ಸಂಭಾಳಿಸಿಕೊಂಡು ಹೋಗುವುದಕ್ಕೆ ಕಷ್ಟಪಡುತ್ತಿದ್ದಾಳೆ.

ಆದ್ದರಿಂದ ಇದು ನಮ್ಮೆಲ್ಲರ ಮಗು ಎಂದುಕೊಳ್ಳೋಣ’ ಅಂದೆ. ನನ್ನ ಹಿಂದಿಂದೆ ಹತ್ತಿದ ಫ್ರೆಂಚ್ ಮಹಿಳೆಯೊಬ್ಬಳು ಮೆಚ್ಚುಗೆಯಿಂದ ಗೋಣಲ್ಲಾಡಿಸುತ್ತ, ‘ನಿಮ್ಮ ವಿಚಾರಗಳನ್ನು ಮೆಚ್ಚಿಕೊಂಡೆ’ ಅಂದಳು. ‘ಅದನ್ನು ಅರ್ಥ ಮಾಡಿಕೊಂಡು ಮೆಚ್ಚುವವರು ತುಂಬ ಕಡಿಮೆ, ಥ್ಯಾಂಕ್ಸ್’ ಅಂದೆ. ಈ ಫ್ರೆಂಚ್ ಮಹಿಳೆ ಹಾಗೂ ಆಕೆಯ ಜತೆಗಿದ್ದ ಆಕೆಯ ಇಬ್ಬರು ಗೆಳತಿಯರ ಕೈಯಲ್ಲಿ ಚಾಕಲೇಟುಗಳು ಇದ್ದವು. ತನ್ನ ಕೈಯಲ್ಲಿದ್ದ ಚಾಕಲೇಟುಗಳನ್ನು ನನಗೆ ಕೊಡುತ್ತ ಆಕೆ, ‘ಈ ಚಾಕಲೇಟ್ ತೆಗೆದುಕೊಳ್ಳಿ’ ಎಂದಳು. ನಾನು ಅದನ್ನು ನಿರಾಕರಿಸಿದಾಗ, ‘ಯಾಕೆ? ನೀವು ಚಾಕಲೇಟ್ ತಿನ್ನುವುದಿಲ್ಲವೇ?’ ಎಂದು ಕೇಳಿದಳು.

‘ತಿಂತೀನಿ, ಆದರೆ ಒಂದು ಸಲಕ್ಕೆ ನನಗೆ ಎರಡು ಚಾಕಲೇಟ್ ಬೇಕಾಗುತ್ತದೆ’ ಎಂದು ಹೇಳಿ ಆಕೆಯ ಗೆಳತಿಯರ ಕೈಯಲ್ಲಿದ್ದ ಚಾಕಲೇಟನ್ನು ನೋಡತೊಡಗಿದೆ. ನನ್ನ ಮಾತಿಗೆ ಮೂವರೂ ನಕ್ಕರು. ತನ್ನ ಗೆಳತಿಯರ ಕೈಯಲ್ಲಿದ್ದ
ಚಾಕಲೇಟ್‌ನ್ನು ಕಸಿದುಕೊಂಡು ಅದರಲ್ಲಿ ತನ್ನದೂ ಸೇರಿಸುತ್ತ, ‘ಇಗೋ ಇವತ್ತು ಒಟ್ಟಿಗೆ ಮೂರು ತಿಂದುಬಿಡಿ’ ಎಂದಳಾಕೆ. ಈ ನಮ್ಮ ಮಾತುಗಳಿಂದ ಇತರ ಪ್ರವಾಸಿಗಳ ಮುಖಗಳು ಅರಳಿದವು. ಮುಂದೆ ವಿಮಾನ ಪ್ರಯಾಣ ದಲ್ಲಿ ನನಗೂ, ಆ ಮೂವರೂ ಫ್ರೆಂಚ್ ಮಹಿಳೆಯರಿಗೂ ಒಳ್ಳೆಯ ಪರಿಚಯವಾಯಿತು. ದೆಹಲಿಯಲ್ಲಿಳಿದು, ಮೂವರಿಗೂ ನಾನು ನನ್ನ ವಿಸಿಟಿಂಗ್ ಕಾರ್ಡ್ ಕೊಟ್ಟಾಗ, ‘ನೈಸ್ ಟು ಮೀಟ್ ಯು ಮಿಸ್ಟರ್ ಕಾಮತ್! ಮತ್ತೊಮ್ಮೆ ಮುಂಬಯಿಗೆ ಬಂದಾಗ ನಾವು ನಿಮ್ಮ ‘ಆರ್ಕಿಡ್’ನಲ್ಲೇ ಉಳಿದುಕೊಳ್ಳುತ್ತೇವೆ’ ಎಂದರು. ಆ ಮಗುವಿನ ತಾಯಿ ನನಗೆ ಧನ್ಯವಾದ ತಿಳಿಸಿ ನನ್ನ ಕಾರ್ಡ್ ಅನ್ನು ಪಡೆದು, ತನ್ನ ಕಾರ್ಡ್ ಅನ್ನು ನನಗೆ ಕೊಡುತ್ತ, ‘ನನ್ನ ಗಂಡ ಒಂದು ದೊಡ್ಡ ಕಂಪನಿಯಲ್ಲಿ ಟಾಪ್ ಪೊಸಿಷನ್‌ನಲ್ಲಿದ್ದಾರೆ.

ಮುಂಬಯಿಗೆ ಆಗಾಗ ಬರುತ್ತಿರುತ್ತಾರೆ. ಮುಂದಿನ ಸಲ ಬಂದಾಗ ಆತ ನಿಮ್ಮನ್ನು ಭೇಟಿಯಾಗದೇ ಹೋಗುವುದಿಲ್ಲ. ನಾನವರನ್ನು ‘ಆರ್ಕಿಡ್ ’ನಲ್ಲಿಯೇ ಉಳಿದುಕೊಳ್ಳಲು ವಿನಂತಿಸುತ್ತೇನೆ’ ಎಂದಳು. ಅವರೆಲ್ಲರನ್ನೂ ಬೀಳ್ಕೊಡುವಾಗ ನನ್ನ ಬಳಿ ಮೂರು ಚಾಕಲೇಟುಗಳ ಜತೆ, ಅನೇಕ ಶುಭಾಶಯಗಳಿದ್ದವು. ಅವರ ಕಾರ್ಡ್ ಅನ್ನು ಜೇಬಿನಲ್ಲಿಡುವಾಗ ಸಹಜವಾಗಿ ಮಾಡಿದ ಚಿಕ್ಕ ಉಪಕಾರ ನನಗೆ ಲಾಭವನ್ನೇ ತಂದುಕೊಟ್ಟಿತಲ್ಲವೇ?’ ಅನಿಸಿತು. ಎಲ್ಲರಿಗೂ ಸಹಾಯ ಮಾಡುವ ಈ ಗುಣ, ನನಗೆ ನನ್ನ ತಾಯಿ-ತಂದೆಯಿಂದ ಬಂದ ಕೊಡುಗೆ. ಅವರ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವಾಗ ಅವರ ಒಳ್ಳೆಯ ಗುಣಗಳನ್ನು ನನ್ನಲ್ಲಿಳಿಸುತ್ತ ಹೋದೆ. ಇದರ ಹಿನ್ನೆಲೆಯಲ್ಲಿ ನನಗೊಂದು ಘಟನೆ ನೆನಪಾಗುತ್ತಿದೆ.

ನಾನು ನನ್ನ ತಂದೆಯವರೊಡನೆ ಕಾರಿನಲ್ಲಿ ಚರ್ಚ್‌ಗೇಟಿಗೆ ಹೋಗುತ್ತಿದ್ದಾಗ ಪ್ರತಿದಿನ ಕನಿಷ್ಠ ಮೂವರಿಗಾದರೂ ಲಿಫ್ಟ್‌ ಕೊಡುವುದು ತಂದೆಯವರ ಅಭ್ಯಾಸ. ‘ದೇವರು ನಮಗೆ ಕಾರನ್ನು ಕರುಣಿಸಿರುವಾಗ ನಮ್ಮಂತೆ ಇತರರಿಗೂ ಅದರ ಉಪಯೋಗವಾದರೆ ಯಾರದ್ದೇನು ಗಂಟು ಹೋಗುತ್ತದೆ?’ ಅನ್ನುವುದು ಅವರ ಅಭಿಪ್ರಾಯ.

ಯಾರದ್ದೇನೂ ಗಂಟು ಹೋಗುವುದಿಲ್ಲ ನಿಜ, ಆದರೆ ಇಂಥ ಒಳ್ಳೆಯ ಮನಸ್ಸು ಎಷ್ಟು ಜನರಿಗಿರುತ್ತದೆ?… ಹಾಂ,
ಹೇಳುವುದಿಷ್ಟೇ, ಗ್ರಾಂಟ್ ರೋಡಿನಿಂದ ಕಾರಿನಲ್ಲಿ ಹೋಗುವಾಗ ಕೆಲವೊಮ್ಮೆ ಪರಿಚಿತರಿಗೆ, ಮತ್ತೊಮ್ಮೆ ಬಸ್
ಸ್ಟಾಪಿನಲ್ಲಿ ನಿಂತಿರುವ ಅಪರಿಚಿತರಿಗೆ ನಮ್ಮ ಕಾರಿನಲ್ಲಿ ಚರ್ಚ್‌ಗೇಟಿನವರೆಗೆ ಲಿಫ್ಟ್ ಸಿಗುತ್ತಿತ್ತು. ‌

ಒಮ್ಮೆ ಚರ್ಚ್‌ಗೇಟಿನಲ್ಲಿರುವ ನಮ್ಮ ‘ಏಷಿಯಾಟಿಕ್ ಡಿಪಾರ್ಟ್‌ಮೆಂಟಲ್ ಸ್ಟೋರ್’ಗೆ ಸರಕಾರ ಪಟಾಕಿಗಳನ್ನು ಇಡುವ ಲೈಸೆನ್ಸ್ ಮಂಜೂರು ಮಾಡಲಿಲ್ಲ. ನಾವು ಸ್ಟೋರ್ ಅನ್ನು ಖರೀದಿಸುವ ಒಂದು ವರ್ಷದ ಮುಂಚೆಯಷ್ಟೇ ಮಹಾರಾಷ್ಟ್ರ ಸರಕಾರ ಲೈಸೆನ್ಸ್ ಕೊಡುವುದನ್ನು ನಿಲ್ಲಿಸಿತ್ತು. ದೀಪಾವಳಿ ಹತ್ತಿರ ಬಂದಂತೆ ಸ್ಟೋರ‍್ಸ್‌ನಲ್ಲಿ ಉಳಿದ ಸಾಮಾನಿನ ಜತೆ ಪಟಾಕಿಗಳ ಮಾರಾಟ ಕೂಡ ಆಗಬೇಕು ಅನ್ನುವುದು ನನ್ನ ಹಠವಾಗಿತ್ತು. ಲೈಸೆನ್ಸ್ ಬಗ್ಗೆ ವಿಚಾರಿ ಸುವುದಕ್ಕೆ ನಾನು ಮಹಾರಾಷ್ಟ್ರ ಸರಕಾರದ ‘ಫಾರ್ ಆಂಡ್ ಆರ್ಮ್ಸ್’ ಖಾತೆಯ ಕಾರ್ಯಾಲಯಕ್ಕೆ ಹೋದೆ. ನನ್ನನ್ನು ನೋಡಿದ ಕಾರ್ಯಾಲಯದ ದೊಡ್ಡ ಅಧಿಕಾರಿಗಳು ಎದ್ದು, ನನ್ನ ಬಳಿ ಬಂದರು.

‘ವಾಹ್, ಏನು ಅಪರೂಪ! ಬನ್ನಿ ಕಾಮತ್ ಸಾಹೇಬರೇ! ಇವತ್ತು ಇಲ್ಲಿ ಹೇಗೆ ಬಂದಿರಿ?’ ಎಂದರು. ನನಗೆ ಈತನ
ಪರಿಚಯವೇ ಇಲ್ಲದ್ದರಿಂದ ನಾನು ಅವರನ್ನು ಹಾಗೇ ನೋಡುತ್ತ ನಿಂತುಬಿಟ್ಟೆ. ನನ್ನ ಗೊಂದಲವನ್ನು ಗಮನಿಸಿದ
ಅವರು ತಮ್ಮ ಪರಿಚಯ ಮಾಡಿಕೊಳ್ಳುತ್ತ, ‘ನಾನು ಶಾಸ್ತ್ರಿ ಹಾಲಿನ ‘ಮೋಡಕ್’ ಅಂತ, ಆ ದಿನ ನೀವು ದೇವರ ಹಾಗೆ
ಬಂದು ನನಗೆ ನಿಮ್ಮ ಕಾರಿನಲ್ಲಿ ಲಿಫ್ಟ್ ಕೊಟ್ಟಿದ್ದರಿಂದ ನಾನು ಸರಿಯಾದ ಸಮಯಕ್ಕೆ ಕಮಿಷನರ್ ಮೀಟಿಂಗ್‌ಗೆ ತಲುಪಲು‌ ಸಾಧ್ಯವಾಯಿತು. ಹೇಳಿ, ಇವತ್ತು ನನ್ನಿಂದ ನಿಮಗೇನು ಸಹಾಯವಾಗಬೇಕಿತ್ತು?’ ಎಂದು ಕೇಳಿದರು. ನಾನು ಅವರಿಗೆ ನನ್ನ ಸಮಸ್ಯೆ ಹೇಳಿಕೊಂಡೆ. ಅದಕ್ಕವರು, ‘ಹೊಸ ಅಂಗಡಿಗಳಿಗೆ ಲೈಸೆನ್ಸ್ ಕೊಡಬಾರದು ಅನ್ನುವ ಕಾನೂನಿದೆ. ಆದರೆ ಏಷಿಯಾಟಿಕ್ ಸ್ಟೋರ‍್ಸ್ ಐವತ್ತು ವರ್ಷ ಹಳೆಯದಲ್ಲವೇ?’ ಎಂದು ನಗುತ್ತ ನನ್ನನ್ನು ಕುಳಿತು ಕೊಳ್ಳಲು ಹೇಳಿ, ಸ್ವಲ್ಪ ಸಮಯದಲ್ಲೇ ನಮ್ಮ ಸ್ಟೋರ‍್ಸ್‌ಗೆ ಪಟಾಕಿ ಮಾರುವ ಲೈಸೆನ್ಸ್ ಕೊಡಿಸಿದರು. ಕೇವಲ ಕಾನೂನನ್ನು ಪಾಲಿಸುವುದಕ್ಕಾಗಿ, ಕಾಗದಗಳ ಮೇಲೆ ಎರಡು ವರ್ಷದ ಹಿಂದಿನ ತಾರೀಖನ್ನು ಹಾಕಲಾಯಿತು. ನಾನು ಮೋಡಕರಿಗೆ ಧನ್ಯವಾದಗಳನ್ನು ಹೇಳಿ ಸಂತೋಷದಿಂದ ಲೈಸೆನ್ಸ್ ತೆಗೆದುಕೊಂಡು ಬಂದೆ. ‘ನಮ್ಮಲ್ಲಿರುವ ಒಳ್ಳೆಯತನ ಒಂದಲ್ಲ ಒಂದು ರೀತಿಯಿಂದ ನಮಗೆ ಒಳ್ಳೆಯ ಫಲವನ್ನೇ ಕೊಡುತ್ತದೆ’ ಅನಿಸಿತು. ಫಲಾಪೇಕ್ಷೆ ಯಿಲ್ಲದೇ ಮಾಡಿದ ಉಪಕಾರದ -ಲವೂ ಉತ್ತಮವಾದದ್ದೇ ಆಗಿರುತ್ತದೆ. ಅನ್ನುವುದನ್ನು ಮರೆಯದಿರಿ.

ಇದನ್ನೂ ಓದಿ: ‌Vishweshwar Bhat Column: ಮೂತ್ರ ವಿಸರ್ಜಿಸಿ ರಾಣಿ ಸೇತುವೆಯನ್ನು ಉದ್ಘಾಟಿಸಬಹುದೇ ?