ಅಹಮದಾಬಾದ್: ಕೋವಿಡ್ 19 ಸೋಂಕಿನ ಪ್ರಮಾಣ ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ಶುಕ್ರವಾರದಿಂದ ಜಾರಿಗೆ ಬರುವಂತೆ ಅಧಿಕಾರಿಗಳು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದಾರೆ.
ನ.20ರ ರಾತ್ರಿ 9ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿರಲಿದೆ. ನ.23ರ ಬೆಳಗ್ಗೆ 6ಗಂಟೆವರೆಗೆ ಮುಂದುವರಿಯಲಿದ್ದು, ಸುಮಾರು 57 ಗಂಟೆಗಳ ಮ್ಯಾರಥಾನ್ ಕರ್ಫ್ಯೂ ಜಾರಿಗೊಳಿಸಲು ಅಧಿಕಾರಿಗಳು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ರಾತ್ರಿ ಕರ್ಫ್ಯೂ ಅವಧಿ ಬಗ್ಗೆ ಟ್ವೀಟರ್ ನಲ್ಲಿ ಘೋಷಿಸಿದ್ದು, ಹಾಲು ಮತ್ತು ಔಷಧ ಮಾರಾಟ ಹೊರತುಪಡಿಸಿ ಉಳಿದೆಲ್ಲವೂ ಅಹಮದಾಬಾದ್ ನಲ್ಲಿ ಬಂದ್ ಎಂದು ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು 300 ವೈದ್ಯರನ್ನು ಹಾಗೂ 300 ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಅಹಮದಾಬಾದ್, ಸಾಬರಮತಿ, ಚಾಂದ್ ಖೇಡಾ ಮತ್ತು ಮೋಟೇರಾ ಪ್ರದೇಶದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.