Friday, 27th December 2024

SM Krishna: ರಾಜ್ಯ ಕಂಡ ಅಪರೂಪದ ರಾಜಕಾರಣಿ; ಹೀಗಿದೆ ಎಸ್.ಎಂ. ಕೃಷ್ಣ ನಡೆದು ಬಂದ ಹಾದಿ

S.M. Krishna

ಸೋಮನಹಳ್ಳಿ ಮಲ್ಲಣ್ಣ ಕೃಷ್ಣ (ಎಸ್‌ ಎಂ ಕೃಷ್ಣ) ಅವರು ಈ ರಾಜ್ಯ ಕಂಡ ಅಪರೂಪದ ರಾಜಕಾರಣಿ. ರಾಜ್ಯ ವಿಧಾನಸಭೆಯ ಸ್ಪೀಕರ್ (Speaker) ಆಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ (Deputy Chief Minister), ಮುಖ್ಯಮಂತ್ರಿಯಾಗಿ (Chief Minister), ಮಹಾರಾಷ್ಟ್ರದ ರಾಜ್ಯಪಾಲರಾಗಿ (Governor of Maharashtra) ಕಾರ್ಯನಿರ್ವಹಿಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವರೂ (Minister of External Affairs) ಆದ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ (SM Krishna) ಹಲವು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ರಾಜ್ಯಕಂಡ ಅಪರೂಪದ ರಾಜಕಾರಣಿಯಾದ ಇವರ ರಾಜಕೀಯ ದಾರಿ ಸುಗಮವಾಗಿ ಏನೂ ಇರಲಿಲ್ಲ. ಸಾಕಷ್ಟು ಏರಿಳಿತಗಳ ದಾರಿಯಲ್ಲಿ ನಡೆದು ದೇಶದ ರಾಜಕೀಯದಲ್ಲಿ ಉನ್ನತ ಹುದ್ದೆಗೆ ಏರಿದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932ರಲ್ಲಿ ಒಕ್ಕಲಿಗ ಕುಟುಂಬದಲ್ಲಿ ಎಸ್‌.ಸಿ. ಮಲ್ಲಯ್ಯ ಅವರ ಮಗನಾಗಿ ಜನಿಸಿದ ಎಸ್. ಎಂ. ಕೃಷ್ಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಬಳಿಕ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಓದಿದರು.

ರಾಜಕೀಯ ಪ್ರವೇಶ ಹೇಗೆ?

ಮೊದಲ ಬಾರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು 1962ರಲ್ಲಿ ವಿಧಾನಸಭೆ ಪ್ರವೇಶಿಸಿದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡ ಅವರು 1971ರಲ್ಲಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರು. 1972ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕೃಷ್ಣ 1977ರಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಆಯ್ಕೆಯಾದರು. 1983ರಲ್ಲಿ ಉದ್ಯಮ ಖಾತೆ ಸಚಿವರಾಗಿ, 1984ರಲ್ಲಿ ವಿತ್ತ ಖಾತೆಯ ಸಚಿವರಾಗಿ ಬಳಿಕ 1989ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.

ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ

ಕರ್ನಾಟಕದ ಉಪಮುಖ್ಯಮಂತ್ರಿಯಾಗಿ 1992ರಿಂದ 1994ರವರೆಗೆ ಕೆಲಸ ಮಾಡಿದ ಎಸ್.ಎಂ. ಕೃಷ್ಣ 1996ರಲ್ಲಿ ರಾಜ್ಯಸಭೆ ಪ್ರವೇಶಿಸಿದರು. ಕರ್ನಾಟಕ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ 1999ರಿಂದ 2004ರವರೆಗೆ ಕೆಲಸ ಮಾಡಿದ ಅವರು ಹಲವಾರು ಯಶಸ್ವಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇವರ ಅಧಿಕಾರಾವಧಿಯ ಕಾಲದಲ್ಲಿ ಐಟಿ ಬಿಟಿ ನಗರವಾಗಿ ಬೆಂಗಳೂರು ವಿಶ್ವ ಮಟ್ಟದಲ್ಲೇ ಖ್ಯಾತಿ ಪಡೆಯಿತು. ಅಲ್ಲದೆ ವರನಟ ಡಾ. ರಾಜ್‌ಕುಮಾರ್‌ ಅಪಹರಣ, ಕಾವೇರಿ ವಿವಾದ ಹಾಗೂ ಭೀಕರ ಬರಗಾಲ ಸಮಸ್ಯೆಗಳನ್ನು ತಮ್ಮ ಆಡಳಿತದ ಅವಧಿಯಲ್ಲಿ ದಿಟ್ಟವಾಗಿ ಎದುರಿಸಿದರು. ಇವರು ಜಾರಿಗೊಳಿಸಿದ ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಣೆ ಇಂದಿಗೂ ಮುಂದುವರಿದಿದೆ.

S.M. Krishna

2004ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕೃಷ್ಣ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಕ ಮಾಡಿತು. 2008ರಲ್ಲಿ ಮತ್ತೆ ರಾಜ್ಯಸಭೆಗೆ ಮರಳಿದ ಅವರು, 2009ರಿಂದ 2012ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದರು. ಆದರೆ, ರಾಜ್ಯ ಕಾಂಗ್ರೆಸ್‌ ನಾಯಕರು ತಮ್ಮ ಸಲಹೆ ಸೂಚನೆಗಳನ್ನು ಪಡೆಯುತ್ತಿಲ್ಲ ಎನ್ನುವ ಬೇಸರದಲ್ಲಿ 2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರಿದರು. ಆದರೆ ಅವರಿಗೆ ಅಲ್ಲೂ ಸೂಕ್ತ ಸ್ಥಾನಮಾನ ಸಿಗಲಿಲ್ಲ.

ಉತ್ತಮ ಟೆನ್ನಿಸ್‌ ಆಟಗಾರ

ಎಸ್‌ ಎಂ ಕೃಷ್ಣ ಅವರು ಕ್ರೀಡಾ ಪ್ರೇಮಿಯಾಗಿದದ್ದರು. ನಿಯಮಿತವಾಗಿ ಟೆನ್ನಿಸ್‌ ಆಡುತ್ತಿದ್ದರು. ಈ ಮೂಲಕ ಉತ್ತರ ಫಿಟ್‌ನೆಸ್‌ ಹೊಂದಿದ್ದರು.

ರಾಜಕೀಯದಿಂದ ನಿವೃತ್ತಿ

2023ರ ವಿಧಾನಸಭಾ ಚುನಾವಣೆ ತಯಾರಿ ನಡೆಯುತ್ತಿದ್ದಾಗಲೇ ವಯಸ್ಸಿನ ಕಾರಣ ನೀಡಿ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಚುನಾವಣೆಗೆ ಕೆಲವು ತಿಂಗಳಷ್ಟೇ ಬಾಕಿ ಇತ್ತು. ಆ ಸಂದರ್ಭದಲ್ಲಿ ಎಸ್‌ ಎಂ ಕೃಷ್ಣ ಅವರು, “”ನನಗೀಗ 90 ವರ್ಷ. ಇದರ ಅರಿವಿದೆ. ಈಗ ನಾನು 50 ವರ್ಷದವನಂತೆ ಇರಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆʼʼ ಎಂದು ಹೇಳಿದ್ದರು. ಆ ಬಳಿಕ ರಾಜಕೀಯದಿಂದ ಸಂಪೂರ್ಣ ದೂರ ಇದ್ದರು.

ಇದನ್ನೂ ಓದಿ: SM Krishna: ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಮಂತ್ರಿ ಎಸ್‌ ಎಂ ಕೃಷ್ಣ ಇನ್ನಿಲ್ಲ