Wednesday, 23rd October 2024

HD Kumaraswamy: ಜೆಡಿಎಸ್‌ ಟಿಕೆಟ್ ಒಪ್ಪದ ಯೋಗೇಶ್ವರ್ ಮೇಲೆ ಹೆಚ್‌ಡಿ ಕುಮಾರಸ್ವಾಮಿ ಸಿಡಿಮಿಡಿ; ಕಾಂಗ್ರೆಸ್‌ ನಾಯಕರ ಕುತಂತ್ರ ಆರೋಪ

HD Kumaraswamy

ಬೆಂಗಳೂರು: ಚನ್ನಪಟ್ಟಣದಲ್ಲಿ ಉಪಚುನಾವಣೆಗೆ (Channaptna By Election) ಜೆಡಿಎಸ್‌ ಟಿಕೆಟ್‌ ಆಫರ್‌ ಒಪ್ಪಿಕೊಳ್ಳದ ಸಿ.ಪಿ ಯೋಗೇಶ್ವರ್‌ (CP Yogeshwar) ಬಗ್ಗೆ ಜೆಡಿಎಸ್‌ ಮುಖಂಡ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಸಿಡಿಮಿಡಿ ಆಗಿದ್ದಾರೆ. ಜೊತೆಗೆ, ಕೆಲವು ಬಿಜೆಪಿ ನಾಯಕರ ಬಗೆಗೂ ಗರಂ ಆಗಿದ್ದಾರೆ.

ರಾಜ್ಯದಲ್ಲಿ ತೆರವಾಗಿರುವ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ (By Election) ಈಗಾಗಲೇ ಸಂಡೂರು (Sanduru) ಹಾಗೂ ಶಿಗ್ಗಾವಿ (Shiggavi) ಕ್ಷೇತ್ರಗಳಿಗೆ ಬಿಜೆಪಿ (BJP) ಟಿಕೆಟ್ ಘೋಷಿಸಿದೆ. ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈ ಕ್ಷೇತ್ರದ ಟಿಕೆಟ್‌ಗೆ ಮೈತ್ರಿ ನಾಯಕರ ನಡುವೆ ಜಟಾಪಟಿ ಆರಂಭವಾಗಿದೆ.ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಜೆಡಿಎಸ್ ಗೆದ್ದಿರುವ ಕ್ಷೇತ್ರ, ಆಗಲೇ ಹೈಕಮಾಂಡ್ ನಿಮ್ಮದೇ ಅಂತಿಮ ನಿರ್ಣಯ ಅಂತ ತಿಳಿಸಿದೆ. ದೇವೇಗೌಡರಿಗೆ ಆರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಚಾರದಲ್ಲಿ ಅವರು ಕೈ ಹಾಕುವುದಿಲ್ಲ. ಸಂಪೂರ್ಣವಾಗಿ ಚನ್ನಪಟ್ಟಣದ ಟಿಕೆಟ್ ಅಭಿಪ್ರಾಯ ನನಗೆ ಬಿಟ್ಟಿದ್ದಾರ ಎಂದರು.

ಯೋಗೇಶ್ವರ್‌ಗೆ ಜೆಡಿಎಸ್ ಚಿಹ್ನೆ ಅಡಿಯಲ್ಲಿ ಸ್ಪರ್ಧೆಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಮೇಲಿದ್ದಾರೆ, ದೊಡ್ಡವರು ಅವರ ಬಗ್ಗೆ ನಾನೇನು ಚರ್ಚೆ ಮಾಡ್ಲಿ. ನನಗೆ ಗೊತ್ತಿಲ್ಲ ಅವ್ರು ಏನ್ ಮಾಡ್ತಾರೆ ಅಂತ. ಮಾಧ್ಯಮದಲ್ಲಿ ಗಮನಿಸಿದ್ದೇನೆ ಕಾಂಗ್ರೆಸ್ ಲೀಡರ್ಸ್ ಜೊತೆಗೆ ಯೋಗೇಶ್ವರ್ ಸಂಪರ್ಕದಲ್ಲಿ ಇದಾರೆ ಅಂತಾ ಬರ್ತಿದೆ. ಹೊರಗಡೆಯೂ ಚರ್ಚೆ ನಡಿತಿದೆ. ಅವರು ಏನ್ ತೀರ್ಮಾನ ಮಾಡ್ತಾರೆ ಎಂದು ನನ್ನ ಜೊತೆಗೆ ಚರ್ಚೆ ಮಾಡಿಲ್ಲ ಎಂದರು.

ಇಲ್ಲಿನ ಕೆಲವು ಬಿಜೆಪಿ ನಾಯಕರು ಕುಮಾರಸ್ವಾಮಿ ವರ್ಚಸ್ಸು ಮುಗಿಸೋ ಕೆಲಸ ಮಾಡ್ತಿದ್ದಾರೆ. ಎಲ್ಲಾ ಬಿಜೆಪಿ ನಾಯಕರಲ್ಲ. ಕುಮಾರಸ್ವಾಮಿ ದೆಹಲಿ ಮಟ್ಟದಲ್ಲಿ ಬಾಂಧವ್ಯ ಹೊಂದಿದ್ದಾನೆ, ಅದಕ್ಕೆ ಸಮಸ್ಯೆ ಉದ್ಭವಿಸುವ ಸಲುವಾಗಿ ಬಿಜೆಪಿ ನಾಯಕರು ಇಂತಹ ಪ್ರಕರಣ ಉಪಯೋಗ ಮಾಡಿಕೊಳ್ತಿದ್ದಾರೆ ಎಂದು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಯಾವುದೇ ಕಾರಣಕ್ಕೆ ಕಾಂಗ್ರೆಸ್ ಲಾಭ ಪಡೆಯಲ್ಲ. ಇಲ್ಲಿ ಕಾಂಗ್ರೆಸ್ ಬಲಿಷ್ಠವಾಗಿಲ್ಲ, ಕಾಂಗ್ರೆಸ್‌ಗೆ ಕಾರ್ಯಕರ್ತರ ಪಡೆ ಇಲ್ಲ. ಹಣ ಹಾಗೂ ಅಧಿಕಾರ ದುರುಪಯೋಗ ಮಾಡುವ ಮೂಲಕ ಕಾಂಗ್ರೆಸ್ ರಾಜಕೀಯ ಮಾಡಬೇಕು. ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಬೇಡಿ ಅಂತ ಹೇಳ್ತಿದ್ದೇನೆ. ಇನ್ನೂ ನಾಲ್ಕು ದಿನ ಟಿಕೆಟ್ ಘೋಷಣೆಗೆ ಅವಕಾಶ ಇದೆ. ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬ ಅಭಿಲಾಷೆ ಇದೆ ಎಂದಿದ್ದಾರೆ.

ಸಿಪಿ ಯೋಗೇಶ್ವರ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಎರಡುಮೂರು ಬಾರಿ ಬೇಟಿಯಾಗಿದ್ದಾರೆ, ಪಕ್ಕದ ಕ್ಷೇತ್ರದ ಶಾಸಕರ ಜೊತೆಗೂ ಸಂಪರ್ಕದಲ್ಲಿ ಇದ್ದಾರೆ. ಇದೆಲ್ಲವೂ ಚರ್ಚೆ ನಡೀತಿದೆ. ಒಟ್ಟಾರೆ ಕುಮಾರಸ್ವಾಮಿ ಹೆಸರು ಹಾಳ್ ಮಾಡಬೇಕು, ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ಜೊತೆಗೆ ಸಂಬಂಧ ಹಾಳು ಮಾಡುವಂತವರು ಬಹಳ ಜನ ಇದಾರೆ. ಆದ್ದರಿಂದ ನಾನು ಯಾಕೆ ಬಲಿಯಾಗಬೇಕು. ನಮ್ಮ ಪಕ್ಷದಲ್ಲಿ ಇಲ್ಲ, ಕಾಂಗ್ರೆಸ್ ನಾಯಕರ ಜೊತೆಗೆ ಕೆಲವು ಬಿಜೆಪಿ ನಾಯಕರೂ ಸೇರಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: Bengaluru Rain : ಒಂದೇ ದಿನದ ಮಳೆಗೆ ಕೆರೆಯಾದ ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಕಿಡಿ