Sunday, 24th November 2024

‌IND vs NZ: ಗಾಯದ ಮಧ್ಯೆಯೂ ಬ್ಯಾಟಿಂಗ್‌ ನಡೆಸಿ ಧೋನಿ ದಾಖಲೆ ಮುರಿದ ಪಂತ್

ಬೆಂಗಳೂರು: ಗಾಯದ ಮಧ್ಯೆಯೂ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ತೋರಿದ ವಿಕೆಟ್‌ ಕೀಪರ್‌&ಬ್ಯಾಟರ್‌ ರಿಷಭ್‌ ಪಂತ್‌(Rishabh Pant) ನ್ಯೂಜಿಲೆಂಡ್‌(IND vs NZ) ವಿರುದ್ಧದ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಇದೇ ವೇಳೆ ಪಂತ್‌ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್‌ ಧೋನಿಯ ದಾಖಲೆಯೊಂದನ್ನು ಮುರಿದಿದ್ದಾರೆ.

2ನೇ ದಿನದಾಟದ ವೇಳೆ ರವೀಂದ್ರ ಜಡೇಜಾ ಓವರ್‌ನಲ್ಲಿ ಚೆಂಡು ಮೊಣಕಾಲಿಗೆ ಬಡಿದು ಗಾಯಗೊಂಡು ಮೈದಾನ ತೊರಿದ್ದ ಪಂತ್‌ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಪಂತ್‌ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದೇ ವೇಳೆ ಅತಿ ವೇಗವಾಗಿ 2500 ರನ್‌ಗಳನ್ನು ತಲುಪಿದ ಮೊದಲ ಭಾರತೀಯ ವಿಕೆಟ್‌ಕೀಪರ್ ಎಂಬ ಮೈಲುಗಲ್ಲು ನೆಟ್ಟರು. ಇದಕ್ಕೂ ಮುನ್ನ ಈ ದಾಖಲೆ ಧೋನಿ ಹೆಸರಿನಲ್ಲಿತ್ತು. ಧೋನಿ 69 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಪಂತ್‌ ಕೇವಲ 62 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು.

ಅರ್ಧಶತಕ ಬಾರಿಸುವ ಮೂಲಕ ಭಾರತ ಪರ ವಿಕೆಟ್‌ ಕೀಪರ್‌ ಆಗಿ ಟೆಸ್ಟ್‌ನಲ್ಲಿ ಅತ್ಯಧಿಕ ಅರ್ಥಶತಕ ಬಾರಿಸಿದ ಮಾಜಿ ಆಟಗಾರ ಫಾರೂಕ್ ಇಂಜಿನಿಯರ್ ದಾಖಲೆ ಸರಿಗಟ್ಟಿದರು. ಉಭಯ ಆಟಗಾರರು 18 ಅರ್ಥಶತಕ ಬಾರಿಸಿದ್ದಾರೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ 39 ಅರ್ಧಶತಕ ಬಾರಿಸಿದ್ದಾರೆ.

ಇದನ್ನೂ ಓದಿ IND vs NZ: ಕುಣಿದು, ಚೀರಾಡಿ ರನೌಟ್‌ನಿಂದ ಪಂತ್‌ ಪಾರು ಮಾಡಿದ ಸರ್ಫರಾಜ್‌; ವಿಡಿಯೊ ವೈರಲ್‌

356 ರನ್‌ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುವ ಮೂಲಕ ಮುನ್ನಡೆ ಸಾಧಿಸಿ ಮುನ್ನುಗ್ಗುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಸರ್ಫರಾಜ್‌ ಖಾನ್‌ ಆಕರ್ಷಕ ಶತಕ ಬಾರಿಸಿದರೆ, ಪಂತ್‌ ಕೂಡ ಶತಕ ಬಾರಿಸುವತ್ತ ದಾಪುಗಾಲಿಟ್ಟಿದ್ದಾರೆ.

ಶನಿವಾರ ಬೆಳಗ್ಗೆ 70 ರನ್‌ ಗಳಿಂದ ಬ್ಯಾಟಿಂಗ್‌ ಆರಂಭಿಸಿದ ಸರ್ಫರಾಜ್‌ ಖಾನ್‌ ಶತಕ ಬಾರಿಸಿ ಸಂಭ್ರಮಿಸಿದರು. ಇದು ಸರ್ಫರಾಜ್‌ ಬಾರಿಸಿದ ಚೊಚ್ಚಲ ಟೆಸ್ಟ್‌ ಶತಕವಾಗಿದೆ.  ಶುಭಮನ್‌ ಗಿಲ್‌ ಅವರಿಗೆ ಕುತ್ತಿಗೆ ನೋವು ಕಾಣಸಿಕೊಂಡ ಕಾರಣ ಸರ್ಫರಾಜ್‌ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. 195 ಎಸೆತ ಎದುರಿಸಿದ ಸರ್ಫರಾಜ್‌ 18 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ ಭರ್ತಿ 150 ರನ್‌ ಬಾರಿಸಿ ಸೌಥಿ ಎಸೆತದಲ್ಲಿ ಅಜಾಜ್‌ ಪಟೇಲ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಕೈಚೆಲ್ಲಿದರು. ಪಂತ್‌ ಜತೆ ಸೇರಿಕೊಂಡು ಸರ್ಫರಾಜ್‌ ನಾಲ್ಕನೇ ವಿಕೆಟ್‌ಗೆ 177 ರನ್‌ ಸಂಘಟಿಸಿದರು.