Wednesday, 23rd October 2024

Baba Siddique: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಮತ್ತೆ ಐವರ ಅರೆಸ್ಟ್‌; ಒಟ್ಟು ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

ಮುಂಬೈ: ದೇಶವನ್ನೇ ಬೆಚ್ಚಿ ಬೀಳಿಸಿದ ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಅಕ್ಟೋಬರ್‌ 18) 5 ಮಂದಿಯನ್ನೂ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ. ನಿಖರ ಮಾಹಿತಿಯ ಆಧಾರದ ಮೇಲೆ ರಾಯಗಡ ಜಿಲ್ಲೆಯ ಪನ್ವೇಲ್ ಮತ್ತು ಕರ್ಜತ್‌ನಲ್ಲಿ ದಾಳಿ ನಡೆಸಿ ಕ್ರೈಂ ಬ್ರ್ಯಾಂಚ್‌ ಐವರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದೆ.

ಕೃತ್ಯಕ್ಕೆ ಸಂಬಂಧಿಸಿದ ಪಿತೂರಿ ಮತ್ತು ಅದರ ಅನುಷ್ಠಾನದ ಹಿಂದೆ ಈ 5 ಮಂದಿಯ ಕೈವಾಡವಿದೆ ಎನ್ನಲಾಗಿದೆ. ಬಂಧಿತರು ಬಾಬಾ ಸಿದ್ದೀಕ್ ಅವರನ್ನು ಗುಂಡಿಕ್ಕಿ ಕೊಂದ ಆರೋಪ ಹೊತ್ತಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಈಗ 9ಕ್ಕೆ ಏರಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ

66 ವರ್ಷದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಅಕ್ಟೋಬರ್‌ 12ರಂದು ಮೂವರು ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿನ ಬಾಬಾ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶಾನ್ ಸಿದ್ದಿಕಿ ಕಚೇರಿಯ ಹೊರಗೆ ಈ ದಾಳಿ ನಡೆದಿತ್ತು. ಆಘಾತಕಾರಿ ಸಂಗತಿಯೆಂದರೆ ದಸರಾ ಆಚರಣೆಯ ವೇಳೆ, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ದಿನದಂದೇ ಜನನಿಬಿಡ ರಸ್ತೆಯಲ್ಲಿ ಈ ದಾಳಿ ನಡೆಸಲಾಗಿತ್ತು. ಗಾಯಗೊಂಡ ಸಿದ್ದಿಕ್ಕಿ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟರು.

ಕೊಲೆ ತನಿಖೆಗೆ ಸಂಬಂಧಿಸಿದಂತೆ, ಮುಂಬೈ ಪೊಲೀಸರು ಮಹಾರಾಷ್ಟ್ರದಾದ್ಯಂತ 15 ತಂಡಗಳನ್ನು ನಿಯೋಜಿಸಿದ್ದಾರೆ ಮತ್ತು ಶೂಟರ್‌ಗಳಿಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಮುಂಬೈಯ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಲ್ಮಾನ್ ಮೇಲಿನ ದ್ವೇಷಕ್ಕೆ ಕೊಲೆ?

ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್‌ ಸಲ್ಮಾನ್ ಖಾನ್‌ಗೆ ಪದೇ ಪದೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಹೇಳಿದ್ದಾನೆ. ಸಲ್ಮಾನ್ ಮತ್ತು ಬಾಬಾ ಸಿದ್ದಿಕಿ ಆಪ್ತರಾಗಿರುವ ಕಾರಣ ಅದೇ ಕೋಪದಲ್ಲಿ ಹತ್ಯೆ ಮಾಡಿದ್ದಾನೆ ಎಂಬುವ ವಾದವಿದೆ. ಈ ಹಿನ್ನೆಲೆಯಲ್ಲೂ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ವಿಜಯದಶಮಿಯಂದು ನಡೆದ ಸಿದ್ದೀಕ್ ಹತ್ಯೆಯ ಹೊಣೆ ಹೊತ್ತುಕೊಂಡಿರುವ ಬಿಷ್ಣೋಯ್, ಈ ಹಿಂದೆ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ. ಏಪ್ರಿಲ್ 14 ರಂದು ಸಲ್ಮಾನ್ ವಾಸವಿರುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್‌ ಜತೆಗಾರರಾದ ಶೂಟರ್‌ಗಳು ಗುಂಡುಗಳನ್ನು ಹಾರಿಸಿದ್ದರು.

ಈ ಸುದ್ದಿಯನ್ನೂ ಓದಿ: Baba Siddique: ಸಲ್ಮಾನ್‌ ಖಾನ್‌ ಜತೆ ನಂಟು ಹೊಂದಿರೋರಿಗೆ ಇದೇ ಗತಿ; ಬಿಷ್ಣೋಯ್‌ ಗ್ಯಾಂಗ್ ಎಚ್ಚರಿಕೆ