Monday, 25th November 2024

PKL Season 11: ನಾಳೆಯಿಂದ ಪ್ರೊ ಕಬಡ್ಡಿ ಕಲರವ; ಶುಭಾರಂಭ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್‌

ಹೈದರಾಬಾದ್‌: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ (PKL Season 11) 11ನೇ ಆವೃತ್ತಿಗೆ ನಾಳೆ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಮೂರು ತಿಂಗಳುಗಳ ಕಾಲ ಕ್ರೀಡಾಭಿಮಾನಿಗಳಿಗೆ ಕಬಡ್ಡಿ ರಸದೌತಣವೂ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್(Telugu Titans) ಮತ್ತು ಬೆಂಗಳೂರು ಬುಲ್ಸ್(Bengaluru Bulls) ತಂಡಗಳು ಮುಖಾಮುಖಿಯಾಗಲಿವೆ. ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರಗೊಳ್ಳಲಿದೆ.

ಟೂರ್ನಿಯಲ್ಲಿ ಒಟ್ಟು 12 ತಂಡಗಳು ಸೆಣಸಲಿವೆ. ಪಂದ್ಯಾವಳಿಯು ಅಕ್ಟೋಬರ್ 18ರಂದು ಆರಂಭವಾಗಿ ಡಿಸೆಂಬರ್ 24ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಹೈದರಾಬಾದ್‌ನಲ್ಲಿ ನಡೆದರೆ, ದ್ವಿತೀಯ ಮತ್ತು ಮೂರನೇ ಹಂತ ಕ್ರಮವಾಗಿ ನೋಯ್ಡಾ ಮತ್ತು ಪುಣೆಯಲ್ಲಿ ನಡೆಯಲಿವೆ.

12 ತಂಡಗಳು

ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ, ಯುಪಿ ಯೋಧಾಸ್.

ಈ ಬಾರಿ ಬುಲ್ಸ್‌ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಹರಾಜಿನಲ್ಲಿ ಹಲವು ಸ್ಟಾರ್‌ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದೆ. ಕಳೆದ 2 ವರ್ಷಗಳಲ್ಲಿ ಜೈಪುರ ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದ ಅಜಿತ್​ ಈ ಬಾರಿ ಬುಲ್ಸ್‌ ಸೇರಿದ್ದಾರೆ. ಜತೆಗೆ ಜೈ ಭಗವಾನ್​ ತಂಡ ಸೇರಿದ್ದು ತಂಡದ ಬಲ ಹೆಚ್ಚಿದೆ. ಎಂ. ಚಂದ್ರನಾಯ್ಕ್​ ಈ ಬಾರಿಯ ಪ್ರೊ ಕಬಡ್ಡಿ ಲೀಗ್​ನಲ್ಲಿರುವ ಏಕೈಕ ಕನ್ನಡಿಗ. ಬುಲ್ಸ್ ತಂಡ ಕೊನೆಯದಾಗಿ ಟ್ರೋಫಿ ಗೆದ್ದಿದ್ದು 2018-19ರ ಆವೃತ್ತಿಯಲ್ಲಿ. ಇದಾದ ಬಳಿಕ ಟ್ರೋಫಿ ಗೆದ್ದಿಲ್ಲ.

ಇದನ್ನೂ ಓದಿ Pro Kabaddi 2024 : ಅಕ್ಟೋಬರ್‌ 18ರಿಂದ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ ಆರಂಭ

ಅನುಭವಿಗಳು ಮತ್ತು ನವಪ್ರತಿಭೆಗಳನ್ನು ಒಳಗೊಂಡ ಬುಲ್ಸ್‌ ತಂಡವು ಈ ಬಾರಿ ಮೋಡಿ ಮಾಡಲಿದೆ ಎಂದು ತಂಡದ ಕೋಚ್‌ ರಣಧೀರ್ ಸಿಂಗ್ ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼಪ್ರದೀಪ್‌ ನರ್ವಾಲ್ ವಾಪಸ್‌ ಬಂದಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡವು ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆ ಫಲಿತಾಂಶದಿಂದ ನಾವು ಹತಾಶರಾಗಿಲ್ಲ. ಪಂದ್ಯಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನಿಂದಲೂ ಕಲಿಯುವುದು ಸಾಕಷ್ಟಿದೆ. ಈ ಬಾರಿಯ ಆವೃತ್ತಿಯಲ್ಲಿ ಎಲ್ಲಾ ವಿಭಾಗಗಳನ್ನೂ ಬಲಿಷ್ಠಗೊಳಿಸಲಾಗಿದೆ. ಗುಣಮಟ್ಟದ ಆಟವನ್ನಾಡುವ ಮೂಲಕ ಮತ್ತೊಂದು ಟ್ರೋಫಿ ಗೆಲ್ಲುವ ವಿಶ್ವಾಸವಿದೆʼ ಎಂದು ರಣ್‌ದೀರ್‌ ಸಿಂಗ್‌ ಹೇಳಿದ್ದಾರೆ.

ಬೆಂಗಳೂರು ಬುಲ್ಸ್​ ತಂಡ

ಅಜಿಂಕ್ಯ ಪವಾರ್‌, ಪ್ರದೀಪ್‌ ನರ್ವಾಲ್‌, ಲಕ್ಕಿ ಕುಮಾರ್‌, ಮಂಜೀತ್‌, ಚಂದ್ರನಾಯ್ಕ ಎಂ., ಹಾಸುನ್‌ ತೊಂಕ್ರುಯಿಯ, ಪ್ರಮೋದ್‌ ಸಾಯಿಸಿಂಗ್‌, ನಿತಿನ್‌ ರಾವಲ್‌, ಜೈ ಭಗವಾನ್‌, ಜತಿನ್‌. ಉಳಿಸಿಕೊಳ್ಳಲಾಗಿದ್ದ ಆಟಗಾರರು: ಪೊನ್ಪರ್ತಿಬನ್‌ ಸುಬ್ರಮಣಿಯನ್‌, ಸುಶೀಲ್‌, ರೋಹಿತ್‌ ಕುಮಾರ್‌, ಸೌರಭ್‌ ನಂದಲ್‌, ಆದಿತ್ಯ ಪವಾರ್‌, ಅಕ್ಷಿತ್‌, ಅರುಲ್‌ನಂತಬಾಬು, ಪ್ರತೀಕ್‌.