Thursday, 24th October 2024

Israeli Airstrike: ಇಸ್ರೇಲ್‌ ಪಡೆಗಳಿಂದ ಉತ್ತರ ಗಾಜಾದ ಮೇಲೆ ದಾಳಿ; ಕನಿಷ್ಠ 73 ಮಂದಿ ಸಾವು

Israeli Airstrike

ಗಾಜಾ: ಉತ್ತರ ಗಾಜಾದ ಬೀಟ್‌ ಲಾಹಿಯಾ (Beit Lahiya) ನಗರದ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ತಡರಾತ್ರಿ (ಅಕ್ಟೋಬರ್‌ 19) ಭಾರಿ ವೈಮಾನಿಕ ದಾಳಿ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 73 ಮಂದಿ ಪ್ಯಾಲಸ್ತೀನಿಯರು ಮೃತಪಟ್ಟಿದ್ದಾರೆ (Israeli Airstrike). ದಾಳಿಯಿಂದ ಬಹುಮಹಡಿ ವಸತಿ ಕಟ್ಟಡ ಮತ್ತು ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ದೂರಸಂಪರ್ಕ ಮತ್ತು ಇಂಟರ್‌ನೆಟ್‌ ಸ್ಥಗಿತ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಗಾಯಗೊಂಡವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 16 ದಿನಗಳ ಇಸ್ರೇಲ್ ಮಿಲಿಟರಿ ಮುತ್ತಿಗೆಯಿಂದಾಗಿ ಉತ್ತರ ಗಾಜಾದಲ್ಲಿ ಭೀಕರ ಪರಿಸ್ಥಿತಿ ಉಂಟಾಗಲಿದೆ ಎಂದು ಸರ್ಕಾರಿ ಮಾಧ್ಯಮ ಕಚೇರಿ ಎಚ್ಚರಿಸಿದೆ. ಆಹಾರ, ನೀರು ಮತ್ತು ಔಷಧಿಗಳಂತಹ ಅಗತ್ಯ ಸೇವೆ ಕಡಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ʼʼದಾಳಿಯಿಂದ ಹಲವು ಮಂದಿ ಗಾಯಗೊಂಡಿದ್ದಾರೆ ಮತ್ತು ಕಾಣೆಯಾಗಿದ್ದಾರೆʼʼ ಎಂದು ಪ್ಯಾಲಸ್ತೀನ್‌ನ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಮೆಧಾತ್ ಅಬ್ಬಾಸ್ ಹೇಳಿದ್ದಾರೆ. ಇಸ್ರೇಲ್‌ ಸೇನೆ ಬಹುಮಹಡಿ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಿಂದ ಸಾವುನೋವುಗಳ ವರದಿಗಳನ್ನು ಇಸ್ರೇಲ್ ಮಿಲಿಟರಿ ಪರಿಶೀಲಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ರೇಲ್‌ ರಕ್ಷಣಾ ಪಡೆಗಳು (ಐಡಿಎಫ್) ಸಾವಿನ ಸಂಖ್ಯೆಯನ್ನು ನಿರಾಕರಿಸಿವೆ. ಇದನ್ನು ಉತ್ಪ್ರೇಕ್ಷೆ ಎಂದು ಬಣ್ಣಿಸಿದೆ.

ಪ್ಯಾಲಸ್ತೀನ್‌ ಅಧಿಕಾರಿಗಳು ಹೇಳಿದ್ದೇನು?

ಎರಡನೇ ದಿನವೂ ದೂರ ಸಂಪರ್ಕ ಮತ್ತು ಇಂಟರ್‌ನೆಟ್‌ ಸೇವೆಗಳನ್ನು ಕಡಿತಗೊಳಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಪ್ಯಾಲಸ್ತೀನ್‌ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದ ನಂತರ ಎಚ್ಚರಿಕೆಯ ಕ್ರಮವಾಗಿ ಇಸ್ರೇಲ್‌ ಈ ಪ್ರತಿ ದಾಳಿ ನಡೆಸಿದೆ. ಈ ಮೂಲಕ ಇರಾನ್ ಮತ್ತು ಹೆಜ್ಬುಲ್ಲಾಗೆ ಕಠಿಣ ಎಚ್ಚರಿಕೆಯನ್ನು ನೀಡಿದೆ. ನೆತನ್ಯಾಹು ಅವರು ಭಯೋತ್ಪಾದಕರು ಮತ್ತು ಇದಕ್ಕೆ ಕಾರಣರಾದವರನ್ನು ನಿರ್ಮೂಲನೆ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡಿದ್ದಾರೆ. ಲೆಬನಾನ್ ಸಶಸ್ತ್ರ ಗುಂಪು ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಲೆಬನಾನ್‌ನ ಬೈರುತ್‌ನಲ್ಲಿರುವ ಹೆಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ.

ಸಿಸೇರಿಯಾದಲ್ಲಿರುವ ಬೆಂಜಮಿನ್ ನೆತನ್ಯಾಹು ಅವರ ನಿವಾಸವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿತ್ತು. ಅದೃಷ್ಟವಶಾತ್‌, ಯಾವುದೇ ಅಪಾಯ ಸಂಭವಿಸಿಲ್ಲ. ದಾಳಿ ವೇಳೆ ಪ್ರಧಾನ ಮಂತ್ರಿ ಮತ್ತು ಅವರ ಪತ್ನಿ ಸ್ಥಳದಲ್ಲಿ ಇರಲಿಲ್ಲ ಮತ್ತು ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಲೆಬನಾನ್‌ನಿಂದ ಡ್ರೋನ್ ಅನ್ನು ಉಡಾವಣೆ ಮಾಡಲಾಗಿದ್ದು ಅದು ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಈ ಹಿಂದೆ ಹೇಳಿತ್ತು. ಇಸ್ರೇಲ್ ಭೂಪ್ರದೇಶಕ್ಕೆ ದಾಟಿದ ಇನ್ನೂ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಸೇನೆ ತಿಳಿಸಿತ್ತು.

ಈ ಸುದ್ದಿಯನ್ನೂ ಓದಿ: Benjamin Netanyahu: ಯಹ್ಯಾ ಸಿನ್ವಾರ್‌ ಹತ್ಯೆ ಬೆನ್ನಲ್ಲೇ ನೆತಹ್ಯಾಹು ನಿವಾಸದ ಮೇಲೆ ಡ್ರೋನ್‌ ದಾಳಿ!