Friday, 18th October 2024

IPL 2025: ಮುಂಬೈನಲ್ಲಿ ರೋಹಿತ್‌ ರಿಟೈನ್‌

ಮುಂಬೈ: 18ನೇ ಆವೃತ್ತಿಯ ಐಪಿಎಲ್‌(IPL 2025) ಟೂರ್ನಿಯಲ್ಲಿ ರೋಹಿತ್‌ ಶರ್ಮಾ(Rohit Sharma) ಅವರು ಮುಂಬೈ ಇಂಡಿಯನ್ಸ್(Mumbai Indians) ತೊರೆದು ಬೇರೆ ಫ್ರಾಂಚೈಸಿ ಪರ ಆಡಲಿದ್ದಾರೆ ಎಂಬುದು ಹಲವು ತಿಂಗಳಿನಿಂದ ಚರ್ಚಿತ ವಿಷಯ. ಈ ಮಧ್ಯೆ ರೋಹಿತ್‌ ಮುಂಬೈ ಇಂಡಿಯನ್ಸ್​ ತಂಡದಲ್ಲೇ ರಿಟೇನ್​ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ರೋಹಿತ್‌ ಜತೆಗೆ ಹಾರ್ದಿಕ್​ ಪಾಂಡ್ಯ, ಜಸ್​ಪ್ರೀತ್​ ಬುಮ್ರಾ ಮತ್ತು ಸೂರ್ಯಕುಮಾರ್​ ಯಾದವ್​ ಕೂಡ ಮುಂಬೈನಲ್ಲೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ನಾಯಕತ್ವದಿಂದ ತೆಗೆದುಹಾಕಿದ ಬಳಿಕ ರೋಹಿತ್​ ಶರ್ಮ ಅಸಮಾಧಾನಗೊಂಡಿದ್ದು ತಂಡ ತೊರೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಅಸಮಾಧಾನ ಶಮನಗೊಂಡಿದ್ದು ರೋಹಿತ್‌ ಮುಂಬೈ ತಂಡದಲ್ಲೇ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.

ಸದ್ಯ ನಾಲ್ವರು ಆಟಗಾರರ ರಿಟೇನ್​ಗೆ ಮುಂಬೈ ತಂಡ ಎಷ್ಟು ಸಂಭಾವನೆ ನೀಡಲಿದೆ ಎಂಬುದು ಸ್ಪಷ್ಟವಾಗಿಲ್ಲ. ವಿಕೆಟ್​ ಕೀಪರ್ ಇಶಾನ್​ ಕಿಶನ್​ ಮತ್ತು ಆಸ್ಟ್ರೆಲಿಯಾದ ಟಿಮ್​ ಡೇವಿಡ್​ರನ್ನು ಹರಾಜಿನಲ್ಲಿ ರೈಟ್​ ಟು ಮ್ಯಾಚ್​ ಮೂಲಕ ಉಳಿಸಿಕೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ IPL 2025 Auction: ನ. 24, 25ರಂದು ಐಪಿಎಲ್ ಮೆಗಾ ಹರಾಜು?

ಬಿಸಿಸಿಐ 5 ಆಟಗಾರರ ರಿಟೇನ್​ಗೆ ಕ್ರಮವಾಗಿ 18,14, 11, 18, 14 ಕೋಟಿ ರೂ. ಅಂದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕು ಎಂದಿದೆ. ಜತೆಗೆ 3 ಆಟಗಾರರ ರಿಟೇನ್​ಗೆ ಒಟ್ಟು 43 ಕೋಟಿ ರೂ. ಮತ್ತು 4 ಆಟಗಾರರ ರಿಟೇನ್​ಗೆ 61 ಕೋಟಿ ರೂ. ವ್ಯಯಿಸಬೇಕಿದ್ದು, ಇದನ್ನು ಆಟಗಾರರಿಗೆ ಹೇಗೆ ಬೇಕಾದರೂ ಹಂಚಿಕೆ ಮಾಡಬಹುದು ಎನ್ನಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ಹೆನ್ರಿಕ್ ಕ್ಲಾಸೆನ್, ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರ‌ ಮಾಡಿದೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್‌ ಪಂತ್‌, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ಅವರನ್ನು ರೀಟೈನ್‌ ಮಾಡಲಿದೆ ಎನ್ನಲಾಗಿದೆ. ಪಂತ್‌ಗೆ 18, ಅಕ್ಷರ್‌ಗೆ 14, ಕುಲದೀಪ್‌ಗೆ 11 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.  ಹೆನ್ರಿಕ್ ಕ್ಲಾಸೆನ್ ಅವರನ್ನು ಮೊದಲ ಆಯ್ಕೆಯಾಗಿ ಹೈದರಾಬಾದ್‌ ತನ್ನಲ್ಲಿ ಉಳಿಸಿಕೊಳ್ಳಲಿದೆ. ಅವರಿಗೆ 23 ಕೋಟಿ ರೂ.ನೀಡಿ ಉಳಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮ್ಮಿನ್ಸ್ 18 ಕೋಟಿ, ಅಭಿಷೇಕ್ ಶರ್ಮಾ 14 ಕೋಟಿ ರೂ.ನೀಡಿ ರಿಟೆನ್ಶನ್‌ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ.

ರಾಜಸ್ಥಾನ ರಾಯಲ್ಸ್​ ತಂಡ ಸಂಜು ಸ್ಯಾಮ್ಸನ್​, ಯಶಸ್ವಿ ಜೈಸ್ವಾಲ್​ ಮತ್ತು ರಿಯಾನ್​ ಪರಾಗ್​ ರಿಟೇನ್​ ಮಾಡಿಕೊಳ್ಳಲು ಬಯಸಿದೆ ಎನ್ನಲಾಗಿದೆ. ಲಕ್ನೋ ತಂಡ ಆಯುಷ್​ ಬಡೋನಿ, ಮೊಹ್ಸಿನ್​ ಖಾನ್​ ಮತ್ತು ನಿಕೋಲಸ್​ ಪೂರನ್​ ರಿಟೇನ್​ಗೆ ನಿರ್ಧರಿಸಿದೆ. ಪಂಜಾಬ್​ ಕಿಂಗ್ಸ್​ ತಂಡ ಅರ್ಷದೀಪ್​ ಸಿಂಗ್​, ಶಶಾಂಕ್​ ಸಿಂಗ್​ ಮತ್ತು ಆಶುತೋಷ್​ ಶರ್ಮ ರಿಟೇನ್​ ಮಾಡಿಕೊಳ್ಳಲು ಬಯಸಿದೆ.