67ನೇ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ
ಹೊಸಪೇಟೆ: ಸಹಕಾರ ಇಲಾಖೆಯಿಂದ ಮುಂದಿನ 6 ತಿಂಗಳಲ್ಲಿ 5ಸಾವಿರ ಜನರಿಗೆ ಉದ್ಯೋಗ ಒದಗಿಸಿಕೊಡುವುದಕ್ಕೆ ಪ್ರಾರಂಭಿ ಸಲಾಗಿದೆ ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಎಸ್.ಟಿ. ಸೋಮಶೇಖರ್ ಹೇಳಿದರು.
ಹೊಸಪೇಟೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 67ನೇ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಮತ್ತು ಇನ್ನೀತರ ಕಾರಣ ಗಳಿಂದ ನಿರುದ್ಯೋಗದಿಂದ ಬಳಲುತ್ತಿರುವ ಯುವಜನರ ಬದುಕಿಗೆ ಉದ್ಯೋಗ ಕಲ್ಪಿಸಿಕೊಡುವುದರ ಮೂಲಕ ಸ್ಪಂದಿಸಲು ಸಹಕಾರ ಇಲಾಖೆ ನಿರ್ಧರಿಸಿದ್ದು,ಕೆಎಂಎಫ್, ಡೈರಿ,ಅರ್ಬನ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಕೋ ಅಪರೇಟಿವ್ ಬ್ಯಾಂಕ್ ಗಳು ಸೇರಿದಂತೆ ಸಹಕಾರ ಇಲಾಖೆಗಳಲ್ಲಿ 5 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು.ಬರುವ ಏಪ್ರಿಲ್-ಮೇ ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿರುವ 21ಡಿಸಿಸಿ ಬ್ಯಾಂಕ್ ಗಳು,ಅಪೆಕ್ಸ್ ಬ್ಯಾಂಕ್, ವಿಎಸ್ಎಸ್ಎನ್ ಒಂದೇ ಸೂರಿನಡಿ ತರುವ ಚಿಂತನೆ ನಡೆದಿದೆ ಎಂದು ಹೇಳಿದ ಅವರು ಬಳ್ಳಾರಿಯ ಬಿಡಿಸಿಸಿ ಬ್ಯಾಂಕ್ 300ಕೋಟಿ ರೂ.ಗಳಿಗೂ ಹೆಚ್ಚು ಸಾಲವನ್ನು ರೈತರಿಗೆ ನೀಡುವುದರ ಮೂಲಕ ಮಾದರಿಯಾಗಿದೆ. ನಬಾರ್ಡ್ ನಿಂದ ಬಂದ 80ಕೋಟಿ ರೂ.ಗಳ ಸಬ್ಸಿಡಿ(ಅನುದಾನ)ಯನ್ನು ಈ ಬಿಡಿಸಿಸಿ ಬ್ಯಾಂಕ್ ಗೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಡೀ ದೇಶಕ್ಕೆ ಮಾದರಿಯಾದ ನಾಲ್ಕೈದು ಡಿಸಿಸಿ ಬ್ಯಾಂಕ್ ಗಳು ರಾಜ್ಯದಲ್ಲಿದ್ದು,ಅದರಲ್ಲಿ ಬಿಡಿಸಿಸಿ ಬ್ಯಾಂಕ್ ಕೂಡ ಒಂದಾಗಿದೆ ಎಂದರು. ರಾಜ್ಯದಲ್ಲಿ 40ಸಾವಿರ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು,2.30ಕೋ ಟಿ ಸಹಕಾರ ಸದಸ್ಯರಿದ್ದಾರೆ. ಕೋಟ್ಯಾಂತರ ರೂ.ಗಳ ಡಿಪಾಸಿಟ್ ಮಾಡಲಾಗಿದೆ.ಲಕ್ಷಾಂತರ ಜನರು ಉದ್ಯೋಗ ಪಡೆದುಕೊಂಡಿದ್ದಾರೆ.ಕೋಟ್ಯಾಂತರ ರೈತರಿಗೆ ಸಾಲ ನೀಡಲಾಗಿದೆ ಎಂದರು.
ಸಹಕಾರ ಕ್ಷೇತ್ರ ತುಂಬಾ ವ್ಯವಸ್ಥಿತವಾಗಿ ಬೆಳೆಯುತ್ತಿದೆ ಎಂದು ವಿವರಿಸಿದ ಸಚಿವ ಸೋಮಶೇಖರ್ ಅವರು ಕೋವಿಡ್ ನಿಂದ ಅರ್ಥಿಕ ಹೊಡೆತ ಬಿದ್ದಿದ್ದು,ಅರ್ಥಿಕವಾಗಿ ಚೈತನ್ಯ ತುಂಬುವ ದೃಷ್ಟಿಯಿಂದ ಅರ್ಥಿಕ ಸ್ಪಂದನೆ ಯೋಜನೆ ಜಾರಿಗೆ ತಂದು 30ಜಿಲ್ಲೆಯ ರೈತರಿಗೆ ಸಾಲ ಕೊಡುವಂತ ಕೆಲಸ ಮಾಡಲಾಗಿದೆ ಎಂದರು.
ಕೋವಿಡ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ 53 ಕೋಟಿ ನೀಡಲಾಗಿದೆ ಮತ್ತು ರಾಜ್ಯದಲ್ಲಿರುವ 52460 ಆಶಾಗಳಿಗೆ ತಲಾ 3ಸಾವಿರ ರೂ.ಗಳಂತೆ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ವಿವರಿಸಿದರು. ವಿಜಯನಗರ ಜಿಲ್ಲೆಯು ನಾಲ್ಕೈದು ತಿಂಗಳ ಹಿಂದೆಯೇ ಜಿಲ್ಲೆಯಾಗಿ ಘೋಷಣೆಯಾಗಬೇಕಿತ್ತು.ಮಾನ್ಯ ಮುಖ್ಯಮಂತ್ರಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಿದ್ದಾರೆ. ಅವರಿಗೆ ಇಡೀ ಜಿಲ್ಲೆಯ ಜನರ ಪರವಾಗಿ ಗೌರವಿಸೋಣ ಮತ್ತು ಮುಖ್ಯಮಂತ್ರಿಗಳ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಯಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಯಾರು ವಿರೋಧಿಸಬೇಡಿ ಎಂದರು. ಸಹಕಾರ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಬಿಡಿಸಿಸಿ ಬ್ಯಾಂಕ್ ತೋರಣಗಲ್ ಶಾಖೆಯ ನೂತನ ಕಟ್ಟಡವನ್ನು ಇದೇ ಸಂದರ್ಭ ದಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಹೊಸಪೇಟೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಎಂ. ವೃಷಬೇಂದ್ರಯ್ಯ, ಸಿರಗುಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ಹಾಗೂ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೃಷಿ ಸಚಿವ ಬಿ.ಸಿ. ಪಾಟೀಲ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಸಹಕಾರಿ ವಸತಿ ಮಹಾಮಂಡಳದ ನಿರ್ದೇಶಕ ಕಡ್ಲಿ ವೀರಣ್ಣ, ಸಹಕಾರ ಸಂಘಗಳ ಜಂಟಿ ನಿಬಂಧಕ ಗೋಪಾಲ ಚವ್ಹಾಣ, ಸಹಕಾರಿ ಸಂಘಗಳ ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್, ಬ.ಜಿ.ಸ.ಯೂ ನಿಗಮದ ಅಧ್ಯಕ್ಷ ಜೆ.ಎಂ. ಶಿವಪ್ರಸಾದ್ ಮತ್ತಿತರರು ಇದ್ದರು.