Tuesday, 10th December 2024

IND vs NZ: ಕುಣಿದು, ಚೀರಾಡಿ ರನೌಟ್‌ನಿಂದ ಪಂತ್‌ ಪಾರು ಮಾಡಿದ ಸರ್ಫರಾಜ್‌; ವಿಡಿಯೊ ವೈರಲ್‌

ಬೆಂಗಳೂರು: ಮಧ್ಯಮ ಕ್ರಮಾಂಕದ ಆಟಗಾರರಾದ ಸರ್ಫರಾಜ್ ಖಾನ್(Sarfaraz Khan) ಮತ್ತು ರಿಷಭ್‌ ಪಂತ್‌(Rishabh Pant) ನಡೆಸುತ್ತಿರುವ ದಿಟ್ಟ ಬ್ಯಾಟಿಂಗ್‌ ಹೋರಾಟದ ನೆರವಿನಿಂದ ನ್ಯೂಜಿಲ್ಯಾಂಡ್‌(IND vs NZ) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಚೇತರಿಕೆಯ ಹಾದಿಗೆ ಮರಳಿದೆ. ಭಾರೀ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಭಾರತ ಸದ್ಯ 3 ವಿಕೆಟ್‌ಗೆ 344 ರನ್‌ ಬಾರಿಸಿ 12 ರನ್‌ ಹಿನ್ನಡೆಯಲ್ಲಿದೆ. ಮಳೆಯಿಂದ ಪಂದ್ಯ ಸ್ಥಗಿತಗೊಂಡಿದ್ದು ಭೋಜನ ವಿರಾಮ ಘೋಷಿಸಲಾಗಿದೆ. ಸರ್ಫರಾಜ್‌(125*), ರಿಷಭ್‌ ಪಂತ್‌ (53*) ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ನಾಲ್ಕನೇ ದಿನದಾಟವಾದ ಶನಿವಾರ ಇಲ್ಲದ ರನ್‌ ಕದಿಯಲು ಯತ್ನಿಸಿ ರನೌಟ್‌ ಬಲೆಗೆ ಬೀಳುತ್ತಿದ್ದ ಪಂತ್‌ ಅವರನ್ನು ಸರ್ಫರಾಜ್‌ ಖಾನ್‌ ರಕ್ಷಿಸಿದ ವಿಡಿಯೊವೊಂದು ಇದೀಗ ವೈರಲ್‌ ಆಗಿದೆ. ನಾನ್‌ಸ್ಟ್ರೈಕ್‌ನತ್ತ ಓಡುತ್ತಿದ್ದ ಪಂತ್‌ಗೆ ರನ್‌ ಓಡದಂತೆ ಸರ್ಫರಾಜ್‌ ಜೋರಾಗಿ ಕೂಗಿ ಹೇಳಿದರೂ ಕೇಳಿಸಲಿಲ್ಲ. ಈ ವೇಳೆ ಸರ್ಫರಾಜ್‌ ಜಿಗಿಯುತ್ತಾ..ಜಿಗಿಯುತ್ತಾ ಚೀರಾಡಿದರು. ಇದನ್ನು ಕಂಡ ಪಂತ್‌ ಮತ್ತೆ ತಿರುಗಿ ಕ್ರೀಸ್‌ನತ್ತ ಓಡಿ ರನೌಟ್‌ ಅಪಾಯದಿಂದ ಪಾರಾದರು. ಸರ್ಫರಾಜ್‌ ಜಿಗಿಯುತ್ತಾ ರನ್‌ ಓಡದಂತೆ ನೀಡಿದ ಸೂಚನೆ ಕಂಡು ಡಗೌಟ್‌ನಲ್ಲಿ ಕುಳಿತಿದ್ದ ವಿರಾಟ್‌ ಕೊಹ್ಲಿ, ಕೋಚ್‌ ಗಂಭೀರ್‌, ಅಶ್ವಿನ್‌ ಸೇರಿ ಎಲ್ಲ ಆಟಗಾರರು ಜೋರಾಗಿ ನಕ್ಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಶನಿವಾರ ಬೆಳಗ್ಗೆ 70 ರನ್‌ ಗಳಿಂದ ಬ್ಯಾಟಿಂಗ್‌ ಆರಂಭಿಸಿದ ಸರ್ಫರಾಜ್‌ ಖಾನ್‌ ಶತಕ ಬಾರಿಸಿ ಸಂಭ್ರಮಿಸಿದರು. ಇದು ಸರ್ಫರಾಜ್‌ ಬಾರಿಸಿದ ಚೊಚ್ಚಲ ಟೆಸ್ಟ್‌ ಶತಕವಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಸರ್ಫರಾಜ್‌ ತಂಡ ಸಂಕಷ್ಟದಲ್ಲಿದ್ದಾಗಲೇ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ನೆರವಾದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಶುಭಮನ್‌ ಗಿಲ್‌ ಅವರಿಗೆ ಕುತ್ತಿಗೆ ನೋವು ಕಾಣಸಿಕೊಂಡ ಕಾರಣ ಸರ್ಫರಾಜ್‌ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು.

ಇದನ್ನೂ ಓದಿ IND vs NZ: ಸರ್ಫರಾಜ್‌ ಶತಕ; ಮುನ್ನಡೆಯತ್ತ ಭಾರತ

ಎರಡನೇ ದಿನದಾಟದ ವೇಲೆ ಕೀಪಿಂಗ್‌ ಮಾಡುವಾಗ ಮೊಣಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ರಿಷಭ್‌ ಪಂತ್‌ ಬ್ಯಾಟಿಂಗ್‌ ನಡೆಸುತ್ತಿದ್ದು ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಅರ್ಧಶತಕ ಬಾರಿಸುವ ಮೂಲಕ ಭಾರತ ಪರ ವಿಕೆಟ್‌ ಕೀಪರ್‌ ಆಗಿ ಟೆಸ್ಟ್‌ನಲ್ಲಿ ಅತ್ಯಧಿಕ ಅರ್ಥಶತಕ ಬಾರಿಸಿದ ದ್ವಿತೀಯ ಆಟಗಾರ ಎನಿಸಿಕೊಂಡರು. ಧೋನಿ(39 ) ಅಗ್ರಸ್ಥಾನದಲ್ಲಿದ್ದಾರೆ.