ದುಬೈ: ಮಹಿಳಾ ಟಿ20 ವಿಶ್ವಕಪ್ನಲ್ಲಿ(womens T20 World Cup Final) ನೂತನ ತಂಡವೊಂದು ಚೊಚ್ಚಲ ಬಾರಿಗೆ ಚಾಂಪಿಯನ್ ಆಗಲು ವೇದಿಕೆಯೊಂದು ಸಿದ್ಧಗೊಂಡಿದೆ. ದುಬೈ ಅಂಗಳದಲ್ಲಿ ನಾಳೆ(ಅ.20) ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(NZW vs SAW) ಮತ್ತು ನ್ಯೂಜಿಲೆಂಡ್(New Zealand vs South Africa) ಸೆಣಸಲಿವೆ. ದಕ್ಷಿಣ ಆಫ್ರಿಕಾಗೆ ಇದು ಸತತ 2ನೇ ಫೈನಲ್ ಆದರೆ, ನ್ಯೂಜಿಲೆಂಡ್ಗೆ ಮೂರನೆ ಫೈನಲ್. ಯಾರೇ ಗೆದ್ದರೂ ಇತಿಹಾಸ. ಮೊದಲ ಸಲ ಐಸಿಸಿ ಪ್ರಶಸ್ತಿಯೊಂದು ತಂಡದ ಶೋಕೇಸ್ಗೆ ಕಲಶಪ್ರಾಯವಾಗಲಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಲ್ಲದೇ ಫೈನಲ್ ನಡೆಯುತ್ತಿರುವುದು.
ಆಸ್ಟ್ರೇಲಿಯವನ್ನು ಸೋಲಿಸಿದವರು ವಿಶ್ವ ಚಾಂಪಿಯನ್ ಆಗುವುದು ಖಚಿತ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಆಸ್ಟ್ರೇಲಿಯ ಮಹಿಳಾ ತಂಡ ಸಾಮರ್ಥ್ಯ, ಅವರ ತಾಕತ್ತು, ಅವರು ವಿಶ್ವಕಪ್ನಲ್ಲಿ ಮೂಡಿಸಿರುವ ಛಾಪು ಇವುಗಳ ಬಗ್ಗೆ ಎರಡು ಮಾತಿಲ್ಲ. 7 ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿ 6 ಸಲ ಕಿರೀಟ ಏರಿಸಿ ಕೊಂಡಿದೆ. ಇಂತಹ ಬಲಿಷ್ಠ ತಂಡಕ್ಕೆ ದಕ್ಷಿಣ ಆಫ್ರಿಕಾ ಸೆಮಿಫೈನಲ್ನಲ್ಲಿ ಆಘಾತಕಾರಿ ಸೋಲುಣಿಸಿದನ್ನು ನೋಡುವಾಗ ದಕ್ಷಿಣ ಆಫ್ರಿಕಾ ಕಪ್ ಗೆಲ್ಲುವ ನೆಚ್ಚಿನ ತಂಡ. ಗೆದ್ದರೆ ಚೋಕರ್ಸ್ ಹಣೆ ಪಟ್ಟಿ ಕಳೆದುಕೊಳ್ಳಲಿದೆ. ಪುರುಷರ ಕ್ರಿಕೆಟ್ ತಂಡ ಸೇರಿಯೂ ದಕ್ಷಿಣ ಆಫ್ರಿಕಾ ಇದುವರೆಗೆ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಎಡವಿಯೂ ಫೈನಲ್ ತನಕ ಬಂದದ್ದು ದಕ್ಷಿಣ ಆಫ್ರಿಕಾದ ಸಾಹಸಗಾಥೆಗೆ ಸಾಕ್ಷಿ. ಅದರಲ್ಲೂ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ರೀತಿಯಂತೂ ಅಮೋಘ. ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಇದೊಂದು ಅತ್ಯುತ್ತಮ ನಿದರ್ಶವಾಗಿತ್ತು. ಇದೇ ಮಟ್ಟವನ್ನು ಉಳಿಸಿಕೊಂಡರೆ ನ್ಯೂಜಿಲೆಂಡ್ಗೆ ಖಂಡಿತವಾಗಿಯೂ ಅಪಾಯವಿದೆ.
ಲಾರಾ ವೋಲ್ವಾರ್ಟ್-ಟಾಜ್ಮಿನ್ ಬ್ರಿಟ್ಸ್ ಈ ಕೂಟದ ಅತ್ಯುತ್ತಮ ಆರಂಭಿಕ ಜೋಡಿ. ಇಬ್ಬರೂ ಟಾಪ್ ಫಾರ್ಮ್ನಲ್ಲಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ ನಾನ್ಕುಲುಲೆಕೊ ಮ್ಲಾಬಾ-ಅಯಬೊಂಗಾ ಖಾಕಾ ಜೋಡಿಯೂ ಭರ್ಜರಿ ಲಯದಲ್ಲಿದೆ. ಇವರಿಬ್ಬರು ಸೇರಿಕೊಂಡು ಆಸೀಸ್ ಬ್ಯಾಟಿಂಗ್ ಸರದಿಯನ್ನು ಸೀಳಿದ ಪರಿ ಪ್ರಶಂಸನೀಯ. ಆಲೌರೌಂಡರ್ ಮರಿಜಾನ್ ಕಾಪ್, ಅನುಭವಿ ಸುನೆ ಲುಸ್ ತಂಡದ ಮತ್ತಿಬ್ಬರು ಪ್ರಮುಖ ಆಟಗಾರ್ತಿಯರು.
ನ್ಯೂಜಿಲ್ಯಾಂಡ್ ಕೂಡ ಬಲಿಷ್ಠ ತಂಡ. ಲೀಗ್ ಹಂತದಲ್ಲಿ ಸೋತ್ತಿದ್ದು ಒಂದು ಪಂದ್ಯ ಮಾತ್ರ. ಆಸ್ಟ್ರೇಲಿಯಾ ವಿರುದ್ಧ. ಸೆಮಿ ಫೈನಲ್ನಲ್ಲಿ ವಿಂಡೀಸ್ಗೆ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಕಿವೀಸ್ ಚೊಚ್ಚಲ ಆವೃತ್ತಿಯಲ್ಲಿ ಮತ್ತು ದ್ವಿತೀಯ ಆವೃತ್ತಿಯಲ್ಲಿ ಸತತವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಕಪ್ ಎತ್ತಲು ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್ ಮತ್ತು ಆಸೀಸ್ ವಿರುದ್ಧ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಮೂರನೇ ಪ್ರಯತ್ನದಲ್ಲಿ ಕಪ್ ಗೆಲ್ಲಬಹುದೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದು.