Friday, 22nd November 2024

Satyendar Jain : ಕೇಜ್ರಿವಾಲ್ ಸಹವರ್ತಿ ಸತ್ಯೇಂದ್ರ ಜೈನ್ ಕೂಡ ಜೈಲಿನಿಂದ ಬಿಡುಗಡೆ

Satyendar Jain

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಟಿ ಕೋರ್ಟ್‌ನಿಂದ ಜಾಮೀನು ಪಡೆದ ನಂತರ ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಕೇಜ್ರಿವಾಲ್ ಸಂಪುಟದಲ್ಲಿ ಸಚಿವರಾಗಿದ್ದ ಸತ್ಯೇಂದರ್ ಜೈನ್ (Satyendar Jain) ಶುಕ್ರವಾರ ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ನಾನು ಜೈಲಿನಿಂದ ಹೊರಬಂದಿದ್ದೇವೆ. ನಾವು  ದೆಹಲಿಯಲ್ಲಿ ಸ್ಥಗಿತಗೊಂಡಿರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ. ಅರವಿಂದ್ ಕೇಜ್ರಿವಾಲ್ ಅವರು ಯಮುನಾ ನದಿ ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದ್ದರು. ಅವರ ಭರವಸೆಯ ಆಧಾರದ ಮೇಲೆ, ನಾವು ಯಮುನಾ ನದಿ ಸ್ವಚ್ಛಗೊಳಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೆವು. ಇದನ್ನು ತಡೆಯಲು ನನ್ನನ್ನು ಬಂಧಿಸಲಾಯಿತು” ಎಂದು ಜೈನ್ ಜೈಲಿನ ಹೊರಗೆ ಎಎಪಿ ಬೆಂಬಲಿಗರಿಗೆ ತಿಳಿಸಿದರು.

ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ನನ್ನನ್ನು ಬಂಧಿಸಲಾಯಿತು. ನಮ್ಮನ್ನು ಏಕೆ ಬಂಧಿಸಲಾಯಿತು? ಈ ದೇಶದಲ್ಲಿ ಹಲವಾರು ರಾಜಕೀಯ ಪಕ್ಷಗಳಿವೆ. ಆದರೆ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಮಾತ್ರ ಅವರು ಸಾರ್ವಜನಿಕರ ಬಗ್ಗೆ ಮಾತ್ರ ಯೋಚಿಸುತ್ತಾರೆ” ಎಂದು ದೆಹಲಿಯ ಮಾಜಿ ಸಚಿವರು ಜೈಲಿನಿಂದ ಬಂದ ಮೇಲೆ ಹೇಳಿದ್ದಾರೆ.

“ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತೇವೆ, ಅನ್ಯಾಯದ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇವೆ” ಎಂದು ಜೈನ್ ಹೇಳಿದ್ದಾರೆ. 2022 ರಲ್ಲಿ ಜಾರಿ ನಿರ್ದೇಶನಾಲಯದ ಬಂಧನ ಬಳಿಕ ಜೈಲು ಸೇರಿದ್ದ ಜೈನ್ ಅವರಿಗೆ ನಗರದ ನ್ಯಾಯಾಲಯವು “ವಿಚಾರಣೆಯ ವಿಳಂಬ” ಮತ್ತು “ದೀರ್ಘಕಾಲದ ಸೆರೆವಾಸ” ಕಾರಣಕ್ಕೆ ಜಾಮೀನು ನೀಡಿದೆ.

ಜೈಲಿನಿಂದ ಬಿಡುಗಡೆಯಾದ ಜೈನ್ ಅವರನ್ನು ದೆಹಲಿ ಮುಖ್ಯಮಂತ್ರಿ ಅತಿಶಿ, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಹಲವಾರು ಹಿರಿಯ ಎಎಪಿ ನಾಯಕರು ಸ್ವಾಗತಿಸಿದ್ದಾರೆ. ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿರುವ ಆಮ್ ಆದ್ಮಿ ಪಕ್ಷ, ಇದು ಸತ್ಯದ ಗೆಲುವು ಮತ್ತು ಬಿಜೆಪಿಯ ಮತ್ತೊಂದು ಪಿತೂರಿಯ ಸೋಲು ಎಂದು ಬಣ್ಣಿಸಿದೆ.

ಕೇಜ್ರಿವಾಲ್ ಏನು ಹೇಳಿದರು

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ “ಜೈನ್ ಅವರು ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದರು ಮತ್ತು ದೆಹಲಿಯ ಜನರಿಗೆ ಆರೋಗ್ಯ ಸೇವೆಗಳನ್ನು ಉಚಿತಗೊಳಿಸಿದರು. ಮೊಹಲ್ಲಾ ಕ್ಲಿನಿಕ್‌ಗಳನ್ನು ಹಾಳು ಮಾಡಲು ಮೋದಿ ಜಿ ಅವರನ್ನು ಜೈಲಿಗೆ ಹಾಕಿದರು, ಇದರಿಂದಾಗಿ ಬಡವರಿಗೆ ಉಚಿತ ಚಿಕಿತ್ಸೆ ನೀಡುವುದನ್ನೇ ತಡೆದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Salman Khan : ಸಲ್ಮಾನ್ ಮನೆಗೆ ಗುಂಡಿನ ದಾಳಿ, ಆರೋಪಿ ವಿಕ್ಕಿ ಜಾಮೀನು ಅರ್ಜಿ ತಿರಸ್ಕೃತ

ಆಗಸ್ಟ್‌ನಲ್ಲಿ 17 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಮನೀಶ್ ಸಿಸೋಡಿಯಾ, “ಸತ್ಯೇಂದ್ರ ಜೈನ್ ಅವರನ್ನು ಸುಳ್ಳು ಮತ್ತು ಆಧಾರರಹಿತ ಆರೋಪಗಳ ಮೇಲೆ ಇಷ್ಟು ದೀರ್ಘಕಾಲ ಜೈಲಿನಲ್ಲಿರಿಸಲಾಗಿತ್ತು. ಅವರ ಮನೆಯ ಮೇಲೆ ನಾಲ್ಕು ಬಾರಿ ದಾಳಿ ನಡೆಸಲಾಗಿದೆ. ಏನೂ ಕಂಡುಬಂದಿಲ್ಲ. ಆದರೂ ಅವರನ್ನು ಪಿಎಂಎಲ್ಎ ಅಡಿಯಲ್ಲಿ ಸುಳ್ಳು ಪ್ರಕರಣದಲ್ಲಿ ಜೈಲಿನಲ್ಲಿರಿಸಲಾಯಿತು. ಸತ್ಯ ಮತ್ತು ನ್ಯಾಯವನ್ನು ಬೆಂಬಲಿಸಿದ ದೇಶದ ನ್ಯಾಯಾಂಗಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.