ತುಮಕೂರು : ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಪ್ರಜಾ ಪ್ರಭುತ್ವದ ಬಹುದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ೩ ದಿನಗಳ ಕಾಲ ಲೋಕಾಯುಕ್ತ ಕುಂದು-ಕೊರತೆ ಸಭೆ, ಬಾಕಿ ದೂರು ಅರ್ಜಿಗಳ ವಿಲೇವಾರಿ, ಕಾನೂನು ಅರಿವು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ದೂರುಗಳು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ತಿಳಿಸಿದರು.
ಅಹವಾಲು ಸಭೆಯಲ್ಲಿ ಸಲ್ಲಿಕೆಯಾಗಿದ್ದ ೨೯೯ ಹೊಸ ದೂರುಗಳಿಗೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಿ ೮೦ ಪ್ರಕರಣಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಬಾಕಿ ಇದ್ದ ೧೮೩ ಹಳೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಮತ್ತು ಪ್ರತಿ ದೂರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ೭೧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ತಿಳಿಸಿದರು.
ಗುಬ್ಬಿ ಪಟ್ಟಣದ ಮಳೆ ನೀರಿನಿಂದ ನಿರಾಶ್ರಿತರಾಗಿದ್ದ ಹಂದಿಜೋಗರ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಲೂಕು ಆಡಳಿತದಿಂದ ಗುರುತಿಸಿರುವ ಸಾತೇನಹಳ್ಳಿ ಪ್ರದೇಶಕ್ಕೆ ತೆರಳುವಂತೆ ನಿವಾಸಿಗಳ ಮನವೊಲಿಸಲಾಗಿದೆ. ನಂತರ ನಿರಾಶ್ರಿತರಿಗಾಗಿ ತಾಲ್ಲೂಕು ಆಡಳಿತದಿಂದ ನಿರ್ಮಿಸಿರುವ ತಾತ್ಕಾಲಿಕ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗಿದೆ ಎಂದರು.
ಹೊರಗಡೆ ಔಷಧಿ ತರಲು ಚೀಟಿ ನೀಡುವಂತಿಲ್ಲ
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ , ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಡೆ ಔಷಧಿಗಳನ್ನು ತರಲು ಚೀಟಿಗಳನ್ನು ನೀಡಬಾರದು. ಪ್ರಯೋಗಾಲಯದ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯ ದಲ್ಲಿ ಮಾಡಿಸಲು ಸೂಚಿಸಬಾರದು. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ವಿ. ಲಕ್ಷ್ಮೀನಾರಾಯಣ, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.
*
ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಪ್ರಜಾ ಪ್ರಭುತ್ವದ ನಾಲ್ಕು ಅಂಗಗಳು ಬಲಗೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾ ರಂಗ ಬಲಗೊಂಡಾಗ ಮಾತ್ರ ಸಮಾಜದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ.
ವೀರಪ್ಪ, ಉಪ ಲೋಕಾಯುಕ್ತ ನ್ಯಾಯಮೂರ್ತಿ.
*
ಭ್ರಷ್ಟಾಚಾರ ತಡೆಯಲು ಕಠಿಣ ಕಾನೂನು
ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದ್ದು, ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತಷ್ಟು ಕಠಿಣ ಕಾನೂನು ಗಳನ್ನು ಜಾರಿಗೆ ತರಬೇಕು ಮತ್ತು ಜನರೂ ಸಹ ಬದಲಾಗಬೇಕು. ರಾಜ್ಯ ಸರಕಾರದ ಯಾವುದೇ ಇಲಾಖಾಧಿಕಾರಿ, ಸಿಬ್ಬಂದಿಗಳು ಕರ್ತವ್ಯ ಲೋಪವೆಸಗಿದ ಬಗ್ಗೆ ನಿಖರ ಮಾಹಿತಿ, ನೈಜತೆಯಿಂದ ಕೂಡಿರುವ ದೂರುಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರ ಸೇವೆಗೆ ಲೋಕಾಯುಕ್ತ ಸದಾ ಸಿದ್ಧವಿರುತ್ತದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ತಿಳಿಸಿದರು.