Wednesday, 30th October 2024

Yakshadhruva Patla Foundation: ಜರ್ಮನಿಯಲ್ಲೂ ಯಕ್ಷಗಾನದ ಸೊಬಗು; ಯಕ್ಷಧ್ರುವ ಪಟ್ಲ ಫೌಂಡೇಶನ್‌‌ನ ಯುರೋಪ್ ಘಟಕ ಉದ್ಘಾಟನೆ

Yakshadhruva Patla Foundation
-ಶೋಭಾ ಚೌಹಾನ್, ಫ್ರಾಂಕ್ಫರ್ಟ್, ಜರ್ಮನಿ

ಫ್ರಾಂಕ್ಫರ್ಟ್: ಕರ್ನಾಟಕದ ಯಕ್ಷಧ್ರುವ ಪಟ್ಲ ಫೌಂಡೇಶನ್ (Yakshadhruva Patla Foundation) ವಿದೇಶಗಳಲ್ಲೂ ಯಕ್ಷಗಾನದ ಕಂಪನ್ನು ಪಸರಿಸಲು ಮುಂದಾಗಿದ್ದು, ಜರ್ಮನಿಯ ಮ್ಯೂನಿಕ್‌ನ ಐನೆವೆಲ್ಟ್ ಹೌಸ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆಗೊಂಡಿತು.

ಸ್ವಾತಿ ಅಜಿತ್ ಪ್ರಭು ಅವರ ಗಣಪತಿ ಸ್ತುತಿಯೊಂದಿಗೆ ಚೌಕಿ ಪೂಜೆ ನೆರವೇರಿತು. ಬಾಲಗೋಪಾಲರಾಗಿ ಆದಿಶೇಷ, ಸಂವಿದ್‌, ಮನಸ್, ಪುಟ್ಟ ಕೃಷ್ಣ, ರಂಗ ಕೇಶವನಂತೆಯೇ ತಮ್ಮ ಹೆಜ್ಜೆಯ ಗೆಜ್ಜೆ ನಾದದಲ್ಲಿ ತಲ್ಲೀನಗೊಳಿಸಿದರು. ಪೂರ್ವರಂಗ ಪೀಠಿಕೆ ಸ್ತ್ರೀವೇಷ ಪ್ರಾತ್ಯಕ್ಷಿಕೆಯಲ್ಲಿ ಶ್ರೀದೇವಿ ತಮ್ಮ ಹಾವಭಾವದಿಂದ ಮಾರ ಸುಂದರನ ಕರೆ ತಂದರು. ಹಿಮ್ಮೇಳನದಲ್ಲಿ ಸ್ವಾತಿಯವರ ಗಾನ, ಅಜಿತ್‌ರವರ ಮೃದಂಗ ನೆರೆದವರ ಮನವನ್ನು ತಣಿಸಿತು.

ಬಡಗುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ತೆರೆ ಒಡ್ಡೋಲಗ ಪ್ರಾತ್ಯಕ್ಷಿಕೆಯನ್ನು ಯಕ್ಷಗಾನ ಗುರು ಹಾಗೂ ಚಿಣ್ಣರು ಲಯಬದ್ಧವಾಗಿ ನಡೆಸಿಕೊಟ್ಟರು. ಅಭಿಮನ್ಯು ಪ್ರಾತ್ಯಕ್ಷಿಕೆಯಲ್ಲಿ ಕುರುಕ್ಷೇತ್ರದ ರಣರಂಗಕ್ಕೆ ಚಕ್ರವ್ಯೂಹವನ್ನು ಬೇಧಿಸಲು ಹೊರಟು ನಿಂತ ಅಭಿಮನ್ಯುವಿಗೆ ತಾಯಿ ಸುಭದ್ರೆ ಅಲ್ಲಿಗೆ ಹೋಗದಿರು ಎಂದು ಮನವೊಲಿಸುವ ಸಂವಾದ ಎಲ್ಲರ ಅಂತರಂಗವನ್ನು ಹೊಕ್ಕಿತು. ಪ್ರಯಾಣ ಕುಣಿತ ಪ್ರಾತ್ಯಕ್ಷಿಕೆ, ಜತೆಗೆ ಚಿಕ್ಕಮಕ್ಕಳ ಮಾಯಾಮೃಗ ಒಂದಕ್ಕಿಂತ ಒಂದು ಪ್ರಖರವಾಗಿ ಮೂಡಿ ಬಂದಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತೀಯ ರಾಯಭಾರಿ ಕಚೇರಿ ಸಾಂಸ್ಕೃತಿಕ ಅಧಿಕಾರಿ ರಾಜೀವ್‌ ಚಿತ್ಕಾರ್‌ ಅವರು ದೀಪ ಬೆಳಗಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಯಕ್ಷಗಾನ ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ. ಇಂತಹ ಪ್ರಾಚೀನ ಕಲೆಯನ್ನು ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿ ಈ ಯಕ್ಷಧ್ರುವ ಸಂಸ್ಥೆಯು ಯಶಸ್ವಿಯಾಗಲಿ ಎಂದು ಆಶಿಸಿದರು.

ಮ್ಯೂನಿಕ್ ನಗರದ ಎಲ್‌ಎಂಯೂ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.‌ ರಾಬರ್ಟ್‌ ಝೈಡೇನ್ಬೋಸ್‌ ಅವರು ಮೂಲತಃ ಜರ್ಮನ್ ಭಾಷಿಗರಾಗಿದ್ದರೂ ಅಚ್ಚ ಕನ್ನಡದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅವರು ಶಿವಮೊಗ್ಗದ ಒಂದು ಸಣ್ಣ ಹಳ್ಳಿಯಲ್ಲಿ ಬಯಲಿನಲ್ಲಿ ಕುಳಿತು ಯಕ್ಷಗಾನ ನೋಡಿ ಆಶ್ಚರ್ಯವಾಗಿತ್ತು ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು. ಭಾರತದಿಂದ ಬಂದು ನೀವೆಲ್ಲಾ ನೆಲೆಸಿದ್ದೀರಿ. ನಿಮ್ಮೊಂದಿಗೆ ಹಲವಾರು ಸವಿನೆನಪುಗಳಿರುತ್ತದೆ. ಒಳ್ಳೆಯದ್ದನ್ನು ಸುಂದರವಾದುದ್ದನ್ನು ಮಾತೃಭೂಮಿಯಿಂದ ಇಲ್ಲಿ ತನಕ ತರಬೇಕು. ಇಂತಹ ಕೆಲಸಗಳು ಬಹುಮುಖ್ಯ. ಯಕ್ಷಗಾನವನ್ನು ಇಲ್ಲೂ ಸಹ ಪರಿಚಯ ಮಾಡುವ ಪ್ರಯತ್ನ ಖುಷಿಯಾಗಿದೆ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.

ಯಕ್ಷಧ್ರುವ ಫೌಂಡೇಶನ್‌ನ ಯುರೋಪ್‌ ಘಟಕದ ಅಧ್ಯಕ್ಷ ನರೇಂದ್ರ ಶೆಣೈ ಮಾತನಾಡಿ, ತಮ್ಮ ಹಲವು ವರ್ಷಗಳ ಮಹದಾಶಯ ಇಂದು ಕಾರ್ಯಗತವಾಗಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ಗುರು ಅಜಿತ್ ಪ್ರಭು ತಲ್ಲೂರ್‌ ಅವರ ಸಾರಥ್ಯದಲ್ಲಿ ಯುರೋಪ್‌ನಾದ್ಯಂತ ಯಕ್ಷಗಾನ ಪ್ರದರ್ಶನ ಹಾಗೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮ್ಯೂನಿಕ್ ನಗರದ ಎಲ್‌ಎಂಯೂ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ರಾಬರ್ಟ್‌ ಝೈಡೇ, ಸನಾತನ ಅಕಾಡೆಮಿಯ ಸಂಸ್ಥಾಪಕ ಡಾ. ಅನೂಷ ನಾಗರಾಜ್ ಶಾಸ್ತ್ರೀ, ಸಿರಿಗನ್ನಡ ಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀಧರ್‌ ಲಕ್ಷ್ಮಾಪುರ ಹಾಗೂ ಆರ್‌ಎಂಕೆಎಸ್‌ ನ ವೇದಮೂರ್ತಿ ಮತ್ತು ಲೋಕನಾಥ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನೂ ಓದಿ | Star Saree Fashion: ಹೊಸ ಜಮಾನಾದ ಹುಡುಗಿಯರ ಗಮನ ಸೆಳೆದಿದೆ ನಟಿ ತೃಪ್ತಿ ದಿಮ್ರಿಯ 1.65 ಲಕ್ಷ ರೂ. ಮೌಲ್ಯದ ಸೀರೆ!

ಮಾಯಾಮೃಗ ಯಕ್ಷಗಾನ ರೂಪಕ ಪ್ರದರ್ಶನ

ಕಳೆದ ಒಂದು ವರ್ಷದಿಂದ ಯಕ್ಷಗಾನ ಗುರು ಅಜಿತ್ ಪ್ರಭು ಅವರು ಜರ್ಮನಿಯಲ್ಲಿನ ಮ್ಯೂನಿಕ್, ಫ್ರಾಂಕ್‌ಫರ್ಟ್, ನ್ಯೂರೆನ್ಬರ್ಗ್ ಮತ್ತು ಬೆಲ್ಸಿಯಂನ ಬ್ರುಸೆಲ್ಸ್ ನಗರಗಳಲ್ಲಿನ ಹಲವಾರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿದ್ದು, ಈ ವಿದ್ಯಾರ್ಥಿಗಳಿಂದ ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ ಮಾಯಾಮೃಗ ಯಕ್ಷಗಾನ ರೂಪಕ ಮಕ್ಕಳಿಗೆ ಉತ್ತಮ ವೇದಿಕೆಯೊಂದಿಗೆ ಅವರಲ್ಲಿ ಆತ್ಮ ವಿಶ್ವಾಸ, ಕ್ರಿಯಾಶೀಲತೆ ಮತ್ತು ನಮ್ಮ ಸಾಂಪ್ರದಾಯಿಕ ಕಲೆಯ ಬಗ್ಗೆ ಪ್ರೀತಿ ಇಮ್ಮಡಿಗೊಳಿಸಿದೆ.

ರಾಮನಾಗಿ ಸಂವಿದ್, ಸೀತೆಯಾಗಿ ಸ್ನಿಗ್ಧ, ಲಕ್ಷ್ಮಣನಾಗಿ ಆದಿಶೇಷ, ಜಟಾಯುವಾಗಿ ಆರ್ನವ್, ಸನ್ಯಾಸಿ ರಾವಣನಾಗಿ ಅಥರ್ವ್, ರಾವಣನಾಗಿ ಅರವಿಂದ್, ಶೂರ್ಪನಖಿಯಾಗಿ ಶ್ರೀಧರ್, ಮಾರೀಚನಾಗಿ ಕಾರ್ತಿಕ್, ಮಿಂಚಿ ಮರೆಯಾಗುವ ಮಾಯಾ ಮೃಗವಾಗಿ ಖುಷಿ, ಯಕ್ಷಗಾನದ ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಭಾವಕ್ಕೆ ತಕ್ಕ ಅಭಿವ್ಯಕ್ತಿ, ನಾದಕ್ಕೆ ತಕ್ಕ ನಾಟ್ಯದೊಂದಿಗೆ ನೋಡುಗರ ಹೃನ್ಮನಗಳಿಗೆ ರಸಧಾರೆ ಹರಿಸಿದ್ದಾರೆ. ಹೊನ್ನ ಜಿಂಕೆಯ ಮೋಹಕ್ಕೆ ಒಳಗಾಗಿ ಬೇಕೆಂದು ಹಠ ಹಿಡಿದ ಸೀತೆ, ರಾಮನನ್ನು ಅದನ್ನು ಹಿಡಿದು ತರುವಂತೆ ಕಳುಹಿಸಿ, ಲಕ್ಷ್ಮಣನ ರಕ್ಷಾರೇಖೆಯನ್ನು ದಾಟಿ ರಾವಣನ ಕಪಟತನಕ್ಕೆ ಒಳಗಾಗಿ ಅಪಹರಣವಾಗುವ ಕಥಾಹಂದರವುಳ್ಳ ಮಾಯಾಮೃಗ ಬ್ಯಾಲೆ, ಗುರುವಿನ ಮಾರ್ಗದರ್ಶನ ಮತ್ತು ಮಕ್ಕಳ ಅಭ್ಯಾಸದ ಸಮ್ಮಿಳಿತವಾಗಿ ಅದ್ಭುತವಾಗಿ ಮೂಡಿ ಬಂದಿತು. ಕಾರ್ಯಕ್ರಮವನ್ನು ಶರ್ಮ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ರೇಷ್ಮಾ ಮೋರ್ಟು, ಶಾಲಿನಿ, ಅಖಿಲ ಮತ್ತು ಹಲವರು ಸ್ವಯಂಸೇವಕರಾಗಿ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಲು ಕೈ ಜೋಡಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್

2015ರಲ್ಲಿ ಪ್ರಾರಂಭವಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲೆ ಮತ್ತು ಕಲೆಗಾರರನ್ನು ಪೋಷಿಸುತ್ತಾ ಬಂದಿದೆ. ಕಲಾ ಪೋಷಕರ ಸಹಾಯದಿಂದ ಕಳೆದ ಒಂಭತ್ತು ವರ್ಷಗಳಿಂದ ಸಾವಿರಾರು ಕಲಾವಿದರ ಮತ್ತು ಅವರ ಕುಟುಂಬಗಳಿಗಾಗಿ ಹದಿಮೂರು ಕೋಟಿಗಿಂತಲೂ ಅಧಿಕ ಹಣವನ್ನು ನೀಡಿದೆ. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಮೂವತ್ತು ಮನೆಗಳನ್ನು ಯಕ್ಷಗಾನ ಕಲಾವಿದರಿಗಾಗಿ ನಿರ್ಮಿಸಿದೆ. ಇನ್ನು 28 ಮನೆಗಳನ್ನು ಕಟ್ಟುವ ಯೋಜನೆ ಕಾರ್ಯನಿರತವಾಗಿದೆ. ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ವರ್ಷದಲ್ಲಿ ಏಳು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. 80ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ 9600 ವಿದ್ಯಾರ್ಥಿಗಳು ಯಕ್ಷಶಿಕ್ಷಣವನ್ನು ಪಡೆಯುತ್ತಿದ್ದಾರೆ.

750 ವಿದ್ಯಾರ್ಥಿಗಳು ಯಕ್ಷಗಾನ ಕಲಿಯಲು ಸಂಸ್ಥೆ ಸಹಕರಿಸಿದ್ದು 3500 ವಿದ್ಯಾರ್ಥಿಗಳು ಯಕ್ಷಗಾನ ಕಲೆಯಾಧಾರಿತ ಸ್ಪರ್ಧೆಗಳಲ್ಲಿ ಭಾಗವಹಿಸಲು ವೇದಿಕೆಗಳನ್ನು ಕಲ್ಪಿಸಿಕೊಟ್ಟಿದೆ. ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈ ಮೂಲಕ 1700ರಷ್ಟು ವಿದ್ಯಾರ್ಥಿಗಳು ರಂಗ ಪ್ರವೇಶ ಮಾಡಲು ಸಹಕಾರಿಯಾಗಿದೆ. ಕೋವಿಡ್‌ನಂತಹ ಸಮಯದಲ್ಲಿ 70 ಲಕ್ಷ ಮೌಲ್ಯದ 3500 ಗ್ರಾಸರಿ ಕಿಟ್‌ಗಳನ್ನು ವಿತರಿಸಿದೆ. ಸಂಸ್ಥೆಯು ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಮಾತ್ರವಲ್ಲದೇ, ಯಕ್ಷಗಾನದ ಬಗೆಗಿನ ಪುಸ್ತಕಗಳನ್ನು ಪ್ರಕಟಿಸುವಲ್ಲಿ ಸಹಕರಿಸುತ್ತಾ ಬಂದಿದೆ.

ಈ ಸುದ್ದಿಯನ್ನೂ ಓದಿ | Chikkaballapur News: ನ.24 ರಂದು ಆದಿಕವಿ, ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ

ಯಕ್ಷಧ್ರುವ ಕ್ರೀಡಾಕೂಟದ ಮೂಲಕ ಕಲಾವಿದರ ದೈಹಿಕ ಆರೋಗ್ಯದ ಕಾಳಜಿಯನ್ನು ವಹಿಸುತ್ತಿದೆ. ಕಲಾವಿದರ ಮುಗುಳ್ನಗೆಯಲ್ಲಿ ಸಂತೃಪ್ತಿ ಕಾಣುವ ಸಂಸ್ಥೆಯು ನಿಸ್ವಾರ್ಥ ಸೇವೆಗಾಗಿ ಬದ್ಧವಾಗಿದೆ. ಉದಾತ್ತ ಧ್ಯೇಯಗಳೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬರುತ್ತಿರುವ ಇಂತಹ ಸಂಸ್ಥೆಗಳೊಂದಿಗೆ ಆಸಕ್ತ ಮನಸ್ಸುಗಳು ಕೈ ಜೋಡಿಸಿದರೆ ಯಕ್ಷಗಾನ ಹಾಗೂ ಸಾಂಪ್ರದಾಯಿಕ ಕಲೆಗಳು ಭವಿಷ್ಯದ ಪೀಳಿಗೆಗೆ ಪ್ರವಹಿಸುತ್ತದೆ. ಕೇವಲ ಕರ್ನಾಟಕಕ್ಕೆ ಅಷ್ಟೇ ಸೀಮಿತವಾಗದೆ ಗಡಿಯಾಚೆಗೂ ಇಂತಹ ಕಲೆಯನ್ನು ಪಸರಿಸುತ್ತಿರುವುದು ಶ್ಲಾಘನೀಯ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಇಬ್ಬಂದಿತನದಲ್ಲಿರುವ ಪೋಷಕರಿಗೆ ಹೊರ ನಾಡಿನಲ್ಲಿಯೂ ತಮ್ಮ ಮಕ್ಕಳು ಮೂಲ ಬೇರಿನೊಂದಿಗೆ ಅಂಟಿ ಬೆಳೆಯುವುದು ಸಾರ್ಥಕ ಮನೋಭಾವವನ್ನು ಉಂಟು ಮಾಡುತ್ತದೆ.