ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಆಡಳಿತ ವ್ಯವಸ್ಥೆಯಲ್ಲಿನ ಪ್ರತಿಯೊಂದು ಭಾಗವೂ ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿ. ಹಠಮಾರಿ ಧೋರಣೆ ಕೈಬಿಟ್ಟು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆಗೆ ಅದು ಸ್ಪಂದಿಸುವಂತಾಗಬೇಕು. ಅದು ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಬೇಕು.
ಕೇಂದ್ರ ಸರಕಾರವಿರಲಿ, ರಾಜ್ಯ ಸರಕಾರಗಳಿರಲಿ, ಎಂಥದ್ದೇ ವಿಶ್ವ ಮಟ್ಟದ ಕಾರ್ಯಯೋಜನೆಗಳನ್ನು ಜಾರಿ ಗೊಳಿಸಿದರೂ, ಕಟ್ಟಕಡೆಯ ವ್ಯಕ್ತಿ, ಸಾಮಾನ್ಯಪ್ರಜೆ ಎಡತಾಕುವುದು ಮಾತ್ರ ತನ್ನದೇ ಗ್ರಾಮದ ಪಂಚಾಯ್ತಿಯನ್ನು. ಆತ ಹಳ್ಳಿಯಿಂದ ದಿಲ್ಲಿಗೆ ಅಥವಾ ಬೆಂಗಳೂರಿಗೆ ಹೋಗುವುದು, ಪಂಚಾಯ್ತಿಗಳಲ್ಲಿ ಆಗದ ಕೆಲಸಗಳನ್ನು ಶಾಸಕರು, ಸಚಿವರ ಹತ್ತಿರವೋ ಬಂದು ಅಧಿಕಾರಿಗಳ ಮೂಲಕ ಸರಿಪಡಿಸಿಕೊಂಡು ಹೋಗಲು. ಆತ ಮತ್ತೆ ತಲುಪಬೇಕಾದ್ದೂ ಅದೇ ಗ್ರಾಮ ಪಂಚಾಯ್ತಿಯನ್ನು.
ಇಂಥ ಆದ್ಯಸಂವಹನ ಕೇಂದ್ರಕ್ಕೆ ‘ಪಿಡಿಒ’ (ಪಂಚಾಯಿ ಅಭಿವೃದ್ಧಿ ಅಧಿಕಾರಿ) ಗಳು ಆಪ್ತರಂತೆ ಸಹಾಯಕ್ಕೆ, ಸಲಹೆಗೆ ದೊರಕುವರು. ತಮ್ಮ ಹತ್ತಿರ ಬಂದವರ ಕಷ್ಟ, ಕುಂದುಕೊರತೆ ಆಲಿಸಿ, ತಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಕೆಲಸ ಗಳನ್ನು ಸಮಯದ ಗಡಿಮೀರಿ ಕೆಲವರು ಮಾಡಿದ್ದಾರೆ, ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಪಂಚಾಯ್ತಿಗೆ ಬರುವವರ ಕಷ್ಟ ಕೇಳಿ ಪರಿಹಾರ ಸೂಚಿಸುತ್ತಿದ್ದವರಿಗೇ ಬಂದಿರುವ ಸಮಸ್ಯೆಗಳನ್ನು ಕೇಳಿ, ಪರಿಹರಿ ಸುವವರೇ ಇಲ್ಲದಂತಾಗಿದೆ. ಇದು ನಮ ಇಂದಿನ ವ್ಯವಸ್ಥೆ. ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಬೇಕಿರುವ ಪ್ರಮಾಣಪತ್ರಗಳಿರಬಹುದು, ವಾಸ ಸ್ಥಳ ದೃಢೀಕರಣ ಪತ್ರಗಳಿರಬಹುದು ಅಥವಾ ತಮ್ಮದೇ ಕೃಷಿ ಸಂಬಂಧಿತ ಬೀಜದ ಸಬ್ಸಿಡಿ, ಗೊಬ್ಬರ ಸಬ್ಸಿಡಿ, ಬೆಳೆ ವಿಮೆ, ಬೆಳೆನಷ್ಟ ಗಣತಿ, ಪಹಣಿ, ಜನನ-ಮರಣ ಪ್ರಮಾಣಪತ್ರ, ಉದ್ಯೋಗಖಾತ್ರಿ, ಆದಾಯ ಪ್ರಮಾಣಪತ್ರ, ವಂಶವೃಕ್ಷ, ವೃದ್ಧಾಪ್ಯವೇತನ, ಉಚಿತ ವಸತಿ ಯೋಜನೆ, ಕೃಷಿ ಕಾರ್ಮಿಕ, ಆಸ್ತಿ ತೆರಿಗೆ, ಬೀದಿದೀಪ ನಿರ್ವಹಣೆ ಹೀಗೆ 50ಕ್ಕೂ ಹೆಚ್ಚು ಸೌಲಭ್ಯಗಳು ಅಧಿಕಾರ ವಿಕೇಂದ್ರಿಕರಣದ ಮೊದಲ ಮೆಟ್ಟಿಲೆಂದೇ ಕರೆಯಲ್ಪಡುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಬರುತ್ತವೆ.
ಇಲ್ಲಿಯೇ ದೊರಕಬೇಕಾದ ಸೌಲಭ್ಯಗಳು, ತಲುಪಬೇಕಾದ ಯೋಜನೆಗಳು ಸಮರ್ಪಕವಾಗಿ ದೊರೆಯದಿದ್ದರೆ, ರಾಜ್ಯ ಸರಕಾರಕ್ಕಾಗಲಿ, ಇಲಾಖೆಗಳಿಗಾಗಲಿ ಯಾವುದೇ ರೀತಿಯ ‘Good Impression’ ಸಿಗುವುದಿಲ್ಲ ಎಂಬುದು ಧರಣಿನಿರತ ಪಂಚಾಯ್ತಿ ನೌಕರರ ಸ್ಥಿತಿ ಕಂಡ ಮೇಲಾದರೂ ಸ್ಥಳೀಯ ಆಡಳಿತಕ್ಕೆ ಅರಿವಾದಂತೆ ಕಾಣುತ್ತದೆ.
ವಿದೇಶಿ ಹೂಡಿಕೆ ಸಂದರ್ಭದಲ್ಲಿ ನಾವು ಹೇಳುವ ‘ಎಲ್ಲ ಅಡೆತಡೆಗಳನ್ನು ನಿವಾರಿಸಿ, ಶೀಘ್ರವಾಗಿ ಉದ್ದಿಮೆ
ಆರಂಭಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. Redtape cultureಗೆ ವಿದಾಯ ಹೇಳಲಾಗಿದೆ’ ಎಂಬ ಮಾತು-ಮನೋಭಾವವನ್ನು ಈ ಪಿಡಿಒ ನೌಕರರ ವಿಷಯದಲ್ಲೂ ರಾಜ್ಯ ಪಂಚಾಯತ್ ಇಲಾಖೆ ಮತ್ತು ಆರ್ಡಿಪಿಆರ್ ವಿಭಾಗವು ಹೊಮ್ಮಿಸಬೇಕಿದೆ. ತಮ್ಮ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸುವಂತೆ ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವವರ ದನಿಗೆ ಕಿವಿಯಾಗಿ ಅವು ಯಾಕೆ Fast Track System ಮಾದರಿಯಲ್ಲಿ ಸಮಸ್ಯೆಯನ್ನು ಪರಿಹರಿಸ ಬಾರದು? ಎಂಬುದು ರಾಜ್ಯದ ಜನರ ಪ್ರಶ್ನೆಯಾಗಿದೆ.
ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ, ಅದರಲ್ಲಿ ಸಚಿವೆ ಯಾಗಿದ್ದ ಶೋಭಾ ಕರಂದ್ಲಾಜೆ ಅವರು ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪಿಡಿಒ ಹುದ್ದೆಯನ್ನು ಸೃಷ್ಟಿಸುವ ಮೂಲಕ, ವಿಕೇಂದ್ರೀಕರಣ ತತ್ವಕ್ಕೆ ಇನ್ನೂ ಹೆಚ್ಚಿನ ಬಲ ತುಂಬಿದ್ದರು. ಇಂದು ರಾಜ್ಯದಲ್ಲಿ ಒಟ್ಟು 6 ಸಾವಿರಕ್ಕೂ ಅಧಿಕ ಪಿಡಿಒ ನೌಕರರು ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
35 ಸಾವಿರದಷ್ಟು ಹಳ್ಳಿಗಳು ಇವರ ಮೂಲಕ 50ಕ್ಕೂ ಹೆಚ್ಚು ಸೇವೆಗಳನ್ನು ಪಡೆದುಕೊಳ್ಳುತ್ತಿವೆ. 3 ಹಂತಗಳಲ್ಲಿ ಜಾರಿಗೊಳಿಸಿ 30 ವರ್ಷಗಳು ಕಳೆದ ಸಂಭ್ರಮ ಮತ್ತು ‘ರಾಷ್ಟ್ರೀಯ ಸ್ವರಾಜ್ ಸಮ್ಮೇಳನ’ ಕಾರ್ಯಕ್ರಮವನ್ನು
ರಾಜ್ಯ ಪಂಚಾಯತ್ ಇಲಾಖೆಯಡಿಯಲ್ಲಿ ಆಚರಿಸಲು ತಯಾರಿ ನಡೆಸುತ್ತಿರುವ ಹೊತ್ತಿನ ನೌಕರರು ತಾವು
ಅನುಭವಿಸುತ್ತಿರುವ ತಾರತಮ್ಯ, ಅಸಮಾನತೆ, ಕಿರುಕುಳ, ಅಪರಿಮಿತ ಕಾರ್ಯದೊತ್ತಡ, ಕನಿಷ್ಠ ಸಿಬ್ಬಂದಿಗಳಿಂದ
ಗರಿಷ್ಠ ಸೇವೆಗೆ ಒತ್ತಾಯಿಸುವಿಕೆ, ಮೇಲಧಿಕಾರಿಗಳಿಂದ ದೌರ್ಜನ್ಯ ಹೀಗೆ ಹತ್ತಾರು ವಿಚಾರಗಳನ್ನು ಮುಂದಿಟ್ಟು
ತಮ್ಮ ಹಕ್ಕಿನ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.
ಇವರ ಸಮಸ್ಯೆಗಳನ್ನೇ ಸರಿಪಡಿಸಲಾಗದವರು ರಾಜ್ಯವನ್ನು ಹೇಗೆ ಸರಿಪಡಿಸಿಯಾರು ಎಂದು ಜನರು ಕುಹಕ ವಾಡುತ್ತಿದ್ದಾರೆ. ವಿಶಿಷ್ಟ ಗ್ರಾಮೀಣ ಸೊಬಗಿನ ಹಿನ್ನೆಲೆಯಿರುವ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ತೊಂದು ಭರವಸೆ, ಸಮಾನತೆ ತರುವ ಆಶಯದೊಂದಿಗೆ ರೂಪುಗೊಂಡಿದ್ದೇ ಪಂಚಾಯತ್ರಾಜ್ ವ್ಯವಸ್ಥೆ. ಇದು ಗ್ರಾಮೀಣ ಮಟ್ಟ ದಲ್ಲಿ ಸ್ವಂತ ಸರಕಾರದಂತೆ ತಮಗೆ ತಾವೇ ರಚಿಸಿಕೊಂಡು ತಾವೇ ಚಲಾಯಿಸುವ ಒಂದು ವ್ಯವಸ್ಥೆ. ನಮ್ಮಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗಳಿವೆ:
1. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು, ಮಂಡಲ ಪರಿಷತ್ ಅಥವಾ ಬ್ಲಾಕ್ ಸಮಿತಿ/ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್ತುಗಳು.
ಗ್ರಾಮಸಭೆಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ನೋಂದಾಯಿತ ಮತದಾರರನ್ನು
ಒಳಗೊಂಡಿದ್ದು, ಗ್ರಾಮ ನಿವಾಸಿಗಳು ಸ್ಥಳೀಯ ಸರಕಾರದಲ್ಲಿ ನೇರವಾಗಿ ಭಾಗವಹಿಸುವುದಕ್ಕೆ ಅನುವು
ಮಾಡಿಕೊಡುವ ಸಂಸ್ಥೆಯಾಗಿದೆ. ಭಾರತವು ಒಟ್ಟಾರೆ 666232 ಹಳ್ಳಿಗಳನ್ನು ಹೊಂದಿದ್ದು, ಇವು 25,5,240
ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಬರುತ್ತವೆ ಎಂಬ ಅಂದಾಜಿದೆ. ಚಂಡಿಗಢವು ಒಂದು ಜಿಲ್ಲೆಯನ್ನು ಹೊಂದಿರುವ
ಮೂಲಕ ಗ್ರಾಮ ಪಂಚಾಯ್ತಿ ಹೊಂದಿರದ ರಾಜ್ಯವಾಗಿದ್ದರೆ, 27 ಹಳ್ಳಿಗಳಿರುವ ಲಕ್ಷದ್ವೀಪವು ೧೦ ಗ್ರಾಮ
ಪಂಚಾಯ್ತಿ ಹೊಂದುವ ಮೂಲಕ ಅತಿ ಕಡಿಮೆ ಗ್ರಾಮ ಪಂಚಾಯ್ತಿ ಹೊಂದಿರುವ ಪ್ರದೇಶವಾಗಿದೆ. ದೇಶದ
ಅತಿಹೆಚ್ಚು ಹಳ್ಳಿಗಳನ್ನು (110274) ಮತ್ತು 57,691ರಷ್ಟು ಗ್ರಾಮ ಪಂಚಾಯ್ತಿಗಳನ್ನು ಹೊಂದಿರುವ
ರಾಜ್ಯವಾಗಿ ಉತ್ತರಪ್ರದೇಶವು ಗುರುತಿಸಲ್ಪಡುತ್ತದೆ.
ಇನ್ನು ಕರ್ನಾಟಕದಲ್ಲಿ ಸುಮಾರು 30715ರಷ್ಟು ಹಳ್ಳಿಗಳು 5950ರಷ್ಟು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಬರುತ್ತವೆ. ಹೀಗೆ ಇಡೀ ದೇಶದ ಹೆಮ್ಮೆ ಪಡುವಂತೆ ಕರ್ನಾಟಕದಲ್ಲಿ 1993ರಲ್ಲಿ ಕ್ರಾಂತಿಕಾರಕ ಹೆಜ್ಜೆಯಲ್ಲಿ ಜಾರಿಗೊಂಡ ಪಂಚಾಯತ್ ರಾಜ್ ವ್ಯವಸ್ಥೆಯು, ಇಂದು ಗೆದ್ದಲು ತಿಂದ ಮರದ ಬುಡದಂತೆ ಶಿಥಿಲಾವಸ್ಥೆಗೆ ತಲುಪಿದೆ ಅಥವಾ ಅವಸಾನದತ್ತ ಸಾಗುತ್ತಿದೆ ಎನ್ನಬಹುದು. ಮೇಲಧಿಕಾರಿಗಳ ಅಸಹಕಾರ, ರಾಜಕೀಯ ಶಕ್ತಿಗಳ ದಬ್ಬಾಳಿಕೆ, ವಿಪರೀತ ಕೆಲಸಗಳ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನುಸರಿಪಡಿಸುವಂತೆ ಆಗ್ರಹಿಸಿ, ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚಿನ ಅಧಿಕಾರಿಗಳು, ನೌಕರರು ಧರಣಿಯಲ್ಲಿ ತೊಡಗಿದ್ದಾರೆ.
ಈ ಮೂಲಕ, ನೀರು ಸರಬರಾಜು ಮತ್ತು ವಿದ್ಯುತ್ ಸೇವೆ ಹೊರತುಪಡಿಸಿ ಪಹಣಿ, ಜಾತಿ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ, ವಸತಿ ಯೋಜನೆ, ವಿದ್ಯಾರ್ಥಿಗಳ ಪ್ರಮಾಣಪತ್ರ ನೀಡಿಕೆ ಸೇರಿದಂತೆ 50ಕ್ಕೂ ಹೆಚ್ಚು ಸೇವೆಗಳು ಸ್ಥಗಿತ ಗೊಂಡಿವೆ. ಒಂದು ಉನ್ನತ ಆಲೋಚನೆ ಇಟ್ಟುಕೊಂಡು ಸೃಷ್ಟಿಯಾದ ಹುದ್ದೆಗಳಿಗೆ ನ್ಯಾಯ ಒದಗಿಸ ಬೇಕಾದ್ದು ಮತ್ತು ಅವರಿಗೆ ಯೋಗ್ಯ ಸೌಲಭ್ಯಗಳನ್ನು ಒದಗಿಸಬೇಕಾದ್ದು ಆಡಳಿತಾರೂಢ ಸರಕಾರದ ಮೂಲಭೂತ ಕರ್ತವ್ಯ ವಾಗಿದೆ.
ವಿವಿಧ ರೀತಿಯ ಕಿರುಕುಳ ತಾಳಲಾರದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಅಡಿಯಲ್ಲಿನ 280ಕ್ಕೂ ಅಧಿಕ ಅಧಿಕಾರಿಗಳು, ನೌಕರರು ಆತ್ಮಹತ್ಯೆಗೆ ಶರಣಾಗಿರುವುದಕ್ಕೆ, ಈ ಇಲಾಖೆಯ ಒಳಗಡೆ ಇರುವ ಒತ್ತಡ ಮತ್ತು ವೇತನ ಸೇರಿದಂತೆ ಇತರೆ ಸೌಲಭ್ಯಗಳೇ ಅಲಭ್ಯತೆಯೇ ಕಾರಣವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದು ಮತ್ತು ಸಾಮಾಜಿಕ ಹೊಣೆ ಹೊತ್ತಿರುವ ಇಲಾಖೆಗಳ ಕಾರ್ಯಗಳಲ್ಲಿ ಸಕ್ರಿಯವಾಗುವುದು ಬೇರೆಬೇರೆ ಎಂಬುದನ್ನು ಸಂಬಂಧಪಟ್ಟವರು ಮೊದಲು ಅರಿಯಬೇಕಿದೆ. ಮಾತೆತ್ತಿದರೆ, ಕೇರಳ ಹಾಗೂ ಇತರೆ ರಾಜ್ಯಗಳ ಉದಾಹರಣೆ ಕೊಡುವ ನಮ್ಮವರು, ಕನಿಷ್ಠಪಕ್ಷ ಈ ವಿಚಾರದಲ್ಲಾದರೂ ಕೇರಳ ಮಾದರಿಯ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಸುವ್ಯವಸ್ಥಿತ ಆಡಳಿತವನ್ನು ಅನುಸರಿಸಲಿ ಮತ್ತು ಅಲ್ಲಿನಂತೆ ವಿವಿಧ ಹುದ್ದೆಗಳನ್ನು ಕಾರ್ಯಗಳಿಗನುಗುಣವಾಗಿ ಭರ್ತಿಮಾಡಲಿ.
ಕೇರಳದ ಸಾಮಾನ್ಯ ಪಂಚಾಯ್ತಿಯಲ್ಲಿ ಕಾರ್ಯದರ್ಶಿ, ಸಹಕಾರ್ಯದರ್ಶಿ, ಜೂನಿಯರ್ ಸೂಪರಿಂಟೆಂಡೆಂಟ್,
ಅಕೌಂಟೆಂಟ್, ಸೀನಿರ್ಯ ಕ್ಲರ್ಕ್, ಆಫೀಸ್ ಅಟೆಂಡರ್, ಪಾರ್ಟ್ ಟೈಮ್ ಸ್ವೀಪರ್, ಡ್ರೈವರ್, ಟೆಕ್ನಿಕಲ್
ಅಸಿಸ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್, ಹೆಲ್ತ ಇನ್ಸ್ಪೆಕ್ಟರ್ ಸೇರಿದಂತೆ 15ರಿಂದ 20 ಕಾರ್ಯನಿರತ ಹುದ್ದೆಗಳಿವೆ;
ಹೀಗೆ ಒಂದು ಸಂಪೂರ್ಣ ವ್ಯವಸ್ಥೆಯು ಜನಸೇವೆಯಲ್ಲಿ ಯಾವುದೇ ಒತ್ತಡವಿಲ್ಲದೆ ತೊಡಗಿದಾಗ ಮಾತ್ರ ಅಭಿವೃದ್ಧಿ
ಕಡೆಗೆ ಸಾಗಲು ಸಾಧ್ಯ.
ನಮ್ಮ, ಒಂದು ಸಾಮಾನ್ಯ ಪಂಚಾಯ್ತಿಯಲ್ಲಿ ಒಬ್ಬ ಅಧ್ಯಕ್ಷ, ಒಬ್ಬ ಕಾರ್ಯದರ್ಶಿ, ಕ್ಲರ್ಕ್, ಒಬ್ಬ ಪಿಡಿಒ
ಸೇರಿದಂತೆ 5-6 ನೌಕರರಿದ್ದರೆ ಅದೇ ಜಾಸ್ತಿ. ಇದು ನಮ್ಮ ಗ್ರಾಮ ಪಂಚಾಯ್ತಿಗಳ ಕಥೆ-ವ್ಯಥೆ! ಅಷ್ಟಕ್ಕೂ ಇವರ
ಬೇಡಿಕೆಗಳೇನು ಈಡೇರಿಸಲು ಅಸಾಧ್ಯವಾ? ಇವರು ಕೇಳುತ್ತಿರುವುದು- ನಮಗೂ ಸಾಮಾಜಿಕ ಜೀವನ ಭದ್ರತೆ
ಕೊಡಿ, ಗೌರವಯುತವಾಗಿ ನಡೆಸಿಕೊಳ್ಳಿ, ಒದಗುತ್ತಿರುವ ಕಾರ್ಯದೊತ್ತಡ, ಮೇಲಧಿಕಾರಿಗಳು ಕಿರುಕುಳ ತಪ್ಪಿಸಿ,
ವಿನಾಕಾರಣ ವರ್ಗಾವಣೆ ಮಾಡದೇ ಒಂದು ನೀತಿ- ನಿಯಮ ರೂಪಿಸಿ ಅಂತ. ಆಯಾ ಹುದ್ದೆಗಳಿಗೆ ಅನುಗುಣ
ವಾಗಿ ವೇತನ ಹೆಚ್ಚಿಸಬೇಕು ಅಥವಾ ಒಟ್ಟಾರೆಯಾಗಿ ಗ್ರಾಮ ಪಂಚಾಯ್ತಿಗಳನು ಸ್ವಾಯತ ಸ್ಥಳೀಯ ಸಂಸ್ಥೆಗಳ
ನ್ನಾಗಿ ಪರಿವರ್ತಿಸುವ ಮೂಲಕ, ಈಗಿರುವ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು
ಎಲ್ಲರ ಹಕ್ಕೊತ್ತಾಯವಾಗಿದೆ.
ಹಲವು ಕಾರಣಗಳ ನೆಪವೊಡ್ಡಿ ಉದ್ಯೋಗ ಖಾತ್ರಿ ಯೋಜನೆ, ಇ-ಸ್ವತ್ತು ಸೇರಿದಂತೆ ಆಸ್ತಿಗಳಿಗೆ ಸಂಬಂಧಿಸಿದ
ದಾಖಲೆ ವಿತರಿಸುವ ಪ್ರಕ್ರಿಯೆಯೂ ನಿಂತಿರುವುದರಿಂದ, ಗ್ರಾಮ ಪಂಚಾಯ್ತಿಗಳಿಗೆ ಬರುತ್ತಿದ್ದ ಆದಾಯಗಳಿಗೂ
ಕತ್ತರಿ ಬಿದ್ದಿದೆ. ಘನತ್ಯಾಜ್ಯ ವಿಲೇವಾರಿ ಕಾರ್ಯಕ್ಕೂ ಅಲ್ಲಲ್ಲಿ ತೊಡಕಾಗಿದೆ. ಆಡಳಿತ ವ್ಯವಸ್ಥೆಯಲ್ಲಿನ ಪ್ರತಿ ಯೊಂದು ಭಾಗವೂ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕಾದ್ದು ರಾಜ್ಯ ಸರಕಾರದ ಜವಾಬ್ದಾರಿ. ಹಠಮಾರಿ
ಧೋರಣೆ ಕೈಬಿಟ್ಟು ಧರಣಿನಿರತರ ಮನವೊಲಿಸುವ ಪ್ರಾಮಾಣಿಕ ಯತ್ನದ ಜತೆಗೆ ಆಡಳಿತ ಯಂತ್ರವನ್ನು ಸದಾ
ಚುರುಕಾಗಿಟ್ಟುಕೊಳ್ಳಬೇಕಾದ ಹೊಣೆ ಸರಕಾರದ ಮೇಲಿದೆ. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಸರಕಾರದ ಯೋಜನೆ ಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪಂಚಾಯ್ತಿಗಳ ಪಾತ್ರ ಅತ್ಯಮೂಲ್ಯ. ಪಂಚಾಯತ್ ವ್ಯವಸ್ಥೆ ಇಲ್ಲದೇ
ಯಾವೊಂದು ಯೋಜನೆಯನ್ನೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯವೇ ಇಲ್ಲ. ಕಂದಾಯ ಸಹಿತ
ಎಲ್ಲ ವಿಭಾಗವೂ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ.
ಪಿಡಿಒಗಳು ಇಲ್ಲದಿದ್ದರೆ ಪಂಚಾಯತ್ ವ್ಯವಸ್ಥೆ ಹೇಗಿರಲಿದೆ ಎಂಬುದನ್ನು ಸರಕಾರ ಒಮ್ಮೆ ಯೋಚಿಸಬೇಕು. ಇತ್ತೀಚಿನ ಕೆಲವು ದಿನಗಳು ನಡೆದ ಅವರ ಪ್ರತಿಭಟನೆಯಿಂದಾಗಿ ಬಹುತೇಕ ಪಂಚಾಯತ್ ಕಾರ್ಯಚಟುವಟಿಕೆಯೇ ಸ್ತಬ್ಧವಾಗಿತ್ತು. ಸಾರ್ವಜನಿಕರು ನಿತ್ಯವೂ ಪಂಚಾಯ್ತಿಗೆ ಅಲೆದಾಡುತ್ತಿದ್ದರೂ ಕೆಲಸ ಕಾರ್ಯಗಳಾಗುತ್ತಿರಲಿಲ್ಲ. ಇಡೀ ಆಡಳಿತ ಯಂತ್ರವೇ ಸ್ಥಗಿತಗೊಂಡಿತ್ತು. ಹೀಗಾಗಿ ಪಂಚಾಯತ್ರಾಜ್ ವ್ಯವಸ್ಥೆಯನ್ನು ಸರಕಾರ ಸದೃಢ ಗೊಳಿಸಬೇಕು, ಅಗತ್ಯ ಕಾಯಕಲ್ಪ ನೀಡಬೇಕು ಮತ್ತು ಅನುದಾನವನ್ನು ಒದಗಿಸಬೇಕು.
ಇಂಥ ವ್ಯವಸ್ಥೆಯನ್ನು ಸರಕಾರಗಳು ದಿನೇದಿನೆ ಸದೃಢಗೊಳಿಸುತ್ತಾ ಹೋಗಬೇಕೇ ವಿನಾ ವ್ಯವಸ್ಥೆಗೆ ಕೊಡಲಿಪೆಟ್ಟು ನೀಡಬಾರದು. ರಾಜ್ಯ ಸರಕಾರವು ಪಿಡಿಒಗಳ ಕೊರತೆಯನ್ನು ಮೊದಲು ನೀಗಿಸಬೇಕು. ಎಲ್ಲ ಪಂಚಾಯ್ತಿಗಳಿಗೂ ಪಿಡಿಒ ನೇಮಕ ಮಾಡಬೇಕು. ಒಬ್ಬೊಬ್ಬ ಪಿಡಿಒಗೆ 2-3 ಪಂಚಾಯ್ತಿಗಳ ಜವಾಬ್ದಾರಿ ನೀಡುವುದನ್ನು ತಕ್ಷಣವೇ ನಿಲ್ಲಿಸ ಬೇಕು. ಜತೆಗೆ ಪಿಡಿಒಗಳಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಇಂಟರ್ನೆಟ್
ವ್ಯವಸ್ಥೆ ಇಲ್ಲದೇ ಕೆಲಸ ಮಾಡಬೇಕು ಎಂದರೆ ಹೇಗೆ ಸಾಧ್ಯ? ಸರಕಾರವು ಕನಿಷ್ಠಪಕ್ಷ ಇಂಟರ್ನೆಟ್ ಸೌಲಭ್ಯವನ್ನೂ ಪಿಡಿಒಗಳಿಗೆ ಕೊಡಲಾಗದೇ? ವೇತನ ಪರಿಷ್ಕರಣೆ, ಬಡ್ತಿ ಇತ್ಯಾದಿಗಳನ್ನು ಸರಕಾರ ಗಂಭೀರವಾಗಿಯೇ ಪರಿಗಣಿಸ ಬೇಕು.
ಇದನ್ನೂ ಓದಿ: Gururaj Gantihole Column: ಹೈನುಗಾರಿಕೆಯನ್ನು ಕ್ಷೀರೋದ್ಯಮವನ್ನಾಗಿ ವಿಶ್ವಕ್ಕೆ ತೋರಿದ ಭಾರತ !